ಕೋಲಾರ: ಆಳುವ ಸರಕಾರಗಳು ಅನುಸರಿಸುತ್ತಿರುವ ದಮನಕಾರಿ ನೀತಿಗಳಿಂದಾಗಿ ಸಾರ್ವಜನಿಕರ ಬದುಕು ದುಸ್ತರಗೊಂಡಿದೆ ಇದರಿಂದ ಮುಂದಿನ ದಿನಗಳು ಅಪಾಯಕಾರಿಯಾಗುತ್ತದೆ ಇದರ ವಿರುದ್ಧ ಧ್ವನಿಗೂಡಿಸಬೇಕಾಗಿದೆ ಎಂದು ಸಿಪಿಐಎಂ ತಾಲೂಕು ಕಾರ್ಯದರ್ಶಿ ಟಿ.ಎಂ ವೆಂಕಟೇಶ್ ತಿಳಿಸಿದರು.
ನಗರದ ಸಿಪಿಐಎಂ ಕಛೇರಿಯಲ್ಲಿ ನಗರ ಸಮ್ಮೇಳನದಲ್ಲಿ ಧ್ವಜಾರೋಹಣದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೇಂದ್ರದ ನರೇಂದ್ರ ಮೋದಿ ಸರಕಾರವು ಕಾರ್ಪೊರೇಟ್ ಸಂಸ್ಥೆಗಳ ಗುಲಾಮರ ರೀತಿಯಲ್ಲಿ ಅವರಿಗೆ ಅನುಕೂಲವಾಗುವಂತ ಕಾಯಿದೆಗಳನ್ನು ಜಾರಿ ಮಾಡಿ ಬಡವರರು ಬದುಕಲು ಕಷ್ಟಪಡಬೇಕಾದ ಸಂದರ್ಭ ನಿರ್ಮಾಣ ಮಾಡಿದೆ ಎಂದು ಆರೋಪಿಸಿದರು.
ದೇಶದಲ್ಲಿ ಬಡವರ, ಕಾರ್ಮಿಕರ ಹಾಗೂ ರೈತ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿರುವ ಸರಕಾರಗಳು ಸಾಮಾನ್ಯ ಜನರ ಜೀವನವನ್ನು ಕಷ್ಟಕ್ಕೆ ದೂಡುತ್ತಿವೆ. 2014 ಮತ್ತು 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಕೇಂದ್ರ ಬಿಜೆಪಿಯ ನರೇಂದ್ರ ಮೋದಿ ಸರಕಾರ ದೇಶದಲ್ಲಿ ಬದಲಾವಣೆ ತರುವುದಾಗಿ ಹೇಳುತ್ತ ಭಾಷಣೆಗಳ ಮುಖಾಂತರ ದಾರಿ ತಪ್ಪಿಸಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಆರೋಪಿಸಿದರು.
ಕೊರೋನಾ ನಡುವೆ ಜನರಿಗೆ ಭದ್ರತೆ ಮತ್ತು ಧೈರ್ಯ ತುಂಬುವಲ್ಲಿ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ. ಕೊರೋನಾ ಸಂದರ್ಭದಲ್ಲಿ ತಮ್ಮ ಊರಿಗೆ ತೆರಳುತ್ತಿದ್ದ ಸಾವಿರಾರು ಕಾರ್ಮಿಕರು ಪ್ರಾಣ ಕಳೆದುಕೊಂಡರು. ಕೈಗಾರಿಕೆಗಳು ಬಂದ್ ಆಗಿದೆ. ನಿರುದ್ಯೋಗ, ಆಹಾರ ಕೊರತೆ, ಬೆಲೆ ಏರಿಕೆಯಿಂದಾಗಿ ಜನರು ತತ್ತರಿಸುವಂತಾಗಿದೆ. ಆದರೆ ಕೇಂದ್ರ ಸರ್ಕಾರವು ಈ ಬಗ್ಗೆ ಯಾವುದೇ ಜಿಂತೆಯಿಲ್ಲದಂತೆ ವರ್ತಿಸುತ್ತಿದೆ ಎಂದರು.
ಸಾರ್ವಜನಿಕ ಆರೋಗ್ಯಕ್ಕೆ ಕೇಂದ್ರೀಯ ವೆಚ್ಚವನ್ನು ಕನಿಷ್ಟ ಜಿಡಿಪಿಯ ಶೇ. ೩ರಷ್ಟು ಹೆಚ್ಚಿಸಬೇಕು. ಅಗತ್ಯ ವಸ್ತುಗಳಕೋಕಾಯ್ದೆಯನ್ನು ತೆಗೆದು ಹಾಕುವ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರಿವಾಜ್ಞೆಯನ್ನು ರದ್ದುಗೊಳಿಸಬೇಕು. ಈಗಿರುವ ಕಾರ್ಮಿಕ ಕಾನೂನುಗಳನ್ನು ರದ್ದು ಅಥವಾ ತಿದ್ದುಪಡಿಗೊಳಿಸಿ ಅಮಾನತು ಮಾಡುವ ಎಲ್ಲಾ ಪ್ರಸ್ತಾಪಗಳನ್ನು ಹಿಂದೆಗೆದುಕೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು
ಈ ಸಂದರ್ಭದಲ್ಲಿ ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯರಾದ ಎಂ.ವಿಜಯಕೃಷ್ಣ, ವಿ.ಅಂಬರೀಷ್, ಮುಖಂಡರಾದ ಟಿ.ಕೃಷ್ಣೇಗೌಡ, ಆಶಾ, ನಾಗರಾಜಪ್ಪ ಮುಂತಾದವರು ಇದ್ದು ಸಮ್ಮೇಳನದ ನಂತರ ನಗರ ಘಟಕದ ಕಾರ್ಯದರ್ಶಿಯಾಗಿ ಭೀಮರಾಜ್ ಅವಿರೋಧವಾಗಿ ಆಯ್ಕೆಯಾದರು