- ಮಕ್ಕಳ ಆರೋಗ್ಯ, ಸುರಕ್ಷತೆ ಮುಖ್ಯ
- ಕಲಿಕೆಗೆ ಸಂಬಂಧಿಸಿದಂತೆ ವಿದ್ಯಾಗಮನ ಯೋಜನೆ ಜಾರಿ
ಮಂಡ್ಯ: ಸೆಪ್ಟಂಬರ್‌ನಿಂದ ಶಾಲೆಗಳ ಆರಂಭ ಮಾಡಲು ಆತುರವಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಶಾಲೆಗಳ ಪುನಾರಂಭ ಕಷ್ಟ. ಆದರೆ ಸೆಪ್ಟಂಬರ್‌ನಲ್ಲಿ ಶಾಲೆಗಳನ್ನು ಪುನಾರಂಭ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಿದೆ. ಈಗ ನಮ್ಮ ಮುಂದೆ ದೊಡ್ಡ ಸವಾಲು ಇದೆ. ಮುಂದಿನ ಶೈಕ್ಷಣಿಕ ದಿನಗಳು ಹೇಗೆ ಎಂದು ಯೋಚನೆ ಮಾಡುವಂತಾಗಿದೆ. ಸುರೇಶ್ ಕುಮಾರ್ ಶಾಲೆ ಪ್ರಾರಂಭ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂಬ ಬಿರುದನ್ನೂ ನನಗೆ ಕೊಟ್ಟಿದ್ದಾರೆ. ಖಂಡಿತ ಯಾವುದೇ ಕಾರಣಕ್ಕೂ ಸೆಪ್ಟಂಬರ್‌ನಿಂದ ಶಾಲೆಗಳನ್ನು ಪ್ರಾರಂಭಿಸಲು ಆತುರ ಪಡುವುದಿಲ್ಲ ಎಂದರು.
ನಮ್ಮ ಮಕ್ಕಳ ಆರೋಗ್ಯ ನನಗೆ ಬಹಳ ಮುಖ್ಯವಾದ ಆದ್ಯತೆ. ಅದನ್ನ ಬಹಳ ಸುರಕ್ಷತಾ ದೃಷ್ಟಿಯಿಂದ ನೋಡಬೇಕು. ಜೊತೆಗೆ ನಮ್ಮ ಮಕ್ಕಳ ಕಲಿಕೆ ಹೇಗೆ? ಯಾವ ರೀತಿ ಕಲಿಕೆಯನ್ನು ಮುಂದುವರಿಸಬಹುದು ಎಂಬುದಕ್ಕೆ ಈಗಾಗಲೇ ನಮ್ಮ ರಾಜ್ಯದಲ್ಲಿ ವಿದ್ಯಾಗಮನ ಎಂಬ ಯೋಜನೆಯನ್ನು ತರಲಾಗಿದೆ. ಈ ವಿದ್ಯಾಗಮನ ಯೋಜನೆ ಇಡೀ ರಾಷ್ಟ್ರವೇ ನೋಡುವಂತ ಅತ್ಯುತ್ತಮ ಯೋಜನೆ ಎಂದು ಹೇಳಿದರು.
ಇದೇ ವೇಳೆ, ಶಿಕ್ಷಕರು ಮಕ್ಕಳು ಇರುವ ಕಡೆ ಹೋಗಿ ಮಕ್ಕಳ ಕಲಿಕೆಗೆ ಪ್ರೋತ್ಸಾಹ ಕೊಟ್ಟು ಕಲಿಸುತ್ತಿದ್ದಾರೆ.. ಮಳವಳ್ಳಿ ತಾಲೂಕಿನ ಕೆಂಪ್ಪಯ್ಯನದೊಡ್ಡಿಗೆ ಹೋಗಿದ್ದೆ. ಶಿಕ್ಷಕರು ಊರಿನ ಪಡಶಾಲೆಯಲ್ಲಿ ಮಕ್ಕಳಿಗೆ ಮಾಡ್ತಿದ್ದಾರೆ. ಕೊರೋನಾ ಕಾಲದಲ್ಲಿ ಕೂಡ ನಮ್ಮ ಮಕ್ಕಳು ಯಾವುದೇ ಖಿನ್ನತೆಗೆ ಒಳಗಾಗಬಾರದು. ಅದಕ್ಕಾಗಿ ಅವರಿಗೆ ಕಲಿಕೆ ಮುಂದುವರಿಸಬೇಕು ಎಂದು ತಿಳಿಸಿದರು.
ಈಗಾಗಲೇ ಎಲ್ಲರ ಮನೆಗೆ ಪಠ್ಯ ಪುಸ್ತಕ ತಲುಪಿಸಿದ್ದೇವೆ. ಟಿವಿಯಲ್ಲಿ ಸೇತುಬಂಧ ಕಾರ್ಯಕ್ರಮ ಮಾಡ್ತಿದ್ದೇವೆ. ಶಿಕ್ಷಣ ಇಲಾಖೆಯಿಂದ ಎರಡು ಚಾನಲ್ಗಳನ್ನು ಪ್ರಾರಂಭಿಸುತ್ತಿದ್ದೇವೆ. ಎಲ್ಲಾ ತರಗತಿಗಳಿಗೆ ಪಾಠ ಮಾಡಲು ಸಿದ್ಧತೆ ನಡೆದಿದೆ, ಪಠ್ಯಕ್ರಮ ಕೂಡ ಸಿದ್ಧವಾಗಿದೆ. ಸಮಾಜಕ್ಕೆ ಭರವಸೆ ಕೊಡುವ ಕಾರ್ಯವನ್ನ ಶಿಕ್ಷಣ ಇಲಾಖೆ ಮಾಡುತ್ತಿದೆ ಎಂದರು.