ಹಿರಿಯ ನಟಿ ಭಾರ್ಗವಿ ನಾರಾಯಣ್ ನಿಧನ

ಬೆಂಗಳೂರು : ಕನ್ನಡದ ಹಿರಿಯ ಪೋಷಕ ನಟಿ ಭಾರ್ಗವಿ ನಾರಾಯಣ್ (84) ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಭಾರ್ಗವಿ ಅವರು, ಫೆ.4ರಂದು ತಮ್ಮ 84ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.

ಪುನೀತ್ ರಾಜ್‌ಕುಮಾರ್ ಜೊತೆಯಲ್ಲಿ ‘ರಾಜಕುಮಾರ’ ಚಿತ್ರದಲ್ಲಿನ ಇವರ ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.

ಮೂಲತಃ ರಂಗಭೂಮಿ ಕಲಾವಿದೆಯಾದ ಭಾರ್ಗವಿ ಅವರು ಬರಹಗಾರ್ತಿಯೂ ಆಗಿದ್ದರು. ತಮ್ಮ ಆತ್ಮಕತೆ ‘ನಾನು ಭಾರ್ಗವಿ’ 2012ರಲ್ಲಿ ಬಿಡುಗಡೆಯಾಗಿತ್ತು. ಎರಡು ಕನಸು (1947), ಪಲ್ಲವಿ ಅನುಪಲ್ಲವಿ (1983) ಮತ್ತು ಬಾ ನಲ್ಲೆ ಮಧುಚಂದ್ರಕೆ (1993) ಇವರು ನಟಿಸಿದ್ದ ಪ್ರಮುಖ ಹಿಟ್ ಚಿತ್ರಗಳು.

ಸುಮಾರು 22ಕ್ಕೂ ಹೆಚ್ಚು ಚಲನಚಿತ್ರಗಳು, ಧಾರಾವಾಹಿಗಳು, ದೂರದರ್ಶನ ಸರಣಿ ಕಾರ್ಯಕ್ರಮಗಳನ್ನು ಇವರು ನಡೆಸಿಕೊಟ್ಟಿದ್ದರು. ಮಕ್ಕಳಿಗಾಗಿ ಹಲವಾರು ನಾಟಕಗಳನ್ನು ರಚಿಸಿ ನಿರ್ದೇಶನವನ್ನೂ ಮಾಡಿದ್ದಾರೆ. ಕನ್ನಡ ನಾಟಕ ಅಕಾಡೆಮಿಯ ಸದಸ್ಯರಾಗಿ, ಬೆಂಗಳೂರಿನ ಇಎಸ್‌ಐ ಕಾರ್ಪೊರೇಶನ್ ಅಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡಿದ್ದಾರೆ.

ಇವರ ಆತ್ಮಚರಿತ್ರೆ ‘ನಾನು, ಭಾರ್ಗವಿ’ 2012ರಲ್ಲಿ ಬಿಡುಗಡೆಯಾಗಿದೆ. ಇವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು – ಅತ್ಯುತ್ತಮ ಪೋಷಕ ನಟಿ, ಕರ್ನಾಟಕ ರಾಜ್ಯನಾಟಕ ಅಕಾಡೆಮಿ ಪ್ರಶಸ್ತಿಗಳು, ಮಂಗಳೂರು ಪ್ರತಿಷ್ಠಿತ ಸಂದೇಶ ಪ್ರಶಸ್ತಿ, ಆಳ್ವಾಸ್ ನಡಿಸಿರಿ ಪ್ರಶಸ್ತಿ, ಕರ್ನಾಟಕ ರಾಜ್ಯ ನಾಟಕ ಸ್ಪರ್ಧೆ – ಅತ್ಯುತ್ತಮ ನಟಿ, ಕರ್ನಾಟಕ ರಾಜ್ಯ ಮಕ್ಕಳ ನಾಟಕ ಸ್ಪರ್ಧೆ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಿಕ್ಕಿವೆ.

ಮಕ್ಕಳಾದ ಸುಜಾತಾ ಬೆಳವಾಡಿ, ಪ್ರಕಾಶ್ ಬೆಳವಾಡಿ, ಪ್ರದೀಪ್ ಬೆಳವಾಡಿ ಮತ್ತು ಸುಧಾ ಬೆಳವಾಡಿ, ಮೊಮ್ಮಗಳಾದ ಸಂಯುಕ್ತಾ ಹೊರನಾಡು ಅವರನ್ನು ಭಾರ್ಗವಿ ಅವರು ಅಗಲಿದ್ದಾರೆ. ಇವರ ನಿಧನಕ್ಕೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ.

Donate Janashakthi Media

Leave a Reply

Your email address will not be published. Required fields are marked *