ಶಿಕ್ಷಕ ಮಿತ್ರ’ ಆ್ಯಪ್‌ ಬಿಡುಗಡೆ

 

ಸಾರ್ವತ್ರಿಕ ವರ್ಗಾವಣೆ ಅರ್ಜಿ ಸಲ್ಲಿಕೆಯೂ ಸೇರಿದಂತೆ ಎಲ್ಲ ಕಾರ್ಯಗಳಿಗೂ ಒಂದೇ ವೇದಿಕೆ

 

ಬೆಂಗಳೂರು: ಶಿಕ್ಷಣ ಇಲಾಖೆಯ ‘ಶಿಕ್ಷಕ ಮಿತ್ರ’ ಆ್ಯಪ್‌ ಅನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶುಕ್ರವಾರ ಬಿಡುಗಡೆ ಮಾಡಿದ್ದು, ಸಾರ್ವತ್ರಿಕ ವರ್ಗಾವಣೆ ಅರ್ಜಿ ಸಲ್ಲಿಕೆಯೂ ಸೇರಿದಂತೆ ಎಲ್ಲ ಕಾರ್ಯಗಳನ್ನೂ ಇದರ ಮೂಲಕವೇ ನಿರ್ವಹಿಸಬಹುದು.

ಶಿಕ್ಷಕರು ತಮ್ಮ ಕೆಲಸಗಳಿಗಾಗಿ ಶಾಲೆಗಳಿಗೆ ರಜೆ ಹಾಕಿ ಇಲಾಖೆಯ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಶಿಕ್ಷಕರುಗಳಿಗೆ ಅನುಕೂಲವಾಗುವಂತೆ 2019-20ರ ಆಯವ್ಯಯದಲ್ಲಿ ಪ್ರಕಟಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ತಂತ್ರಜ್ಞಾನಾಧಾರಿತ ಶಿಕ್ಷಕ ಮಿತ್ರ-ಆಪ್ ತಯಾರಿಸಿದೆ ಎಂದು ಯಡಿಯೂರಪ್ಪ ಹೇಳಿದರು.

ಶಿಕ್ಷಕರು ಮೊಬೈಲ್‍ನಲ್ಲಿ ಈ ಆ್ಯಪ್‌ ಅನ್ನು ಡೌನ್‍ಲೋಡ್ ಮಾಡಿಕೊಂಡು ತಾವು ಕುಳಿತಲ್ಲೇ ತಮ್ಮ ಸೇವಾ ವಿಷಯಗಳನ್ನು, ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಅಲ್ಲದೆ,ನಿರ್ದಿಷ್ಟ ಸಮಸ್ಯೆಗಳನ್ನು ಇಂತಿಷ್ಟು ದಿನಗಳಲ್ಲಿ ಬಗೆಹರಿಸುವ ಬಗ್ಗೆ ಕಾಲಾವಧಿಯನ್ನೂ ನಿರ್ಧರಿಸಲಾಗಿದೆ ಎಂದರು.

ವಿದ್ಯವಿನೀತ ಪುಸ್ತಕವನ್ನು ಸಿಎಂ ಯಡಿಯೂರಪ್ಪ ಬಿಡುಗಡೆ ಮಾಡಿದರು.

ಶಿಕ್ಷಣ ಸಚಿವ  ಸುರೇಶ್ ಕುಮಾರ್ ಅವರ ಕುರಿತು ನಾಡಿನ ಹಲವಾರು ಲೇಖಕರು ಬರೆದಿರುವ ವಿಮರ್ಶಾ ಕೃತಿ ‘ವಿದ್ಯಾವಿನೀತ’. ಈ ಪುಸ್ತಕದ ಹೆಸರು ಅವರ ವ್ಯಕ್ತಿತ್ವ, ಸ್ವಭಾವಕ್ಕೆ ಕನ್ನಡಿ ಹಿಡಿದಂತಿದೆ. ಇದು ಅವರ ಗುಣಸ್ವಭಾವಕ್ಕೆ ಅನ್ವರ್ಥವಾಗಿದೆ ಎಂದು ಮುಖ್ಯಮಂತ್ರಿಯವರು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಕ್ಷಣ ಇಲಾಖೆಯನ್ನು ಒಂದು ಚೌಕಟ್ಟಿಗೆ ಒಳಪಡಿಸಿ ಶಿಕ್ಷಕ ಸ್ನೇಹಿ, ಶಿಕ್ಷಣ ಸ್ನೇಹಿ ಮತ್ತು ವಿದ್ಯಾರ್ಥಿ ಸ್ನೇಹಿಯಾಗಿ ಕೆಲಸ ಮಾಡಿ ಜನಪ್ರಿಯರಾಗಿದ್ದಾರೆ. ಶಿಕ್ಷಕರ ವರ್ಗಾವಣೆ ನೀತಿಯನ್ನು ಸರಳೀಕರಣಗೊಳಿಸಿ ಶಿಕ್ಷಕರಿಗೆ ನೆಮ್ಮದಿ ತಂದಿದ್ದಾರೆ. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳನ್ನು ಕೋವಿಡ್ ವಿಷಮ ಕಾಲಘಟ್ಟದಲ್ಲಿಯೂ ಯಶಸ್ವಿಯಾಗಿ ನಡೆಸಿದ್ದಾರೆ ಎಂದೂ ಯಡಿಯೂರಪ್ಪ ಹೇಳಿದರು.

ಶಿಕ್ಷಣ ಸಚಿವರಾದ ನಂತರ ಇಲಾಖೆಯ ಕುರಿತು ಆಯಾ ಸಂದರ್ಭದಲ್ಲಿ ತಾವು ನಾಡಿನ ವಿವಿಧ ಪತ್ರಿಕೆಗಳಿಗೆ ಬರೆದ ಲೇಖನಗಳ ಸಂಗ್ರಹ ಶಿಕ್ಷಣ ಯಾತ್ರೆ ಪುಸ್ತಕದ ಲೇಖನಗಳು ಶಿಕ್ಷಕರಿಗೆ, ಪೋಷಕರಿಗೆ, ನಾಡಿನ ಜನರಿಗೆ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿವೆ.

ಒಬ್ಬ ಸಚಿವರು ಹೇಗೆ ಜನಮುಖಿಯಾಗಿ ಕೆಲಸ ಮಾಡಬಹುದೆಂಬುದಕ್ಕೆ ಸುರೇಶ್ ಕುಮಾರ್ ಮಾದರಿಯಾಗಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವ ಎಸ್‌.ಸುರೇಶ್‌ಕುಮಾರ್ ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *