- 29 ಪ್ರಯಾಣಿಕರನ್ನು ಬೆಂಗಳೂರಿಗೆ ಕರೆತರುತ್ತಿದ್ದ ಬಸ್
ವಿಜಯಪುರ: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನಲ್ಲಿ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಬೆಂಕಿ ಹೊತ್ತಿ ಉರಿದ ಬಸ್‌ನಲ್ಲಿ ವಿಜಯಪುರದ ಮೂವರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಐವರು ಸಾವಿಗೀಡಾಗಿರುವುದಾಗಿ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಶೀಲಾ ರವಿ(33), ಸ್ಪರ್ಷಾ(8), ಸಮೃದ್ಧ (5), ಕವಿತಾ ವಿನಾಯಕ (29) ಮತ್ತು ನಿಶ್ಚಿತಾ(3) ಬೆಂಕಿಗೆ ಆಹುತಿಯಾಗಿದ್ದಾರೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.
ವಿಜಯಪುರದಿಂದ ಬೆಂಗಳೂರಿಗೆ ಹೊರಟಿದ್ದ ಬಸ್ ಮಾರ್ಗಮಧ್ಯೆ ಹೊತ್ತಿ ಉರಿದಿದೆ. ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ. ನಿದ್ರೆಯಲ್ಲಿದ್ದ ಪ್ರಯಾಣಿಕರು ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಬಸ್ನಿಂದ ಹೊರಗೆ ಬರಲು ಪ್ರಯತ್ನಿಸಿದ್ದಾರೆ. ಕೆಲವರು ಸುರಕ್ಷಿತವಾಗಿ ಹೊರಗೆ ಬಂದರೆ ಇನ್ನು ಕೆಲವರು ಬಸ್ನಲ್ಲೇ ಸಿಲುಕಿದ್ದಾರೆ. ಅವರಲ್ಲಿ 30 ಮಂದಿಯನ್ನು ರಕ್ಷಿಸಲಾಗಿದ್ದು, ಐವರು ಸಾವನ್ನಪ್ಪಿದ್ದಾರೆ.
ನಿನ್ನೆ ರಾತ್ರಿ 9 ಗಂಟೆಗೆ ಕುಕ್ಕೆ ಶ್ರೀ ಬಸ್ ವಿಜಯಪುರದಿಂದ ಹೊರಟಿತ್ತು. 29 ಪ್ರಯಾಣಿಕರು, ಇಬ್ಬರು ಚಾಲಕರು ಇದ್ದರು ಎಂದು ಟೆಕೆಟ್ ಬುಕ್ಕಿಂಗ್ ಏಜನ್ಸಿಯವರು ಮಾಹಿತಿ ನೀಡಿದ್ದಾರೆ. ಬೆಂಕಿ ಹೊತ್ತಿಕೊಂಡಿದ್ದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಅಗ್ನಿಶಾಮಕದಳದ ಸಿಬ್ಬಂದಿ ಬಸ್ನ ಬೆಂಕಿಯನ್ನು ಆರಿಸುವುದರೊಳಗೆ ಬಹುತೇಕ ಬಸ್ ಸುಟ್ಟು ಕರಕಲಾಗಿತ್ತು. ಘಟನೆ ನಡೆದ ಕೂಡಲೆ ಬಸ್ನ ಚಾಲಕ ಪರಾರಿಯಾಗಿದ್ದಾನೆ. ಹಿರಿಯೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.