- 5 ಸಾವಿರ ಕೋಟಿ ರೂ. ಭ್ರಷ್ಟಾಚಾರ ಆರೋಪವನ್ನು ಬಿಜೆಪಿ ಶಾಸಕರೇ ಮಾಡಿದ್ದಾರೆ
- ಬಿಜೆಪಿ ಶಾಸಕರು ಬರೆದಿದ್ದಾರೆನ್ನಲಾದ ಪತ್ರ ಬಿಡುಗಡೆ ಮಾಡಿದ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್
ಮೈಸೂರು: ಹಳೇ ಮೈಸೂರು ಬಾಗದಲ್ಲಿ ಹಿಡಿತ ಸಾಧಿಸಬೇಕು ಎಂದು ಪ್ರಯತ್ನ ಪಡುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಗ ಬಿ.ವೈ. ವಿಜಯೇಂದ್ರ ಅವರ ವಿರುದ್ಧ 5 ಸಾವಿರ ಕೋಟಿ ರೂ. ಭ್ರಷ್ಟಾಚಾರ ಆರೋಪವನ್ನು ಬಿಜೆಪಿ ಶಾಸಕರೇ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದ್ದು. ಆ ಸಂಬಂಧ ಬಿಜೆಪಿ ಶಾಸಕರು ಹೈಕಮಾಂಡ್ಗೆ ಬರೆದಿದ್ದರೆ ಎನ್ನಲಾದ ಪತ್ರವನ್ನು ಬಿಡುಗಡೆ ಮಾಡಿದೆ.
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಕಾಂಗ್ರೆಸ್ ವಕ್ತಾರ ಲಕ್ಷ್ಮಣ, ಬಿ.ವೈ. ವಿಜಯೇಂದ್ರ ಬೇನಾಮಿ ಸಂಪತ್ತನ್ನು ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿಯನ್ನು ಉಳಿಸಿ ಅಂತ ಹೈಕಮಾಂಡ್ಗೆ ಬಿಜೆಪಿ ಶಾಸಕರೇ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಲಕ್ಷ್ಮಣ ಬಿಡುಗಡೆ ಮಾಡಿದ್ದಾರೆ.
ವಿಜಯೇಂದ್ರ ಕಳೆದ ಒಂದು ವರ್ಷದಲ್ಲಿ 5 ಸಾವಿರ ಕೋಟಿ ರೂ. ಸಂಗ್ರಹ ಮಾಡಿದ್ದಾರೆ. ಬಿಜೆಪಿ ಪಕ್ಷವನ್ನು ಕಾಪಾಡಿ ಎಂದು ಬಿಜೆಪಿ ಶಾಸಕರು ಹೈಕಮಾಂಡ್ಗೆ ಪತ್ರ ಬರೆದಿದ್ದಾರೆ ಎಂದು ಬಿಜೆಪಿ ಶಾಸಕರೇ ಬರೆದಿರೋ ಪತ್ರದಲ್ಲಿದೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ ಆರೋಪ ಮಾಡಿದ್ದಾರೆ.
ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಬಿಜೆಪಿ ಶಾಸಕರೇ ಸಹಿ ಮಾಡಿರೋ ಪತ್ರ ಬಿಡುಗಡೆ ಮಾಡಿರುವ ಲಕ್ಷ್ಮಣ, ಬಿಜೆಪಿ ಶಾಸಕರು ಬರೆದ ಪತ್ರದಲ್ಲಿ ವಿಜಯೇಂದ್ರ ಕುರಿತು ಗಂಭೀರ ಆರೋಪ ಮಾಡಲಾಗಿದೆ. ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ಆಡಿಯೋ ಕ್ಲಿಪಿಂಗ್, ವೀಡಿಯೋ ಕ್ಲಿಪಿಂಗ್ಗಳನ್ನು ನಾವು ಕ್ರೋಢೀಕರಿಸಿದ್ದೇವೆ. ಸೆಪ್ಟೆಂಬರ್ ಎರಡು ಅಥವಾ ಮೂರನೇ ವಾರದಲ್ಲಿ ದೆಹಲಿಯಲ್ಲಿ ಆಡಿಯೋ ಬಿಡುಗಡೆ ಮಾಡುತ್ತೇವೆ ಎಂದು ಕೂಡ ಕಾಂಗ್ರೆಸ್ ಹೇಳಿದೆ.
32 ಜನರ ಕೂಟವನ್ನು ಕಟ್ಟಿಕೊಂಡಿರುವ ಬಿ.ವೈ. ವಿಜಯೇಂದ್ರ ಪರ್ಯಾಯ ಸರ್ಕಾರವನ್ನು ನಡೆಸುತ್ತಿದ್ದಾರೆ. ಅವರಿಂದ ವಿಜಯೇಂದ್ರ ಯಾರ್ಯಾರ ಹೆಸರಿನಲ್ಲಿ ಆಸ್ತಿಗಳನ್ನು ಮಾಡಿದ್ದಾರೆ, ಕರ್ನಾಟಕ ಮತ್ತು ಬೇರೆ ರಾಜ್ಯಗಳಲ್ಲಿ ಎಲ್ಲೆಲ್ಲಿ ಅವರ ಹೆಸರಿನಲ್ಲಿ ಆಸ್ತಿಗಳಿವೆ ಎಂಬುದರ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಲಾಗುವುದು. ಸರ್ಕಾರ ಈ 5 ಕೋಟಿ ರೂ. ಭ್ರಷ್ಟಾಚಾರದ ಬಗ್ಗೆ 10 ದಿನದೊಳಗೆ ತನಿಖೆಗೆ ಆದೇಶಿಸದಿದ್ದರೆ ನಮ್ಮಲ್ಲಿ ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಎಸಿಬಿ, ಲೋಕಾಯುಕ್ತ, ಸಿಬಿಐ, ಹೈಕೋರ್ಟ್ ಮೂಲಕ ತನಿಖೆಗೆ ಕ್ರಮ ವಹಿಸಲಾಗುವುದು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ತಿಳಿಸಿದ್ದಾರೆ.
ಸಿಎಂ ಪುತ್ರ ವಿಜಯೇಂದ್ರ ಅವರು ಸೂಪರ್ ಸಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಸಿಎಂ ಭೇಟಿಗೂ ಮೊದಲು ವಿಜಯೇಂದ್ರ ಅವರನ್ನು ಭೇಟಿ ಮಾಡಿ ಹೋಗಬೇಕು ಎಂದು ಆರೋಪಿಸಿ ಹಿಂದೊಮ್ಮೆ ಹೈಕಮಾಂಡ್ ಎದುರು ಬಿಜೆಪಿಯ ಒಂದು ತಂಡ ದೂರು ಸಲ್ಲಿಸಿತ್ತು. ಆಗ ಹೈಕಮಾಂಡ್ ಸಿಎಂ ಯಡಿಯೂರಪ್ಪ ಅವರನ್ನು ಕರೆದು ವಿಜಯೇಂದ್ರ ವರನ್ನು ನಿಯಂತ್ರಿಸುವಂತೆ ಸೂಚಿಸಿತ್ತು. ಈಗ ಮತ್ತೊಮ್ಮೆ ವಿಜಯೇಂದ್ರ ಅವರ ಮೇಲೆ ಪತ್ರ ಬರೆಯಲಾಗಿದೆ.