“ರೈತ ಪ್ರತಿಭಟನಾಕಾರರಿಗೆ ‘ಖಲಿಸ್ತಾನಿಗಳು’ ಎಂದೆಲ್ಲ ಹಣೆಪಟ್ಟಿ ಜವಾಬ್ದಾರಿಯುತ, ನೈತಿಕ ಪತ್ರಕಾರಿತೆಯಲ್ಲ”
ದೆಹಲಿ : ರಾಷ್ಟ್ರದ ರಾಜಧಾನಿಯಲ್ಲಿ ರೈತರ ಪ್ರತಿಭಟನೆಗಳ ಸುದ್ದಿಯ ಕವರೇಜ್ಗಳ ಬಗ್ಗೆ ಭಾರತದ ಸಂಪಾದಕರ ವೃತ್ತಿಸಂಘ(ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯ-ಇಜಿಐ) ಕಳವಳ ವ್ಯಕ್ತಪಡಿಸಿದೆ.
ಮಾಧ್ಯಮಗಳ ಕೆಲವಿಭಾಗಗಳು ಅವರ ಪ್ರತಿಭಟನೆಗಳನ್ನು ಅಸಿಂಧುಗೊಳಿಸಲಿಕ್ಕಾಗಿ, ಯಾವುದೇ ಸಾಕ್ಷಿ-ಪುರಾವೆಗಳಲ್ಲದೆ, ಅವರಿಗೆ ‘ಖಲಿಸ್ತಾನಿಗಳು’, ‘ರಾಷ್ಟ್ರ-ವಿರೋಧಿಗಳು’ ಮತ್ತಿತರ ಇಂತಹ ಹಣೆಪಟ್ಟಿಗಳನ್ನು ಹಚ್ಚುತ್ತಿವೆ. ಇದು ಜವಾಬ್ದಾರಿಯುತ ಮತ್ತು ನೈತಿಕ ಪತ್ರಕಾರಿತೆಯ ತತ್ವಗಳಿಗೆ ವಿರುದ್ಧವಾದದ್ದು. ಇಂತಹ ಕೆಲಸಗಳು ಮಾಧ್ಯಮಗಳ ವಿಶ್ವಾಸಾರ್ಹತೆಗೆ ಕುಂದು ತರುತ್ತವೆ ಎಂದು ಅದು ಡಿಸೆಂಬರ್ 4ರಂದು ಪ್ರಕಟಿಸಿರುವ ‘ಮೀಡಿಯಾ ಅಡ್ವೈಸರಿ’ (ಮಾದ್ಯಮ ಸಲಹೆ)ಯಲ್ಲಿ ಹೇಳಿದೆ.
ಇಜಿಐನ ಅಧ್ಯಕ್ಷರಾದ ಸೀಮಾ ಮುಸ್ತಫ, ಪ್ರಧಾನ ಕಾರ್ಯದರ್ಶಿ ಸಂಜಯ್ ಕಪೂರ್ ಮತ್ತು ಕೋಶಾಧಿಕಾರಿ ಅನಂತ ನಾಥ್ ಈ ಸಲಹಾ ಹೇಳಿಕೆಗೆ ಸಹಿ ಹಾಕಿದ್ದಾರೆ.
ಮಾದ್ಯಮ ಸಂಘಟನೆಗಳು ರೈತರ ಪ್ರತಿಭಟನೆಗಳನ್ನು ವರದಿ ಮಾಡುವಲ್ಲಿ ನಿಷ್ಪಕ್ಷಪಾತತೆ, ವಸ್ತುನಿಷ್ಠತೆ ಮತ್ತು ಸಮತೋಲನವನ್ನು ಪ್ರದರ್ಶಿಸಬೇಕು, ತಮ್ಮ ಅಭಿವ್ಯಕ್ತಿಯ ಸಂವಿಧಾನಿಕ ಹಕ್ಕುಗಳನ್ನು ಚಲಾಯಿಸುತ್ತಿರುವವರ ವಿರುದ್ಧ ಪಕ್ಷಪಾತವನ್ನು ಪ್ರದರ್ಶಿಸಬಾರದು ಎಂದು ಇಜಿಐ ಸಲಹೆ ಮಾಡಿದೆ. ಮಾಧ್ಯಮಗಳು ಭಿನ್ನಮತವನ್ನು ಹೀಗಳೆಯುವ ಮತ್ತು ಪ್ರತಿಭಟನಾಕಾರರ ವೇಷಭೂಷಣ ಮತ್ತು ಜನಾಂಗದ ಆಧಾರದಲ್ಲಿ ಗೇಲಿ ಮಾಡುವ ಯಾವುದೇ ಕಥನದಲ್ಲಿ ಶಾಮೀಲಾಗಬಾರದು ಎಂದು ಅದು ಹೇಳಿದೆ.