- ತೀರ್ಪು ಪರಿಶೀಲನೆ ಅರ್ಜಿ ಪರಿಗಣಿಸುವವರೆಗೂ ವಿಚಾರಣೆ ಮುಂದೂಡಲು ಮನವಿ ಮಾಡಿದ್ದ ಭೂಷಣ್
ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತನ್ನ ವಿರುದ್ಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಪುನರ್‌ಪರಿಶೀಲಿಸಲು ಅರ್ಜಿ ಸಲ್ಲಿಸುವವರೆಗೂ ಹಾಗೂ ಅದನ್ನು ಪರಿಗಣಿಸುವವರೆಗೂ, ಪ್ರಕರಣದ ವಿಚಾರಣೆಯನ್ನು ಮುಂದೂಡಬೇಕು ಎಂದು ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ಗೆ ಗುರುವಾರ ನಿರಾಕರಿಸಿದೆ.
ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ತ್ರಿ ಸದಸ್ಯ ಪೀಠ ವಿಚಾರಣೆಯನ್ನು ಮುಂದೂಡಬೇಕು ಎಂದು ಪ್ರಶಾಂತ್ ಭೂಷಣ್ ಅರ್ಜಿಯ ವಿಚಾರಣೆ ನಡೆಸಲು ನಿರಾಕರಿಸಿತು.
ಶಿಕ್ಷೆ ಪ್ರಮಾಣ ಪ್ರಕಟವಾದ ಬಳಿಕವಷ್ಠೆ ತೀರ್ಪು ಪೂರ್ಣವಾಗುತ್ತದೆ. ಪುನರ್‌ಪರಿಶೀಲನೆ ಅರ್ಜಿಯ ವಿಚಾರಣೆ ಮಗಿಯುವವರೆಗೂ ಶಿಕ್ಷೆಯನ್ನು ವಿಧಿಸುವುದಿಲ್ಲ ಎಂದು ಕೋರ್ಟ್ ಪ್ರಶಾಂತ್ ಭೂಷಣ್ ಅವರಿಗೆ ಅಭಯ ನೀಡಿದೆ.
ಸುಪ್ರೀಂ ಕೋರ್ಟ್ ಹಾಗೂ ಮುಖ್ಯನ್ಯಾಯಮೂರ್ತಿ(ಸಿಜೆಐ)ಕಚೇರಿಯ ಘನತೆಗೆ ಚ್ಯುತಿ ತರುವಂತಹ ಟ್ವೀಟ್ ಮಾಡಿದ್ದ ಪ್ರಕರಣದಲ್ಲಿ ಭೂಷಣ್ ತಪ್ಪಿತಸ್ಥರು ಎಂದು ಆ.14ರಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಆರು ತಿಂಗಳ ಜೈಲು ಶಿಕ್ಷೆ ಅಥವಾ ₹2 ಸಾವಿರ ದಂಡ ಅಥವಾ ಜೈಲು ಶಿಕ್ಷೆ, ದಂಡ ಎರಡನ್ನೂ ವಿಧಿಸುವ ಸಾಧ್ಯತೆ ಇದೆ.
‘ಆಗಸ್ಟ್ 14ರಂದು ನೀಡಿದ್ದ ತೀರ್ಪನ್ನು ವಿಸ್ತೃತವಾಗಿ ಅಧ್ಯಯನ ಮಾಡಿದ ಬಳಿಕ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಲು ನಾನು ನಿರ್ಧರಿಸಿದ್ದೇನೆ. ವಾಕ್ ಸ್ವಾತಂತ್ರ್ಯದ ವಿಚಾರದಲ್ಲಿ ಈ ತೀರ್ಪಿನ ವಿವಿಧ ಆಯಾಮಗಳು ಮಹತ್ವದ್ದಾಗಿದೆ. ತೀರ್ಪು ನೀಡಿದ 30 ದಿನದೊಳಗಾಗಿ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಕಾರಣದಿಂದ ಆ.20ರಂದು ನಿಗದಿಪಡಿಸಿರುವ ವಿಚಾರಣೆಯನ್ನು ಮುಂದೂಡಬೇಕು‘ಎಂದು ಬುಧವಾರ ಭೂಷಣ್ ಅರ್ಜಿ ಸಲ್ಲಿಸಿದ್ದರು. ಇದನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ