- ಆಂತರಿಕ ಭಿನ್ನಮತದಿಂದ ಬಂಡಾಯವೆದ್ದಿದ್ದ ಸಚಿನ್ ಪೈಲಟ್
- ರಾಹುಲ್, ಪ್ರಿಯಾಂಕ, ಹಿರಿಯ ಕಾಂಗ್ರೆಸ್ಸಿಗರ ಮನವೊಲಿಕೆಯಿಂದ ಮರಳಿದ್ದ ಸಚಿನ್ ಪೈಲಟ್
- ವಿಶ್ವಾಸಮತ ಯಾಚನೆ ವೇಳೆ ಸರ್ಕಾರದ ಪರವಾಗಿ ಮತ ಚಲಾಯಿಸಿದ ಸಚಿನ್ ಪೈಲಟ್ ಬಣ
ಜೈಪುರ: ಕಾಂಗ್ರೆಸ್ ಯುವ ನಾಯಕ ಸಚಿನ್ ಪೈಲಟ್ ಅವರ ಬಂಡಾಯದಿಂದ ಅಸ್ಥಿರತೆಯತ್ತ ಹೊರಳಿದ್ದ ರಾಜಸ್ಥಾನ ಕಾಂಗ್ರೆಸ್ ಸರ್ಕಾರ ವಿಧಾನಸಭೆಯಲ್ಲಿ ಶುಕ್ರವಾರ ವಿಶ್ವಾಸಮತ ಗೆದ್ದಿದೆ.
ಸಚಿನ್ ಪೈಲಟ್ ಬಂಡಾಯದಿಂದ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ವಿಶ್ವಾಸ ಕಳೆದುಕೊಂಡಿದೆ ಎಂದು ಬಿಜೆಪಿ ಆರೋಪಿಸಿದ್ದ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಶ್ವಾಸಮತ ಕೋರಿತ್ತು. ಕಾಂಗ್ರೆಸ್ ಮತ ಮತ್ತು ಸಚಿನ್ ಪೈಲಟ್ ಬಣಗಳ ಮತಗಳ ನೆರವಿನಿಂದ ಅಶೋಕ್ ಗೆಹ್ಲೋಟ್ ಸರ್ಕಾರ ವಿಶ್ವಾಸ ಮತ ಸಾಬೀತುಪಡಿಸಿದೆ.
ಆಡಳಿತರೂಢ ಪಕ್ಷದ ಪರವಾಗಿ ಕಾಂಗ್ರೆಸ್ -107 (ಪೈಲಟ್ ಬೆಂಬಲಿಗರು-19, ಬಿಎಸ್‌ಪಿ- 6), ಆರ್‌ಎಲ್‌ಡಿ -1, ಸ್ವತಂತ್ರರು- 13, ಬಿಟಿಪಿ-2, ಎಡಪಕ್ಷ- 2 ಮತ ಚಲಾಯಿಸಿದರೆ, ವಿರೋಧವಾಗಿ ಬಿಜೆಪಿ-72 ಮತ್ತು ಆರ್‌ಎಲ್‌ಪಿ-3 ಮತ ಚಲಾಯಿಸಿದರು.
ಉಪಮುಖ್ಯಮಂತ್ರಿಯಾಗಿದ್ದ ಸಚಿನ್ ಪೈಲಟ್ ನೇತೃತ್ವದಲ್ಲಿ 19 ಶಾಸಕರು ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದು, ಹಿರಿಯ ನಾಯಕರ ಮಧ್ಯಪ್ರವೇಶದಿಂದ ಶಮನಗೊಂಡಿದೆ. ಬಂಡಾಯದ ಹಿಂದೆಯೇ ಪಕ್ಷದ ತೀರ್ಮಾನದಂತೆ ಗೆಹ್ಲೋಟ್ ಅವರು ಸಚಿನ್ ಅವರನ್ನು ಉಪ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಿದ್ದರು. ಅಲ್ಲದೆ, ನಿಷ್ಪ್ರಯೋಜಕ ಎಂದೂ ಟೀಕಿಸಿದ್ದರು. ಸುಮಾರು ಒಂದು ತಿಂಗಳು ನಡೆದ ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ ಅಧಿವೇಶನ ನಡೆದಿತ್ತು.