ಸರಕಾರ ದಲಿತರು ಜಾತಿ ದಮನದಿಂದಾಗಿ ಅನುಭವಿಸುತ್ತಲೇ ಇರುವ ಅಸಮಾನತೆ ಮತ್ತು ಅನ್ಯಾಯಗಳ ಕುರಿತಂತೆ ಒಂದು ವರದಿಯನ್ನು ಮಂಡಿಸಿ, ಮತ್ತು ಭಾರತೀಯ ಸಮಾಜದ ಈ ನಾಚಿಕೆಗೇಡಿನ ಸನ್ನಿವೇಶವನ್ನು ಬದಲಿಸಲು ಹಂತ-ಹಂತವಾಗಿ ಕೈಗೆತ್ತಿಕೊಳ್ಳಬಹುದಾದ ಕ್ರಮಗಳನ್ನು ಸೂಚಿಸಿದ್ದರೆ ಈ ಎರಡು ದಿನಗಳ ವಿಶೇಷ ಕಲಾಪ ಸಾರ್ಥಕವಾಗಬಹುದಿತ್ತು.
ಈ ಮೇಲಿನ ಯಾವುದನ್ನೂ ಕೈಗೆತ್ತಿಕೊಳ್ಳದೆ ಬಿಜೆಪಿ ಸರಕಾರ ಎರಡು ದಿನಗಳ ಕಲಾಪವನ್ನು ಯಾವುದೇ ಮೂರ್ತ ಸಾಧನೆಗಳಿಲ್ಲದ, ಕೇವಲ ಭಾಷಣಬಾಜಿಯ ಮತ್ತು ಡಂಬಾಚಾರದ ಗೌರವ ಸಲ್ಲಿಸುವ ಟೊಳ್ಳು ಕಲಾಪವಾಗಿ ಮಾಡಿ ಬಿಟ್ಟಿದೆ.
ಸಂಸತ್ತಿನ ಚಳಿಗಾಲದ ಅಧಿವೇಶನ ಡಾ. ಬಿ.ಆರ್.ಅಂಬೇಡ್ಕರ್ ಅವರ 125ನೇ ಜಯಂತಿ ಮತ್ತು ನವಂಬರ್ 26, 1949ರಂದು ಕರಡು ಸಂವಿಧಾನದ ಅಂಗೀಕಾರದ ಆಚರಣೆಗೆ ಎರಡು ದಿನಗಳ ವಿಶೇಷ ಕಲಾಪದೊಂದಿಗೆ ಆರಂಭವಾಗಿದೆ. ಸಾಮಾಜಿಕ ಸಮಾನತೆಯ ಪ್ರತಿಪಾದಕ ಮತ್ತು ಸಂವಿಧಾನದ ಪ್ರಮುಖ ಶಿಲ್ಪಿಗಳಲ್ಲಿ ಒಬ್ಬರಾದ ಡಾ.ಅಂಬೇಡ್ಕರ್ ಅವರ ಪರಂಪರೆಯನ್ನು ಸ್ಮರಿಸಿಕೊಳ್ಳಬೇಕು ಎಂಬುದರಲ್ಲಿ ಏನೂ ಸಂದೇಹವಿಲ್ಲ. ಆದರೆ ಅದನ್ನು ಹೇಗೆ ಮಾಡಬೇಕು ಎಂಬುದೇ ಇಲ್ಲಿರುವ ಪ್ರಶ್ನೆ.
ಸಿಪಿಐ(ಎಂ)ನ 21ನೇ ಮಹಾಧಿವೇಶನ ಈ ಜಯಂತಿ ಆಚರಣೆಗೆ ಸಂಬಂಧಪಟ್ಟಂತೆ ಅಂಗೀಕರಿಸಿದ ಒಂದು ನಿರ್ಣಯದಲ್ಲಿ ಭಾರತದಲ್ಲಿ ಪರಿಶಿಷ್ಟ ಜಾತಿಗಳ ಜನರ ಸ್ಥಾನಮಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಚರ್ಚಿಸಲು ಒಂದು ವಿಶೇಷ ಸಂಸತ್ತು ಅಧಿವೇಶನ ನಡೆಸಬೇಕು ಎಂದು ಕರೆ ನೀಡಿತ್ತು. ಈ ಅಧಿವೇಶನ ದಲಿತರ ಪ್ರಸಕ್ತ ಪರಿಸ್ಥಿತಿಗಳ ಆಳವಾದ ವಿಶ್ಲೇಷಣೆ ನಡೆಸಿ ಅವರ ಕೆಲವು ಸಮಸ್ಯೆಗಳ ಪರಿಹಾರಕ್ಕೆ ನಿರ್ದಿಷ್ಟ ಕ್ರಮಗಳನ್ನು ಅಂಗೀಕರಿಸಬಹುದಿತ್ತು.
ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಸಾರಿರುವ ಸಂವಿಧಾನವನ್ನು ಜಾರಿಗೊಳಿಸಿ 65 ವರ್ಷಗಳ ನಂತರವೂ ದಲಿತರ ಶೋಚನೀಯ ಪರಿಸ್ಥಿತಿಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ದಲಿತರು ಸಮಾಜದಲ್ಲಿ ವಿವಿಧ ರೀತಿಗಳ ಪಕ್ಷಪಾತವನ್ನು ಎದುರಿಸುತ್ತಲೇ ಇದ್ದಾರೆ. ಅಸ್ಪøಶ್ಯತೆ ವ್ಯಾಪಕವಾಗಿದೆ. ಹಲವು ಶಾಲೆಗಳಲ್ಲಿ ದಲಿತ ಮಕ್ಕಳನ್ನು ಪ್ರತ್ಯೇಕವಾಗಿ ಕೂರಿಸಲಾಗುತ್ತಿದೆ. ಜೋಧಪುರ ಸರಕಾರೀ ಶಾಲೆಯಲ್ಲಿ ಮೇಲ್ಜಾತಿ ವಿದ್ಯಾರ್ಥಿಗಳಿಗೆಂದು ಇಟ್ಟಿರುವ ತಟ್ಟೆಯನ್ನು ಮುಟ್ಟಿದನೆಂದು 12 ವರ್ಷದ ಬಾಲಕನನ್ನು ಶಾಲಾ ಶಿಕ್ಷಕ ಥಳಿಸಿದ ಘಟನೆ ಮತ್ತು ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ ಒಂದು ಶಾಲೆಯಲ್ಲಿ ದಲಿತ ಅಡುಗೆಯವರು ಬೇಯಿಸಿದ ಆಹಾರವನ್ನು ಬಹಿಷ್ಕರಿಸಿದ ಇನ್ನೊಂದು ಘಟನೆ ಅಸ್ಪøಶ್ಯತೆ ಮತ್ತು ವರ್ಣಬೇಧ ಹೇಗೆ ವ್ಯಾಪಕವಾಗಿ ಆಚರಣೆಯಲ್ಲಿವೆ ಎಂಬುದರ ಕಿರುನೋಟಗಳಷ್ಟೇ. ದಲಿತರು ತಮ್ಮ ಹಕ್ಕುಗಳನ್ನು ಎತ್ತಿ ಹಿಡಿಯಲು ಮುಂದಾದಾಗಲೆಲ್ಲ ಅತ್ಯಾಚಾರಗಳಿಗೆ ಒಳಗಾಗುತ್ತಲೇ ಇದ್ದಾರೆ. ಫರಿದಾಬಾದ್ ಜಿಲ್ಲೆಯಲ್ಲಿ ಇಬ್ಬರು ಮಕ್ಕಳನ್ನು ಸುಟ್ಟು ಹಾಕಿದ್ದು ಇಂತಹ ಅತ್ಯಾಚಾರಗಳ ತೀರ ಇತ್ತೀಚಿನ ಉದಾಹರಣೆ.
ಗ್ರಾಮೀಣ ಭಾರತದಲ್ಲಿ ದಲಿತ ವಿಭಾಗಗಳಲ್ಲಿ ಬಹಳಷ್ಟು ಏನೇನೂ ಆಸ್ತಿಯಿಲ್ಲದ ಭೂಹೀನ ಕಾರ್ಮಿಕರು. ಭರ್ತಿ ಮಾಡದ ಪರಿಶಿಷ್ಟ ಜಾತಿಗಳ ಮೀಸಲಾತಿ ಹುದ್ದೆಗಳ ಸಂಖ್ಯೆ ಅಪಾರವಾಗಿದೆ. ಹೆಚ್ಚುತ್ತಿರುವ ಖಾಸಗೀಕರಣದಿಂದಾಗಿ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ಅರ್ಥ ಕಳಕೊಳ್ಳುತ್ತಿದೆ. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ ವಿರುದ್ಧ ಅತ್ಯಾಚಾರಗಳ ತಡೆ ಕಾಯ್ದೆ ಅಥವ ದೈಹಿಕ ಮಲ ತೆಗೆಯುವ ಕಾಯ್ದೆ ಮುಂತಾದ ಕಾನೂನು ಕ್ರಮಗಳು ಕೂಡ ಸರಿಯಾಗಿ ಜಾರಿಯಾಗುತ್ತಿಲ್ಲ. ಪರಿಶಿಷ್ಟ ಜಾತಿಗಳು/ ಬುಡಕಟ್ಟುಗಳಿಗೆಂದು ನೀಡುವ ನಿಧಿಗಳನ್ನು ಬೇರೆ ಉದ್ದೇಶಗಳಿಗೆ ಬಳಸಲಾಗುತ್ತಿದೆ.
ಸಂಸತ್ತಿನ ವಿಶೇಷ ಅಧಿವೇಶನ ಈ ಎಲ್ಲ ವಿಷಯಗಳನ್ನು ಚರ್ಚಿಸಬೇಕಾಗಿತ್ತು, ದಲಿತರ ಮೂಲಭೂತ ಹಕ್ಕುಗಳು, ಅವರಿಗೆ ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಇತರ ಮೂಲ ಸೌಕರ್ಯಗಳನ್ನು ಲಭ್ಯಗೊಳಿಸಲು ಮೂರ್ತ ಕ್ರಮಗಳನ್ನು ನಿರ್ಧರಿಸಬೇಕಾಗಿತ್ತು.
ಆದರೆ ಬಿಜೆಪಿ ಸರಕಾರ ಚಳಿಗಾಲದ ಅಧಿವೇಶನದ ಮೊದಲ ಎರಡು ದಿನಗಳನ್ನು ಅಂಬೇಡ್ಕರ್ ಜಯಂತಿ ಆಚರಣೆಗೆ ಮೀಸಲಿಡಲು ನಿರ್ಧರಿಸಿತು. ಇಂತಹ ಸನ್ನಿವೇಶದಲ್ಲಿ ಸರಕಾರ ಡಾ.ಅಂಬೇಡ್ಕರ್ ಅವರ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಕಣ್ಣೋಟವನ್ನು ಮುಂದೊಯ್ಯುವ ಒಂದು ನಿರ್ದಿಷ್ಟ ಶಾಸನಾತ್ಯಕ ಅಜೆಂಡಾಕ್ಕಾದರೂ ಸಿದ್ಧತೆ ಮಾಡಿಕೊಂಡು ಬರಬೇಕಾಗಿತ್ತು. ಇದನ್ನು ಆರಂಭಿಸಲು ಮೂರು ಮಹತ್ವದ ಶಾಸನಗಳನ್ನು ಕೈಗೆತ್ತಿಕೊಳ್ಳಬಹುದಾಗಿತ್ತು.
ಇವುಗಳಲ್ಲಿ ಮೊದಲನೆಯದು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳಿಗೆ ಮೀಸಲಾತಿಯನ್ನು ಖಾಸಗೀ ವಲಯಕ್ಕೆ ವಿಸ್ತರಿಸುವ ಒಂದು ಶಾಸನದ ಅಂಗೀಕಾರ. ಇದು ಯುಪಿಎ ಸರಕಾರ ಅನುಸರಿಸಲು ವಿಫಲವಾದ ಈಡೇರದ ಒಂದು ಅಜೆಂಡಾ. ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಖಾಸಗೀ ವಲಯಕ್ಕೆ ವಿಸ್ತರಿಸಿದರೆ ಮಾತ್ರವೇ ಅರ್ಥಪೂರ್ಣವಾಗಲು ಸಾಧ್ಯ.
ಎರಡನೇ ಶಾಸನವೆಂದರೆ, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳು (ಅತ್ಯಾಚಾರಗಳ ತಡೆ) ಮಸೂದೆ, 2015. ಈಗಿರುವ ಕಾಯ್ದೆಯನ್ನು ಬಲಪಡಿಸುವುದು ಇದರ ಉದ್ದೇಶ. ಲೋಕಸಭೆ ಇದನ್ನು ಅಂಗೀಕರಿಸಿದ್ದು ಈಗ ರಾಜ್ಯಸಭೆಯ ಮುಂದಿದೆ. ಇದನ್ನು ತಕ್ಷಣವೇ ಅಂಗೀಕರಿಸಬಹುದು.
ಮೂರನೇಯದು, ಪರಿಶಿಷ್ಟ ಜಾತಿಗಳು/ಪರಿಶಿಷ್ಟ ಬುಡಕಟ್ಟುಗಳ ಉಪಯೋಜನೆಗೆ ಶಾಸನಾತ್ಮಕ ಸ್ಥಾನಮಾನ ಕೊಡುವ ಒಂದು ಕಾನೂನು. ಈ ಉಪಯೋಜನೆಗೆಂದು ಇಟ್ಟ ನಿಧಿಗಳನ್ನು ಬೇರೆ ಉದ್ದೇಶಗಳತ್ತ ತಿರುಗಿಸದಂತೆ ಮಾಡಲು ಇದು ಅಗತ್ಯ.
ಸರಕಾರ ದಲಿತರು ಜಾತಿ ದಮನದಿಂದಾಗಿ ಅನುಭವಿಸುತ್ತಲೇ ಇರುವ ಅಸಮಾನತೆ ಮತ್ತು ಅನ್ಯಾಯಗಳ ಕುರಿತಂತೆ ಒಂದು ವರದಿಯನ್ನು ಮಂಡಿಸಿ, ಮತ್ತು ಭಾರತೀಯ ಸಮಾಜದ ಈ ನಾಚಿಕೆಗೇಡಿನ ಸನ್ನಿವೇಶವನ್ನು ಬದಲಿಸಲು ಹಂತ-ಹಂತವಾಗಿ ಕೈಗೆತ್ತಿಕೊಳ್ಳಬಹುದಾದ ಕ್ರಮಗಳನ್ನು ಸೂಚಿಸಿದ್ದರೆ ಈ ಎರಡು ದಿನಗಳ ವಿಶೇಷ ಕಲಾಪ ಸಾರ್ಥಕವಾಗಬಹುದಿತ್ತು.
ಈ ಮೇಲಿನ ಯಾವುದನ್ನೂ ಕೈಗೆತ್ತಿಕೊಳ್ಳದೆ ಬಿಜೆಪಿ ಸರಕಾರ ಎರಡು ದಿನಗಳ ಕಲಾಪವನ್ನು ಯಾವುದೇ ಮೂರ್ತ ಸಾಧನೆಗಳಿಲ್ಲದ, ಕೇವಲ ಭಾಷಣಬಾಜಿಯ ಮತ್ತು ಡಂಬಾಚಾರದ ಗೌರವ ಸಲ್ಲಿಸುವ ಟೊಳ್ಳು ಕಲಾಪವಾಗಿ ಮಾಡಿ ಬಿಟ್ಟಿದೆ.
ಏಕೆ ಈ ‘ಮೊದಲ’ ಸಂವಿಧಾನ ದಿನ?
ಸಂವಿಧಾನವನ್ನು ಹಾಡಿ ಹೊಗಳುವಂತೆ ನಟಿಸುವ ಮೂಲಕ ವಾಸ್ತವವಾಗಿ ಅದರ ಮೇಲೆ ದಾಳಿ ಮಾಡುವುದೇ ಅವರ ಉದ್ದೇಶ. ಲೋಕಸಭೆಯಲ್ಲಿ ಗೃಹಮಂತ್ರಿಗಳ ಭಾಷಣ ಕೇಳಿದ ಮೇಲೆ ಇದು ಸ್ಪಷ್ಟವಾಗಿದೆ
-ಸೀತಾರಾಂ ಯೆಚುರಿ
65 ವರ್ಷಗಳ ನಂತರ ಬಿಜೆಪಿ ‘ಮೊದಲ’ ಸಂವಿಧಾನ ದಿನ ಎಂಬುದನ್ನು ನವಂಬರ್ 26 ರಂದು ಏಕೆ ಆಚರಿಸಿದೆ ಎಂಬುದು ಸ್ಪಷ್ಟವಾಗಿದೆ.
ಭಾರತೀಯ ಗಣತಂತ್ರದ ಜಾತ್ಯಾತೀತ ಪ್ರಜಾಸತ್ತಾತ್ಮಕ ಬುನಾದಿಯ ಮೇಲೆ ದಾಳಿ ಮಾಡಲೆಂದು ಮತ್ತು ಅಂಬೇಡ್ಕರ್ ಪರಂಪರೆಯನ್ನು ತಪ್ಪಾಗಿ ಚಿತ್ರಿಸಿ ಅದನ್ನು ತಮ್ಮ ವಶ ಮಾಡಿಕೊಳ್ಳಲಿಕ್ಕಾಗಿ ಮಾಡಲಾಗಿದೆ.
‘ಧರ್ಮನಿರಪೇಕ್ಷತೆ’ಎಂಬುದನ್ನು ಪ್ರಶ್ನಿಸಿ ಅದು ‘ಪಂಥ ನಿರಪೇಕ್ಷತೆ’ಏಕಾಗಬಾರದು ಎಂದು ಕೇಳಿರುವುದು ಭಾರತೀಯ ಜಾತ್ಯಾತೀತ ಪ್ರಜಾಪ್ರಭುತ್ವದ ಇತ್ಯರ್ಥಗೊಂಡಿರುವ ನೀತಿಗಳ ಮೇಲೆ ದಾಳಿ ಮಾಡಿದನ್ನು ಆರೆಸ್ಸೆಸ್ ವಿಚಾರದ ಹಿಂದೂ ರಾಷ್ಟ್ರವಾಗಿ ಪರಿವರ್ತಿಸಲಿಕ್ಕಾಗಿ ಎಂಬದು ಸ್ಪಷ್ಟ. ಇದು ಭಾರತೀಯ ಸ್ವಾತಂತ್ರ್ಯ ಹೋರಾಟ ಗಟ್ಟಿಯಾಗಿ ತಿರಸ್ಕರಿಸಿದ ವಿಚಾರ ಇದು, ಇಂದು ಕೂಡ ತಿರಸ್ಕರಿಸುತ್ತಿರುವ ವಿಚಾರ.
ಸಂವಿಧಾನ ಜಾರಿಗೊಂಡ ಗಣತಂತ್ರ ದಿನದ ಮೇಲೆ ಗಮನ ಕೇಂದ್ರೀಕರಿಸುವ ಬದಲು ಈ ದಿನವನ್ನು ಆಚರಿಸಲು ಪ್ರಯತ್ನಿಸುತ್ತಿರುವ ಉದ್ದೇಶ ಗೃಹ ಮಂತ್ರಿಗಳು ತನ್ನ ಉದ್ರೇಕಕಾರಿ ಭಾಷಣದ ಮೂಲಕ ಮಾಡಿರುವುದಕ್ಕಾಗಿಯೇ. ಅಂದರೆ ಆರೆಸ್ಸೆಸ್ ಗುರುಗಳನ್ನು ಮುಂದೊತ್ತುವುದು, ಹಳೆಯ, ಸೋತು ಹೋದ, ವಿಭಜನಕಾರೀ ವಿಚಾರಗಳನ್ನು ಎತ್ತಿ ರಾಷ್ಟ್ರದ ಶಕ್ತಿಯ ಅಪವ್ಯಯ ಮಾಡುವುದು ಮತ್ತು ಆಧುನಿಕ ಬಾರತದ ಜಾತ್ಯಾತೀತ ಪ್ರಜಾಸತ್ತಾತ್ಮಕ ಬುನಾದಿಯ ಮೇಲೆ ದಾಳಿ ಮಾಡುವುದು.
ಅವರು ಇದರಲ್ಲಿ ಯಶಸ್ವಿಯಾಗುವುದಿಲ್ಲ. ಬೆಲೆಯೇರಿಕೆ, ನಿರುದ್ಯೋಗ ಮತ್ತು ಕೃಷಿ ಸಂಕಟದ ನಿಜ ಪ್ರಶ್ನೆಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ಅವರ ಪ್ರಯತ್ನ ಯಶಸ್ವಿಯಾಗುವುದಿಲ್ಲ. ಸಂವಿಧಾನವನ್ನು ಹಾಡಿ ಹೊಗಳುವಂತೆ ನಟಿಸುವ ಮೂಲಕ ಅವರು ಧ್ರುವೀಕರಣ ನಡೆಸಲು ಏನೇ ಪ್ರಯತ್ನ ನಡೆಸಿದರೂ, ವಾಸ್ತವವಾಗಿ ಅವರು ಅದರ ಮೇಲೆ ದಾಳಿಯನ್ನೇ ಮಾಡುತ್ತಿದ್ದಾರೆ.