1-8ನೇ ತರಗತಿ ಆರಂಭದ ಬಗ್ಗೆ ಯೋಚನೆಯೇ ಮಾಡಿಲ್ಲ: ಸುರೇಶ್‌ ಕುಮಾರ್‌

  • ತಜ್ಞರ ಸಮಿತಿ ಅಭಿಪ್ರಾಯ ಆಧರಿಸಿ,  ಮಕ್ಕಳ ಹಿತ ಪರಿಗಣಿಸಿ ತೀರ್ಮಾನ 

ಬೆಂಗಳೂರು: ‘ಡಿಸೆಂಬರ್‌ನಲ್ಲಿ ಯಾವುದೇ ಶಾಲೆ ಕಾಲೇಜುಗಳನ್ನು ತೆರೆಯುವುದಿಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ತಿಳಿಸಿದರು.

ಕೋವಿಡ್‌ ಕಾರಣದಿಂದ ಎಂಟು ತಿಂಗಳುಗಳಿಂದ ಮುಚ್ಚಿರುವ ಶಾಲೆಗಳನ್ನು ಮತ್ತೆ ಆರಂಭಿಸುವ ಕುರಿತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳೂ ಸೇರಿದಂತೆ ಇತರ ಇಲಾಖೆಗಳ ಮುಖ್ಯಸ್ಥರ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಸಭೆಯ ಬಳಿಕ ಮಾತನಾಡಿದ ಸುರೇಶ್‌ ಕುಮಾರ್‌, ‘ಡಿಸೆಂಬರ್‌ನಲ್ಲಿ ಶಾಲೆಗಳನ್ನು ತೆರೆಯದಂತೆ ತಜ್ಞರ ಸಮಿತಿ ಅಭಿಪ್ರಾಯ ನೀಡಿದೆ. ಈ ಅಭಿಪ್ರಾಯ ಆಧರಿಸಿ ಮತ್ತು ಮಕ್ಕಳ ಹಿತ ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ವಿವರಿಸಿದರು.

‘ತಜ್ಞರು ನೀಡಿರುವ ವರದಿಯ ಬಗ್ಗೆ ಮುಖ್ಯಮಂತ್ರಿ, ಆರೋಗ್ಯ ಸಚಿವರ ಸಮ್ಮುಖದಲ್ಲಿ ಚರ್ಚೆ ನಡೆಯಿತು. ಚಳಿಗಾಲವೂ ಆರಂಭವಾಗಿರುವುದರಿಂದ ಶಾಲೆಗಳನ್ನು ಆರಂಭಿಸುವುದು ಸೂಕ್ತವಲ್ಲ ಎಂಬ ನಿರ್ಧಾರಕ್ಕೆ ಬರಲಾಯಿತು’ ಎಂದು ಅವರು ಹೇಳಿದರು.

ಇದನ್ನೂ ಓದಿ: ಡಿಸೆಂಬರ್‌ವರೆಗೆ ಶಾಲೆ ಇಲ್ಲ : ಸಿಎಂ ಅಧಿಕೃತ ಘೋಷಣೆ 

‘ಡಾ. ಸುದರ್ಶನ್‌ ನೇತೃತ್ವದ ತಜ್ಞರ ಸಮಿತಿ ಡಿಸೆಂಬರ್‌ ಮೂರನೇ ವಾರದಲ್ಲಿ ಮತ್ತೆ ಸಭೆ ಸೇರಿ ಪರಿಸ್ಥಿತಿಯನ್ನು ಅವಲೋಕನ ನಡೆಸಲಿದೆ. ಆ ಬಳಿಕ ಶಾಲೆ ಆರಂಭಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಸಚಿವರು ಸ್ಪಷ್ಟಪಡಿಸಿದರು.

‘ಶಾಲೆಗಳು ಆರಂಭವಾಗದೇ ಇರುವುದರಿಂದ ಬಾಲ ಕಾರ್ಮಿಕರ ಸಂಖ್ಯೆ ಜಾಸ್ತಿಯಾಗುತ್ತಿದೆ. ಕೆಲವು ತಾಲ್ಲೂಕುಗಳಲ್ಲಿ ಬಾಲ್ಯ ವಿವಾಹ ಕೂಡಾ ಹೆಚ್ಚು ನಡೆಯುತ್ತಿದೆ. ಈ ಸಾಮಾಜಿಕ ಸಮಸ್ಯೆಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು’ ಎಂದರು.

‘ಪ್ರಸಕ್ತ ವರ್ಷ ಒಂದರಿಂದ ಎಂಟನೇ ತರಗತಿವರೆಗೆ ಆರಂಭಿಸುವ ಬಗ್ಗೆ ಈವರೆಗೂ ಯೋಚನೆಯೇ ಮಾಡಿಲ್ಲ. ಆದರೆ, ಅದಕ್ಕಿಂತ ಮೇಲಿನ ತರಗತಿಗಳನ್ನು ಆರಂಭಿಸುವ ಬಗ್ಗೆ ಮಾತ್ರ ಚಿಂತನೆ ನಡೆದಿತ್ತು. ಈ ಉದ್ದೇಶದಿಂದ ವಿವಿಧ ವಲಯಗಳಿಂದ ಅಭಿಪ್ರಾಯ ಸಂಗ್ರಹಿಸಲಾಗಿತ್ತು’ ಎಂದರು.

‘ರಾಜ್ಯದಲ್ಲಿ ಎಲ್ಲೆಲ್ಲಿ ಬಹಳ ಕಡಿಮೆ ಕೋವಿಡ್‌ ಇದೆ ಆ ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭಿಸುವ ಬಗ್ಗೆ ಯೋಚನೆ ಮಾಡಬಹುದೇ ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಮುಖ್ಯವಾಗಿ ಬೆಂಗಳೂರು, ಮೈಸೂರು, ಮಂಗಳೂರು ಹೊರತುಪಡಿಸಿ ಇತರ ಕಡೆಗಳಲ್ಲಿ ಶಾಲೆಗಳನ್ನು ಆರಂಭಿಸುವ ಬಗ್ಗೆ ವಿಚಾರ ವಿನಿಮಯ ನಡೆಯಿತು. ಆದರೆ, ಆರೋಗ್ಯ ಇಲಾಖೆಯ ಅಭಿಪ‍್ರಾಯಕ್ಕೆ ಮನ್ನಣೆ ನೀಡಿ, ಡಿಸೆಂಬರ್‌ ಅಂತ್ಯದವರೆಗೆ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸದಿರಲು ನಿರ್ಧರಿಸಲಾಯಿತು’ ಎಂದೂ ಅವರು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *