ಹೊಸ ವರ್ಷದಲ್ಲಿ ಒಂದು ಉತ್ತಮ ಭಾರತಕ್ಕಾಗಿ ಜನತೆಯ ಹೋರಾಟಗಳನ್ನು ಬಲಪಡಿಸೋಣ

ಮತ್ತೊಂದು ಹೊಸ ವರ್ಷ, ಹೊಸ ದಶಕವೂ ಬಂದಿದೆ. ಕಳೆದ ವರ್ಷದಲ್ಲಿ, ಕಳೆದ ದಶಕದಲ್ಲಿ ಬಂಡವಾಳಶಾಹಿ ತನ್ನ ಮಿತಿಗಳನ್ನು ಮತ್ತೊಮ್ಮೆ ಬಯಲು ಮಾಡಿಕೊಂಡಿದೆ, ಅದಕ್ಕೆ ರಾಜಕೀಯ ಪರ್ಯಾಯದ ಅಗತ್ಯ ಮತ್ತೊಮ್ಮೆ ಅರಿವಿಗೆ ಬಂದಿದೆ. ಇದಕ್ಕೆ ಭಾರತದಲ್ಲಿ ಇರುವ ಏಕೈಕ ದಾರಿಯೆಂದರೆ ಯುಪಿಎ ಸರಕಾರದ ಆರ್ಥಿಕ ನೀತಿಗಳ ವಿರುದ್ಧ ಭಾರತೀಯ ಜನತೆಯ ಹೋರಾಟಗಳನ್ನು ಬಲಪಡಿಸುವುದು. ಈ ಹೊಸ ವರ್ಷದಲ್ಲಿ ಬಹುಪಾಲು ಭಾರತೀಯರಿಗೆ ಒಂದು ಉತ್ತಮ ಭಾರತವನ್ನು ನಿರ್ಮಿಸುವ ಜನತೆಯ ಹೋರಾಟಗಳನ್ನು ಬಲಪಡಿಸುವ ದೃಢನಿರ್ಧಾರವನ್ನು ಪುನರುಚ್ಚರಿಸೋಣ.


ನಮ್ಮ ಎಲ್ಲಾ ಓದುಗರಿಗೆ ಹೊಸ ವರ್ಷದ ಶುಭಾಶಯಗಳು.

2009 ಈಗಷ್ಟೇ ಇತಿಹಾಸ ಸೇರಿದೆ. 2010ರಲ್ಲಿ ಜನತೆಯ ಜೀವನ ಮಟ್ಟವನ್ನು ಉತ್ತಮಗೊಳಿಸುವ ಜನಪರ ಹೋರಾಟಗಳನ್ನು ಬಲಪಡಿಸಲು ಎಂದಿನಂತೆ ಕಳೆದ ವರ್ಷದ ಮೌಲ್ಯಮಾಪನ ಮಾಡುವ ಸಮಯವಿದು.

ಈ ಬಾರಿ ಒಂದು ವರ್ಷ ಕೊನೆಗೊಳ್ಳುವುದರೊಂದಿಗೆ ಒಂದು ದಶಕವೂ ಕೊನೆಗೊಂಡಿದೆ. 21ನೆ ಶತಮಾನದ ಮೊದಲ ದಶಕ ಕೊನೆಗೊಳ್ಳುತ್ತಿರುವಂತೆ ಜಾಗತಿಕವಾಗಿ ಬಂಡವಾಳಶಾಹಿ ತನ್ನ ಚಾರಿತ್ರಿಕ ಮಿತಿಗಳನ್ನು ಬಯಲು ಮಾಡಿಕೊಂಡಿದೆ. ಆರ್ಥಿಕ ಹಿಂಜರಿತ ಮುಂದುವರೆಯುತ್ತಿದೆ. ಸಂಪತ್ತಿನ ನಾಶ, ಕೈಗಾರಿಕಾ ಉತ್ಪಾದನೆಯ ಮತು ಜಾಗತಿಕ ವ್ಯಾಪಾರದ ಇಳಿಕೆಯಿಂದಾಗಿ ವಿಶ್ವದಲ್ಲಿ ನಿರುದ್ಯೋಗಿಗಳ ಸಂಖ್ಯೆ 6.1ಕೋಟಿ ಹೆಚ್ಚಿದೆ, 18 ಕೋಟಿಯಿಂದ 24.1 ಕೋಟಿಗೆ ಏರಿದೆ ಎಂದು ಅಂತರ್ರಾಷ್ಟ್ರೀಯ ಕಾರ್ಮಿಕ ಸಂಘಟನೆ, ಐಎಲ್ಒ ಹೇಳಿದೆ. ಇದರ ಜೊತೆಗೆ ದುಡಿಯುವ ಜನಗಳ ನಿಜವಾದ ಆದಾಯದ ಬೆಳವಣಿಗೆಯಲ್ಲಿ ತೀವ್ರ ಇಳಿಕೆಯೂ ಕಾಣಬಂದಿದೆ. 2007ರಲ್ಲಿ 4.3 ಶೇ. ಇದ್ದದ್ದು 2008 ರಲ್ಲಿ 1.4 ಶೇ. ಕ್ಕೆ ಇಳಿದಿದೆ. 2009 ರಲ್ಲಿ ಇನ್ನಷ್ಟು ಇಳಿದಿರಬೇಕು ಎಂದು ಅಂದಾಜಿಸಲಾಗಿದೆ. ಇವೆರಡೂ ಸೇರಿ ಇನ್ನೂ 8.9 ಕೋಟಿ ಜನರನ್ನು ಬಡತನಕ್ಕೆ ತಳ್ಳಿವೆ, ಈ ಮೂಲಕ ಬಡಜನರ ಸಂಖ್ಯೆ ವಿಶ್ವದಲ್ಲಿ 150 ಕೋಟಿ ದಾಟಿದಂತಾಗಿದೆ ಎಂದು ವಿಶ್ವ ಬ್ಯಾಂಕ್ ಕೂಡಾ ತಿಳಿಸಿದೆ.

ಈ ಬಾರಿಯ ಜಾಗತಿಕ ಬಂಡವಾಳಶಾಹಿ ಬಿಕ್ಕಟ್ಟು ಮತ್ತೊಮ್ಮೆ ಬಂಡವಾಳಶಾಹಿಗೆ ಒಂದು ರಾಜಕೀಯ ಪರ್ಯಾಯದ ಅಗತ್ಯವನ್ನು  ಜನರ ಮುಂದೆ ಇಟ್ಟಿದೆ. ಮಾನವಕುಲವನ್ನು ಇಂತಹ ದಮನ ಮತ್ತು ಶೋಷಣೆಯಿಂದ ವಿಮೋಚನೆಗೊಳಿಸಲು ಇರುವ ರಾಜಕೀಯ ಪರ್ಯಾಯವೆಂದರೆ ಸಮಾಜವಾದ ಮಾತ್ರವೇ ಎಂದು ನಾವು ಹೇಳುತ್ತಾ ಬಂದಿದ್ದೇವೆ. ಮುಂಬರುವ ವರ್ಷದಲ್ಲಿ ಮತ್ತು ದಶಕದಲ್ಲಿ ಇಂತಹ ಒಂದು ರಾಜಕೀಯ ಪರ್ಯಾಯವನ್ನು ಬಲಪಡಿಸಲು ಜನಗಳ ಹೋರಾಟಗಳನ್ನು ತೀವ್ರಗೊಳಿಸಬೇಕಾಗಿದೆ.

ಪ್ರಧಾನಿಗಳ ತಪ್ಪೊಪ್ಪಿಗೆ

ಜಗತ್ತನ್ನು ತಲ್ಲಣಗೊಳಿಸಿದ ಆಘಾತಗಳು ಭಾರತವನ್ನು ಇತರರಷ್ಟು ತಟ್ಟಲಿಲ್ಲ ಎಂದು ನಮ್ಮ ಆಳುವ ವರ್ಗಗಳು ತಮ್ಮ ಬೆನ್ನು ತಟ್ಟಿಕೊಳ್ಳುತ್ತಿರಬಹುದು, ಇದು ಕೂಡಾ ಸಾಧ್ಯವಾದದ್ದು ಎಡಪಕ್ಷಗಳು ಯುಪಿಎ-1 ರ ಆಳ್ವಿಕೆಯಲ್ಲಿ ಹಲವಾರು ಹಣಕಾಸು ಉದಾರೀಕರಣದ ಸುಧಾರಣೆಗಳಿಗೆ ತಡೆ ಹಾಕಿದ್ದರಿಂದ ಎಂಬುದನ್ನು ಮರೆಮಾಚಿ. ಆದರೆ ಬಹುಪಾಲು ಭಾರತಿಯರು, ಮುಖ್ಯವಾಗಿ ಬಡಜನರು ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಗಗನಕ್ಕೇರಿರುವ ಆಹಾರ ಬೆಲೆಗಳಿಂದ ತತ್ತರಿಸುತ್ತಿದ್ದಾರೆ.  ಇದು ಖಂಡಿತಾ ನಮ್ಮ ದೇಶದಲ್ಲಿಯೂ ಇನ್ನಷ್ಟು ಜನಗಳನ್ನು ಬಡತನದ ದವಡೆಗೆ ನೂಕಿದೆ.

ಪ್ರಧಾನ ಮಂತ್ರಿಗಳು ಇತ್ತೀಚೆಗೆ ನಡೆದ ಭಾರತೀಯ ಆರ್ಥಿಕ ಸಂಘ (ಇಂಡಿಯನ್ ಇಕನಾಮಿಕ್ ಅಸೋಸಿಯೇಷನ್)ದ ಸಮ್ಮೇಳನದಲ್ಲಿ  ಒಂದು ಬಹಳ ರಕ್ಷಣಾತ್ಮಕ ನಿಲುವು ತಳೆಯುತ್ತಾ ಬಡತನದ ರೇಖೆಯ ಕೆಳಗಿರುವ ಜನರ ಶೇಕಡಾವಾರು ಖಂಡಿತಾ ಹೆಚ್ಚಿಲ್ಲ ಎಂದರು. ಅಂದರೆ ಉದಾರೀಕರಣ ಅಥವಾ ಸುಧಾರಣೆಯ ಆರ್ಥಿಕ ನೀತಿಗಳು ಎರಡು ಭಾರತಗಳನ್ನು, ಹೊಳೆಯುತ್ತಿರುವ ಮತ್ತು ನರಳುತ್ತಿರುವ ಭಾರತಗಳನ್ನು ನಿರ್ಮಿಸಿವೆ ಎಂಬ ಅರಿವು ಮೂಡಿರುವುದನ್ನು ಇದು ತೋರಿಸುತ್ತದೆ. ಲಭ್ಯ ಸಾಕ್ಷ್ಯದ ಪ್ರಕಾರ ಹೊಸ ಆರ್ಥಿಕ ನೀತಿಗಳು ಬಡವರ ಮೇಲೆ ಒಂದು ಪ್ರತಿಕೂಲ ಪರಿಣಾಮ ಬೀರಿವೆ ಎನ್ನಲು ಸಾಕ್ಷ್ಯಗಳಿಲ್ಲ ಎಂದು ನಾವು ಹೇಳಿಕೊಳ್ಳಬಹುದು ಎಂದಿರುವುದು ಒಂದು ರೀತಿಯಲ್ಲಿ ತಪ್ಪೊಪ್ಪಿಗೆಯಂತೆ ಕಾಣುತ್ತದೆ. ವಾಸ್ತವವಾಗಿ, ಬಡತನ ಆರ್ಥಿಕ ಸುಧಾರಣೆಗಳ ನಂತರ ಅದರ ಮೊದಲಿನ ದರದಲ್ಲೇ ಆದರೂ ಇಳಿದಿದೆ ಎಂದೂ ಅವರು ಹೇಳಿದರು.

ವಾಸ್ತವವಾಗಿ ಇದು ಬಡತನದ ಪ್ರಮಾಣದ ಇತ್ತೀಚಿನ ಅಂದಾಜುಗಳೊಂದಿಗೂ ತಾಳೆಯಾಗುತ್ತದೆ. ಯೋಜನಾ ಆಯೋಗ ರಚಿಸಿದ ಸುರೇಶ ತೆಂಡುಲ್ಕರ್ ಸಮಿತಿ  37ಶೇ. ಭಾರತೀಯರು ಬಡತನದಲ್ಲಿ ಬದುಕುತ್ತಿದ್ದಾರೆ ಎಂದಿದೆ. ಇದುವರೆಗೆ ಇದ್ದ ಅಧಿಕೃತ ಅಂದಾಜು 27.5 ಶೇ. ಈ ಹಿಂದೆ ರಾಷ್ಟ್ರೀಯ ಅಸಂಘಟಿತ ವಲಯದ ಉದ್ದಿಮೆಗಳ ಆಯೋಗ ಬಳಕೆದಾರರ ಖರ್ಚಿನ ಮಾಹಿತಿಯ ಆಧಾರದಲ್ಲಿ 78 ಶೇ. ಭಾರತೀಯರು ದಿನಕ್ಕೆ 20 ರೂ. ಕೂಡಾ ಖರ್ಚು ಮಾಡಲಾರದೆ ಬದುಕುಳಿದಿದ್ದಾರೆ ಎಂದು ಅಂದಾಜು ಮಾಡಿತ್ತು. ಅಂದರೆ ಇಂದು ಸುಮಾರು ನಮ್ಮ ಜನಸಂಖ್ಯೆಯ ಮುಕ್ಕಾಲು ಪಾಲು ಬಡತನದಲ್ಲಿ ಬದುಕಿದ್ದಾರೆ.

‘ಆಮ್ ಆದ್ಮಿ’ಯ ಮಂತ್ರಪಠಣದ ಹಿಂದೆ

ಭಾರತದಲ್ಲಿ ಬಡತನ ನಿಜವಾಗಿ ಎಷ್ಟಿದೆ ಎಂಬುದನ್ನು ಸರಿಯಾಗಿ ಲೆಕ್ಕ ಹಾಕುವ ವಿಧಾನದ ಬಗ್ಗೆ ಬಹಳಷ್ಟು ವಿವಾದಗಳಿವೆ. ಸಾಮಾನ್ಯವಾಗಿ ಅಂದಾಜು ವಾಸ್ತವತೆಗಿಂತ ಕೆಳಮಟ್ಟದಲ್ಲೆ ಇರುತ್ತದೆ.  ಆದರೂ ಬಡತನದ ರೇಖೆಯ ಕೆಳಗಿರುವವರ ಸಂಖ್ಯೆಯಂತೂ ಏರುತ್ತಿದೆ ಎಂಬುದನ್ನು ಅಧಿಕೃತವಾಗಿ ಗುರುತಿಸಲಾಗುತ್ತಿದೆ.

ಹಲವಾರು ರಾಜ್ಯ ಸರಕಾರಗಳು ಬಡತನದ ಕೆಳಗಿರುವವರ (ಬಿಪಿಎಲ್) ಸಂಖ್ಯೆಯ ಬಗ್ಗೆ ಕೇಂದ್ರ ಸರಕಾರದ ಅಂದಾಜು ಸರಿಯಿಲ್ಲ ಎಂದು ಸವಾಲು ಹಾಕಿರುವುದನ್ನೂ ಈ ಹಿನ್ನೆಲೆಯಲ್ಲಿ ನೋಡಬೇಕು.  ಇದು ಬಹಳ ಮಹತ್ವದ್ದು. ಏಕೆಂದರೆ ಕೇಂದ್ರದಿಂದ ರಾಜ್ಯಗಳಿಗೆ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ನೀಡಿಕೆಯ ಪ್ರಮಾಣವನ್ನು ಮತ್ತು ಆಹಾರಧಾನ್ಯಗಳ ಪೂರೈಕೆಯ ಪ್ರಮಾಣವನ್ನು ಈ ಅಂದಾಜುಗಳನ್ನು ಆಧರಿಸಿಯೇ ನಿರ್ಧರಿಸಲಾಗುತ್ತದೆ. ಬಿಪಿಎಲ್ ಜನಸಂಖ್ಯೆಯ ಪ್ರಮಾಣದ ಅಂದಾಜು ವಾಸ್ತವ ಸಂಖ್ಯೆಗಿಂತ ಬಹಳ ಕಡಿಮೆಯಿರುವುದರಿಂದಾಗಿ ಯುಪಿಎ ಸರಕಾರ ಆಮ್ ಆದ್ಮಿಗೆ ಬದ್ಧವಾಗಿದೆ ಎಂಬ ಮಾತು ಕೇವಲ ವಂಚನೆಯಾಗಿಯೇ ಕಾಣುತ್ತದೆ.

ಈ ಆಮ್ ಆದ್ಮಿಯ ಬದುಕಿನ ಗುಣಮಟ್ಟ 2009ರಲ್ಲಿ ಅಹಾರ ಬೆಲೆಗಳ ಏರಿಕೆಯಿಂದಾಗಿ 20 ಶೇ.ದಷ್ಟು ಭಾರೀ ಪ್ರಮಾಣದಲ್ಲಿ ಇಳಿದಿದೆ. ಬೇಡಿಕೆಗೆ ಸರಿಯಾದ ಪೂರೈಕೆ ಇರಲಿಲ್ಲ, 37ವರ್ಷಗಳಲ್ಲೇ ಇಷ್ಟು ಕೆಟ್ಟ ಮಳೆಗಾಲ ಕಂಡಿರಲಿಲ್ಲ ಇತ್ಯಾದಿ ಅಧಿಕೃತ ವಿವರಣೆಗಳೇನೇ ಇದ್ದರೂ, ಸರಕಾರ ಈ ಹಣದುಬ್ಬರದ ನಾಗಾಲೋಟವನ್ನು ತಡೆದಿಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂಬುದಂತೂ ವಾಸ್ತವಾಂಶ. ಈ ಬೆಲೆ ಏರಿಕೆಗಳಿಗೆ ಬಹಳ ಮಟ್ಟಿಗೆ ಆಹಾರ ಸರಕುಗಳಲ್ಲಿ ಸಟ್ಟಾ ವ್ಯಾಪಾರವೇ ಕಾರಣ ಎಂದು ಹೇಳಬಹುದು. ಎಪ್ರಿಲ್ 2009ರಿಂದ ಆಹಾರ ಪದಾರ್ಥಗಳ ಮೇಲೆ ಹೂಡಿಕೆ ನಡೆಸಿರುವ ಕಂಪನಿಗಳು 150 ರಿಂದ 300 ಶೇ.ದ ವರೆಗೆ ಪ್ರತಿಫಲ ಪಡೆದಿವೆ. ಹಣದುಬ್ಬರಕ್ಕೆ, ಅಹಾರ ಬೆಲೆಯೇರಿಕೆಗೆ ಈ ಜೂಜುಕೋರತನ ಎಂತಹ ‘ಕೊಡುಗೆ’ ನೀಡಿದೆಯೆಂಬುದನ್ನು ಈ ಪತ್ರಿಕೆಯಲ್ಲಿ ನೀವು ಓದಿದ್ದೀರಿ. ಜೂನ್ 2008 ರ ಒಂದೇ ತಿಂಗಳಲ್ಲಿ ಸರಕು ವಿನಿಮಯ ಕೇಂದ್ರದಲ್ಲಿ ನಡೆದ ವ್ಯವಹಾರದ ಮೊತ್ತ 15ಲಕ್ಷ ಕೋಟಿ ರೂ.ಗಳನ್ನು ದಾಟಿತು! ಇಂತಹ ಭಾರೀ ಪ್ರಮಾಣದ ವ್ಯವಹಾರ ಹೆಚ್ಚಿನ ಪ್ರತಿಫಲ ಸಿಗುತ್ತದೆ ಎಂಬ ನಿರೀಕ್ಷೆಯಿಂದಲೇ ತಾನೇ? ಆದರೆ ಇಂತಹ ಹೆಚ್ಚಿನ ಪ್ರತಿಫಲ ಸಿಗುವುದು ಈ ಆಹಾರ ಸರಕುಗಳ ಬೆಲೆಗಳು ಇಂತಹ ವ್ಯವಹಾರ ನಡೆದಾಗ ಇರುವುದಕ್ಕಿಂತ ಮತ್ತಷ್ಟು ಮೇಲೇರಿದರೆ ಮಾತ್ರವೇ.

ಆದ್ದರಿಂದ ಆಹಾರ ಬೆಲೆಗಳನ್ನು ಹತೋಟಿಯಲ್ಲಿಡಲು ಇಂತಹ ಸಟ್ಟಾ ವ್ಯವಹಾರದ ಮೇಲೆ ಕಠಿಣ ಕ್ರಮ ಕೈಗೊಂಡು, ಎಲ್ಲಾ ಜೀವನಾವಶ್ಯಕ ಸರಕುಗಳಲ್ಲಿ ಮುಂಗಡ/ವಾಯಿದಾ ವ್ಯಾಪಾರವನ್ನು ನಿಷೇಧಿಸುವುದಲ್ಲದೆ ಬೇರೆ ಮಾರ್ಗವಿಲ್ಲ. ಜತೆಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು, ಪಡಿತರ ವ್ಯವಸ್ಥೆಯನ್ನು ಬಲಗೊಳಿಸಬೇಕು. ಹೀಗೆ ಮಾಡದಿದ್ದರೆ ಜನಸಾಮಾನ್ಯರ ಮೇಲೆ, ‘ಆಮ್ ಆದ್ಮಿ’ಯ ಮೇಲೆ ಈ ದುಪ್ಪಟ್ಟು ದಾಳಿಯನ್ನು ತಡೆಯಲು ಸಾಧ್ಯವಿಲ್ಲ. ಭಾರತದ ಆಳುವ ವರ್ಗಗಳು ತಮ್ಮ ವರ್ಗಗುಣದಿಂದಾಗಿ ಇಂತಹ ಕ್ರಮಗಳನ್ನು ಕೈಗೊಳ್ಳಲು ನಿರಾಕರಿಸುತ್ತವೆ. ಆದ್ದರಿಂದ ‘ಆಮ್ ಆದ್ಮಿ’ಯ ಬಗ್ಗೆ ಮಾತುಗಳೆಲ್ಲ ಮೋಸವಲ್ಲದೆ ಬೇರೇನೂ ಅಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗುತ್ತದೆ.

ಬದುಕು ಉತ್ತಮಗೊಳ್ಳಲು

ಇಂತಹ ಸಂದರ್ಭದಲ್ಲಿ ನಮ್ಮ ಬಹುಪಾಲು ಜನತೆಗೆ ಒಂದು ಉತ್ತಮ ಬದುಕು ಸಾಧ್ಯವಾಗಬೇಕಾದರೆ ಬಡತನ ನಿವಾರಣಾ ಕಾರ್ಯಕ್ರಮಗಳಿಗೆ ಸರಕಾರ ಹೆಚ್ಚಿನ ಹಣ ಒದಗಿಸಬೇಕಾಗುತ್ತದೆ.  ಕಂದಾಯ ವಸೂಲಿಯಲ್ಲಿ ದೊಡ್ಡ ಪ್ರಮಾಣದ ಕೊರತೆಯನ್ನು ಕಂಡರೆ ಈ ರೀತಿ ಹೆಚ್ಚಿನ ಹಣ ಒದಗಿಸುವ ಸಾಧ್ಯತೆ ತೀರಾ ಕಡಿಮೆ. ಈ ಹಣಕಾಸು ವರ್ಷದ ಮೊದಲ ಎಂಟು ತಿಂಗಳಲ್ಲಿ ಅಬಕಾರಿ, ಕಸ್ಟಮ್ಸ್ ಮತ್ತು ಸೇವಾವಲಯ ಈ ಮೂರು ಪ್ರಮುಖ ಬಾಬ್ತುಗಳ ಅಡಿಯಲ್ಲಿ ಪರೋಕ್ಷ ತೆರಿಗೆಗಳ ವಸೂಲಿ ಬಜೆಟ್ ಅಂದಾಜಿನ ಸುಮಾರು ಅರ್ಧದಷ್ಟು ಮಾತ್ರ ಆಗಿದೆ. ಅದೇ ರೀತಿ ನೇರ ತೆರಿಗೆಗಳಿಂದ ಬಂದಿರುವ ಆದಾಯವೂ ಬಜೆಟ್ ಅಂದಾಜಿನ ಅರ್ಧಕ್ಕಿಂತಲೂ ಕಡಿಮೆ. ಈ ಕೊರತೆಯನ್ನು ಈ ಹಣಕಾಸು ವರ್ಷದ ಕೊನೆಯ ಮೂರು ತಿಂಗಳಲ್ಲಿ ತುಂಬಬಹುದಾದ ಸಾಧ್ಯತೆ ಬಹಳ ಕಡಿಮೆ.

ಈ ಹೊಸ ವರ್ಷದಲ್ಲಿ ಬಹುಪಾಲು ಭಾರತೀಯರ ಬದುಕು ಉತ್ತಮಗೊಳ್ಳಬೇಕಾದರೆ ಅದು ಯುಪಿಎ ಸರಕಾರ ಬಡತನ ಮತ್ತು ನಿರುದ್ಯೋಗ ಎರಡನ್ನೂ ಎದುರಿಸಬಲ್ಲ ದೊಡ್ಡ ಸಾರ್ವಜನಿಕ ವೆಚ್ಚಗಳಿಗೆ ಸಂಪನ್ಮೂಲಗಳನ್ನು ಸಂಗ್ರಹಿಸುವ ಪ್ರಯತ್ನಗಳನ್ನು ದ್ವಿಗುಣಗೊಳಿಸಿದರೆ ಮಾತ್ರ ಸಾಧ್ಯ. ಕಳೆದ ಹಣಕಾಸು ವರ್ಷದಲ್ಲಿ ಈ ಸರಕಾರ ತನಗೆ ಬರಬೇಕಾಗಿದ್ದ 4.18ಲಕ್ಷ ಕೋಟಿ ರೂ.ಗಳಷ್ಟು ತೆರಿಗೆ ಆದಾಯವನ್ನು ಬಿಟ್ಟುಕೊಟ್ಟಿದ್ದೇನೆ ಎಂದು ಪ್ರಕಟಿಸಿತ್ತು. ಹೊಸ ವರ್ಷವನ್ನು ಆರಂಭಿಸುವ ಒಂದು ಒಳ್ಳೆಯ ದಾರಿಯೆಂದರೆ ಈ ವರ್ಷ ಇದನ್ನು ಪುನರಾವರ್ತಿಸುವುದಿಲ್ಲ, ಅದರ ಬದಲು ಅದನ್ನು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮತ್ತು ನಮ್ಮ ಜನತೆಯ ಬದುಕನ್ನು ಉತ್ತಮಗೊಳಿಸುವ ಸಾರ್ವಜನಿಕ ಹೂಡಿಕೆಗಳಿಗೆ ವರ್ಗಾಯಿಸುತ್ತೇವೆ ಎಂದು ನಿರ್ಣಯ ಕೈಗೊಳ್ಳುವುದು.

ಇದನ್ನು ಸಾಧ್ಯವಾಗಿಸಲು ಇರುವ ಏಕೈಕ ದಾರಿಯೆಂದರೆ ಯುಪಿಎ ಸರಕಾರದ ಆರ್ಥಿಕ ನೀತಿಗಳ ವಿರುದ್ಧ ಭಾರತೀಯ ಜನತೆಯ ಹೋರಾಟಗಳನ್ನು ಬಲಗೊಳಿಸುವುದು. ಈ ಹೊಸ ವರ್ಷದಲ್ಲಿ ಇಂತಹ ಜನತಾ ಒತ್ತಡಗಳ ಬಲವನ್ನು ತೀವ್ರಗೊಳಿಸಿ ಆಮೂಲಕ ಸಾಮಾನ್ಯ ಭಾರತೀಯರ ಕಾಳಜಿಗಳು ಮತ್ತು ಕಲ್ಯಾಣಕ್ಕಾಗಿ ಪ್ರಾಮಾಣಿಕತೆಯಿಂದ ಶ್ರಮಿಸುವ ಒಂದು ಉತ್ತಮ ಭಾರತವನ್ನು ನಿರ್ಮಿಸಲು ನಮಗೆ ಸಾಧ್ಯವಾಗಬೇಕು.

ಹೊಸ ವರ್ಷ ಸಂತೋಷದಾಯಕವಾಗಿರಲಿ, ಅದಕ್ಕಾಗಿ ಬಹುಪಾಲು ಭಾರತೀಯರಿಗೆ ಒಂದು ಉತ್ತಮ ಭಾರತವನ್ನು ನಿರ್ಮಿಸುವ ಜನತೆಯ ಹೋರಾಟಗಳನ್ನು ಬಲಪಡಿಸುವ ದೃಢನಿರ್ಧಾರವನ್ನು ಪುನರುಚ್ಚರಿಸೋಣ.

Donate Janashakthi Media

Leave a Reply

Your email address will not be published. Required fields are marked *