ಹಾಸನ : ನಗರದಲ್ಲಿ ಹಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೂಡಲೇ ಆರಂಭಿಸುವಂತೆ ಹಾಗೂ ಹಾಸನ ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಾರತೀಯ ಸಾರ್ವಜನಿಕ ಆರೋಗ್ಯ ಮಾನದಂಡಗಳಿಗೆ (ಐ.ಪಿ.ಎಚ್.ಎಸ್.) ಅನುಗುಣವಾಗಿ ಸೌಲಭ್ಯಗಳನ್ನು ನೀಡಿ ಉನ್ನತೀಕರಿಸಿ ಸಬಲೀಕರಿಸುವಂತೆ ಆಗ್ರಹಿಸಿ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದ ನೇತೃತ್ವದಲ್ಲಿ ‘ಜನಾರೋಗ್ಯಕ್ಕಾಗಿ ಜನಾಂದೋಲನ’ ಆರಂಭಿಸಲಾಗಿದೆ. ಇದರ ಭಾಗವಾಗಿ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದ ಹಾಸನದ ಹಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟದ ಮುಂದೆ ‘ಜನಾರೋಗ್ಯದ ಸ್ವಾತಂತ್ರ್ಯಕ್ಕಾಗಿ ಸಾಮೂಹಿಕ ಧರಣಿ ಸತ್ಯಾಗ್ರಹ’ ನಡೆಸಲು ತೀರ್ಮಾನಿಸಲಾಗಿದೆ. ಎಂದು ಸಂಘಟಕರು ತಿಳಿಸಿದರು.
ಮೊದಲಿಗೆ ಜಿಲ್ಲೆಯ ವಿವಿದ ಜನಪರ ಸಂಘಟನೆಗಳು, ಸಂಘಸಂಸ್ಥೆಗಳು ಮತ್ತು ನಾಗರಿಕರಿಂದ ನಿರಂತರ ಸರಣಿ ಪ್ರತಿಭಟನೆಗಳನ್ನು ನಡೆಸಲಾಗುವುದು ಹಾಗೂ ಆಗಸ್ಟ್ 14 ರಂದು ಜಿಲ್ಲೆಯ ಜನರ ಪರವಾಗಿ ಜನಾರೋಗ್ಯದ ಹಕ್ಕೊತ್ತಾಯಗಳನ್ನು ಮಾನ್ಯ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಲಾಗುವುದು. ಆಗಸ್ಟ್ 15 ರಂದು ನಡೆಯುವ ‘ಜನಾರೋಗ್ಯದ ಸ್ವಾತಂತ್ರ್ಯಕ್ಕಾಗಿ ಸಾಮೂಹಿಕ ದರಣಿ ಸತ್ಯಾಗ್ರಹ’ದ ಸ್ಥಳಕ್ಕೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು, ಮಾನ್ಯ ಸಂಸದರು, ಮಾನ್ಯ ಶಾಸಕರು ಮಾಗೂ ಮಾನ್ಯ ಜಿಲ್ಲಾಧಿಕಾರಿಯವರು ಆಗಮಿಸಿ ಜನಾರೋಗ್ಯದ ಹಕ್ಕೊತ್ತಾಯಗಳನ್ನು ಈಡೇರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದರು.
ಜನಾರೋಗ್ಯದ ಪರಿಸ್ಥಿತಿ ಎಷ್ಟು ತೀವ್ರವಾಗಿ ಉಲ್ಬಣಗೊಂಡಿದೆ ಎಂದರೆ, ಲಿಂಗಭೇದವಿಲ್ಲದೇ ಎಲ್ಲಾ ವಯಸ್ಸಿನವರಲ್ಲಿ ಹೃದಯಾಘಾತ, ಹೃದಯ ಸ್ತಂಭನ ಮತ್ತು ಹಠಾತ್ ಮರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಇಂದಿನ ಜನಾರೋಗ್ಯ ತುರ್ತುಸ್ಥಿತಿಯಲ್ಲಿರುವುದರ ಮುನ್ಸೂಚನೆಯಾಗಿದೆ. ರಕ್ತದೊತ್ತಡ, ಮಧುಮೇಹ, ಥೈರಾಯ್ಡ್, ಸ್ಥೂಲಕಾಯತೆ ಮುಂತಾದ ದೈಹಿಕ ವ್ಯತ್ಯಾಸಗಳು ತೀವ್ರವಾಗಿ ಮತ್ತು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿವೆ. ಇದರಿಂದಾಗಿ ಹೃದ್ರೋಗ, ಪಾರ್ಶ್ವವಾಯು, ಕಿಡ್ನಿ ಸಮಸ್ಯೆ, ಮೆದುಳು ಮತ್ತು ನರರೋಗ, ಕ್ಯಾನ್ಸರ್ ಮತ್ತಿತರೆ ಮಾರಣಾಂತಿಕ ಖಾಯಿಲೆಗಳು ಎಲ್ಲಾ ವಯೋಮಾನದ ಜನರಲ್ಲಿ ಹೆಚ್ಚಾಗುತ್ತಿವೆ. ಜಿಲ್ಲೆಯ ಜನಾರೋಗ್ಯದ ಸ್ಥಿತಿ ಹಾಗೂ ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ನಡುವಿನ ಅಂತರಗಳು ಹೆಚ್ಚಾಗಿವೆ. ಹೀಗಾಗಿ ಸೂಕ್ತ ಸಮಯದಲ್ಲಿ ಖಾಯಿಲೆಗಳ ಪತ್ತೆ, ಸೂಕ್ತ ತಪಾಸಣೆ ಮತ್ತು ಸೂಕ್ತ ಚಿಕಿತ್ಸೆ ದೊರೆಯದೆ ಮರಣಗಳು ಹೆಚ್ಚಾಗುತ್ತಿವೆ. ಜೊತೆಗೆ ಖಾಸಗಿಯಲ್ಲಿ ದುಬಾರಿಯಾದ ತಪಾಸಣೆ ಮತ್ತು ಚಿಕೆತ್ಸೆಗೆ ಒಳಗಾದವರು ಅತ್ಯಂತ ಆರ್ಥಿಕ ದುಸ್ಥಿತಿಗೆ ತಳ್ಳಲ್ಪಟ್ಟಿರುವ ಉದಾಹರಣೆಗಳು ಸಾಕಷ್ಟಿವೆ. ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಜನರು ಖಾಸಗಿ ವ್ಯವಸ್ಥೆಯನ್ನು ಅವಲಂಭಿಸಬೇಕಾದ ಅನಿವಾರ್ಯತೆಯಿಂದಾಗಿ ತೀವ್ರ ಆರ್ಥಿಕ ಶೋಷಣೆಗೆ ಒಳಗಾಗುತ್ತಿದ್ದಾರೆ.
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ(ಹಿಮ್ಸ್) ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಮಿಕ್ಕ ಆಸ್ಪತ್ರೆಯ ಕಟ್ಟಡದ ತುರ್ತು ಕಾಮಗಾರಿ, ವೈದ್ಯಕೀಯ ಯಂತ್ರೋಪಕರಣ, ತಜ್ಞ ವೈದ್ಯರು, ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಗಳ ನೇಮಕಾತಿಗಾಗಿ ಸದ್ಯದ ಅಂದಾಜಿನ ಪ್ರಕಾರ ಕನಿಷ್ಠ 60 ಕೋಟಿ ರೂಪಾಯಿಗಳ ಅನುದಾನದ ಅಗತ್ಯವಿದೆ. ಹೃದ್ರೋಗ ಶಸ್ತ್ರಚಿಕಿತ್ಸೆ, ನರರೋಗ, ನರರೋಗ ಶಸ್ತ್ರಚಿಕಿತ್ಸೆ, ಮೂತ್ರಪಿಂಡ, ಗ್ಯಾಸ್ಟ್ರೋ ಎಂಟಾಲಜಿ, ಕ್ಯಾನ್ಸರ್, ಪ್ಲಾಸ್ಟಿಕ್ ಸರ್ಜರಿ ಸೇರಿದಂತೆ ಮಾರಣಾಂತಿಕ ರೋಗ ತಪಾಸಣೆಯ ಹತ್ತು ವಿಶೇಷ ವಿಭಾಗಗಳ ಗಂಭೀರ ಸ್ವರೂಪದ ಆರೋಗ್ಯದ ಸಮಸ್ಯೆಗಳಿಗೆ ಚಿಕಿತ್ಸೆ ಒದಗಿಸಲು ಇಲ್ಲಿ ಸಾಧ್ಯತೆ ಇದ್ದು, ಇಲ್ಲಿ ರೋಗ ತಪಾಸಣೆ ಮತ್ತು ಚಿಕಿತ್ಸೆ ನೀಡಲು ವೈದ್ಯಕೀಯ ವಿಭಾಗಗಳು, ಕ್ಯಾತ್ ಲ್ಯಾಬ್, ಅತ್ಯಂತ ಸುಸಜ್ಜಿತವಾದ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳಿರುವ ಪ್ರತ್ಯೇಕ ಶಸ್ತ್ರಚಿಕಿತ್ಸಾ ಘಟಕಗಳನ್ನು ಕೂಡಲೇ ಪ್ರಾರಂಭಿಸಬೇಕು. ನುರಿತ ತಜ್ಞ ವೈದ್ಯರು, ವೈದ್ಯರು, ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಗಳನ್ನು ನೇಮಕ ಮಾಡಿ, ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಕಾರ್ಯಾರಂಭಕ್ಕೆ ಅಗತ್ಯ ಅನುಕೂಲಗಳನ್ನು ತುರ್ತಾಗಿ ಒದಗಿಸಿ, ಕೂಡಲೇ ಸರ್ಕಾರವು ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಬೇಕು.
ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಿ ಅವುಗಳಿಗೆ ಐ.ಪಿ.ಎಚ್.ಎಸ್. ಮಾನದಂಡಗಳ ಅನುಸಾರ ಪ್ರಾಥಮಿಕ ಸೌಲಭ್ಯಗಳಾದ ಸುಸಜ್ಜಿತ ವೈದ್ಯಕೀಯ ಪ್ರಯೋಗಾಲಯ, ಇಸಿಜಿ, ಎಕೋ, ಎಕ್ಸ್ರೇ, ತುರ್ತು ಚಿಕಿತ್ಸಾ ಘಟಕ ಮತ್ತು ಅಂಬುಲೆನ್ಸ್ ಹಾಗೂ ತಜ್ಞ ವೈದ್ಯರು ಮತ್ತು ಸಿಬ್ಬಂದಿಗಳನ್ನು ಒದಗಿಸಬೇಕು. ತಾಲ್ಲೂಕು ಆಸ್ಪತ್ರೆಗಳನ್ನು ಐ.ಪಿ.ಎಚ್.ಎಸ್. ಮಾನದಂಡಗಳಿಗೆ ಅನುಗುಣವಾಗಿ ಮೇಲ್ದರ್ಜೆಗೇರಿಸಿ ಹೃದಯ ಮತ್ತು ಮೂತ್ರಪಿಂಡ ಸಂಬಂಧಿ ಹಾಗೂ ಇನ್ನಿತರೆ ಮಾರಣಾಂತಿಕ ಖಾಯಿಲೆಗಳ ತುರ್ತು ಚಿಕಿತ್ಸಾ ಘಟಕಗಳನ್ನು ತೆರೆಯಬೇಕು.
ಆರೋಗ್ಯ ತಪಾಸಣೆಗಾಗಿ ಮತ್ತು ಅವಶ್ಯಕ ಪರೀಕ್ಷೆಗಳಿಗಾಗಿ ಎಲ್ಲ ವೈದ್ಯಕೀಯ ಸೌಲಭ್ಯವನ್ನುಳ್ಳ ಸಂಚಾರಿ ವೈದ್ಯಕೀಯ ವಾಹನ ವ್ಯವಸ್ಥೆಯನ್ನು ಏರ್ಪಡಿಸಿ, ಅದು ನಿಯಮಿತವಾಗಿ ಜಿಲ್ಲೆಯ ಪ್ರತಿ ಹಳ್ಳಿಯನ್ನು ತಲುಪುವಂತೆ ಕ್ರಮ ಕೈಗೊಳ್ಳಬೇಕು. ಪ್ರತಿ ಗ್ರಾಮಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಹೆಚ್ಚುಗೊಳಿಸಿ ಮತ್ತು ನಿಯಮಿತಗೊಳಿಸಬೇಕು. ಆ ಮೂಲಕ ತುರ್ತು ಚಿಕಿತ್ಸೆಯ ಅವಶ್ಯಕತೆ ಇದ್ದವರನ್ನು ಗುರ್ತಿಸಲು ಸಾಧ್ಯವಾಗುತ್ತದೆ. ಆರೋಗ್ಯ ಸಹಾಯವಾಣಿಯು ತುರ್ತಾದ, ಸಮರ್ಪಕವಾದ ಮತ್ತು ಗುಣಮಟ್ಟದ ಸೇವೆಯನ್ನು ನೀಡುತ್ತಿಲ್ಲ. ಇದನ್ನು ತಕ್ಷಣವೇ ಚುರುಕುಗೊಳಿಸಬೇಕು ಹಾಗೂ ತುರ್ತು ಸೇವೆಗಾಗಿ ಆಂಬುಲೆನ್ಸ್‌ಗಳ ಸಂಖ್ಯೆಯನ್ನು ಎಲ್ಲ ತಾಲ್ಲೂಕುಗಳಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಹೆಚ್ವಿಸಬೇಕು, ಮತ್ತದು ಸಮರ್ಪಕ, ಗುಣಮಟ್ಟದ, ತಕ್ಷಣದ ಸೇವೆಯನ್ನು ನೀಡುವುದನ್ನು ಖಾತ್ರಿಗೊಳಿಸಬೇಕು.
ಕೋವಿಡ್ ಲಸಿಕೆಯ ದೂರಗಾಮಿ ಪರಿಣಾಮಗಳಿಂದಾಗಿ ಈ ಬಗೆಯ ಆರೋಗ್ಯ ತುರ್ತು ಪರಿಸ್ಥಿತಿಯು ಎಲ್ಲೆಡೆ ಉಂಟಾಗುತ್ತಿದೆ ಎಂಬ ಅನುಮಾನವು ಜನರನ್ನು ಕಾಡುತ್ತಿದ್ದು, ಈ ಕುರಿತು ಪ್ರತಿ ಆಕಸ್ಮಿಕ ಮತ್ತು ಹಠಾತ್ ಸಾವಿಗೀಡಾದ ವ್ಯಕ್ತಿಯ ಮರಣೋತ್ತರ ಪರೀಕ್ಷೆ ಮಾಡಿ, ಪ್ರತ್ಯೇಕ ಮತ್ತು ಆಳವಾದ ಕೂಲಂಕಷ ಅಧ್ಯಯನ ನಡೆಸಿ, ವರದಿ ಬಿಡುಗಡೆ ಮಾಡುವ ಮೂಲಕ ಜನರಲ್ಲಿರುವ ಅನುಮಾನಗಳನ್ನು ದೂರ ಮಾಡಬೇಕು.
ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ವಿಕೇಂದ್ರೀಕೃತವಾಗಿ ಜನರಿಗೆ ಆರೋಗ್ಯ ಸೇವೆ ಸಲ್ಲಿಸಲು ತಳ ಹಂತದ ವ್ಯವಸ್ಥೆಯಲ್ಲಿ ಹಗಲಿರುಳು ದುಡಿಯುತ್ತಿರುವ ವೈದ್ಯಕೀಯ, ವೈದ್ಯಕೀಯೇತರ, ಆಶಾ ಕಾರ್ಯಕರ್ತೆಯರು ಮತ್ತು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪ್ರತಿ ನೌಕರರು ಹಾಗೂ ಕಾರ್ಮಿಕರನ್ನು ಖಾಯಂ ಮಾಡಬೇಕು. ತನ್ಮೂಲಕ ಅವರು ಪೂರ್ಣ ಏಕಾಗ್ರತೆಯಿಂದ ಕೆಲಸ ಮಾಡಲು ಅನುವು ಮಾಡಿಕೊಡಬೇಕು.
ಜಿಲ್ಲೆಯಲ್ಲಿನ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ, ಯುವಜನರಿಗೆ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮಟ್ಟ, ಕಣ್ಣು, ಕಿವಿ, ಸ್ಥೂಲಕಾಯ ಮತ್ತಿತರೆ ಪ್ರಾಥಮಿಕ ವೈದ್ಯಕೀಯ ತಪಾಸಣೆಯನ್ನು ಕಡ್ಡಾಯವಾಗಿ 6 ತಿಂಗಳಿಗೊಮ್ಮೆ ಮಾಡಿಸಬೇಕು. ಹಾಗೂ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಕಡ್ಡಾಯಗೊಳಿಸಿ, ಪ್ರತಿ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಇದರಲ್ಲಿ ಪಾಲ್ಗೊಳಿಸಬೇಕು.
ಜನರಲ್ಲಿ ಆರೋಗ್ಯ ಸಾಕ್ಷರತೆ ಮೂಡಿಸಲು ಪರಿಣಾಮಕಾರಿ ಯೋಜನೆ, ಕಾರ್ಯಕ್ರಮ ರೂಪಿಸಬೇಕು. ನಗರ ಮತ್ತು ಗ್ರಾಮೀಣ ಪ್ರದೇಶದ ಜನರಲ್ಲಿ ಪೌಷ್ಟಿಕ ಆಹಾರ, ನೈರ್ಮಲ್ಯ, ನಿಯಮಿತ ಆರೋಗ್ಯ ತಪಾಸಣೆ ಹಾಗೂ ಮಾನಸಿಕ ಒತ್ತಡ ನಿವಾರಣೆಯ ಕುರಿತು ಜನಜಾಗೃತಿ ಮೂಡಿಸಬೇಕು. ಎಲ್ಲಾ ಶಿಕ್ಷಣ, ಔದ್ಯೋಗಿಕ ಸಂಸ್ಥೆಗಳಲ್ಲಿ, ಘಟಕಗಳಲ್ಲಿ ಹಾಗೂ ಇಲಾಖೆಗಳಲ್ಲಿ ಮಾನಸಿಕ ಒತ್ತಡ ನಿರ್ವಹಣೆಗೆ ಅನುಕೂಲವಾಗುವಂತೆ ಕನಿಷ್ಠ ಒಬ್ಬರು ತಜ್ಞ ಆಪ್ತ ಸಮಾಲೋಚಕರನ್ನು (ಕೌನ್ಸಲರ್) ನೇಮಿಸಬೇಕು.
ಹಾಸನ ನಗರವೂ ಸೇರಿದಂತೆ ಎಲ್ಲಾ ನಗರಗಳಲ್ಲಿರುವ ಉಪಹಾರ ಗೃಹಗಳು, ರೆಸ್ಟೋರೆಂಟ್, ಹೊಟೇಲ್‌ಗಳು, ಫಾಸ್ಟ್ ಫುಡ್ ಕೋರ್ಟ್ ಮತ್ತು ಬೀದಿಬದಿಯ ಆಹಾರಗಳು ಮತ್ತು ಪಾನೀಯಗಳ ಗುಣಮಟ್ಟವನ್ನು ನಿಯಮಿತವಾಗಿ ತಪಾಸಣೆಗೆ ಒಳಪಡಿಸಿ, ಆರೋಗ್ಯಕರವಾಗಿರುವುದನ್ನು ಖಾತ್ರಿಪಡಿಸಬೇಕು. ಹಾಗೂ ಯಾವುದೇ ಹಾನಿಕಾರಕ ರಾಸಾಯನಿಕ, ಕೃತಕ ಹಾಗೂ ಕಲುಷಿತ ಎಣ್ಣೆ ಮತ್ತು ಕೃತಕ ಬಣ್ಣಗಳು ಬಳಕೆಯಾಗದಂತೆ ಎಚ್ಚರಿಕೆವಹಿಸಬೇಕು.
ಈಗಾಗಲೇ ನಿಷೇಧಿಸಲ್ಪಟ್ಟ ಅಪಾಯಕಾರಿ ಕೀಟ ನಾಶಕಗಳನ್ನು ಶುಂಠಿ ಸೇರಿದಂತೆ ವಿವಿದ ಬೆಳೆಗಳಲ್ಲಿ ಬಳಕೆ ಮಾಡಲಾಗುತ್ತಿದ್ದು, ಇದರಿಂದ ಆರೋಗ್ಯದ ಮೇಲಾಗುವ ದೂರಗಾಮಿ ಕೆಟ್ಟ ಪರಿಣಾಮಗಳನ್ನು ತಡೆಯಲು, ಕೃಷಿಯಲ್ಲಿ ಅಪಾಯಕಾರಿ ಕ್ರಿಮಿ/ಕೀಟನಾಶಕಗಳು ಮತ್ತು ರಾಸಾಯನಿಕಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯ ಮೇಲೆ ನಿಯಂತ್ರಣ ಹೇರಬೇಕು.
ಹಾಸನ ಜಿಲ್ಲೆಯಾದ್ಯಂತ ಹೆಚ್ಚುತ್ತಿರುವ ಮದ್ಯದ ಅಂಗಡಿಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ಕಡಿವಾಣ ಮತ್ತು ನಿಯಂತ್ರಣ ಹಾಕಬೇಕು ಹಾಗೂ ಇವುಗಳಿಗೆ ಹೊಸದಾಗಿ ಯಾವುದೇ ಪರವಾನಗಿ ನೀಡಬಾರದು. ಬದಲಿಗೆ ಹಾಸನ ಮಹಾನಗರವೂ ಸೇರಿದಂತೆ ಜಿಲ್ಲೆಯ ಎಲ್ಲಾ ನಗರಗಳ ಪ್ರತೀ ಬಡಾವಣೆಗಳಲ್ಲಿ ಉದ್ಯಾನವನಗಳು ಮತ್ತು ಆಟದ ಮೈದಾನಗಳನ್ನು ಆದ್ಯತೆಯ ಆಧಾರದಲ್ಲಿ ನಿರ್ಮಿಸಬೇಕು.
ಈ ವಿವಿಧ ಹಕ್ಕೊತ್ತಾಯಗಳನ್ನು ಅತ್ಯಂತ ತುರ್ತಾಗಿ ಆದ್ಯತೆಯ ಮೇರೆಗೆ ಪರಿಗಣಿಸಿ ಈ ಬೇಡಿಕೆಗಳು ಈಡೇರುವವರೆಗೂ, ಹಾಸನ ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವವರೆಗೂ- ಹಾಸನ ಜಿಲ್ಲೆಯ ಎಲ್ಲಾ ಜನಪರ ಸಂಘಟನೆಗಳು, ಸಂಘ ಸಂಸ್ಥೆಗಳು ಮತ್ತು ನಾಗರಿಕರು ನಿರಂತರವಾದ ಪ್ರತಿಭಟನೆ ನಡೆಸಿ ಆಗಸ್ಟ್ 15 ರ ಸ್ವಾತಂತ್ರ್ಯ ದಿನದಂದು ನಡೆಯುತ್ತಿರುವ ‘ಜನಾರೋಗ್ಯದ ಸ್ವಾತಂತ್ರ್ಯಕ್ಕಾಗಿ ಸಾಮೂಹಿಕ ದರಣಿ ಸತ್ಯಾಗ್ರಹದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗಿಳಿಸಬೇಕೆಂದು ಪತ್ರೀಕಾ ಹೆಳೀಕೆ ನೀಡಿದರು. ಈ ಸಂಧರ್ಭದಲ್ಲಿ ಧರ್ಮೇಶ್, ಸಿಐಟಿಯು ಜಿಲ್ಲಾಧ್ಯಕ್ಷರು, ರೂಪ ಹಾಸನ ಸಾಮಾಜಿಕ ಹೋರಾಟಗಾರರು, ಎಚ್.ಕೆ. ಸಂದೇಶ್ ಹಿರಿಯ ದಲಿತ ಮುಖಂಡರು, ಎಂ.ಜಿ. ಪೃಥ್ವಿ ಡಿ.ವೈ.ಎಫ಼್.ಐ. ಜಿಲ್ಲಾ ಕಾರ್ಯದರ್ಶಿ, ಎಚ್.ಇ. ಅನ್ಶಾದ್ ಪಾಳ್ಯ, ವಕೀಲರು ಮತ್ತು ಮುಸ್ಲಿಂ ಮುಖಂಡರು, ಭಾನುಮತಿ ಅಧ್ಯಕ್ಷರು ಜನನಿ ಫ಼ೌಂಡೇಷನ್ ಹಾಸನ. ಹಾಜರಿದ್ದರು.
