ಉತ್ತರ ಪ್ರದೇಶದಲ್ಲಿ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಸುಳ್ಳುಗಳ ಕಂತೆ ಎಂದಿರುವ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ)ದ ಮುಖಂಡರು ಈ ರೈತ-ವಿರೋಧಿ ಪಕ್ಷವನ್ನು ಚುನಾವಣೆಗಳಲ್ಲಿ ಶಿಕ್ಷಿಸಿ ಎಂದು ನಾಗರಿಕರಿಗೆ ಕರೆ ನೀಡಿದ್ದಾರೆ.
ಫೆಬ್ರುವರಿ 9ರಂದು ಅವರು ಉತ್ತರಪ್ರದೇಶದ ಮೊರಾದಾಬಾದ್‌ನಲ್ಲಿ ಮತ್ತು ಬರೇಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾಡುತ್ತ ಈ ಕರೆ ನೀಡಿದರು.
ಈ ಮೊದಲು ಫೆಬ್ರುವರಿ 3ರಂದು ನವದೆಹಲಿಯಲ್ಲಿ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ಎಸ್‌ಕೆಎಂನ ಮುಖಂಡರು ರೈತ-ವಿರೋಧಿ ಬಿಜೆಪಿಗೆ ಮತ ನೀಡಬೇಡಿ ಎಂದು ಉತ್ತರಪ್ರದೇಶದ ಮತದಾರರನ್ನು ವಿನಂತಿಸುವ ಮನವಿ ಪತ್ರವನ್ನು ಬಿಡುಗಡೆ ಮಾಡಿದ್ದರು. ಇಂತಹ ಪತ್ರಿಕಾಗೋಷ್ಠಿಗಳನ್ನು ಉತ್ತರಪ್ರದೇಶದ 9 ಸ್ಥಳಗಳಲ್ಲಿ, ಮೇರಠ್, ಮೊರಾದಾಬಾದ್, ಲಕ್ನೌ, ಕಾನ್ಪುರ್, ಝಾನ್ಸಿ, ಅಲಹಾಬಾದ್, ಸಿದ್ಧಾರ್ಥನಗರ, ಬನಾರಸ್ ಮತ್ತು ಗೊರಖ್ಪುರ್ ನಲ್ಲಿ ನಡೆಸಲಾಗುವುದು ಎಂದು ಎಸ್‌ಕೆಎಂ ಮುಖಂಡರು ಹೇಳಿದ್ದರು.
ಆ ಪ್ರಕಾರ ಫೆಬ್ರುವರಿ 6ರಂದು ಮೇರಠ್ ನಲ್ಲಿ, ನಂತರ ಮೊರಾದಾಬಾದ್‌ನಲ್ಲಿ ಮತ್ತು ಬರೇಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ.
ಬಿಜೆಪಿ ಪ್ರಕಟಿಸಿರುವ “ಲೋಕ ಕಲ್ಯಾಣ ಸಂಕಲ್ಪ ಪತ್ರ’ ರಾಜ್ಯದ 86 ಲಕ್ಷ ರೈತರು ಒಟ್ಟು 36,000 ಕೋಟಿ ರೂ.ಗಳ ಸಾಲಮನ್ನಾ ಅನುಭವಿಸಿದ್ದಾರೆ, ಎರಡೂವರೆ ಕೋಟಿ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿಯಿಂದ 6000ರೂ.ಗಳ ವಾರ್ಷಿಕ ನೆರವು ಒದಗಿಸಲಾಗಿದೆ , ಈ ಮೂಲಕ ಉತ್ತರ ಪ್ರದೇಶ ಈ ರಂಗದಲ್ಲಿ ನಂ.1 ಆಗಿದೆ ಎಂದು ಹೇಳಿಕೊಂಡಿದೆ.
ಇದು ರಾಜ್ಯದ ಜನಗಳನ್ನು ದಾರಿ ತಪ್ಪಿಸುವ ಪ್ರಯತ್ನ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್‌ಕೆಎಂ ಮುಖಂಡರಾದ ಹನ್ನನ್ ಮೊಲ್ಲ, ಯೋಗೇಂದ್ರ ಯಾದವ್, ಜಗಜಿತ್‌ಸಿಂಗ್ ದಲ್ಲೇವಾಲ್, ರಾಕೇಶ್ ಟಿಕಾಯ್ತ್, ಶಿವಕುಮಾರ್ ಶರ್ಮ ಮತ್ತು ಡಾ.ಸುನೀಲಂ ಟೀಕಿಸಿದರು.
14ದಿನಗಳಲ್ಲಿ ಕಬ್ಬು ಬೆಳೆಗಾರರಿಗೆ ಅವರಿಗೆ ಬರಬೇಕಾದ ಬಾಕಿಗಳನ್ನು ತೆರಲಾಗುವುದು , ವಿಳಂಬ ಪಾವತಿಗಾಗಿ ಮಿಲ್ ಮಾಲಕರಿಂದ ಬಡ್ಡಿ ವಸೂಲಿ ಮಾಡಿ ಕೊಡಲಾಗುವದು ಎಂದು 2022ರ ಪ್ರಣಾಳಿಕೆಯಲ್ಲಿ ಮತ್ತೆ ಆಶ್ವಾಸನೆ ನೀಡಲಾಗಿದೆ. 2017ರಲ್ಲಿಯೂ ಇದೇ ಆಶ್ವಾಸನೆ ನೀಡಲಾಗಿತ್ತು, ಆದರೂ ಈಗಲೂ ರೈತರು 2017-18ರ ಸುಮಾರು 20 ಸಾವಿರ ಕೋಟಿ ರೂ. ಮತ್ತು 2020-21ರ ರೂ. 3752 ಕೋಟಿ ಬಾಕಿಗಾಗಿ ಕಾಯುತ್ತಲೇ ಇದ್ದಾರೆ ಎಂಬ ಸಂಗತಿಯತ್ತ ಎಸ್‌ಕೆಎಂ ಮುಖಂಡರು ಗಮನ ಸೆಳೆದರು.
ಕಳೆದ 10ವರ್ಷಗಳ ವಿಳಂಬಕ್ಕಾಗಿ ರೂ. 8700 ಕೋಟಿ ಬಡ್ಡಿ ತೆರಬೇಕು ಎಂದು ಅಲಹಾಬಾದ್ ಹೈಕೋರ್ಟ್ ಮಾರ್ಚ್ 2017ರಲ್ಲಿ ಆದೇಶ ನೀಡಿದ್ದರೂ, ರೈತರಿಗೆ ಇದುವರೆಗೂ ಅದು ಸಿಕ್ಕಿಲ್ಲ ಎಂದೂ ಅವರು ಹೇಳಿದರು.
ಬಿಜೆಪಿಯ ಈ ‘ಸಂಕಲ್ಪ ಪತ್ರ’ದಲ್ಲಿ ಭತ್ತ, ಗೋದಿ, ಆಲೂಗಡ್ಡೆವ, ಟೊಮ್ಯಾಟೊ, ಈರುಳ್ಳಿ ಮುಂತಾದ ಬೆಳೆಗಳನ್ನು ಕನಿಷ್ಟ ಬೆಂಬಲ ಬೆಲೆಗಳಲ್ಲಿ ಖರೀದಿಸುವ ಆಶ್ವಾಸನೆಯನ್ನೂ ನೀಡಿದೆ. 2017ರ ಪ್ರಣಾಳಿಕೆಯಲ್ಲೂ ನೀಡಿದ್ದ ಈ ಆಶ್ವಾಸನೆಯನ್ನು ಅಧಿಕಾರಕ್ಕೆ ಬಂದ ಕೂಡಲೇ ಮರೆತು ಬಿಡಲಾಗಿತ್ತು ಎಂದು ರೈತರು ಹೇಳುತ್ತಿದ್ದಾರೆ. ನಿಜ ಸಂಗತಿಯೆಂದರೆ ಕಳೆದ 5 ವರ್ಷಗಳಲ್ಲಿ ಈ ಸರಕಾರದಿಂದ ಈ ಬೆಳೆಗಳ ಮೂರನೇ ಒಂದು ಭಾಗಕ್ಕಿಂತಲೂ ಕಡಿಮೆ ಖರೀದಿ ನಡೆದಿದೆ. ಗೋಧಿಯ ವಿಷಯದಲ್ಲಂತೂ ರೈತರು ಬೆಳೆದ ಪ್ರತಿ ಆರು ಚೀಲದಲ್ಲೀ ಒಂದನ್ನು ಮಾತ್ರ ಸರಕಾರ Sರೀದಿಸಿದೆ ಎಂದು ಎಸ್‌ಕೆಎಂ ಮುಖಂಡರು ಹೇಳಿದರು.
ಅದೇ ರೀತಿ ಮುಖ್ಯಮಂತ್ರಿ ಕೃಷಿ ನೀರಾವರಿ ಯೋಜನೆಯ ಮತ್ತು ಉಚಿತ ವಿದ್ಯುತ್ ಪೂರೈಕೆಯ ಆಶ್ವಾಸನೆಗಳೂ ಕಳೆದ ಬಾರಿಯ ಆಶ್ವಾಸನೆಗಳ ಪುನರುಚ್ಚಾರವಷ್ಟೇ. ಕಳೆದ ಬಾರಿ ನೀರಾವರಿಗಾಗಿ 20000 ಕೋಟಿ ರೂ.ಗಳ ಆಶ್ವಾಸನೆಯಿದ್ದರೂ ಅದಿನ್ನೂ ಕಾಣುತ್ತಿಲ್ಲ. ಈ ಬಾರಿ 5000ಕೋಟಿ ರೂ.ಗಳ ಆಶ್ವಾಸನೆಯಿದೆ. ಕಳೆದ 5 ವರ್ಷಗಳಲ್ಲಿ ಸಾಕಷ್ಟು ವಿದ್ಯುತ್ ಪೂರೈಕೆಯೂ ಆಗಿಲ್ಲ ಮತ್ತು ವಿದ್ಯುತ್ ದರಗಳು ಇಲ್ಲಿ ಇಡೀ ದೇಶದಲ್ಲೇ ಅತೀ ಹೆಚ್ಚು, ಕೊಳವೆ ಬಾವಿಗಳಿಗೆ ವಿದ್ಯುತ್ ದರವನ್ನು ಯುನಿಟಿಗೆ 1ರೂ.ನಿಂದ 2ರೂ.ಗೆ ಏರಿಸಲಾಗಿದೆ. 10ಲಕ್ಷ ರೈತರಿಗೆ ವಿದ್ಯುತ್ ಉಳಿಸುವ ಪಂಪ್‌ಸೆಟ್‌ಗಳ ಆಶ್ವಾಸನೆಯಿತ್ತು. ಇದುವರೆಗೆ ಕೊಟ್ಟಿರುವುದು ಕೇವಲ 6068 ಪಂಪುಗಳಷ್ಟೇ. ಈಗ ಮತ್ತೆ ಸೌರ ಪಂಪುಗಳ ಆಶ್ವಾಸನೆ ಕೊಡಲಾಗಿದೆ.
ಉತ್ತರಪ್ರದೇಶದ ರೈತರಿಗೆ 5 ವರ್ಷಗಳ ಹಿಂದೆ ಕೊಟ್ಟ ಆಶ್ವಾಸನೆಗಳ ಗತಿ ಒಂದೆಡೆಯಾದರೆ, ಈಗ ರೈತರು ಲಖಿಂಪುರ್ ಖೇರಿಯಲ್ಲಿ ಕೇಂದ್ರ ಮಂತ್ರಿಯ ಮಗ ನಾಲ್ವರು ರೈತರು ಮತ್ತು ಒಬ್ಬ ಸ್ಥಳೀಯ ಪತ್ರಕರ್ತರ ಮೇಲೆ ಕಾರು ಹತ್ತಿಸಿ ಸಾಯಿಸಿದ್ದನ್ನೂ ರೈತರು ನೆನಪಿಸಿಕೊಳ್ಳಬೇಕು ಎಂದು ಎಸ್‌ಕೆಎಂ ಮುಖಂಡರು ಹೇಳಿದರು. ಡಿಸೆಂಬರ್9 ರಂದು ದಿಲ್ಲಿ ಗಡಿಗಳಲ್ಲಿ ಚಳುವಳಿಯನ್ನು ಸ್ಥಗಿತಗೊಳಿಸಲು ಸರಕಾರ ನೀಡಿದ ಲಿಖಿತ ಆಶ್ವಾಸನೆಗಳನ್ನು ಈಡೇರಿಸುವಲ್ಲಿಯೂ ಹಿಂದೇಟು ಹಾಕಿರವ ಬಗ್ಗೆಯೂ ಎಸ್‌ಕೆಎಂ ಮುಖಂಡರು ಮಾತಾಡಿದರು. ಆದ್ದರಿಂದಲೇ ಜನವರಿ 31ರಂದು ‘ವಿಶ್ವಾಸಘಾತ ದಿನ’ ವನ್ನು ಆಚರಿಸಿದ ನಂತರ ಎಸ್‌ಕೆಎಂಗೆ ಸೇರಿದ 57 ರೈತರ ಸಂಘಟನೆಗಳು ಪ್ರತಿ ಬ್ಲಾಕಿನಲ್ಲಿ, ಗ್ರಾಮದಲ್ಲಿ ಮತ್ತು ಜಿಲ್ಲೆಯಲ್ಲಿ ರೈತ-ವಿರೋಧಿ ಬಿಜೆಪಿಯಲ್ಲಿ ಮತ್ತೊಮ್ಮೆ ವಿಶ್ವಾಸ ಇಡಬೇಡಿ ಎಂದು ಪ್ರಚಾರ ನಡೆಸಲು ನಿರ್ಧರಿಸಿದವು ಎಂದು ಹೇಳಿದ ಎಸ್‌ಕೆಎಂ ಮುಖಂಡರು, “ತಮ್ಮ ಬೆಳೆಗಳನ್ನು ಎಂಎಸ್‌ಪಿಗಿAತ ಅರ್ಧ ಬೆಲೆಗಳಲ್ಲಿ ಮಾರಬೇಕಾಗಿ ಬಂದಿರುವ ರೈತರು, ತಮ್ಮ ಬೆಳೆಗಳನ್ನು ಬೀಡಾಡಿ ಪ್ರಾಣಿಗಳಿಂದ ಕಾಪಾಡಿಕೊಳ್ಳಲು ರಾತ್ರಿಯಿಡೀ ಎಚ್ಚರವಿರಬೇಕಾದ ರೈತರು ಖಂಡಿತವಾಗಿಯೂ ಬಿಜೆಪಿಗೆ ಒಂದು ಪಾಟ ಕಲಿಸುತ್ತಾರೆ ಎಂದರು.
“ಬಿಜೆಪಿ ಸರಕಾರಕ್ಕೆ ಸತ್ಯ ಮತ್ತು ಸುಳ್ಳಿನ ಭಾಷೆ ಅರ್ಥವಾಗುವುದಿಲ್ಲ, ಒಳಿತು ಮತ್ತು ಕೆಡುಕಿನ ವ್ಯತ್ಯಾಸ ಅರ್ಥವಾಗುವುದಿಲ್ಲ. ಸಂವಿಧಾನಿಕ ಮತ್ತು ಅಸಂವಿಧಾನಿಕದ ನಡುವಿನ ವ್ಯತ್ಯಾಸ ತಿಳಿಯುವುದಿಲ್ಲ. ಈ ಪಕ್ಷಕ್ಕೆ ಒಂದೇ ಭಾಷೆ ಗೊತ್ತಿರುವುದು-ವೋಟು, ಸೀಟು ಮತ್ತು ಅಧಿಕಾರ” ಎಂದು ಎಸ್‌ಕೆಎಂ ಪರವಾಗಿ ಪ್ರಕಟಿಸಿರುವ ಕರಪತ್ರ ಹೇಳುತ್ತದೆ.