ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರೋಧಿಸಿ ಕಳೆದ ವರ್ಷ ಶಹೀನ್ ಬಾಗ್ ಪ್ರದೇಶದಲ್ಲಿ ನಡೆದ ದೀರ್ಘಕಾಲದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರ ವಿರುದ್ಧ ಗುಂಡು ಹಾರಿಸಿದ್ದ 25 ವರ್ಷದ ಕಪಿಲ್ ಗುಜ್ಜರ್ ಇಂದು (ಬುಧವಾರ) ಬಿಜೆಪಿಗೆ ಸೇರ್ಪಡೆಯಾಗಿದ್ದಾನೆ. ಉತ್ತರಪ್ರದೇಶದ ಘಾಜಿಯಾಬಾದ್‌ನಲ್ಲಿ ಸ್ಥಳೀಯ ನಾಯಕರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪೂರ್ವ ದಿಲ್ಲಿಯ ದಲ್ಲುಪುರ ಪ್ರದೇಶ ನಿವಾಸಿಯಾದ ಕಪಿಲ್, ಬಿಜೆಪಿ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿ, “ಹಿಂದುತ್ವದ ಬಲವರ್ಧನೆಗಾಗಿ ಬಿಜೆಪಿ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಪಕ್ಷ ಇರಿಸುವ ಪ್ರತಿ ಹೆಜ್ಜೆಗೂ ಬೆಂಬಲ ನೀಡುತ್ತೇನೆ,” ಎಂದಿದ್ದಾನೆ.
ಗುಜ್ಜರ್ ದಿಲ್ಲಿಯ ಆಮ್ ಆದ್ಮ ಪಕ್ಷದ ಕಾರ್ಯಕರ್ತನಾಗಿದ್ದಾನೆ ಎಂದು ದಿಲ್ಲಿ ಪೊಲೀಸರು ಈ ಹಿಂದೆ ಹೇಳಿದ್ದರು.
ಈ ದೇಶದಲ್ಲಿ ಹಿಂದೂಗಳು ಮಾತ್ರ ಅಳುತ್ತಾರೆ ಎಂದು ಕೂಗಾಡಿದ್ದ ಗುಜ್ಜರ್ ಸಿವಿವಿ ವಿರುದ್ಧ ಪ್ರತಿಭಟನೆ
ನಡೆಸುತ್ತಿದ್ದವರ ಮೇಲೆ ಹಲವು ಸುತ್ತಿನ ಬುಲೇಟ್ ಗಳನ್ನು ಹಾರಿಸಿದ್ದ. ಈತನನ್ನು ದಿಲ್ಲಿ ಪೊಲೀಸರು
ಫೆಬ್ರವರಿಯಲ್ಲಿ ಬಂಧಿಸಿದ್ದರು.
ಕಳೆದ ವರ್ಷ ಫೆಬ್ರವರಿ 1ರಂದು ಶಹೀನ್ ಬಾಗ್‌ನಲ್ಲಿ ಪ್ರತಿಭಟನಾನಿರತ ಮಹಿಳೆಯರ ವಿರುದ್ಧ ಕಿಡಿಕಾರಿದ್ದ ಕಪಿಲ್ ಗುಜ್ಜರ್, ಪ್ರತಿಭಟನಾ ಸ್ಥಳಕ್ಕೆ ತೆರಳಿ ಗಾಳಿಯಲ್ಲಿ ಗುಂಡಿ ಹಾರಿಸಿ ಬೆದರಿಕೆ ಒಡ್ಡಿದ್ದ. ನಂತರದ ದಿನಗಳಲ್ಲಿ ಆತ ಎಎಪಿ ಕಾರ್ಯಕರ್ತ ಎಂಬ ಆರೋಪ ಕೇಳಿ ಬಂದಿತ್ತು. ಆತನ ಫೋನ್‌ನಲ್ಲಿ ಸಿಕ್ಕಿದ ಫೋಟೋದಲ್ಲಿ ಕಪಿಲ್ ಗುಜ್ಜಾರ್ ಎಎಪಿ ನಾಯಕರಾದ ಸಂಜಯ್ ಸಿಂಗ್ ಹಾಗೂ ಆತಿಶಿ ಜೊತೆ ಕಾಣಿಸಿಕೊಂಡಿದ್ದ. ಇದನ್ನೇ ಇಟ್ಟುಕೊಂಡು ಬಿಜೆಪಿ ಎಎಪಿ ವಿರುದ್ಧ ಮುಗಿಬಿದ್ದಿತ್ತು.
ಆದರೆ ಎಎಪಿ ಮತ್ತು ಗುಜ್ಜರ್ ಕುಟುಂಬ ಬಿಜೆಪಿ ವಾದವನ್ನು ತಳ್ಳಿ ಹಾಕಿತ್ತು. ಆ ಸಂದರ್ಭದಲ್ಲಿ ಗುಜ್ಜರ್ ಕುಟುಂಬ, 2012ರಲ್ಲಿ ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗುಜ್ಜರ್ ತಂದೆ ಬಹುಜನ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದರು. ಆದರೆ ಯಾವತ್ತೂ ಎಎಪಿ ಜತೆ ನಂಟು ಹೊಂದಿರಲಿಲ್ಲ ಎಂದು ಹೇಳಿತ್ತು. ಈಗ ಕಪಿಲ್ ಗುಜ್ಜರ್ ಬಿಜೆಪಿ ಸೇರುವ ಮೂಲಕ ಎಲ್ಲ ವಿವಾದಗಳಿಗೆ ತೆರೆ ಎಳೆದಿದ್ದಾರೆ.