ಪುತ್ತೂರು : ಗೇರು ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ ತೋಟವು ಬೆಂಕಿಗೆ ಆಹುತಿಯಾದ ಘಟನೆ ಪುತ್ತಿರಿನಲ್ಲಿ ನಡೆದಿದೆ. ಸುಮಾರು 300 ಎಕರೆಯಷ್ಟು ಪ್ರದೇಶ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದು ಬಂದಿದೆ.
ಪುತ್ತೂರು ತಾಲ್ಲೂಕಿನ ಕೋಡಿಂಬಾಡಿ, ಬನ್ನೂರು, ಪಡ್ನೂರು ಮತ್ತು ಬಂಟ್ವಾಳ ತಾಲ್ಲೂಕಿನ ಪೆರ್ನೆ, ಬಿಳಿಯೂರು ಗ್ರಾಮ ವ್ಯಾಪ್ತಿಯಲ್ಲಿ ಸುಮಾರು 300 ಎಕರೆಗಳಷ್ಟು ಗೇರು ತೋಟವನ್ನು ನಿಗಮವು ಹೊಂದಿದೆ. ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಸಿಬ್ಬಂದಿ, ಗೇರು ಅಭಿವೃದ್ಧಿ ನಿಗಮದ ಸಿಬ್ಬಂದಿ ಹಾಗೂ ಸಾರ್ವಜನಿಕರು ಸೇರಿಕೊಂಡು ಬೆಂಕಿ ನಂದಿಸಲು ಹರಸಾಹಸ ಪಟ್ಟರು.
ಇದನ್ನೂ ಓದಿ : ಬಳ್ಳಾರಿ ಬ್ಯಾನರ್ ವಿವಾದ: ತನಿಖೆಯನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ – ಜಿ. ಪರಮೇಶ್ವರ್
ರಾತ್ರಿ ವೇಳೆ ಕೆಲ ಪ್ರದೇಶಗಳಲ್ಲಿ ಬೆಂಕಿ ತಕ್ಕ ಮಟ್ಟಿಗೆ ಹತೋಟಿಗೆ ಬಂದಿತ್ತು. ಬನ್ನೂರಿನ ಸೇಡಿಯಾಪುವಿನಲ್ಲಿ ವೈದ್ಯಕೀಯ ಕಾಲೇಜಿಗೆ ಕಾಯ್ದಿರಿಸಿದ ಜಾಗಕ್ಕೂ ಸಂಜೆ ವೇಳೆ ಬೆಂಕಿ ಹರಡಿತ್ತು. ಸೇಡಿಯಾಪು ಭಾಗದಲ್ಲಿ ಜನವಸತಿ ಪ್ರದೇಶದ ಸಮೀಪ ಕೆಲ ಮರಗಳು ಹೊತ್ತಿ ಉರಿಯುತ್ತಿದ್ದುದು ಕಂಡು ಬಂದಿದೆ. ಇದರಿಂದ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.
ಕೋಡಿಂಬಾಡಿ ವ್ಯಾಪ್ತಿಯಿಂದ ಬನ್ನೂರಿನ ಸೇಡಿಯಾಪುವರೆಗೂ ಬೆಂಕಿ ವ್ಯಾಪಿಸಿದೆ. ಸುಮಾರು 300 ಎಕರೆಯಷ್ಟು ಜಾಗದಲ್ಲಿದ್ದ ಗೇರುಮರಗಳು ಸುಟ್ಟು ಹೋಗಿವೆ. ಆಗಿರುವ ನಷ್ಟದ ಲೆಕ್ಕಾಚಾರ ಹಾಕುವುದು ಕಷ್ಟ. ಕೋಡಿಂಬಾಡಿಯಿಂದ 1 ಕಿ.ಮೀ ದೂರದಲ್ಲಿ ರಸ್ತೆ ಬದಿಯಲ್ಲಿ ಹಾದು ಹೋಗಿರುವ ವಿದ್ಯುತ್ ಮಾರ್ಗದಲ್ಲಿ ಆದ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡಕ್ಕೆ ಕಾರಣ. ಬೆಂಕಿ ಬಿದ್ದ ಭಾಗಕ್ಕೆ ಹೋಗಲು ರಸ್ತೆ ವ್ಯವಸ್ಥೆ ಇಲ್ಲದಿರುವುದರಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ಕಷ್ಟವಾಗಿದೆ’ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದರು.
ಬನ್ನೂರಿನ ಸೇಡಿಯಾಪುವಿನಲ್ಲಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದ ಅರಣ್ಯ ವೀಕ್ಷಕರೊಬ್ಬರಿಗೆ ವಿಷಪೂರಿತ ಹಾವು ಕಚ್ಚಿದೆ. ತಕ್ಷಣ ಅವರನ್ನು ಗೇರು ನಡುತೋಪು ಅಧೀಕ್ಷಕ ರವಿಪ್ರಸಾದ್ ಅವರು ಕಾರಿನಲ್ಲಿ ಕರೆದೊಯ್ದು ಪುತ್ತೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ನೋಡಿ : ವೆನೆಜುವೇಲಾದ ಮೇಲೆ ಯುದ್ದ ಹೂಡಿದರೆ ,ಯು.ಎಸ್ ಗೆ ಅದು ಇನ್ನೊಂದು ವಿಯೇಟ್ನಾಂ ಆಗುತ್ತದೆ! ಇರಾಕ್, ಲಿಬ್ಯ ಅಲ್ಲ !
