ಸಂವಿಧಾನವನ್ನು ರಕ್ಷಿಸೋಣ, ಭಾರತದ ಸ್ವಾತಂತ್ರ್ಯವನ್ನು ಗಟ್ಟಿಗೊಳಿಸೋಣ : ಪ್ರತಿಜ್ಞೆ ಸ್ವೀಕಾರ

 

  • ಪ್ರತಿಜ್ಞೆ ಸ್ವೀಕರಿಸಿ ಸಿಪಿಐಎಂ ಸ್ವಾತಂತ್ರ್ಯ ದಿನಾಚರಣೆ

 

ಬೆಂಗಳೂರು: ನಮ್ಮ ಸಂವಿಧಾನವನ್ನು ಸುರಕ್ಷಿತಗೊಳಿಸುತ್ತೇವೆ ಮತ್ತು ಭಾರತದ ಸ್ವಾತಂತ್ರ್ಯವನ್ನು ಗಟ್ಟಿಗೊಳಿಸುತ್ತೇವೆ ಎಂದು ಪ್ರತಿಜ್ಞೆ ತೆಗೆದುಕೊಳ್ಳುವುದರ ಮೂಲಕ ಸಿಪಿಐಎಂ ಕಾರ್ಯಕರ್ತರು ಸ್ವಾತಂತ್ರ್ಯ ದಿನ ಆಚರಿಸಿದರು. 

ಬೆಂಗಳೂರಿನ ಸಿಪಿಐಎಂ ಕಚೇರಿಯಲ್ಲಿ ನಡೆದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರಾಜ್ಯ ಮುಖಂಡ ಕೆ.ಎನ್ ಉಮೇಶ್,  ಕೋವಿಡ್‍-19 ಸೋಂಕು ಮತ್ತು ಲಾಕ್ ಡೌನ್ ಕಾರಣದಿಂದ ದೇಶ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಜನಗಳಿಗೆ ಪರಿಹಾರ ಒದಗಿರುವುದರ ಬದಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಆರೆಸ್ಸೆಸ್‍ ಆದೇಶದಂತೆ ಭಾರತೀಯ ಸಂವಿಧಾನದ ಮೂಲತತ್ವಗಳನ್ನೇ ಆಕ್ರಮಣಕಾರಿಯಾಗಿ ಶಿಥಿಲಗೊಳಿಸುತ್ತಿದೆ. ಇದರ ಜೊತೆಗೆ ತೀವ್ರ ಕೋಮುಧ್ರುವೀಕರಣವನ್ನು ಹೆಚ್ಚಿಸಲು ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಆಕ್ರಮಣಗಳನ್ನು ಹೆಚ್ಚಾಗುತ್ತಿವೆ ಎಂದು ದೂರಿದರು.

ಸ್ವಾತಂತ್ರ್ಯ ಸಿಕ್ಕು 73 ವರ್ಷ ಕಳೆದು 74ನೇ ವರ್ಷದ ಆಚರಣೆ ಮಾಡುತ್ತಿದ್ದರೂ ನಮ್ಮ ದೇಶದಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯದ ಮೇಲೆ ತ್ರೀವ್ರ ದಾಳಿ ನಡೆಸಲಾಗುತ್ತಿದೆ. ಹಂತ ಹಂತವಾಗಿಯೇ ನಮ್ಮ ಹಕ್ಕುಗಳನ್ನು ದಮನ ಮಾಡಿಕೊಳ್ಳುತ್ತಾ ಬರಲಾಗುತ್ತಿದೆ. ಬಿಜೆಪಿ  ನೇತೃತ್ವದ ಸರಕಾರಗಳ  ಧೋರಣೆಗಳ ವಿರುದ್ಧ ಯಾವುದೇ ಭಿನ್ನಮತವನ್ನು  ವ್ಯಕ್ತಗೊಳಿಸಿದರೆ ಅದನ್ನು ‘ರಾಷ್ಟ್ರ-ವಿರೋಧಿ’ ಎಂದು ಹೇಳಲಾಗುತ್ತಿದೆ.  ಜನರು, ಕಾರ್ಯಕರ್ತರು ಹಾಗೂ ಚಿಂತಕರನ್ನು ಯುಎಪಿಎ , ರಾಜದ್ರೋಹ ಮುಂತಾದ ಕರಾಳ ಕಾಯ್ದೆಗಳಡಿಯಲ್ಲಿ ಶಿಕ್ಷಿಸಲಾಗುತ್ತಿದೆ. ಸಂವಿಧಾನದ ಒಂದು ಮೂಲ ಲಕ್ಷಣವಾದ ಒಕ್ಕೂಟ ತತ್ವದ ಸೂತ್ರಗಳ ನಿರಾಕರಣೆ ಮಾಡಿ ಎಲ್ಲ ಅಧಿಕಾರಗಳನ್ನು ಕೇಂದ್ರೀಕರಿಸುವ ಒಂದು ಪ್ರಯತ್ನ ನಡೆಯುತ್ತಿದೆ ಎಂದರು.

ಭಾರತ ತನ್ನ ವಿದೇಶಾಂಗ ಧೋರಣೆಯ ದಿಕ್ಕನ್ನು ಸರಿಪಡಿಸಿಕೊಳ್ಳಬೇಕು. ಅಮೆರಿಕಕ್ಕೆ ಮತ್ತು ಅಮೆರಿಕ-ಇಸ್ರೇಲ್ ಕೂಟಕ್ಕೆ ಅಡಿಯಾಳಾಗುವ ವಿದೇಶಾಂಗ ಧೋರಣೆ ಭಾರತದ ಸಾರ್ವಭೌಮತ್ವವನ್ನು ಶಿಥಿಲಗೊಳಿಸುತ್ತದೆ ಮತ್ತು ಅದು ಭಾರತದ ಸ್ವಾವಲಂಬನೆಯ, ‘ಆತ್ಮನಿರ್ಭರ್ ಭಾರತ್’ನ ನಿರಾಕರಣೆಯಾಗುತ್ತದೆ.

ಈ ದೇಶದ ಪ್ರಧಾನಿಗಳು ಆತ್ಮನಿರ್ಭರ್ ಭಾರತ ಅಂದರೆ ಸ್ವಾವಲಂಬನೆ ಭಾರತ ಎಂದು ಹೇಳುತ್ತಲೇ ಇದ್ದಾರೆ. ಆದರೆ ಇರುವ ಹಕ್ಕುಗಳನ್ನು ಶಿಥಿಲಗೊಳಿಸಲಾಗುತ್ತದೆ. ಅಲ್ಲದೆ ಹಲವಾರು ಕಾಯ್ದೆಗಳ ತಿದ್ದುಪಡಿ ಆಗುತ್ತಲೆ ಇವೆ. ಊದಾಹರಣೆ ಎನ್ ಆರ್ ಸಿ, ಎನ್ ಪಿಆರ್, ಸಿಎಎ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ವಿದ್ಯುತ್ ಕಾಯ್ದೆ ತಿದ್ದುಪಡಿ ಹೀಗೆ ಕ್ರಮವಾಗಿ ನಮ್ಮ ಹಕ್ಕು ಮತ್ತು ಸ್ವಾತಂತ್ರ್ಯದ ಮೇಲೆ ದಾಳಿಯಾಗುತ್ತಲೇ ಇವೆ. ನೆರೆ ಹಾವಳಿ, ಪ್ರವಾಸ, ಕೊರೊನಾದಂತಹ ಸಂಕಷ್ಟದಲ್ಲೂ ಸರಕಾರ ಪರಿಹಾರವನ್ನು ನೀಡಿ ಅವರ ಜೊತೆ ನಿಲ್ಲಬೇಕಿತ್ತು. ಆದರೆ ಇಂದು ಆಪರೇಷನ್ ಕಮಲ, ಭೂಮಿ ಪೂಜೆ, ಪಕ್ಷದ ವರ್ಷಾಚರಣೆ ಹೀಗೆ ಸಂಭ್ರಮದಲ್ಲಿ ಮುಳುಗಿದೆ. ಈ ದೇಶದ ಬೆನ್ನೆಲುಬು ಎಂದು ಕರೆಸಿಕೊಳ್ಳುವ ರೈತರಿಗೆ ಭೂ ಸುಧಾರಣೆ ಕಾಯ್ದೆಯಂತಹ ತಿದ್ದುಪಡಿ ತಂದು ಮತ್ತಷ್ಟು ಅವರ ಬದುಕನ್ನು ಬೀದಿಗಿಳಿಸುತ್ತಿದೆ. ಈ ದೇಶವನ್ನು ಕಟ್ಟಿ ಬೆಳೆಸಿದ ಹೋರಾಟಗಾರರು, ಮಹಿಳೆಯರು, ದಲಿತರು, ತಳಸಮುದಾಯವರಿಗೆ ಯಾವುದೇ ರಕ್ಷಣೆ ಇಲ್ಲದಂತಾಗಿದೆ.  ಇಂತಹ ಸನ್ನಿವೇಶದಲ್ಲಿ ನಾವು ನಮ್ಮ  ಭಾರತದ ಸ್ವಾತಂತ್ರ್ಯವನ್ನು ಗಟ್ಟಿಗೊಳ್ಳಿಸೋಣ, ನಮ್ಮ ಸಂವಿಧಾನವನ್ನು ರಕ್ಷಿಸೋಣ ಎಂದು ಹೇಳಿದರು.

ಸ್ವಾಂತ್ರ್ಯ ದಿನಾಚರಣೆ ಅಂಗವಾಗಿ ಸಿಪಿಐಎಂನಿಂದ ಹಲವೆಡೆ ಧ್ವಜಾರೋಹಣವನ್ನು ಮಾಡುವುದರ ಮೂಲಕ “ಸಂವಿಧಾನವನ್ನು ರಕ್ಷಿಸೋಣ, ಭಾರತದ ಸ್ವಾತಂತ್ರ್ಯವನ್ನು ಗಟ್ಟಿಗೊಳಿಸೋಣ” ಎಂದು ಪ್ರತಿಜ್ಞೆ ಸ್ವೀಕಾರ ಮಾಡಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *