ಸಿಇಟಿ ಫಲಿತಾಂಶ ವಿಳಂಬದಿಂದ ₹3000 ಕೋಟಿ ಹಗರಣ: ಬಿ.ಟಿ. ನಾಗಣ್ಣ

ಬೆಂಗಳೂರು: ಸಿಇಟಿ ಫಲಿತಾಂಶ ಪ್ರಕಟಿಸಲು ಸರ್ಕಾರ ವಿಳಂಬ ಮಾಡುವ ಮೂಲಕ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಅನುಕೂಲ ಮಾಡಿಕೊಟ್ಟಿದ್ದು, ಇದು ಸುಮಾರು ₹3000 ಕೋಟಿ ಹಗರಣವಾಗಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ. ನಾಗಣ್ಣ ಇಂದು ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ನಗರದ ಪಕ್ಷದ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸಿಇಟಿ ಪರೀಕ್ಷೆ ಮುಗಿದು ಸುಮಾರು 42 ದಿನ ಆಗಿದೆ. ಆದರೆ ಇನ್ನೂ ಫಲಿತಾಂಶ ಪ್ರಕಟವಾಗಿಲ್ಲ. ಕೇವಲ ಮೂರು ಗಂಟೆಗಳಲ್ಲಿ ವಿಟಿಯು ಅಂತಹ ಸಂಸ್ಥೆಯು ಆಧುನಿಕ ತಾಂತ್ರಿಕತೆಯನ್ನು ಬಳಸಿಕೊಂಡು ಫಲಿತಾಂಶಗಳನ್ನು ಪ್ರಕಟಿಸುತ್ತಿದೆ. ಆದರೆ ಸಿಇಟಿ ಪರೀಕ್ಷಾ ಪಲಿತಾಂಶ ಇದುವರೆಗೂ ಪ್ರಕಟಿಸದೆ ಇರುವುದರಿಂದ ದೊಡ್ಡ ಹುನ್ನಾರವಿದೆ. ಈಗಾಗಲೇ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯಲು ಉನ್ನತ ಶಿಕ್ಷಣ ಇಲಾಖೆ ಅನುಮತಿ ನೀಡಿದೆ ” ಎಂದು ಹೇಳಿದರು.

” ಇದು ಸುಮಾರು ₹3000 ಕೋಟಿ ಹಗರಣವಾಗಿದೆ. 60,000 ಸೀಟುಗಳನ್ನು ಇಂದು ಮಾರಾಟಕ್ಕೆ ಇಡಲಾಗಿದೆ. ಒಂದು ಚೀಟಿಗೆ 3 ಲಕ್ಷದಿಂದ 25 ಲಕ್ಷಗಳವರೆಗೆ ಮಾರಾಟ ಮಾಡುತ್ತಿದ್ದಾರೆ. ಎಷ್ಟೋ ಪೋಷಕರು ತಮ್ಮ ಮಕ್ಕಳಿಗೆ ಸರ್ಕಾರಿ ಸೀಟು ಸಿಗುತ್ತದೋ ಇಲ್ಲವೋ ಎಂದು ನಾಲ್ಕೈದು ಕಾಲೇಜಗಳಿಗೆ ಹೋಗಿ ಅರ್ಜಿ ಹಾಕುತ್ತಿದ್ದಾರೆ, ಒಂದು ಅಪ್ಲಿಕೇಶನ್‌ಗೆ ಸುಮಾರು ₹1200 ವಸೂಲಿ ಮಾಡುತ್ತಿವೆ. ಒಂದು ಖಾಸಗಿ ಕಾಲೇಜಿನಲ್ಲಿ 35,000 ಅರ್ಜಿಗಳನ್ನು ಮಾರಾಟ ಮಾಡಿದೆ, ಒಂದು ಅಪ್ಲಿಕೇಶನ್‌ಗೆ ₹1200 ರೂಪಾಯಿ ಆದರೆ ಸುಮಾರು ₹4.80 ಕೋಟಿ ಅರ್ಜಿಯಿಂದಲೇ ದುಡಿಮೆ ಮಾಡಿದೆ ”

” ಸಿಇಟಿ ಫಲಿತಾಂಶ ಪ್ರಕಟಿಸುವ ಮುನ್ನವೇ ಖಾಸಗಿ ಕಾಲೇಜುಗಳಿಗೆ ಪ್ರವೇಶ ಪ್ರಕ್ರಿಯೆಗೆ ಸರ್ಕಾರ ಅನುಮತಿ ನೀಡಿರುವುದು ಯಾಕೆ? ಲಕ್ಷ ಲಕ್ಷ ಹಣ ಕಟ್ಟಿ ಈಗಾಗಲೇ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆಯಲ್ಲಿ ಉತ್ತಮ ರ್‍ಯಾಂಕಿಂಗ್ ಪಡೆದು, ಸರ್ಕಾರಿ ಹಾಗೂ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಚಿತ ಸೀಟು ಸಿಕ್ಕಿದರೆ, ಪ್ರತಿಯೊಬ್ಬ ಪೋಷಕರು ಕಟ್ಟಿದ್ದ ಲಕ್ಷಾಂತರ ರೂಪಾಯಿಗಳು ವಾಪಸ್ಸು ಬರುವುದಿಲ್ಲ “.

ಇದನ್ನು ಓದಿ : ವಿಕೃತ ಲೈಂಗಿಕ ಹಗರಣ ಆರೋಪಿ ಪ್ರಜ್ವಲ್ ರೇವಣ್ಣ ಬಂಧನ

” ನಾಲ್ಕೈದು ಲಕ್ಷ ಕಟ್ಟಿ, ಎರಡನೇ ಹಾಗೂ ಇನ್ನುಳಿದ ಸುತ್ತಿನಲ್ಲಿ ಉಚಿತ ಸೀಟು ಪಡೆದರೆ ಅವರು ಕಟ್ಟಿರುವ ಹಣದ ಗತಿಯೇನು? ರಾಷ್ಟ್ರ ಮಟ್ಟದಲ್ಲಿ ನಡೆಯುವ ಅನೇಕ ಪರೀಕ್ಷೆಗಳು ಒಂದೆರಡು ವಾರದಲ್ಲಿ ಫಲಿತಾಂಶ ಘೋಷಣೆ ಮಾಡಲಾಗುತ್ತದೆ. ಆದರೆ ಸಿಇಟಿ ಪರೀಕ್ಷೆ ನಡೆದು ಒಂದೂವರೆ ತಿಂಗಳಾದರೂ ಇನ್ನೂ ಫಲಿತಾಂಶ ಘೋಷಣೆಯಾಗದಿರುವುದು ಸಾಕಷ್ಟು ಅನುಮಾನ ಮೂಡಿಸಿದೆ.

ಸಿಲಿಕಾನ್ ಸಿಟಿ ಎಂದು ಹೆಸರು ಮಾಡಿರುವ ಬೆಂಗಳೂರಿನಲ್ಲಿ ಪರೀಕ್ಷಾ ಫಲಿತಾಂಶ ಇಷ್ಟೊಂದು ವಿಧಾನವಾಗುತ್ತಿರುವುದರಿಂದ ದೊಡ್ಡ ಮಟ್ಟದ ಕುತಂತ್ರವಿರುವುದು ಸಾಬೀತಾಗುತ್ತಿದೆ. ಓ ಎಂ ಆರ್ ಶೀಟ್ಗಳಲ್ಲಿ ಗೋಲ್ಮಾಲ್ ಆಗುವ ಸಾಧ್ಯತೆಯೂ ಸಹ ಸಾಕಷ್ಟು ಇರುತ್ತದೆ ” ಎಂಬ ಸಂಖ್ಯೆಯನ್ನು ನಾಗಣ್ಣ ವ್ಯಕ್ತಪಡಿಸಿದರು.

ಖಾಸಗಿ ಕಾಲೇಜುಗಳಲ್ಲಿ ಈಗಾಗಲೇ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಸಿಇಟಿ ಫಲಿತಾಂಶದ ಬಳಿಕ ಸರ್ಕಾರಿ ಸೀಟು ಸಿಕ್ಕಾಗ, ಅವರು ಕಟ್ಟಿರುವ ಪೂರ್ತಿ ಶುಲ್ಕವನ್ನು ಖಾಸಗಿ ಕಾಲೇಜುಗಳು ವಾಪಸ್ ಕೊಡುವಂತೆ ಸರ್ಕಾರ ಆದೇಶ ಕೊಡಬೇಕು, ಇಲ್ಲವಾದಲ್ಲಿ ಆಮ್ ಆದ್ಮಿ ಪಾರ್ಟಿಯಿಂದ ಭಾರಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕದಲ್ಲಿ ಮೂರು ಪಕ್ಷಗಳ ರಾಜಕಾರಣಿಗಳ ಖಾಸಗಿ ಕಾಲೇಜುಗಳು ಇರುವ ಕಾರಣ, ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಕೂಡ ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಎಲ್ಲ ರಾಜಕಾರಣಿಗಳೂ ಒಗ್ಗಟ್ಟಾಗಿ ಶಿಕ್ಷಣವನ್ನು ದಂಧೆ ಮಾಡಿಕೊಂಡಿದ್ದಾರೆ. ಬೇಜವಾಬ್ದಾರಿ ಉನ್ನತ ಶಿಕ್ಷಣ ಸಚಿವರಿಗೆ ಜನ ಸಾಮಾನ್ಯರ ಕಷ್ಟ ಅರ್ಥ ಆಗುತ್ತಿಲ್ಲವಾ ? ಮುಖ್ಯಮಂತ್ರಿಗಳು ಈ ಬಗ್ಗೆ ಕೂಡಲೇ ಗಮನ ಹರಿಸಿ ಖಾಸಗಿ ಕಾಲೇಜುಗಳಿಗೆ ಸೂಚನೆ ಕೊಡಬೇಕು ಎಂದು ಆಗ್ರಹಿಸಿದರು.

ಇದನ್ನು ನೋಡಿ : ಸರಣಿ ಲೈಂಗಿಕ ದೌರ್ಜನ್ಯ ನಡೆಸಿರುವ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಒತ್ತಾಯಿಸಿ ಸಹಸ್ರಾರು ಜನರಿಂದ ಬೃಹತ್ ಹೋರಾಟ

Donate Janashakthi Media

Leave a Reply

Your email address will not be published. Required fields are marked *