- ಮಾಲ್ಡೀವ್ಸ್‌ಗೆ ಪಲಾಯನ ಮಾಡಿದ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ
- ಮಾಲೆ ವಿಮಾನ ನಿಲ್ದಾಣದಿಂದ ರಹಸ್ಯ ಸ್ಥಳಕ್ಕೆ ಅಧ್ಯಕ್ಷ ಗೊಟಬಯ ಸ್ಥಳಾಂತರ
- ಸೇನಾ ವಿಮಾನದಲ್ಲಿ ಗೊಟಬಯ ಪತ್ನಿ, ಇಬ್ಬರು ಅಂಗರಕ್ಷಕರು ಮಾಲ್ಡೀವ್ಸ್‌ಗೆ
ಕೊಲಂಬೋ: ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದ ಜನರ ಆಕ್ರೋಶಕ್ಕೆ ತುತ್ತಾಗಿರುವ ಅಧ್ಯಕ್ಷ ಗೊಟಬಯ ರಾಜಪಕ್ಸ, ಬುಧವಾರ ಮುಂಜಾನೆ ಕುಟುಂಬ ಸಮೇತ ದೇಶ ಬಿಟ್ಟು ಮಾಲ್ಡೀವ್ಸ್‌ಗೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಅಧ್ಯಕ್ಷ ಗೊಟಬಯ, ಅವರ ಪತ್ನಿ ಮತ್ತು ಇಬ್ಬರು ಅಂಗರಕ್ಷಕರು ಕೊಲಂಬೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳವಾರ ರಾತ್ರಿ ಸೇನಾ ವಿಮಾನ ಏರಿ ಮಾಲೆಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರಂತೆಯೇ ದುಬೈಗೆ ಪಲಾಯನ ಮಾಡಲು ಪ್ರಯತ್ನಿಸಿದ್ದ ಅವರ ಸಹೋದರ ಮತ್ತು ಮಾಜಿ ಸಚಿವ ಬಸಿಲ್ ರಾಜಪಕ್ಸ್ ಕೂಡ ದೇಶ ತೊರೆದಿದ್ದಾರೆ ಎನ್ನಲಾಗಿದೆ.
ರಾಜಪಕ್ಸ ಅವರು ಅಧ್ಯಕ್ಷರಾಗಿ ಇರುವ ಅವಧಿಯವರೆಗೂ ಶ್ರೀಲಂಕಾ ರಕ್ಷಣಾ ಪಡೆಗಳ ಸರ್ವೋಚ್ಛ ಕಮಾಂಡರ್ ಆಗಿರುತ್ತಾರೆ. ಹೀಗಾಗಿ ಅವರ ಮನವಿಯಂತೆ ಕಳೆದ ರಾತ್ರಿ ವಿಮಾನ ವ್ಯವಸ್ಥೆ ಮಾಡಲಾಗಿತ್ತು. ಅಧ್ಯಕ್ಷರ ಸೂಚನೆಯನ್ನು ಪಾಲಿಸುವುದು ತಮ್ಮ ಕರ್ತವ್ಯವಾಗಿತ್ತು ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಗೊಟಬಯ ಮತ್ತು ಅವರ ಸಹೋದರ ಬಸಿಲ್ ರಾಜಪಕ್ಸ ಅವರು ಲಂಕಾದಿಂದ ಪರಾರಿಯಾಗಲು ಭಾರತ ಸಹಾಯ ಮಾಡಿದೆ ಎಂಬ ವರದಿಗಳನ್ನು ಶ್ರೀಲಂಕಾದಲ್ಲಿನ ಭಾರತೀಯ ಹೈ ಕಮಿಷನ್ ತಿರಸ್ಕರಿಸಿದೆ. “ಗೊಟಬಯ ರಾಜಪಕ್ಸ, ಬಸಿಲ್ ರಾಜಪಕ್ಸ ಅವರು ಶ್ರೀಲಂಕಾದಿಂದ ಹೊರಗೆ ಹೋಗಿದ್ದಾರೆ ಎಂದು ಇತ್ತೀಚೆಗೆ ವರದಿಯಾದ ಪ್ರಯಾಣಕ್ಕೆ ಭಾರತ ಅನುಕೂಲ ಮಾಡಿಕೊಟ್ಟಿದೆ ಎಂಬ ಮಾಧ್ಯಮಗಳ ಆಧಾರರಹಿತ ಮತ್ತು ಊಹಾತ್ಮಕ ವರದಿಗಳನ್ನು ಹೈ ಕಮಿಷನ್ ನಿರ್ದಿಷ್ಟವಾಗಿ ತಿರಸ್ಕರಿಸುತ್ತದೆ. ಭಾರತವು ಶ್ರೀಲಂಕಾದ ಜನತೆಗೆ ತನ್ನ ಸಹಾಯವನ್ನು ಮುಂದುವರಿಸುತ್ತದೆ ಎಂದು ಪುನರುಚ್ಚರಿಸುತ್ತದೆ” ಎಂಬುದಾಗಿ ಟ್ವೀಟ್ ಮಾಡಿದೆ.
ಗೊಟಬಯ ರಾಜಪಕ್ಸ ಜುಲೈ 13ರಂದು ರಾಜೀನಾಮೆ ನೀಡಲಿದ್ದಾರೆ ಎಂದು ಸ್ಪೀಕರ್ ಮಹಿಂದಾ ಯಪಾ ಅಬೆವರ್ಧನ ತಿಳಿಸಿದ್ದರು. ಆದರೆ ಅದಕ್ಕೂ ಮೊದಲೇ ರಾಜಪಕ್ಸ ದೇಶ ತೊರೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಶ್ರೀಲಂಕಾದ ಸಂಸತ್, ಜುಲೈ 20ರಂದು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಿದೆ. ಈಗಾಗಲೇ ಈ ಕುರಿತ ಸಿದ್ಧತೆಗಳು ಆರಂಭವಾಗಿದೆ ಎಂದು ವರದಿಯಾಗಿದೆ.