ಬೆಂಗಳೂರು: ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರೂ ಆದ ವನ್ಯಜೀವಿ ಛಾಯಾಗ್ರಹಕ ಧ್ರುವ್ ಪಾಟೀಲ ಅವರು ಬೇರೆ ಬೇರೆ ಬಣ್ಣಗಳ ಕಣ್ಣುಗಳಿರುವ ಅಪರೂಪದ ಚಿರತೆಯನ್ನು ತಮ್ಮ ಕ್ಯಾಮೆರಾದಲ್ಲಿ ಬಂಡೀಪುರ ಹುಲಿ ಅಭಯಾರಣ್ಯ ಪ್ರದೇಶದಲ್ಲಿ ಸೆರೆಹಿಡಿದಿದ್ದಾರೆ.
ಬಹಳ ಅಪರೂಪ ಎನ್ನಬಹುದಾದ ವಿಭಿನ್ನ ಬಣ್ಣಗಳ ಕಣ್ಣುಗಳು ಚಿರತೆಯಲ್ಲಿ ಕಂಡುಬರುವುದಕ್ಕೆ ವಂಶವಾಹಿನಿ ರೂಪಾಂತರಗಳು ಕಾರಣವಾಗುತ್ತವೆ. ಇದನ್ನು ವೈಜ್ಞಾನಿಕ ಪರಿಭಾಷೆಯಲ್ಲಿ ‘ಹೆಟೆರೋಕ್ರೋಮಿಯಾ ಇರಿಡಂ’ ಎನ್ನಲಾಗುತ್ತದೆ.
ಧ್ರುವ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವುದು ಚಿರತೆಗಳಿಗೆ ಸಂಬಂಧಿಸಿದ ದಾಖಲೀಕರಣಕ್ಕೆ ಒಂದು ಉತ್ತಮ ಕೊಡುಗೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರ ಮಗನಾದ 21 ವರ್ಷದ ಧ್ರುವ್ ಹಲವು ವರ್ಷಗಳಿಂದಲೂ ಹೆಚ್ಚಿನ ಸಮಯವನ್ನು ಬಂಡೀಪುರ, ಕಬಿನಿ, ದಾಂಡೇಲಿ ಸರಹದ್ದಿನ ಕಾಡುಗಳಲ್ಲಿ ಕಳೆಯುತ್ತಾರೆ.
ವನ್ಯಜೀವಿ ಛಾಯಾಗ್ರಹಣದ ಜೊತೆಗೆ ಜೀವ ವೈವಿಧ್ಯ ಅವಲೋಕನದಲ್ಲಿ ಆಸಕ್ತರಾಗಿರುವ ಅವರು ಆಗಾಗ ಕಾಡಿನಲ್ಲಿ ಸಫಾರಿ ಮಾಡುವುದನ್ನು ರೂಡಿಸಿಕೊಂಡಿದ್ದು, ಈ ಮುಂಚೆ ಕಬಿನಿ ಅಣೆಕಟ್ಟು ಸಮೀಪದ ಅರಣ್ಯದಲ್ಲಿ ಕಪ್ಪು ಚಿರತೆಯೊಂದನ್ನು ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದರು.