ಹುಬ್ಬಳ್ಳಿ: ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಅವರನ್ನು ಹುಬ್ಬಳ್ಳಿಯ ಶ್ರೀನಗರ ಕ್ರಾಸ್‌ನಲ್ಲಿ ಇರುವ ಖಾಸಗಿ ಹೋಟೆಲ್‌ನಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಈ ಘಟನೆಯಿಂದ ಇಡೀ ಹುಬ್ಬಳ್ಳಿ ನಗರವೇ ಬೆಚ್ಚಿ ಬಿದ್ದಿದೆ.
ಚಂದ್ರಶೇಖರ ಗುರೂಜಿ ಅವರ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತ ದೇಹವನ್ನು ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಚಂದ್ರಶೇಖರ ಗುರೂಜಿ ಅವರು ಹುಬ್ಬಳ್ಳಿಯ ಉಣಕಲ್ಲ ಕೆರೆ ಬಳಿಯ ಪ್ರೆಸಿಡೆಂಟ್ ಹೊಟೇಲ್‌ಗೆ ಬಂದಿದ್ದರು. ಈ ವೇಳೆ ಹೋಟೆಲ್‌ನ ಸ್ವಾಗತಕಾರರ ಕೌಂಟರ್ ಬಳಿ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮಂಗಳವಾರ ಮಧ್ಯಾಹ್ನ ಜುಲೈ 5 ರಂದು ನಡೆದಿರುವ ಈ ಘಟನೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹೋಟೆಲ್‌ನ ಸ್ವಾಗತಕಾರ ಕೌಂಟರ್ ಬಳಿ ಕುಳಿತಿದ್ದ ವೇಳೆ ಭಕ್ತರ ಸೋಗಿನಲ್ಲಿ ದುಷ್ಕಮಿಗಳ ತಂಡ ಏಕಾಏಕಿ ದಾಳಿ ನಡೆಸಿದ್ದು, ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಸ್ಥಳದಲ್ಲಿ ಬೆರಳಚ್ಚು ತಜ್ಞರ ತಂಡ ಪರಿಶೀಲನೆ ನಡೆಸುತ್ತಿದೆ. ಘಟನಾ ಸ್ಥಳಕ್ಕೆ ಡಿಸಿಪಿ ಸಾಹಿಲ ಬಾಗ್ಲಾ, ಗೋಪಾಲ ಬ್ಯಾಕೋಡ ಆಗಮಿಸಿ ಪರಿಶೀಲಿಸಿದರು. ಘಟನೆ ನಡೆದ ಸ್ಥಳಕ್ಕೆ ಹುಬ್ಬಳ್ಳಿ – ಧಾರವಾಡ ಕಮೀಷನರ್ ಲಾಬೂರಾಮ್ ಕೂಡಾ ಆಗಮಿಸಿ ಸ್ಥಳದ ಪರಿಶೀಲನೆ ನಡೆಸಿದರು.
ಯಾವ ಕಾರಣಕ್ಕಾಗಿ ಗುರೂಜಿ ಅವರ ಹತ್ಯೆ ಮಾಡಲಾಗಿದೆ ಎನ್ನುವುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಹೋಟೆಲ್‌ನಲ್ಲಿ ರಿಸಪ್ಶನ್‌ನಲ್ಲಿಯೇ ಚಾಕು ಇರಿದ ಬಳಿಕ ಇಬ್ಬರು ದುಷ್ಕರ್ಮಿಗಳು ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
‘ಜುಲೈ 2 ರಂದೇ ಹೋಟೆಲ್‌ಗೆ ಆಗಮಿಸಿದ್ದ ಚಂದ್ರಶೇಖರ್ ಗುರೂಜಿ, ಜುಲೈ 6, ಬುಧವಾರ ಹೋಟೆಲ್ ರೂಮ್ ಖಾಲಿ ಮಾಡಬೇಕಿತ್ತು. ಆದರೆ, ಮಂಗಳವಾರ ಮಧ್ಯಾಹ್ನ ಹೋಟೆಲ್‌ನ ರಿಸೆಪ್ಶನ್‌ನಲ್ಲಿ ಕುಳಿತಿದ್ದ ವೇಳೆ ಗುರೂಜಿ ಬಳಿ ಬಂದ ದುಷ್ಕರ್ಮಿಗಳು ಕಾಲಿಗೆ ನಮಸ್ಕಾರ ಮಾಡುವಂತೆ ನಟಿಸಿ ಅವರಿಗೆ ಚಾಕು ಇರಿದಿದ್ದಾರೆ’ ಎಂದು ಹೋಟೆಲ್ ಸಿಬ್ಬಂದಿ ತಿಳಿಸಿದ್ದಾರೆ.