- ಟ್ವಿಟರ್‌ನಲ್ಲಿ ಟ್ರೆಂಡ್ ಆಯ್ತು #WeWantTwoLanguagePolicy ಹ್ಯಾಷ್ಟ್ಯಾಗ್
ಬೆಂಗಳೂರು: ಕನ್ನಡಿಗರಿಗೆ ಇಂಗ್ಲಿಷ್ ಜೊತೆಗೆ ಹಿಂದಿ ಭಾಷೆಯನ್ನೂ ಕಲಿಯಲು ಒತ್ತಡ ಹೇರಲಾಗುತ್ತಿದೆ ಎಂಬ ಆರೋಪ ಹಳೆಯದು. ಆದರೆ ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿ-2020 ಹಿಂದಿಯನ್ನು ಕಡ್ಡಾಯಗೊಳಿಸಲಾಗುತ್ತಿದೆ. ಕನ್ನಡ, ಇಂಗ್ಲಿಷ್ ಜೊತೆಗೆ ಹಿಂದಿಯನ್ನು ಕಡ್ಡಾಯಗೊಳಿಸಲಾಗುತ್ತಿದೆ. ಹಿಂದಿಯನ್ನು ಕಡ್ಡಾಯಗೊಳಿಸುವುದನ್ನು ವಿರೋಧಿಸಿ ದ್ವಿಭಾಷಾ ನೀತಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಅಭಿಯಾನಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ದ್ವಿಭಾಷಾ ನೀತಿ ಹಾಗೂ #WeWantTwoLanguagePolicy ಹ್ಯಾಷ್ಟ್ಯಾಗ್ ಟ್ವಿಟ್ಟರ್ನಲ್ಲಿ ಟ್ರೆಂಡ್ ಆಗಿವೆ.
ರಾಜ್ಯಾದ್ಯಂತ ತ್ರಿಭಾಷಾ ಸೂತ್ರದ ಬದಲು ದ್ವಿಭಾಷಾ ನೀತಿಯನ್ನು ಅಳವಡಿಸಬೇಕು ಎಂದು ಆಗ್ರಹಿಸಿ ಟ್ವಿಟ್ಟರ್ನಲ್ಲಿಯೂ ಅಭಿಯಾನ ಶುರುವಾಗಿದೆ. ಉತ್ತರ ಭಾರತೀಯರು ತಮ್ಮ ಮಾತೃಭಾಷೆಯಾದ ಹಿಂದಿ ಜೊತೆಗೆ ವ್ಯವಹಾರಕ್ಕಾಗಿ ಇಂಗ್ಲಿಷ್ ಭಾಷೆ ಕಲಿಯುತ್ತಾರೆ. ತಮಿಳಿಗರು ಕೂಡ ತಮಿಳಿನ ಜೊತೆ ಇಂಗ್ಲಿಷ್ ಕಲಿಯುತ್ತಾರೆ. ಆದರೆ, ಕರ್ನಾಟಕದಲ್ಲಿ ಕನ್ನಡದ ಜೊತೆಗೆ ವ್ಯಾವಹಾರಿಕ ಭಾಷೆಯಾಗಿ ಇಂಗ್ಲಿಷ್ ಭಾಷೆಯನ್ನು ಕಲಿಯಬೇಕು, ಹಿಂದಿ ಹೇರಿಕೆ ಮಾಡಬಾರದು ಎಂದು ಹಲವರು ಒತ್ತಾಯಿಸಿದ್ದಾರೆ.
ನಟ ವಸಿಷ್ಠ ಎನ್. ಸಿಂಹ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕೂಡ ಕರ್ನಾಟಕದಲ್ಲಿ ಹಿಂದಿ ಹೇರಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ದ್ವಿಭಾಷಾ ನೀತಿ ಜಾರಿಗೆ ತರಬೇಕು. ಅದಕ್ಕೆ ಹೊರತಾಗಿ ಬೇರೆ ಭಾಷೆಗಳನ್ನು ಕಲಿಯುವ ಆಯ್ಕೆ ಆಯಾ ವ್ಯಕ್ತಿಗಳದ್ದಾಗಿರುತ್ತದೆ. ಮೂರನೇ ಭಾಷೆಯ ಹೆಸರಿನಲ್ಲಿ ಯಾವ ಭಾಷೆಯನ್ನೂ ಹೇರುವ ಪ್ರಯತ್ನ ಮಾಡಬಾರದು ಎಂದು ಟ್ವಿಟ್ಟರ್ನಲ್ಲಿ ಅಭಿಯಾನಗಳು ನಡೆಯುತ್ತಿವೆ.
ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ ಸಾವಿರಾರು ಜನರು ಟ್ವೀಟ್ ಮಾಡಿದ್ದಾರೆ ಕನ್ನಡಿಗರು ಭಾರತ ಒಕ್ಕೂಟ ಸೇರಿದ್ದು, ತಮಿಳು, ತೆಲುಗು, ಬಾಂಗ್ಲ, ಮರಾಠಿ,ಹಿಂದಿ ಸೇರಿದಂತೆ ಭಾರತದ ಅನೇಕ ಭಾಷಿಕರೊಡನೆ ಒಟ್ಟಾಗಿ ಬೆಳೆಯಲು. ಹಿಂದಿ ಕಲಿತು, ಹಿಂದಿಯವರಿಗೆ ನಮ್ಮೆಲ್ಲಾ ಉದ್ಯೋಗವನ್ನು ಬಿಟ್ಟುಕೊಟ್ಟು ಹಿಂದಿಯವರನ್ನು ಮಾತ್ರ ಬೆಳೆಸಲು ಅಲ್ಲ. ಸರಕಾರ ಎಲ್ಲರನ್ನೂ ಸಮಾನವಾಗಿ ಕಾಣಲಿ ಆಗ ಒಗ್ಗಟ್ಟು ತಾನೇ ತಾನಾಗಿ ಗಟ್ಟಿಯಾಗುತ್ತದೆ ಎಂದು ಬನವಾಸಿ ಬಳಗದ ಅರುಣ್ ಜಾವಗಲ್ ಟ್ವೀಟ್ ಮಾಡಿದ್ದಾರೆ.
ಹಲವು ದಶಕಗಳಿಂದ ಕರ್ನಾಟಕದ ಪಠ್ಯಕ್ರಮದಲ್ಲಿ ಹಿಂದಿ ವಿಷಯವನ್ನು ಕಡ್ಡಾಯವಾಗಿ ಕಲಿಯಲೇಬೇಕೆನ್ನುವ ನಿಯಮವಿದೆ. ಒಂದು ವಿಷಯವಾಗಿ ಕಡ್ಡಾಯವಾಗಿ ಹಿಂದಿಯನ್ನು ಕಲಿಯಲೇಬೇಕೆನ್ನುವ ನಿಯಮ ಹಿಂದಿ ಹೇರಿಕೆಯಲ್ಲದೆ ಮತ್ತೇನು? ಕರ್ನಾಟಕ ಪಠ್ಯದಲ್ಲಿ ಹಿಂದಿ ಸೇರಿಸಿರುವುದು ಹಿಂದಿ ಹೇರಿಕೆಯ ಮಹಾ ಹುನ್ನಾರ ಎಂದು ನಟ ನಿಖಿಲ್ ಕುಮಾರಸ್ವಾಮಿ ಟ್ವೀಟ್ ಮಾಡಿ ದ್ವಿಭಾಷಾ ನೀತಿ ಅಭಿಯಾನಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ.
ನೆರೆಯ ತಮಿಳುನಾಡು ಹಾಗೂ ಉತ್ತರದ ಕೆಲ ರಾಜ್ಯಗಳಂತೆ ಕರ್ನಾಟಕದಲ್ಲೂ #ದ್ವಿಭಾಷಾನೀತಿ ಜಾರಿಗೆ ಬರಬೇಕು. ಇತರೆ (optional) ಭಾಷೆಗಳನ್ನು ಆಯ್ಕೆ ಮಾಡುವ ಅವಕಾಶ ಕಲಿಯುವವರದ್ದಾಗಿರಬೇಕು!! ಮೂರನೇ ಭಾಷೆಯ ಹೆಸರಿನಲ್ಲಿ ಯಾವ ಭಾಷೆಯನ್ನೂ ಹೇರುವ ಪ್ರಯತ್ನ ನಡೆಯಬಾರದು. ತ್ರಿಭಾಷಾನೀತಿ ಹೇರಣೆಯ ವಿರುದ್ಧ ಕೈಜೋಡಿಸೋಣ ಎಂದು ನಟ ವಸಿಷ್ಠ ಸಿಂಹ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಕರ್ನಾಟಕದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಜೊತೆಗೆ ಹಿಂದಿಯನ್ನು ಮೂರನೇ ಭಾಷೆಯನ್ನಾಗಿ ಕಲಿಯುವಂತೆ ಒತ್ತಾಯಿಸಲಾಗುತ್ತಿದೆ. ಈಗಾಗಲೇ ಕರ್ನಾಟಕದ ಅನೇಕ ಕಡೆ ಹಿಂದಿ ತನ್ನ ಪ್ರಾಬಲ್ಯ ಸಾಧಿಸಿದೆ. ಇದು ಸರಿಯಲ್ಲ. ವ್ಯವಹಾರಿಕ ಭಾಷೆಯಾಗಿ ಇಂಗ್ಲಿಷ್ ಇರುವಾಗ ಹಿಂದಿ ಹೇರಿಕೆ ಸರಿಯಲ್ಲ ಎಂದು ಅನೇಕರು ಅಭಿಯಾನ ನಡೆಸಿ, ದ್ವಿಭಾಷಾ ನೀತಿ ಜಾರಿಗೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.