ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ, ಬೆಂಕಿ ಹಚ್ಚಿ ಕೊಲೆ

ಸುರಪುರ : ವ್ಯಕ್ತಿಯೊಬ್ಬ ಮಧ್ಯರಾತ್ರಿ ಮಹಿಳೆಯ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ್ದು, ತಪ್ಪಿಸಿಕೊಳ್ಳಲು ಯತ್ನಿಸಿದ ಆಕೆಯ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ಪ್ರಕರಣ ತಾಲ್ಲೂಕಿನ ಚೌಡೇಶ್ವರಿಹಾಳ ಗ್ರಾಮದಲ್ಲಿ ನಡೆದಿದೆ.
ಗಂಗಪ್ಪ ಬಸಪ್ಪ ಅರಳೊಳ್ಳಿ ಎಂಬಾತ ಕೃತ್ಯವೆಸಗಿದ್ದು, ಆತನ ಪತ್ತೆ ಕಾರ್ಯ ನಡೆದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

ಕಳೆದ ತಿಂಗಳಷ್ಟೇ ಯಾದಗಿರಿಯಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈ ಘಟನೆ ಇನ್ನೂ ಜನರ ಮನಸ್ಸಿನಿಂದ ಮಾಸಿಲ್ಲ. ಅದಾಗ್ಲೇ, ಅಂತದ್ದೇ ಮತ್ತೊಂದು ಹೇಯ ಕೃತ್ಯ ನಡೆದಿರುವುದು ಜೆಲ್ಲೆಯ ಜನರನ್ನು ಬೆಚ್ಚಿಬೀಳಿಸಿದೆ.

ಭಾನುವಾರ ರಾತ್ರಿ ಊಟ ಮಾಡಿ ದಂಪತಿ ಮಲಗಿದ್ದರು. ಮಧ್ಯರಾತ್ರಿ 2 ಗಂಟೆಗೆ ಬಾಲಮ್ಮ ಪತಿ ಶೌಚಾಲಯಕ್ಕೆ ತೆರಳಿದ್ರು. ಈ ವೇಳೆ ಆಕೆಯ ಪತಿ ಇಲ್ಲದ ಸಮಯ ನೋಡಿಕೊಂಡು ಮನೆಗೆ ಬಂದ ಗಂಗಪ್ಪ, ಅತ್ಯಾಚಾರಕ್ಕೂ ಯತ್ನಿಸಿದ್ದಾನೆ. ಇದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ತನ್ನ ಬೈಕ್​​ನಿಂದ ಪೆಟ್ರೋಲ್ ತಂದು ಮಹಿಳೆಗೆ ಸುರಿದು ಬೆಂಕಿ ಹಚ್ಚಿದ್ದ. ಅದಲ್ದೇ, ಬಾಲಮ್ಮ ಮನೆಯಿಂದ ಹೊರ ಬಾರದಂತೆ ಬಾಗಿಲು ಹಾಕಿ ಗಂಗಪ್ಪ ಪರಾರಿಯಾಗಿದ್ದಾನೆ. ಈ ವೇಳೆ ಆಕೆ ಪತಿ ಶೌಚಾಲಯದಿಂದ ಬರುವಷ್ಟರಲ್ಲಿ ಬೆಂಕಿಯಲ್ಲಿ ಬೆಂದು ಹೋಗಿದ್ಲು ಎನ್ನಲಾಗಿದೆ.

ತೀವ್ರ ಗಾಯಗೊಂಡ ಆಕೆಯನ್ನು ಸುರಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಕಲಬುರ್ಗಿ ಜಿಮ್ಸ್‌ಗೆ ಕರೆದೊಯ್ಯಲಾಯಿತು. ಮಹಿಳೆಗೆ ಶೇ 95ರಷ್ಟು ಸುಟ್ಟಗಾಯಗಳಾಗಿದ್ದವು. ಉಳಿಸುವ ಯತ್ನ ಫಲಕಾರಿಯಾಗಲಿಲ್ಲ ಎಂದು ಕಲಬುರ್ಗಿ ಜಿಲ್ಲಾ ಸರ್ಜನ್ ಡಾ. ಅಂಬಾರಾಯ ರುದ್ರವಾಡಿ ತಿಳಿಸಿದರು.

ಕಠಿಣ ಶಿಕ್ಷೆಗೆ ಜನವಾದಿ ಒತ್ತಾಯ : ಮಹಿಳೆ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಲ್ಲದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈದಿರುವ ಅಮಾನವೀಯ ದುಷ್ಕೃತ್ಯವನ್ನು ಜನವಾದಿ ಮಹಿಳಾ ಸಂಘಟನೆ ತೀವ್ರವಾಗಿ ಖಂಡಿಸಿದೆ.

ಯಾದಗಿರಿ ಜಿಲ್ಲೆಯಲ್ಲಿ ಪಾಳೇಗಾರಿ ಸಂಸ್ಕೃತಿ ತೀವ್ರವಾಗಿ ಬೆಳೆಯುತ್ತಿದ್ದು ಮಹಿಳೆಯರ ಮೇಲಿನ ದೌರ್ಜನ್ಯ ಗಳು ದಿನೆ ದಿನೇ ಹೆಚ್ಚುತ್ತಿವೆ ಎಂದು ರಾಜ್ಯ ಉಪಾಧ್ಯಕ್ಷೆ ಕೆ. ನೀಲಾ ಆರೋಪಿಸಿದ್ದಾರೆ.
ಬರ್ಬರ ಕೃತ್ಯದ ಬಗ್ಗೆ ಪೋಲೀಸ್ ಇಲಾಖೆಯು ತನ್ನ ಪ್ರಾಥಮಿಕ ಹೇಳಿಕೆಗೆ ಬದ್ಧವಾಗಿ ತಪ್ಪಿತಸ್ಥ ಆರೋಪಿಯು ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಕ್ರಮ ವಹಿಸಬೇಕಲ್ಲದೆ ತಪ್ಪಿತಸ್ಥರೆಲ್ಲರಿಗೂ ಕಠಿಣ ಶಿಕ್ಷೆ ಆಗುವಂತೆ ತೀವ್ರ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ನ್ಯಾಯವಾದಿಗಳು ಆರೋಪಿಗಳ ಪರ ವಕಾಲತ್ತು ವಹಿಸಬಾರದೆಂದು ಯಾದಗಿರಿ ಜಿಲ್ಲಾ ಸಂಚಾಲಕಿ ಸವಿತಾ ಪೂಜಾರಿ ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *