ಕೋಲ್ಕತಾದಲ್ಲಿ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ರಾಜಕೀಯ ಮಾಡಬೇಡಿ ಎಂದು ಕೇಂದ್ರ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಚಾಟಿ ಬೀಸಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ವೈದ್ಯೆ ಹತ್ಯೆ ಪ್ರಕರಣ ಅತ್ಯಂತ ಗಂಭೀರ ಪ್ರಕರಣವಾಗಿದ್ದು, ಈ ವಿಷಯದಲ್ಲಿ ಎರಡೂ ಸರ್ಕಾರಗಳು ರಾಜಕೀಯ ಮಾಡಬಾರದು ಎಂದು ಸೂಚಿಸಿದೆ.
ಪ್ರಕರಣದ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ಸಾಲಿಸಿಟರಲ್ ಜನರಲ್ ತುಷಾರ್ ಮೆಹ್ತಾ ಮತ್ತು ಪಶ್ಚಿಮ ಬಂಗಾಳ ಪರ ವಾದ ಮಂಡಿಸಿದ ಕಪಿಲ್ ಸಿಬಾಲ್ ನಡುವೆ ವಾಕ್ಸಮರ ನಡೆದಾಗ ಮಧ್ಯಪ್ರವೇಶಿಸಿದ ಸುಪ್ರೀಂಕೋರ್ಟ್, ಈ ವಿಷಯದಲ್ಲಿ ರಾಜಕೀಯ ಬೇಡ ಎಂದು ಸೂಚಿಸಿತು.
ಪ್ರಕರಣದ ಕುರಿತು ಯಾವುದೇ ರಾಜಕೀಯ ಮುಖಂಡರು ಹೇಳಿಕೆ ನೀಡದಂತೆ ತಡೆ ನೀಡಬೇಕು ಎಂದು ಕಪಿಲ್ ಸಿಬಾಲ್ ವಾದಿಸಿದರು.. ಇದಕ್ಕೆ ಪ್ರತಿಕ್ರಿಯಿಸಿದ ತುಷಾರ್ ಮೆಹ್ತಾ, ಪಶ್ಚಿಮ ಬಂಗಾಳದ ಸಚಿವರು ಮತ್ತು ಮುಖ್ಯಮಂತ್ರಿಗಳು ನೀಡುತ್ತಿರುವ ಹೇಳಿಕೆಗಳಿಗೆ ತಡೆ ನೀಡಬೇಕು. ಇದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತದೆ ಎಂದು ಪ್ರತಿವಾದಿಸಿದರು.
ಇದಕ್ಕೆ ಆಕ್ಷೇಪಿಸಿದ ಕಪಿಲ್ ಸಿಬಾಲ್, ಪಶ್ಚಿಮ ಬಂಗಾಳದಲ್ಲಿ ಪ್ರತಿಪಕ್ಷ ಸ್ಥಾನದಲ್ಲಿರುವ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ, ಗುಂಡು ಹಾರಿಸಬೇಕಾಗುತ್ತದೆ ಎಂದು ಹೇಳಿಕೆ ಓದಿದರು. ಇದಕ್ಕೆ ಪ್ರತಿಕ್ರಿಯೆ ನೀಡಲು ತುಷಾರ್ ಮೆಹ್ತಾ ಮುಂದಾದಾಗ ರಾಜಕೀಯ ಬೇಡ. ಕಾನೂನು ತನ್ನ ಕೆಲಸ ಮಾಡುತ್ತದೆ. ಕ್ಷಿಪ್ರ ತನಿಖೆ ನಂತರ ನ್ಯಾಯಾಲಯ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಡಿವೈ ಚಂದ್ರಚೂಡ್ ಹೇಳಿದರು.