ಶಸ್ತ್ರಾಸ್ತ್ರ ಕಾರ್ಖಾನೆ ಮಂಡಳಿ ರದ್ದು

  • ನೌಕರರನ್ನು ಇತರೆ ಘಟಕಗಳಿಗೆ ವರ್ಗಾಯಿಸಿದ ರಕ್ಷಣಾ ಸಚಿವಾಲಯ

 

ನವದೆಹಲಿ: ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ರಕ್ಷಣಾ ಸಚಿವಾಲಯವು ಆರ್ಡನೆನ್ಸ್ ಫ್ಯಾಕ್ಟರಿ ಬೋರ್ಡ್ (OFB) ವನ್ನು ರದ್ದುಪಡಿಸಿದ್ದು, ಮತ್ತು ಅಲ್ಲಿದ್ದ ಆಸ್ತಿ, ಉದ್ಯೋಗಿಗಳು ಮತ್ತು ನಿರ್ವಹಣೆಯನ್ನು ಏಳು ಸಾರ್ವಜನಿಕ ವಲಯದ ಘಟಕಗಳಿಗೆ (PSU) ವರ್ಗಾಯಿಸಿದೆ.

“ಆತ್ಮನಿರ್ಭರ ಭಾರತ್” (ಸ್ವಾವಲಂಬಿ ಭಾರತ) ಯೋಜನೆಯ ಭಾಗವಾಗಿ, ಕೇಂದ್ರ ಸರ್ಕಾರ ಕಳೆದ ವರ್ಷ ಮೇ 16 ರಂದು ಒಎಫ್‌ಬಿಯ ಕಾರ್ಪೊರೇಟೈಸೇಶನ್ ಮೂಲಕ ಸ್ವಾಯತ್ತತೆ, ಹೊಣೆಗಾರಿಕೆ ಮತ್ತು ಯುದ್ಧ ಸಾಮಗ್ರಿಗಳ ದಕ್ಷತೆಯನ್ನು ಸುಧಾರಿಸುವುದಾಗಿ ಘೋಷಿಸಿತ್ತು.
ಸೆಪ್ಟೆಂಬರ್ 28 ರ ಆದೇಶದಲ್ಲಿ ರಕ್ಷಣಾ ಸಚಿವಾಲಯವು, “ಭಾರತ ಸರ್ಕಾರವು ಅಕ್ಟೋಬರ್ 1, 2021 ರಿಂದ ಅನ್ವಯವಾಗುವಂತೆ, ಈ 41 ಉತ್ಪಾದನಾ ಘಟಕಗಳ ನಿರ್ವಹಣೆ, ನಿಯಂತ್ರಣ, ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಮತ್ತು ಗುರುತಿಸಲಾಗಿರುವ ಉತ್ಪಾದನೆಯಲ್ಲದ ಘಟಕಗಳನ್ನು ಏಳು ಸರ್ಕಾರಿ ಕಂಪೆನಿಗಳಿಗೆ ವರ್ಗಾಯಿಸುತ್ತದೆ ಎಂದು ಹೇಳಿದೆ.

ಆದೇಶದ ಪ್ರಕಾರ, ಏಳು ರಕ್ಷಣಾ ಸಾರ್ವಜನಿಕ ವಲಯದ ಘಟಕಗಳಾದ ಮುನಿಷನ್ ಇಂಡಿಯಾ ಲಿಮಿಟೆಡ್, ಆರ್ಮಡ್‌ ವೆಹಿಕಲ್ಸ್ ನಿಗಮ್ ಲಿಮಿಟೆಡ್, ಅಡ್ವಾನ್ಸ್ಡ್ ವೆಪನ್ಸ್ ಅಂಡ್ ಇಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್, ಟ್ರೂಪ್ ಕಂಫರ್ಟ್ಸ್ ಲಿಮಿಟೆಡ್, ಯಂತ್ರ ಇಂಡಿಯಾ ಲಿಮಿಟೆಡ್, ಇಂಡಿಯಾ ಆಪ್ಟೆಲ್ ಲಿಮಿಟೆಡ್ ಮತ್ತು ಗ್ಲೈಡರ್ಸ್ ಇಂಡಿಯಾ ಲಿಮಿಟೆಡ್ ಗಳಿಗೆ ವರ್ಗಾಯಿಸಲಾಗುತ್ತದೆ.

ಒಎಫ್‌ಬಿ, ಪ್ರಸ್ತುತ ರಕ್ಷಣಾ ಸಚಿವಾಲಯದ ಘಟಕವಾಗಿದ್ದು, ಮೂರು ಸಶಸ್ತ್ರ ಪಡೆಗಳು ಮತ್ತು ಸೇನಾಪಡೆಗಳಿಗೆ ನಿರ್ಣಾಯಕ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪೂರೈಸುತ್ತದೆ.
ಉತ್ಪಾದನಾ ಘಟಕಗಳಿಗೆ ಸೇರಿದ ಒಎಫ್‌ಬಿ (ಗುಂಪು ಎ, ಬಿ ಮತ್ತು ಸಿ)ನ ಎಲ್ಲ ಉದ್ಯೋಗಿಗಳನ್ನು ಮತ್ತು ಗುರುತಿಸಲಾಗಿರುವ ಉತ್ಪಾದನೇತರ ಘಟಕಗಳನ್ನು ಯಾವುದೇ ನಿಯೋಜನೆ ಭತ್ಯೆಯಿಲ್ಲದೆ ವಿದೇಶಿ ಸೇವೆಯ ನಿಯಮಗಳ ಮೇಲೆ ಹೊಸ ಸಾರ್ವಜನಿಕ ವಲಯ ಘಟಕಗಳಿಗೆ ಸಾಮೂಹಿಕವಾಗಿ ವರ್ಗಾಯಿಸಲು ಸರ್ಕಾರ ನಿರ್ಧರಿಸಿದೆ. ಅಕ್ಟೋಬರ್ 1ರಿಂದ ಎರಡು ವರ್ಷಗಳ ಅವಧಿಗೆ ಇದು ಅನ್ವಯವಾಗುತ್ತದೆ.

ಪ್ರತಿ ಹೊಸ ರಕ್ಷಣಾ ಸಾರ್ವಜನಿಕ ವಲಯ ಘಟಕಗಳ ಉದ್ಯೋಗಿಗಳ ಸೇವೆಯ ಸ್ಥಿತಿಗತಿಗಳಿಗೆ ಸಂಬಂಧಿಸಿದ ನಿಯಮಗಳು ಮತ್ತು ನಿಬಂಧನೆಗಳನ್ನು ರೂಪಿಸುವ ಅಗತ್ಯವಿದೆ ಎಂದು ಆದೇಶದಲ್ಲಿ ಸೂಚಿಸಲಾಗಿದೆ.

 

Donate Janashakthi Media

Leave a Reply

Your email address will not be published. Required fields are marked *