ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಲ್ಲಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ರಾಜ್ಯ ಸರ್ಕಾರ ಸಿದ್ದಪಡಿಸಿದ್ದ 24 ಪುಟಗಳ ಸಂಪೂರ್ಣ ಭಾಷಣ ಓದಿದರು.
ಗಣತಂತ್ರ ವ್ಯವಸ್ಥೆಯನ್ನು ರೂಪುಗೊಳಿಸಿಕೊಳ್ಳುವುದಕ್ಕಾಗಿ ಅಸಂಖ್ಯಾತ ಜನರು ತ್ಯಾಗ-ಬಲಿದಾನಗಳನ್ನು ಮಾಡಿದ್ದಾರೆ. ಅವರೆಲ್ಲರನ್ನೂ ಈ ಅಮೃತ ಗಳಿಗೆಯಲ್ಲಿ ಗೌರವಪೂರ್ವಕವಾಗಿ ಸ್ಮರಿಸೋಣ ಜನವರಿ 26ನೇ ತಾರೀಖು ಭಾರತದ ಚರಿತ್ರೆಯಲ್ಲಿ ಒಂದು ಅತ್ಯಂತ ನಿರ್ಣಾಯಕ ದಿನ. ಇದು ಸಾವಿರಾರು ವರ್ಷಗಳಿಂದ ರೂಪುಗೊಂಡಿದ್ದ ರಾಜಪ್ರಭುತ್ವ ಹಾಗೂ 17 ನೇ ಶತಮಾನದಿಂದ ಅಸ್ತಿತ್ವಕ್ಕೆ ಬಂದಿದ್ದ ವಸಾಹತುಶಾಹಿ ಆಡಳಿತವನ್ನು ಕೊನೆಗೊಳಿಸಿ ಜನಪ್ರಭುತ್ವವನ್ನು ಪ್ರತಿಷ್ಠಾಪಿಸಿಕೊಂಡ ದಿನ. ತಾರತಮ್ಯವನ್ನು ಆಧರಿಸಿದ್ದ ವಸಾಹತುಶಾಹಿಯನ್ನು ಹಾಗೂ ಪುರಾತನ ಕಾನೂನುಗಳನ್ನು ಕಿತ್ತೆಸೆದು ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯದ ವಿಚಾರದಲ್ಲಿ ಎಲ್ಲರೂ ಸಮಾನರು ಎನ್ನುವ ನವ ಭಾರತದ ಪರಿಕಲ್ಪನೆಯ ಸಂವಿಧಾನವನ್ನು ಜಾರಿಗೊಳಿಸಿದ ದಿನ.
ಇದನ್ನೂ ಓದಿ : ಇಂಡಿ| ಅಭಿರುಚಿ ಆಧಾರಿತ ಶಿಕ್ಷಣವೇ ಭವಿಷ್ಯದ ದಾರಿ: ಯಶವಂತರಾಯಗೌಡ ಪಾಟೀಲ
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸ್ವಾತಂತ್ರ್ಯವನ್ನು, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವೆಂದು ಮೂರು ಮಾದರಿಗಳಲ್ಲಿ ವ್ಯಾಖ್ಯಾನಿಸಿದ್ದಾರೆ. ‘ನಾವು ಯಾವುದೇ ಕಾರಣಕ್ಕೂ ರಾಜಕೀಯ ಪ್ರಜಾಪ್ರಭುತ್ವದಿಂದ ಸಂತುಷ್ಟಗೊಳ್ಳಬಾರದು. ನಾವು ನಮ್ಮ ರಾಜಕೀಯ ಪ್ರಜಾಪ್ರಭುತ್ವವನ್ನು ಸಾಮಾಜಿಕ ಪ್ರಜಾಪ್ರಭುತ್ವವಾಗಿಸಬೇಕು. ಸಾಮಾಜಿಕ ಪ್ರಜಾಪ್ರಭುತ್ವ ಎಂದರೆ, ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವವನ್ನು ಬದುಕಿನ ಸಿದ್ಧಾಂತವಾಗಿ ಗುರುತಿಸಿಕೊಂಡ ಒಂದು ಜೀವನ ಕ್ರಮವಾಗಿದೆ. ಸ್ವಾತಂತ್ರ ಸಮಾನತೆ ಮತ್ತು ಭಾತೃತ್ವದ ನಿಯಮಗಳನ್ನು ಪ್ರತ್ಯೇಕ ಅಂಶಗಳಾಗಿ ಪರಿಗಣಿಸಬಾರದು. ಇವುಗಳಲ್ಲಿ ಒಂದರಿಂದ ಇನ್ನೊಂದನ್ನು ಪ್ರತ್ಯೇಕಿಸಿದರೆ ಅದು ಪ್ರಜಾಪ್ರಭುತ್ವದ ಸೋಲಿಗೆ ಕಾರಣವಾಗುತ್ತದೆ. ಸ್ವಾತಂತ್ರವು ಸಮಾನತೆಯಿಂದ ಪ್ರತ್ಯೇಕವಾಗುವುದಿಲ್ಲ, ಸಮಾನತೆಯು ಸ್ವಾತಂತ್ರದಿಂದ ಪ್ರತ್ಯೇಕವಾಗುವುದಿಲ್ಲ ಅಥವಾ ಸ್ವಾತಂತ್ರ ಮತ್ತು ಸಮಾನತೆಯು ಭಾತೃತ್ವದಿಂದ ಪ್ರತ್ಯೇಕವಾಗುವುದಿಲ್ಲ. ಸಮಾನತೆಯಿಲ್ಲದ ಸ್ವಾತಂತ್ರವು ಹಲವರ ಮೇಲೆ ಕೆಲವರ ಸರ್ವಾಧಿಕಾರವಾಗಿ ಮೆರೆಯುತ್ತದೆ. ಸ್ವಾತಂತ್ರವಿಲ್ಲದ ಸಮಾನತೆಯು ವ್ಯಕ್ತಿಗತ ಕ್ರಿಯಾಶೀಲತೆಯನ್ನು ಅಂತ್ಯಗೊಳಿಸುತ್ತದೆ. ಭಾತೃತ್ವವಿಲ್ಲದಿದ್ದರೆ, ಸ್ವಾತಂತ್ರ ಹಾಗೂ ಸಮಾನತೆಗಳು ಯಾವುದೇ ವಿಷಯದ ಸಹಜ ನಡೆಯಾಗುವುದಿಲ್ಲ’ ಎಂದಿದ್ದಾರೆ.
ಜನ ಕಲ್ಯಾಣಗಳಿಗಾಗಿ ರಾಜ್ಯವು ವರ್ಷಕ್ಕೆ ₹1.12 ಲಕ್ಷ ಕೋಟಿಗಳನ್ನು ಖರ್ಚು ಮಾಡುತ್ತಿದೆ. ಸಂವಿಧಾನದ ಮುಖ್ಯ ಆಶಯದಂತೆ ಅತ್ಯಂತ ಹಿಂದುಳಿದವರ ಬಲವರ್ಧನೆಗಾಗಿ ರಾಜ್ಯದ ಜನರಿಗೆ ಆರ್ಥಿಕ ಚೈತನ್ಯ ನೀಡುವುದಕ್ಕಾಗಿ ರಾಜ್ಯವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.
ದೇಶದಲ್ಲಿ ಗ್ರಾಹಕ ಬೆಲೆ ಸೂಚ್ಯಂಕಗಳು ಆರೋಗ್ಯಕರವಾಗಿರುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಗ್ಯಾರಂಟಿ ಯೋಜನೆಗಳಿಗಾಗಿ ಈವರೆಗೆ ₹1.13 ಲಕ್ಷ ಕೋಟಿಗೂ ಅಧಿಕ ಅನುದಾನವನ್ನು ವಿನಿಯೋಗಿಸಲಾಗಿದೆ. ಇದರ ಪರಿಣಾಮವಾಗಿ ಜನರ ಕೊಳ್ಳುವ ಶಕ್ತಿ ಹೆಚ್ಚಿದೆ ಕುಟುಂಬಗಳು ಆರ್ಥಿಕವಾಗಿ ಸಬಲವಾಗುತ್ತಿವೆ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಮಹಿಳಾ ಸಮುದಾಯದಲ್ಲಿ ಹೊಸ ಆರ್ಥಿಕ ಸಾಮಾಜಿಕ ಉತ್ಸಾಹ ಬಂದಿದೆ. ಇವೆಲ್ಲದರ ಜೊತೆಗೆ ಮಹಿಳೆಯರ ಸುರಕ್ಷತೆಯ ವಿಚಾರದಲ್ಲಿ ಬೆಂಗಳೂರು ನಗರವು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆಯೆಂದು ಸಮೀಕ್ಷೆಗಳು ಹೇಳುತ್ತಿವೆ. ಈ ಸಂಗತಿಯು ರಾಜ್ಯದ ಹೆಮ್ಮೆಯ ಸಂಗತಿಯಾಗಿದೆ.
ಇದನ್ನೂ ನೋಡಿ : ಬೀದಿ ನಾಟಕ | ಫಾರ್ ಸೇಲ್ – ರಚನೆ,ನಿರ್ದೇಶನ:ಡಾ.ಟಿ ಎಚ್ ಲವಕುಮಾರ್Janashakthi Media
