ವಿಪಕ್ಷಗಳ ಸಾಲಿನ ಪಕ್ಕದಲ್ಲಿ ಕುಳಿತ ಬಂಡಾಯಗಾರ ಸಚಿನ್ ಪೈಲಟ್

–      ವಿಶ್ವಾಸಮತ ಕೋರಲು ಸಜ್ಜಾಗಿರುವ ಕಾಂಗ್ರೆಸ್ ಸರ್ಕಾರ

–      ತಾವು ಕಾಂಗ್ರೆಸ್‌ ಪಕ್ಷದ ಅತ್ಯಂತ ನಿಷ್ಠಾವಂತ ಕಟ್ಟಾಳು ಎಂದ ಪೈಲಟ್

ಜೈಪುರ: ರಾಜಸ್ಥಾನ ವಿಧಾನಸಭೆಯಲ್ಲಿ ಶುಕ್ರವಾರ ನಡೆಯುತ್ತಿರುವ ಅಧಿವೇಶನದಲ್ಲಿ ವಿಶ್ವಾಸಮತ ಕೋರಲು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಸಜ್ಜಾಗಿದೆ. ವಿರೋಧ ಪಕ್ಷ ಬಿಜೆಪಿ ಸರ್ಕಾರದ ಇತ್ತೀಚಿನ ಬೆಳವಣಿಗೆಗಳನ್ನು ತೆರೆದಿಟ್ಟು ಟೀಕಿಸುತ್ತಿದೆ. ಈ ಮಧ್ಯೆ ಬಂಡಾಯಗಾರ ಸಚಿನ್ ಪೈಲಟ್ ವಿಧಾನಸಭೆಯಲ್ಲಿ ಪ್ರತಿಪಕ್ಷದ ಸಾಲಿನ ಪಕ್ಕದಲ್ಲೇ ಕಳಿತುಕೊಂಡಿದ್ದು ಗಮನಸೆಳೆಯಿತು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಂದ ದೂರದಲ್ಲಿರುವ ಪ್ರತಿಪಕ್ಷದವರಿಗೆ ಮೀಸಲಾದ ಆಸನಗಳ ಪಕ್ಕದಲ್ಲಿ ಪೈಲಟ್ ಆಸೀನರಾಗಿದ್ದರು.

ಇದಕ್ಕೆ ಕಾರಣವನ್ನೂ ನೀಡಿದ ಸಚಿನ್ ಪೈಲಟ್,  ‘ಮೊದಲು ಕುಳಿತುಕೊಳ್ಳುತ್ತಿದ್ದ ಸ್ಥಾನದಲ್ಲಿ ನಾನು ಸುರಕ್ಷಿತವಾಗಿದ್ದೆ. ಅನಂತರ ನಾನು ಯೋಚಿಸಿದೆ ನನಗೆ ಬೇರೊಂದು ಸ್ಥಾನವನ್ನೇಕೆ ನೀಡಲಾಯಿತೆಂದು. ಇದು ಗಡಿ ಪ್ರದೇಶವೆಂಬುದನ್ನು ನಾನು ಅರಿತೆ– ಆಡಳಿತಾರೂಢ ಪಕ್ಷ ಒಂದು ಕಡೆ ಹಾಗೂ ವಿರೋಧ ಪಕ್ಷ ಮತ್ತೊಂದು ಕಡೆ. ಗಡಿ ಭಾಗಕ್ಕೆ ಯಾರನ್ನು ಕಳುಹಿಸುತ್ತಾರೆ? ಬಲಿಷ್ಠ ಯೋಧರನ್ನು…’ ಎಂದು ಕಾಂಗ್ರೆಸ್ ಶಾಸಕ ಸಚಿನ್‌ ಪೈಲಟ್‌ ಅಧಿವೇಶನದಲ್ಲಿ ಹೇಳಿದರು.

ನಾನಾಗಲಿ ಅಥವಾ ನನ್ನ ಯಾವುದೇ ಸ್ನೇಹಿತರಾಗಲಿ, ನಾವು ‘ವೈದ್ಯರನ್ನು’ ಭೇಟಿಯಾದೆವು ಹಾಗೂ ‘ಚಿಕಿತ್ಸೆಯ’ ಬಳಿಕ ಎಲ್ಲ 125 ಜನರೂ ವಿಧಾನಸಭೆಯಲ್ಲಿ ಹಾಜರಿದ್ದೇವೆ…ಈ ಗಡಿ ಭಾಗದಲ್ಲಿ ಸ್ಫೋಟಗಳು ನಡೆಯುತ್ತಿರಬಹುದು, ಆದರೆ ನಾವು ರಕ್ಷಾಕವಚವಾಗಿ ಎಲ್ಲವನ್ನೂ ಸುರಕ್ಷಿತವಾಗಿರುವಂತೆ ಗಮನಿಸುತ್ತೇವೆ ಎಂದಿದ್ದಾರೆ.

ತಾವು ಕಾಂಗ್ರೆಸ್‌ ಪಕ್ಷದ ಅತ್ಯಂತ ನಿಷ್ಠಾವಂತ ಕಟ್ಟಾಳು ಎಂದಿರುವ ಪೈಲಟ್, ಆಡಳಿತ ಪಕ್ಷವನ್ನು ಪ್ರತಿಪಕ್ಷಗಳ ವಾಗ್ದಾಳಿಯಿಂದ ರಕ್ಷಿಸಲೆಂದೇ ಕೊನೆಯ ಸಾಲಿನಲ್ಲಿ ಕುಳಿತುಕೊಂಡಿರುವುದಾಗಿ ಸ್ಪಷ್ಟಪಡಿಸಿದರು.

ಆದರೆ ಅಶೋಕ್ ಗೆಹ್ಲೋಟ್ ಅವರಿಂದ ದೂರ ಕೂರಬೇಕು ಎಂಬ ಉದ್ದೇಶದಿಂದಲೇ ಪೈಲಟ್ ಪ್ರತಿಪಕ್ಷಗಳ ಸಾಲಿನ ಪಕ್ಕದಲ್ಲಿ ಕೂತಿದ್ದರು ಎಂಬ ಮಾತುಗಳೂ ಕೇಳಿ ಬಂದವು.

ಅವಿಶ್ವಾಸ ನಿಲುವಳಿ ಮಂಡಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಉಪಮುಖ್ಯಮಂತ್ರಿಯಾಗಿದ್ದ ಸಚಿನ್ ಪೈಲಟ್ ನೇತೃತ್ವದಲ್ಲಿ 19 ಶಾಸಕರು ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದು, ಹಿರಿಯ ನಾಯಕರ ಮಧ್ಯಪ್ರವೇಶದಿಂದ ಶಮನಗೊಂಡಿದೆ. ಬಂಡಾಯದ ಹಿಂದೆಯೇ ಪಕ್ಷದ ತೀರ್ಮಾನದಂತೆ ಗೆಹ್ಲೋಟ್ ಅವರು ಸಚಿನ್ ಅವರನ್ನು ಉಪ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಿದ್ದರು. ಅಲ್ಲದೆ, ನಿಷ್ಪ್ರಯೋಜಕ ಎಂದೂ ಟೀಕಿಸಿದ್ದರು. ಸುಮಾರು ಒಂದು ತಿಂಗಳು ನಡೆದ ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ ಅಧಿವೇಶನ ನಡೆಯುತ್ತಿದೆ.

Donate Janashakthi Media

Leave a Reply

Your email address will not be published. Required fields are marked *