- ನ್ಯಾಯಾಂಗ ತನಿಖೆಯ ಬದಲು ಸಿಬಿಐ ತನಿಖೆ
- ಸಿಬಿಐ ತನಿಖೆಗೆ ನಾವು ಕೇಳಿರಲಿಲ್ಲ ಎಂದ ಸಂತ್ರಸ್ತೆ ತಾಯಿ
ಲಖನೌ: ಹಾತ್ರಸ್ ಅತ್ಯಾಚಾರ ಪ್ರಕರಣದ ತನಿಖೆಯನ್ನು ಸುಪ್ರೀಂಕೋರ್ಟ್ ಹಾಲಿ ನ್ಯಾಯಮೂರ್ತಿಯೊಬ್ಬರಿಂದ ತನಿಖೆ ಮಾಡಿಸಬೇಕು ಎಂಬ ಆಗ್ರಹಕ್ಕೆ ಬೆಲೆ ನೀಡದ ಉತ್ತರಪ್ರದೇಶದ ಬಿಜೆಪಿ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿದೆ.
ಶನಿವಾರ ಸಂಜೆ ಪ್ರಕರಣದ ತನಿಣೆಯನ್ನು ಸಿಬಿಐಗೆ ವಹಿಸಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆದೇಶಿಸಿದ್ದಾರೆ. ಈ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ. ಅತ್ಯಾಚಾರ ಪ್ರಕರಣ ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
Chief Minister Yogi Adityanath orders Central Bureau of Investigation (CBI) probe into the #Hathras case: Chief Minister's Office (CMO) (File pic) pic.twitter.com/VVvf2M6hRc
— ANI UP (@ANINewsUP) October 3, 2020
ಎರಡು ವಾರಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ 19 ವರ್ಷದ ಯುವತಿ ಸೆಪ್ಟೆಂಬರ್ 29ರಂದು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಮೃತಪಟ್ಟ ಯುವತಿಯ ಅಂತ್ಯಕ್ರಿಯೆಯನ್ನು ಉತ್ತರ ಪ್ರದೇಶ ಪೊಲೀಸರು ನಡುರಾತ್ರಿಯಲ್ಲೇ ಮಾಡಿ ಮುಗಿಸಿದ್ದರು. ಅಂತ್ಯಕ್ರಿಯೆಗೆ ತೆರಳಲು ತಮಗೂ ಅವಕಾಶ ನೀಡಿರಲಿಲ್ಲ ಎಂದು ಸಂತ್ರಸ್ತೆಯ ಕುಟುಂಬ ಸದಸ್ಯರು ಆರೋಪಿಸಿದ್ದರು.
ಸಿಬಿಐ ತನಿಖೆಗೆ ನಾವು ಕೇಳಿರಲಿಲ್ಲ, ಬದಲಿಗೆ ಸುಪ್ರೀಂಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಬೇಕು ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.