ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ಡಿಪಿಆರ್‌ಗೆ ಕೇಂದ್ರದ ಒಪ್ಪಿಗೆ

ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್‌)ಗೆ ಕೇಂದ್ರ ವಿದ್ಯುತ್‌ ಪ್ರಾಧಿಕಾರ ಶುಕ್ರವಾರ ಅನುಮೋದನೆ ನೀಡಿದೆ.

ಕರ್ನಾಟಕ ವಿದ್ಯುತ್‌ ನಿಗಮ ಅನುಷ್ಠಾನಗೊಳಿಸುತ್ತಿರುವ 2000 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಯೋಜನೆಗೆ ಅತ್ಯಂತ ಅಲ್ಪಾವಧಿಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ವಿದ್ಯುತ್‌ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಲಿಂಗನಮಕ್ಕಿ ಜಲಾಶಯದ ಕೆಳಭಾಗದಲ್ಲಿರುವ ಶಿವಮೊಗ್ಗದ ತಲಕಳಲೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪ ಜಲಾಶಯಗಳ ಮಧ್ಯ ಭಾಗದಲ್ಲಿ ಯೋಜನೆ ಅನುಷ್ಠಾನಗೊಳ್ಳಲ್ಲಿದೆ.

ದೇಶದ ಹೈಡ್ರೋ ಪಂಪ್ಡ್ ಸ್ಟೋರೇಜ್ ಯೋಜನೆಗಳ ಅನುಷ್ಠಾನವನ್ನು ವೇಗಗೊಳಿಸಲು ಅನುಮೋದನೆ ಪ್ರಕ್ರಿಯೆಯನ್ನು ಕೇಂದ್ರ ವಿದ್ಯುತ್ ಪ್ರಾಧಿಕಾರ ಪರಿಷ್ಕರಿಸಿದೆ. ಶರಾವತಿ ಜತೆಗೆ ಒಡಿಶಾದಲ್ಲಿ 600 ಮೆಗಾವ್ಯಾಟ್ ಇಂದ್ರಾವತಿ ಯೋಜನೆಗೂ ಪ್ರಾಧಿಕಾರ ಅನುಮೋದನೆ ನೀಡಿದೆ.

ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಗೆ ಶರತಾವತಿ ಯೋಜನೆ ಅನಿವಾರ್ಯವಾಗಿದ್ದು, ಪರಿಸರಕ್ಕೆ ಹಾನಿಯಾಗದಂತೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆಗೆ ಅನುಮೋದನೆ ನೀಡಿರುವ ಕೇಂದ್ರ ವಿದ್ಯುತ್ಛಕ್ತಿ ಪ್ರಾಧಿಕಾರಕ್ಕೆ ಧನ್ಯವಾದ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ಅನುಷ್ಠಾನಕ್ಕೆ ತ್ವರಿತ ಕ್ರಮಗಳನ್ನು ಕೈಗೊಂಡು ಕೇಂದ್ರದಿಂದ ಅಗತ್ಯ ಅನುಮತಿಗಳನ್ನು ಪಡೆಯಲು ಪ್ರಸ್ತಾವನೆಗಳನ್ನು ಕಳುಹಿಸಲಾಗಿತ್ತು.

ಕೇಂದ್ರದ ಪ್ರಾಧಿಕಾರ ಡಿಪಿಆರ್‌ಗೆ ಒಪ್ಪಿಗೆ ನೀಡಿರುವುದು ನಮ್ಮ ಪ್ರಯತ್ನಕ್ಕೆ ಸಿಕ್ಕ ಫಲ. ಇನ್ನುಳಿದ ಅನುಮತಿಗಳನ್ನು ಶೀಘ್ರದಲ್ಲೇ ಪಡೆದು ಯೋಜನೆಯ ಅನುಷ್ಠಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬದ್ಧ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ.

ಒಮ್ಮೆ ಹರಿದುಹೋಗಿ ವಿದ್ಯುತ್ ಉತ್ಪಾದನೆ ಮಾಡಿಕೊಂಡ ನೀರನ್ನೇ ಮತ್ತೆ ಮೇಲಕ್ಕೆ ಪಂಪ್ ಮಾಡಿ ಅದೇ ನೀರಿನಿಂದ ಎರಡನೇ ಬಾರಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಇದಕ್ಕೆ ಸ್ವಲ್ಪ ವಿದ್ಯುತ್ ವೆಚ್ಚವಾಗುತ್ತದೆಯೇ ಹೊರತು ಮತ್ತೇನೂ ಬೇಕಿಲ್ಲ. ಒಂದು ಹನಿ ನೀರನ್ನೇ ಹಲವಾರು ಬಾರಿ ಬಳಕೆ ಮಾಡಿ ವಿದ್ಯುತ್‌ ಉತ್ಪಾದನೆ ಮಾಡುವುದು ಉತ್ತಮ ವಿಧಾನ ಎಂದು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *