ಸಿ.ಬಿ.ಸಿ.ಎಸ್.ಶಿಕ್ಷಣ ಪದ್ಧತಿ ಅಳವಡಿಕೆ : ಕನ್ನಡಕ್ಕೆ ಒದಗಿರುವ ಆತಂಕಗಳನ್ನು ಪರಿಹರಿಸಲು ಆಗ್ರಹಿಸಿ ಪ್ರತಿಭಟನೆ

ಧಾರವಾಡ : ಸಿಬಿಎಸ್ಸಿ ಶಿಕ್ಷಣ ಪದ್ದತಿಯನ್ನು ಅಳವಡಿಸಿಕೊಳ್ಳುವಲ್ಲಿ ಕನ್ನಡಕ್ಕೆ ಒದಗಿರುವ ಆತಂಕಗಳನ್ನು ಪರಿಹರಿಸುವಂತೆ ಆಗ್ರಹಿಸಿ ಸಾಹಿತಿಗಳು, ಚಿಂತಕರು ಹಾಗೂ ಕನ್ನಡ ಪ್ರಾದ್ಯಾಪಕರು ಪ್ರತಿಭಟನೆ ನಡೆಸಿ ಕರ್ನಾಟಕ ವಿಶ್ಚವಿದ್ಯಾಲಯ ಧಾರವಾಡದ ಕುಲಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

ಭಾರತ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯು ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಮಹತ್ವಾಕಾಂಕ್ಷೆಯೊಂದಿಗೆ ವಿಶ್ವವಿದ್ಯಾಯಗಳಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಹಂತಗಳಲ್ಲಿ ಸಿ.ಬಿ.ಸಿ.ಎಸ್. ಪದ್ಧತಿಯನ್ನು ಅಳವಡಿಸಿಕೊಳ್ಳಲು ಆದೇಶಿಸಿದ್ದು ಅದರ ಪ್ರಕ್ರಿಯೆ ಆರಂಭವಾಗಿದೆ. ಆದರೆ ಈ ಪದ್ದತಿಯ ನೀತಿ ನಿರೂಪಣೆಗಳಲ್ಲಿ ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣಗಳ ಕಾರ್ಪೋರೇಟ್ ಅರ್ಥವ್ಯವಸ್ಥೆಯ ಹಿತಾಸಕ್ತಿಗೆ ತಕ್ಕಂತೆ ಸಂಪೂರ್ಣವಾಗಿ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸುವ ಪ್ರಯತ್ನ ಎದ್ದುಕಾಣುತ್ತದೆ. ಶಿಕ್ಷಣವನ್ನು ಕುರಿತಂತೆ ಶಿಕ್ಷಣತಜ್ಞರ ತತ್ವಜ್ಞಾನಿಗಳ ದಾರ್ಶನಿಕ ನಿಲುವುಗಳನ್ನು ಎತ್ತಂಗಡಿ ಮಾಡಿ ಅವುಗಳ ಜಾಗದಲ್ಲಿ ವಾಣಿಜ್ಯಿಕೃತ ಪರಿಭಾಷೆಗಳನ್ನು ಸ್ಥಾಪಿಸಲಾಗುತ್ತಿದೆ. ಸಮಗ್ರ ಬದುಕಿಗೆ, ವಿಕಾಸಕ್ಕೆ ವ್ಯಕ್ತಿತ್ವ ನಿರ್ಮಾಣಕ್ಕೆ ಆಧಾರವಾಗಬೇಕಿದ್ದು ಶಿಕ್ಷಣ ಪದ್ಧತಿಯನ್ನು “ಚಾಯಿಸ್ ಬೇಸ್ ಕ್ರೆಡಿಟ್ ಸಿಸ್ಟಮ್” “ಆಯ್ಕೆಯಾಧಾರಿತ ಗಳಿಕೆಯ ಪದ್ದತಿ” ಎಂದು ಹೆಸರಿಸಿರುವುದು ಅದರ ಸ್ವರೂಪವನ್ನು ಧ್ವನಿಸುತ್ತದೆ. ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಗಳ ಅಧ್ಯಯನಕ್ಕೆ ತುಂಬ ಕಡಿಮೆ ಅವಕಾಶವನ್ನು ಕಲ್ಪಿಸುತ್ತಿದೆ.

ಕರ್ನಾಟಕ ವಿಶ್ವವಿದ್ಯಾಲಯವು ಹೆಸರಿನಲ್ಲಿಯೇ ಕರ್ನಾಟಕ ಎಂಬ ವಿಶೇಷವನ್ನು ಹೊತ್ತಿದ್ದು ಹೆಸರಿಗೆ ತಕ್ಕಂತೆ ಚರಿತ್ರೆಯುದ್ದಕ್ಕೂ ಕನ್ನಡಪರ ನಿಲುವುಗಳನ್ನು ಪ್ರದರ್ಶಿಸಿ ನಾಡಿನ ಇತರ ವಿಶ್ವವಿದ್ಯಾಲಯಗಳಿಗೆ ಮಾದರಿಯಾಗಿದೆ.

ಬಿ.ಎ. ಅಂತಿಮ ವರ್ಷದಲ್ಲಿ ಇಲ್ಲಿಯವರೆಗೂ ಕನ್ನಡ ಅವಶ್ಯಕ ವಿಷಯವನ್ನು ಅಳವಡಿಸಿದ ನಾಡಿನ ಏಕೈಕ ವಿಶ್ವವಿದ್ಯಾಲಯವಾಗಿದೆ.
ಈ ವಿಶ್ವವಿದ್ಯಾಲಯಗಳಲ್ಲಿ ಸಿಬಿಎಸ್ಸಿ ಪದ್ಧತಿ ಅಳವಡಿಕೆಯಿಂದ ಕನ್ನಡ ಬೋಧನೆಗೆ ಬಹು ದೊಡ್ಡ ಆತಂಕಗಳು ಎದುರಾಗಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯ ಕನ್ನಡ ಅಧ್ಯಾಪಕರ ಪರಿಷತ್ತು ಹಿಂದಿಂನಂತೆ ಕನ್ನಡವನ್ನು ಕಡ್ಡಾಯವಾಗಿ ಬೋಧಿಸಲು, ಕನ್ನಡ ಆವಶ್ಯಕ ವಿಷಯದ ಕಾರ್ಯಭಾರವನ್ನು ಮೊದಲಿನಂತೆ 5 ಘಂಟೆಗಳಿಗೆ ಹೆಚ್ಚಿಸಲು, ಬಿಸಿಎ ಬಿಬಿಎ 3 ಮತ್ತು 4ನೆ ಸೆಮಿಸ್ಟರ್ಗೆ ಕನ್ನಡವನ್ನು ರದ್ದುಗೊಳಿಸಿದ್ದನ್ನು ಪುನರರಾಂಭಿಸಲು, ಬಿಎ ಅಂತಿಮ ತರಗತಿಯಲ್ಲೂ ಕನ್ನಡ ಆವಶ್ಯಕ ವಿಷಯವನ್ನು ಮೊದಲಿನಂತೆ ಪುನರಾರಂಭಿಸಲು, ಕನ್ನಡ ಆನರ್ಸ್ ಆರಂಭಿಸಲು ಮತ್ತು ಇನ್ನೂ ಕೆಲವು ಬೇಡಿಕೆಗಳನ್ನು ಈಡೆರಿಸಬೇಕೆಂದು ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಪ್ರೊ.ಜಿ.ಎಂ ಹೆಗಡೆ, ಎಂ.ಡಿ ಹಿರೇಮಠ, ಹಿರಿಯ ಲೇಖಕ ಡಾ.ಗುರುಲಿಂಗ ಕಾಪಸೆ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪ್ರಕಾಶ ಉಡ್ಕೇರಿ,ಪ್ರೊ. ರಾಜೇಂದ್ರ ನಾಯಕ, ಶ್ರೀಶೈಲದ ಹುದ್ದಾರ, ಎಂ ಡಿ ಒಕ್ಕುಂದ ಮಾತನಾಡಿದರು. ವಿಕಾಸ ಸೊಪ್ಪಿನ್, ಸಮುದಾಯದ ಬಿ ಐ ಇಳಿಗೇರ, ಅನಸೂಯಾ ಕಾಂಬಳೆ, ಜಿನದತ್ತ ಹಡಗಲಿ, ವಿನಯಾ ಒಕ್ಕುಂದ, ವಿಠ್ಠಲ ಭಂಡಾರಿ,ಉತ್ತರ ಕನ್ನಡ ವಿಜಯಶ್ರೀ ಹಿರೇಮಠ, ವೈ,ಎಂ ಬಜಂತ್ರಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *