ಅದಾನಿ ಗ್ರೂಪ್ ನಲ್ಲಿ ಸೆಬಿ ಮುಖ್ಯಸ್ಥ ಬಂಡವಾಳ ಹೂಡಿಕೆಯ ಕುರಿತು ಹಿಂಡೆನ್ ಬರ್ಗ್ ಗಂಭೀರ ಆರೋಪದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ ಷೇರುಗಳು ಭಾರೀ ಕುಸಿತ ಕಂಡಿವೆ.
ಸೋಮವಾರ ಭಾರತೀಯ ಷೇರು ಮಾರುಕಟ್ಟೆ ಆರಂಭವಾಗುತ್ತಿದ್ದಂತೆ ಅದಾನಿ ಗ್ರೂಪ್ ಷೇರುಗಳು ಸತತವಾಗಿ ಕುಸಿತ ಕಂಡಿದ್ದು, ಶೇ.17ರಷ್ಟು ಕುಸಿತ ದಾಖಲಿಸಿದೆ. ಇದರಿಂದ ಅದಾನಿ ಗ್ರೂಪ್ ಕಂಪನಿಗಳಿಗೆ ಲಕ್ಷಾಂತರ ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಷೇರು ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗುತ್ತಿದ್ದಂತೆ ಕೇಂದ್ರದ ಬಿಜೆಪಿ ಸಚಿವರು ಹಿಂಡೆನ್ ಬರ್ಗ್ ವರದಿಯನ್ನು ಖಂಡಿಸಿ ಹೇಳಿಕೆಗಳನ್ನು ನೀಡಿದ್ದು, ಪ್ರತಿಪಕ್ಷಗಳ ವಿರುದ್ಧ ಆರೋಪ ಮಾಡಿದರು. ಇದರ ಪರಿಣಾಮ ಮಧ್ಯಾಹ್ನದ ನಂತರ ಅದಾನಿ ಗ್ರೂಪ್ ಷೇರುಗಳು ಅಲ್ಪ ಚೇತರಿಕೆ ಕಂಡಿವೆ.
ಅಮೆರಿಕ ಮೂಲದ ಹಿಂಡೆನ್ ಬರ್ಗ್ ಈ ಹಿಂದೆಯೂ ಅದಾನಿ ಗ್ರೂಪ್ ನಿಯಮಗಳನ್ನು ಉಲ್ಲಂಘಿಸಿ ಅಕ್ರಮಗಳ ಮೂಲಕ ಕಂಪನಿಗಳನ್ನು ವಿಸ್ತರಿಸುತ್ತಿದ್ದು, ಷೇರು ಮಾರುಕಟ್ಟೆಯಲ್ಲೂ ಪ್ರಾಬಲ್ಯಕ್ಕಾಗಿ ನಿಯಮ ಉಲ್ಲಂಘಿಸಿದೆ ಎಂದು ಆರೋಪಿಸಿತ್ತು. ಇದೀಗ ಸೆಬಿ ಮುಖ್ಯಸ್ಥೆ ಹಾಗೂ ಅವರ ಪತಿ ಸಿಂಗಾಪುರದಲ್ಲಿ 10 ದಶಲಕ್ಷ ಡಾಲರ್ ಹೂಡಿಕೆ ಮಾಡಿ ಅದಾನಿ ಗ್ರೂಪ್ ಗಳಿಂದ ಅಕ್ರಮವಾಗಿ ಹಣ ಸಂಪಾದಿಸಿದ್ದಾರೆ. ಇದಕ್ಕಾಗಿ ಅವರ ಪರವಾದ ಕೆಲವು ನಿರ್ಣಯಗಳನ್ನು ಕೈಗೊಂಡು ರಕ್ಷಣೆಗೆ ನಿಂತಿದ್ದಾರೆ ಎಂದು ಆರೋಪಿಸಿತ್ತು.
ಹಿಂಡೆನ್ ಬರ್ಗ್ ದಾಖಲೆಗಳನ್ನು ಬಿಡುಗಡೆ ಮಾಡಿ ಆರೋಪ ಮಾಡಿದ ಬೆನ್ನಲ್ಲೇ ಗೌತಮ್ ಅದಾನಿ ಒಡೆತನದ ಅದಾನಿ ಗ್ರೂಪ್ ಗಳ ಕಂಪನಿಗಳ ಷೇರುಗಳು ಕುಸಿತ ಕಂಡಿವೆ.
ಬಾಂಬೆ ಸ್ಟಾಕ್ ಮಾರುಕಟ್ಟೆಯಲ್ಲಿ ಅದಾನಿ ಪವರ್ ಶೇ.10.49ರಷ್ಟು ಕುಸಿತ ಕಂಡಿದ್ದು, ಷೇರು ಬೆಲೆ 619ಕ್ಕೆ ಇಳಿದಿದೆ. ಅದಾನಿ ಎಂಟರ್ ಪ್ರೈಸಸ್ ಶೇ.5.27ರಷ್ಟು ಕುಸಿತ ಕಂಡಿದ್ದು, 3018.15 ರೂ.ಗೆ ಇಳಿಕೆ ಕಂಡಿದೆ.
ಅದಾನಿ ಎಜರ್ನಿ ಸೊಲುಷನ್ಸ್ ಅತೀ ಹೆಚ್ಚು ಅಂದರೆ ಶೇ.17.06ರಷ್ಟು ಕುಸಿತ ಕಂಡಿದ್ದು, 915.80ರೂ. ಇಳಿಕೆ ಕಂಡಿದ್ದರೆ, ಅದಾನಿ ಗ್ರೀನ್ ಎನರ್ಜಿ ಕಂಪನಿ ಶೇ.6.96ರಷ್ಟು ಅಂದರೆ 1656.50ರೂ. ಕುಸಿತ ಕಂಡಿದೆ.
ಅದಾನಿ ಟೊಟಲ್ ಗ್ಯಾಸ್ ಷೇರು ಶೇ.13.39ರಷ್ಟು ಕುಸಿತ ಕಂಡಿದ್ದು, 753 ರೂ.ಗೆ ಇಳಿದರೂ ನಂತರ ಚೇತರಿಕೆ ಕಂಡು 829ರೂ.ಗೆ ಜಿಗಿತ ಕಂಡಿದೆ.