ಬೆಂಗಳೂರು: ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಸ್ವಪಕ್ಷ ಹಾಗೂ ಹಿಂದು ವಾಹಿನಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕೆ ಪಾಟೀಲ್ ಎಂಬುವವರು “ಸಚಿವರಿಗೆ ಕಾಮಗಾರಿ ಬಿಲ್ ಬಾಕಿ ಬಿಡುಗಡೆಗೆ ಕಮಿಷನ್ ನೀಡಬೇಕೆಂದು ಕೇಳುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪ ಮಾಡಿ ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ. ಆದ್ದರಿಂದ ಈ ಕೂಡಲೇ ಸಚಿವ ಈಶ್ವರಪ್ಪನವರು ರಾಜೀನಾಮೆ ನೀಡಬೇಕೆಂದು ವಿಧಾನ ಪರಿಷತ್ ವಿಪಕ್ಷ ನಾಯಕರಾದ ಬಿಕೆ ಹರಿಪ್ರಸಾದ್ ಒತ್ತಾಯಿದ್ದಾರೆ.
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿ ಕಾಮಗಾರಿಗೆ ಸಚಿವರಿಗೆ, ಶಾಸಕರಿಗೆ 40% ಕಮಿಷನ್ ನೀಡಬೇಕೆಂದು ಈಗಾಗಲೇ ಗುತ್ತಿಗೇದಾರರ ಸಂಘ ಗಂಭೀರವಾಗಿ ಆರೋಪಿಸಿ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಈಗ ಸ್ವತಃ ಬಿಜೆಪಿ ಕಾರ್ಯಕರ್ತರು, ಹಿಂದೂ ವಾಹಿನಿ ಪ್ರಧಾನ ಕಾರ್ಯದರ್ಶಿಗಳೇ ಸರ್ಕಾರ ಹಾಗೂ ಸಚಿವರ ವಿರುದ್ಧ ಪತ್ರ ಬರೆದಿರುವುದು ವಾಸ್ತವ ತೆರೆದಿಟ್ಟಂತಾಗಿದೆ.
ಪ್ರಧಾನಿ ಮೋದಿ ಅವರು ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನ 10% ಸರ್ಕಾರ ಎಂದು ಆರೋಪಿಸಿದ್ದರು. ಈಗ ಅವರದ್ದೇ ಸರ್ಕಾರದ ವಿರುದ್ಧ 40% ಕಮಿಷನ್ ಸರ್ಕಾರ ಎಂದು ಪತ್ರ ಬರೆಯಲಾಗಿದೆ ಇದರ ಬಗ್ಗೆ ಮೌನವಾಹಿಸಿದ್ದಾರೆ. ಸರ್ಕಾರದ ವಿರುದ್ಧ ಕಮಿಷನ್ ಆರೋಪಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸದನದಲ್ಲಿ ಕಮಿಷನ್ ದಂಧೆ ಬಗ್ಗೆ ಮಾತಾಡಲು ಅವಕಾಶವೇ ಮಾಡಿಕೊಡುತ್ತಿಲ್ಲ. ಸರ್ಕಾರ ಗಂಭೀರವಾಗಿಯೇ ಪರಿಗಣಿಸುತ್ತಿಲ್ಲ. ಈಶ್ವರಪ್ಪ ವಿರುದ್ಧ ಸ್ವಪಕ್ಷದವರಿಂದಲೇ ಆರೋಪ ಕೇಳಿ ಬಂದಿರುವುದರಿಂದ ಮಂತ್ರಿಮಂಡಲದಲ್ಲಿ ಮುಂದುವರೆಯಲು ಅರ್ಹರಲ್ಲ. ರಾಜೀನಾಮೆ ನೀಡಿ ಆರೋಪ ಮುಕ್ತರಾಗುವವರೆಗೂ ಮಂತ್ರಿ ಮಂಡಲದಲ್ಲಿ ಇರಬಾರದು ಎಂದು ಒತ್ತಾಯಿಸುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ತಿಳಿಸಿದ್ರು.