ಸತ್ತ ವಲಸೆ ಕಾರ್ಮಿಕರ ಲೆಕ್ಕ ಇಟ್ಟಿಲ್ಲ; ಪರಿಹಾರದ ಪ್ರಶ್ನೆಯೇ ಇಲ್ಲ: ಸದನದಲ್ಲಿ ಕೇಂದ್ರ ಸರ್ಕಾರ

  • ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ  ಉತ್ತರ

ನವದೆಹಲಿ: ಮಾರ್ಚ್ ನಂತರದಲ್ಲಿ ದೇಶಾದ್ಯಂತ ಸುದೀರ್ಘ 68 ದಿನಗಳ ಕಾಲ ಲಾಕ್ ಡೌನ್ ಮಾಡಿದ ಸಂದರ್ಭದಲ್ಲಿ ಎಷ್ಟು ಮಂದಿ ವಲಸಿಗ ಕಾರ್ಮಿಕರು ಸಾವನ್ನಪ್ಪಿದ್ದರು ಎಂಬುದರ ಲೆಕ್ಕ ಇಟ್ಟಿಲ್ಲ, ಹಾಗಾಘಿ ಪರಿಹಾರ ಕೊಡುವ ಪ್ರಶ್ನೆಯೇ ಇಲ್ಲ  ಎಂದು ಕೇಂದ್ರ ಸರ್ಕಾರ ಹೇಳಿದೆ.

 

ಇಂದು ಪ್ರಾರಂಭವಾದ ಮುಂಗಾರು ಅಧಿವೇಶನದ ವೇಳೆ ಕೇಳಲಾದ ಪ್ರಶ್ನೆಗೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಮೇಲಿನ ಉತ್ತರ ನೀಡಿದರು. ಹಾಗೆಯೇ, ವಲಸೆಯ ವೇಳೆ ಮೃತಪಟ್ಟವರಿಗೆ ಪರಿಹಾರ ನೀಡಲಾಗಿದೆಯಾ ಎಂಬ ಪ್ರಶ್ನೆಗೆ, ಯಾವ ಪರಿಹಾರ ನೀಡಿಲ್ಲ ಎಂಬ ಉತ್ತರ ಬಂದಿದೆ.

ಮಾರ್ಚ್ 26ರಂದು ಲಾಕ್ ಡೌನ್ ಘೋಷಣೆ ಆದ ನಂತರ ನಗರ ಭಾಗಗಳಲ್ಲಿದ್ದ ಕಾರ್ಮಿಕರು ಕೆಲಸ ಇಲ್ಲದೆ ತಮ್ಮ ತಮ್ಮ ಊರುಗಳಿಗೆ ವಾಪಸ್ ತೆರಳಿದ್ದರು. ವಲಸೆ ಹೋಗುವ ವೇಳೆ ಹಲವಾರು ಕಾರ್ಮಿಕರು ಮೃತಪಟ್ಟಿದ್ದರು. ಸಂಸತ್ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪಿಸಿ, ಮೃತಪಟ್ಟ ವಲಸೆ ಕಾರ್ಮಿಕರ ರಾಜ್ಯವಾರು ಪಟ್ಟಿ ನೀಡಿ. ಹಾಗೂ ಮೃತಪಟ್ಟವರ ಕುಟುಂಬಗಳಿಗೆ ಯಾವುದಾದರೂ ಪರಿಹಾರವಾಗಲೀ ಅಥವಾ ಆರ್ಥಿಕ ಸಹಾಯವಾಗಲೀ ಸರ್ಕಾರದ ವತಿಯಿಂದ ನೀಡಲಾಗಿದೆಯಾ ಎಂಬ ಪ್ರಶ್ನೆಗಳನ್ನ ಕೇಳಲಾಗಿತ್ತು. ಹ ಆಗೆಯೇ, ಲಾಕ್​ಡೌನ್ ವೇಳೆ ವಲಸಿಗರು ಎದುರಿಸುತ್ತಿದ್ದ ಸಮಸ್ಯೆಗಳನ್ನು ಗ್ರಹಿಸಲು ಸರ್ಕಾರ ಯಾಕೆ ವಿಫಲವಾಯಿತು ಎಂದೂ ಪ್ರಶ್ನಿಸಲಾಗಿತ್ತು.

“ಕೋವಿಡ್-19ನಿಂದ ಉದ್ಭವಿಸಿದ ಬಿಕ್ಕಟ್ಟು ಹಾಗೂ ಲಾಕ್ ಡೌನ್ ನಂತರದ ಸಂಕಷ್ಟದ ಪರಿಸ್ಥಿತಿಯನ್ನು ಭಾರತ ಒಂದು ದೇಶವಾಗಿ ವಿವಿಧ ಸ್ತರಗಳಲ್ಲಿ ನಿಭಾಯಿಸಲಾಗಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆಗಳು, ಸ್ವಸಹಾಯ ಗುಂಪುಗಳು, ನಾಗರಿಕ ಕಲ್ಯಾಣ ಸಂಸ್ಥೆಗಳು, ಆರೋಗ್ಯ ಕಾರ್ಯಕರ್ತರು, ಸ್ವಚ್ಛತಾ ಕಾರ್ಮಿಕರು, ಎನ್​ಜಿಒಗಳು ಈ ಮಹಾಸಂಕಷ್ಟಕ್ಕೆ ಸ್ಪಂದಿಸಿವೆ” ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗವಾರ್ ಉತ್ತರ ನೀಡಿದರು.

ಲಾಕ್​ಡೌನ್ ನಂತರ ಭಾರತದೊಳಗೆ ನಡೆದ ವಲಸೆ ಇಡೀ ವಿಶ್ವದ ಇತಿಹಾಸದಲ್ಲೇ ನಡೆದ ಮಹಾವಲಸೆಗಳಲ್ಲೊಂದೆಂದು ಹೇಳಲಾಗುತ್ತಿದೆ. ಒಂದು ಕೋಟಿಯಷ್ಟು ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಿದ್ದರು. ಉತ್ತರ ಪ್ರದೇಶದಲ್ಲೇ ಅತಿಹೆಚ್ಚು ವಲಸೆಯಾಗಿದೆ. ಇಲ್ಲಿ 32.4 ಲಕ್ಷ ವಲಸೆ ಕಾರ್ಮಿಕರು ಉತ್ತರ ಪ್ರದೇಶಕ್ಕೆ ಮರಳಿದ್ದರು. ಬಿಹಾರ 15 ಲಕ್ಷ, ರಾಜಸ್ಥಾನ 13 ಲಕ್ಷ ಕಾರ್ಮಿಕರ ವಲಸೆ ಕಂಡವು. ಮೇ 1ರಿಂದ ಕಾರ್ಮಿಕರ ಸಾಗಣೆಗಾಗಿಯೇ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿತ್ತು. ರೈಲು ವ್ಯವಸ್ಥೆ ಮಾಡುವ ಮುನ್ನ ಲಾಕ್ ಡೌನ್ ಸಂಕಷ್ಟಕ್ಕೆ ಸಿಲುಕಿದ್ದ ಸಾವಿರಾರು ಕಾರ್ಮಿಕರು ಯಾವುದೇ ವಾಹನದ ವ್ಯವಸ್ಥೆ ಇಲ್ಲದ ಕಾರಣ ತಮ್ಮ ದೂರದೂರುಗಳಿಗೆ ನಡೆದುಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹಲವರು ತಮ್ಮ ಖಾಸಗಿ ವಾಹನದಲ್ಲೋ, ಟ್ರಕ್​ಗಳಲ್ಲಿ ಕದ್ದುಮುಚ್ಚಿಯೋ ಹೋಗುತ್ತಿದ್ದರು. ಈ ವೇಳೆ ಹಲವರು ಅಪಘಾತಗಳಿಂದ ಮೃತಪಟ್ಟರೆ ಕೆಲವರು ಬಳಲಿಕೆಯಿಂದ ಮರಣಪಟ್ಟರೆನ್ನಲಾಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *