ರಾಷ್ಟ್ರೀಯ ಶಿಕ್ಷಣ ನೀತಿ-2020 ಕುರಿತು ಭಾರತ ವಿದ್ಯಾಥಿ ಫೆಡರೇಷನ್ ಆಯೋಜಿಸಿದ್ದ ವೆಬಿನಾರ್
ಬೆಂಗಳೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಶ್ರೀಮಂತರ ಭಾರತಕ್ಕೆ ಅನುಕೂಲ ಆಗುತ್ತದೆ ಹೊರತು ಬಡವರ ಭಾರತಕ್ಕೆ ಅನುಕೂಲ ಆಗುವುದಿಲ್ಲ ಎಂದು ನಿವೃತ್ತ ಉಪನ್ಯಾಸಕ ಪ್ರೊ. ಚಂದ್ರ ಪೂಜಾರಿಯವರು ವಿಷಾದ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 ಕುರಿತ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್.ಎಫ್.ಐ) ಆಯೋಜಿಸಿದ್ದ ವೆಬಿನಾರ್ ನಲ್ಲಿ ಉಪನ್ಯಾಸ ನೀಡುತ್ತಿದ್ದ ಅವರು, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಕುರಿತು ಭ್ರಮೆ ಹುಟ್ಟಿಸಲಾಗುತ್ತಿದೆ. ಅದು ವರ್ತಮಾನದ ಶೈಕ್ಷಣಿಕ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸುವುದಿಲ್ಲ. ಹೊಸ ಶಿಕ್ಷಣ ನೀತಿ ಶಿಕ್ಷಣದ ವ್ಯಾಪಾರೀಕರಣ ಹಾಗೂ ಕೇಂದ್ರೀಕರಣಕ್ಕೆ ಹೆಚ್ಚು ಒತ್ತು ನೀಡುತ್ತದೆ ಎಂದರು.
ದೇಶದಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ 30% ಶಿಕ್ಷಣ ಖಾಸಗಿ ಹಿಡಿತದಲ್ಲಿದೆ. ಉನ್ನತ ಶಿಕ್ಷಣ 70% ಖಾಸಗಿಯವರ ಒಡೆತನದಲ್ಲಿ ಇದೆ. ತಾಂತ್ರಿಕ ಶಿಕ್ಷಣ 80% ರಷ್ಟು ಖಾಸಗಿಯವರು ನಿಯಂತ್ರಣ ಮಾಡುತ್ತಿದ್ದಾರೆ. ಇದನ್ನು ಬದಲಾಯಿಸುವುದು ಹೇಗೆ ಎಂಬುದರ ಕುರಿತು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸೂಚಿಸಿಲ್ಲ. ಇನ್ನೂ ಖಾಸಗಿ ಶಾಲೆಯಲ್ಲಿ ಪಾಠ ಮಾಡುವ ಸಿಬ್ಬಂದಿಗೆ ಭದ್ರತೆ ಹಾಗೂ ಹೆಚ್ಚಿನ ವೇತನ ನೀಡದ ಕಾರಣ ಗುಣಮಟ್ಟದ ಶಿಕ್ಷಣದ ನಿರೀಕ್ಷೆ ಸಾಧ್ಯವಿಲ್ಲ ಎಂದುರು.
“ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಕುರಿತು ಭ್ರಮೆ ಹುಟ್ಟಿಸಲಾಗುತ್ತಿದೆ. ಅದು ವರ್ತಮಾನದ ಶೈಕ್ಷಣಿಕ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸುವುದಿಲ್ಲ. ಹೊಸ ಶಿಕ್ಷಣ ನೀತಿ ಶಿಕ್ಷಣದ ವ್ಯಾಪಾರೀಕರಣ ಹಾಗೂ ಕೇಂದ್ರಕರಣಕ್ಕೆ ಹೆಚ್ಚು ಒತ್ತು ನೀಡುತ್ತದೆ.”
ಹೊಸ ಶಿಕ್ಷಣ ನೀತಿಯು ಹಣ ವಿನಿಯೋಜನೆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಹಣ ವಿನಿಯೋಜನೆ ಮಾಡದ ಕಾರಣ ಶಿಕ್ಷಣ ಈಗ ದಿವಾಳಿ ಅಂಚಿನಲ್ಲಿದೆ. ಪರಿಣಾಮ ಖಾಸಗಿ ಶಿಕ್ಷಣ ಸಂಸ್ಥೆಗಳು ಬಲಗೊಂಡು ಸಾರ್ವಜನಿಕ ಶಿಕ್ಷಣ ಮುಚ್ಚುವ ಸ್ಥಿತಿ ಬಂದಿದೆ. ಶಿಕ್ಷಣಕ್ಕೆ ಬಜೆಟ್ ನಲ್ಲಿ ಹೆಚ್ಚುವರಿ ಹಣ ತೆಗೆದಿರಿಸಿದರೆ ಮಾತ್ರ ಗುಣ ಮಟ್ಟದ ಶಿಕ್ಷಣ ನೀಡಲು ಸಾಧ್ಯ. ಆದರೆ ಹೊಸ ಶಿಕ್ಷಣ ನೀತಿಯಿಂದ ಇದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಯಾಕೆಂದರೆ ಈಗ ದೇಶದ ಆರ್ಥಿಕ ಸಮಸ್ಯೆ ಋಣಾತ್ಮಕ ಸ್ಥಿತಿಗೆ ತಲುಪಿದೆ. ಮೋದಿ ಸರಕಾರ ಇತ್ತಿಚೆಗೆ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಹಾಗೂ ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ ತಿದ್ದುಪಡಿಯಂತಹ ಜನವಿರೋಧಿ ಅಪಾಯಕಾರಿ ನೀತಿಗಳನ್ನು ತಂದಿದ್ದು, ಇಂತವರಿಂದ ಶಿಕ್ಷಣದಲ್ಲಿ ಹೊಸತನ ನಿರೀಕ್ಷಿಸಲು ಸಾಧ್ಯವೆ ಎಂದು ಪ್ರಶ್ನಿಸಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಸಿದ್ದ ಚಿಕ್ಕಬಳ್ಳಾಪುರದ ಇರ್ಫಾನ್ , ಬೆಂಗಳೂರಿನ ನಾಗವೇಣಿ, ಯರಿಸ್ವಾಮಿ ಸೇರಿದಂತೆ ಅನೇಕರು ಪ್ರಶ್ನೆಗಳನ್ನು ಕೇಳಿ ಸಂವಾದ ನಡೆಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಎಫ್.ಐ ರಾಜ್ಯ ಅಧ್ಯಕ್ಷ ಅಮರೇಶ್ ಕಡಗದ್ ವಹಿಸಿದ್ದರು, ಪ್ರಾಸ್ತಾವಿಕವಾಗಿ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ಮಾತನಾಡಿದರು. ರಾಜ್ಯ ಉಪಾಧ್ಯಕ್ಷ ದಿಲೀಪ್ ಶೆಟ್ಟಿ ಕಾರ್ಯಕ್ರಮದ ನಿರ್ವಹಿಸಿದರು.