ಬೆಂಗಳೂರು:ಪರಿಶಿಷ್ಟರ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗಾಗಿ ಇರುವ ವಿಶೇಷ ಅನುದಾನದಲ್ಲಿ (ಎಸ್‌ಸಿಎಸ್‌ಪಿ)-ಟಿಎಸ್‌ಪಿ) ₹11,000 ಸಾವಿರ ಕೋಟಿಯನ್ನು ಐದು ಗ್ಯಾರೆಂಟಿಗಳ ಜಾರಿಗಾಗಿ ಬಳಕೆ ಮಾಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಜುಲೈ-31 ರಂದು ನಡೆದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ರಾಜ್ಯ ಅಭಿವೃದ್ಧಿ ಪರಿಷತ್ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇದನ್ನೂ ಓದಿ:ಶಾಲೆಗಳಲ್ಲಿ ಪ್ರತಿದಿನ ಸಂವಿಧಾನದ ಪ್ರಸ್ತಾವನೆ ಓದುವುದು ಕಡ್ಡಾಯ; ಸಚಿವ ಹೆಚ್ ಸಿ ಮಹದೇವಪ್ಪ
ಈ ವೇಳೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಒಲ್ಲದ ಮನಸ್ಸಿನಿಂದಲೇ ಹಣ ಬಳಕೆ ಮಾಡಲು ಸಮ್ಮತಿ ಸೂಚಿಸಲಾಗಿದೆ ಎಂದು ಒಪ್ಪಿಕೊಂಡರು. ಎಸ್‌ಸಿಎಸ್‌ಪಿಯಿಂದ ರೂ.7,570 ಕೋಟಿ ಮತ್ತು ಟಿಎಸ್‌ಪಿಯಿಂದ ರೂ.3,430 ಕೋಟಿಯನ್ನು ಬಳಕೆ ಮಾಡಲಾಗುವುದು. ಗ್ಯಾರೆಂಟಿ ಯೋಜನೆಗಳಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗಾಗಿ ಮಾತ್ರವೇ ಈ ಹಣವನ್ನು ಬಳಸಲಾಗುವುದು. ಬೇರೆಯವರಿಗೆ ಬಳಸುವ ಪ್ರಶ್ನೆಯೇ ಇಲ್ಲ ಎಂದು ಅವರು ಸಮಾಜಾಯಿಷಿ ನೀಡಿದರು.
ಒಟ್ಟು ಎಷ್ಟು ಅನುದಾನ ಬೇಕಾಗಬಹುದು ಎಂದು ಈಗಾಗಲೇ ಹೇಳಲು ಆಗುವುದಿಲ್ಲ.ಕೆಲವು ಗ್ಯಾರೆಂಟಿಗಳಿಗೆ ಹೆಚ್ಚು ಹಣ ಬೇಕಾಗಬಹುದು. ಇನ್ನು ಕೆಲವು ಗ್ಯಾರೆಂಟಿಗಳಿಗೆ ಕಡಿಮೆ ಹಣ ಬೇಕಾಗಬಹುದು. ಉದಾಹರಣೆಗೆ ಶಕ್ತಿ ಯೋಜನೆಯಡಿ ಒಬ್ಬ ಮಹಿಳೆ ಒಂದು ಬಾರಿ ಪ್ರಯಾಣ ಮಾಡಬಹುದು. 30 ಬಾರಿ ಪ್ರಯಾಣ ಮಾಡಿದರೆ, ಅಷ್ಟಕ್ಕೂ ಹಣ ನೀಡಬೇಕಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವರು ಹೇಳಿದರು.
ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನದಲ್ಲಿ 13 ಸಾವಿರ ಕೋಟಿ ಗ್ಯಾರೆಂಟಿಗಳಿಗೆ ನೀಡಲಾಗಿದೆ. ಇದು ಅನುದಾನದ ದುರ್ಬಳಕೆ ಎಂಬ ಬಿಜೆಪಿ ನಾಯಕರು ಮಾಡಿರುವ ಆರೋಪಗಳ ಬಗ್ಗೆ ಗಮನ ಸೆಳೆದಾಗ ಆರಂಭದಲ್ಲಿ ಹುರುಳಿಲ್ಲದ ಆರೋಪ ಎಂದು ಸಚಿವರು ವಾದಿಸಿದರು. ಆ ಬಳಿಕ ಅನುದಾನ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಸಚಿವರಾದ ನಾಗೇಂದ್ರ, ಎಚ್.ಕೆ.ಪಾಟೀಲ್,ಪ್ರಿಯಾಂಕ್ ಖರ್ಗೆ,ಎಂ.ಸಿ.ಸುಧಾಕರ್, ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ, ಶಾಸಕ ಪಿ.ಎಂ.ನರೇಂದ್ರ ಸ್ವಾಮಿ, ಪ್ರಸಾದ್ ಅಬ್ಬಯ್ಯ, ಇ.ತುಕಾರಾಂ,ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಸಭೆಯಲ್ಲಿ ಇದ್ದರು.
23-24 ನೇ ಸಾಲಿನ ಅನುದಾನ
- ₹34,293.69 ಕೋಟಿ ಒಟ್ಟು ಅನುದಾನ
- ₹24,333 ಕೋಟಿ ಪರಿಶಿಷ್ಟ ಸಮುದಾಯದವರಿಗೆ
- ₹9,961 ಕೋಟಿ ಪರಿಶಿಷ್ಟ ಪಂಗಡದವರಿಗೆ
- ₹11,000 ಕೋಟಿ ಒಟ್ಟು ಅನುದಾನದಲ್ಲಿ ಗ್ಯಾರೆಂಟಿಗಳಿಗೆ
ಮೌಲ್ಯಮಾಪನ ವರದಿ ಪಡೆಯಲಾಗುವುದು: ಸಿಎಂ ಸಿದ್ದರಾಮಯ್ಯ
ಈ ಅನುದಾನದಡಿ ಯೋಜನೆಗಳ ಅನುಷ್ಠಾನ ನಂತರದ ಪರಿಣಾಮಗಳ ಮೌಲ್ಯಮಾಪನ ವರದಿಯನ್ನು ಸಿದ್ಧಪಡಿಸಿ ಫಲಾನುಭವಿಗಳ ಸ್ಥಿತಿಗತಿಯಲ್ಲಿ ಆಗಿರುವ ಬದಲಾವಣೆಗಳ ಮಾಹಿತಿ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯಲ್ಲಿ ತಿಳಿಸಿದರು. ಒಂದು ವೇಳೆ ಈ ಅನುದಾನವನ್ನು ಖರ್ಚು ಮಾಡದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕಾಯ್ದೆ ಹೇಳುತ್ತದೆ. ಕಾಯ್ದೆ ಗಂಭೀರವಾಗಿದೆ. ಯಾರು ನಿರ್ಲಕ್ಷ್ಯ ಮಾಡುತ್ತಾರೊ ಅವರ ವಿರುದ್ಧ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಸಭೆಯ ಪ್ರಮುಖ ಅಂಶಗಳು:
- ಈ ಸಾಲಿನಲ್ಲಿ ರಾಜ್ಯದ ಒಟ್ಟು ಆಯವ್ಯಯ ಗಾತ್ರವು ₹3.28 ಲಕ್ಷ ಕೋಟಿ ಆಗಿದ್ದು ಇದರಲ್ಲಿ ಅಭಿವೃದ್ಧಿಗಾಗಿ ₹1.42ಲಕ್ಷ ಕೋಟಿ ನಿಗದಿ ಮಾಡಲಾಗಿದೆ. ಆ ಪೈಕಿ ಎಸ್‌ಸಿಎಸ್‌ಪಿ-ಟಿಎಸ್‌ಪಿಗೆ ಶೇ 24.10 ಅನುದಾನ ಅಂದರೆ ₹34221.49 ಕೋಟಿ ಮತ್ತು ಹಿಂದಿನ ವರ್ಷ ಬಳಕೆಯಾಗದ ಮೊತ್ತ ₹72.20ಕೋಟಿ ಸೇರಿಸಿ ₹34293.69 ಕೋಟಿ ಅನುದಾನ ನೀಡಲಾಗಿದೆ.
- ಸಂಬಂಧಿಸಿದ ಇಲಾಖೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಅನುದಾನ ಉಳಿದರೆ ಅದರ ಮರುಹಂಚಿಕೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು.
- ಪರಿಶಿಷ್ಟ ಜಾತಿ ಮತ್ತು ಪಂಗಡದ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ವಿದ್ಯಾರ್ಥಿ ನಿಲಯ ಸೌಲಭ್ಯ ಕಲ್ಪಿಸಬೇಕು. ಯಾವುದೇ ಕಾರಣಕ್ಕೂ ದಲಿತರ ಮಕ್ಕಳು ಮಧ್ಯದಲ್ಲೇ ಶಾಲೆ ಬಿಟ್ಟು ಹೋಗಬಾರದು.
- ದಲಿತರಿಗೆ ಎಲ್ಲೆಲ್ಲಿ ರುದ್ರಭೂಮಿ ಬೇಡಿಕೆ ಇದೆಯೊ ಅಲ್ಲಿ ರುದ್ರಭೂಮಿ ಒದಗಿಸಬೇಕು.
ಇಲಾಖಾವಾರು ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಂಚಿಕೆಯಾಗಿರುವ ಹಣ
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ;₹5790.67 ಕೋಟಿ
- ಇಂಧನ ಇಲಾಖೆ;₹5400.98 ಕೋಟಿ
- ಕಂದಾಯ ಇಲಾಖೆ;₹4041.78 ಕೋಟಿ
- ಪರಿಶಿಷ್ಟ ಜಾತಿ ಕಲ್ಯಾಣ;₹3787.29 ಕೋಟಿ
- ಪರಿಶಿಷ್ಟ ಪಂಗಡ ಕಲ್ಯಾಣ;₹1387.35 ಕೋಟಿ
- ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ;₹27779.97 ಕೋಟಿ
- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ;₹2349.85 ಕೋಟಿ
- ವಸತಿ ಇಲಾಖೆ;₹1431.5 ಕೋಟಿ
- ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ;₹1296.96 ಕೋಟಿ
- ಆರೋಗ್ಯ ಇಲಾಖೆ;₹1122.25 ಕೋಟಿ