ಲಾತೂರ್ : ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಗೃಹ ಸಚಿವ ಶಿವರಾಜ್ ಪಾಟೀಲ್ ಶುಕ್ರವಾರ ಬೆಳಗ್ಗೆ 6.30ರ ಸುಮಾರಿಗೆ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು, ತೀವ್ರ ಅನಾರೋಗ್ಯದ ಕಾರಣ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು ಅವರ ನಿಧನಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶಿವರಾಜ್ ಪಾಟೀಲ್ ಅಕ್ಟೋಬರ್ 12, 1935 ರಂದು ಜನಿಸಿದರು. ಅವರ ತಂದೆ ಶಿವರಾಮ್ ಪಾಟೀಲ್ ರೈತರಾಗಿದ್ದು, ತಾಯಿ ಶಾರದಾ ಪಾಟೀಲ್ ಗೃಹಿಣಿಯಾಗಿದ್ದರು. ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದರೂ, ಅವರು ಭಾರತೀಯ ರಾಜಕೀಯದಲ್ಲಿ ತಮ್ಮದೇ ಆದ ಪ್ರಮುಖ ಗುರುತನ್ನು ಸ್ಥಾಪಿಸಿದರು. ಅವರನ್ನು ಭಾರತೀಯ ರಾಜಕೀಯದ ಪ್ರಮುಖ ಮತ್ತು ಅನುಭವಿ ನಾಯಕರಲ್ಲಿ ಒಬ್ಬರೆಂದು ಗುರುತಿಸಲಾಗುತ್ತದೆ.
ಇದನ್ನೂ ಓದಿ : ಬೆಳಗಾವಿ | ದಿನದ 24 ಗಂಟೆಯೂ ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಇರಬೇಕು ! – ಸಚಿವ ಗುಂಡೂರಾವ್
ಶಿವರಾಜ್ ಪಾಟೀಲ್ 1980 ರಿಂದ 2004ರ ಅವಧಿಯಲ್ಲಿ ಸತತ ಏಳು ಬಾರಿ ಲಾತೂರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 1980, 1984, 1989, 1991, 1996, 1998 ಮತ್ತು 1999ರಲ್ಲಿ ಲಾತೂರ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಆದರೆ, 2004ರಲ್ಲಿ ಬಿಜೆಪಿಯ ರೂಪತೈ ಪಾಟೀಲ್ ನೀಲಂಗೇಕರ್ ವಿರುದ್ಧ ಸೋಲು ಕಂಡಿದ್ದರು. ಲೋಕಸಭೆಗೆ ಆಯ್ಕೆಯಾಗುವ ಮುನ್ನ, ಅವರು 1972 ಮತ್ತು 1978ರಲ್ಲಿ ಲಾತೂರ್ ವಿಧಾನಸಭಾ ಕ್ಷೇತ್ರದಿಂದಲೂ ಜಯಗಳಿಸಿದ್ದರು. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಶಿವರಾಜ್ ಪಾಟೀಲ್ ಹಲವು ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದ್ದರು.
ಮಹಾರಾಷ್ಟ್ರದ ಮರಾಠವಾಡ ಪ್ರದೇಶದ ಲಾತೂರ್‌ನಿಂದ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಪಾಟೀಲ್, ದೇಶದ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 2008ರಲ್ಲಿ ನಡೆದ ಭೀಕರ 26/11 ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ಅವರು ಕೇಂದ್ರ ಗೃಹ ಸಚಿವರಾಗಿದ್ದರು. ಈ ದಾಳಿಯ ಸಂದರ್ಭದಲ್ಲಿ ಭದ್ರತಾ ಲೋಪಗಳ ಕುರಿತು ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಮುಂಬೈ ದಾಳಿಯನ್ನು ತಡೆಯುವಲ್ಲಿನ ವೈಫಲ್ಯದ ನೈತಿಕ ಹೊಣೆ ಹೊತ್ತು, ಪಾಟೀಲ್ ತಮ್ಮ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಲಾತೂರ್ ಜಿಲ್ಲೆಯ ಚಾಕೂರ್‌ನಲ್ಲಿ ಜನಿಸಿದ ಶಿವರಾಜ್ ಪಾಟೀಲ್, ತಮ್ಮ ಆರಂಭಿಕ ಶಿಕ್ಷಣವನ್ನು ಲಾತೂರ್‌ನಲ್ಲಿಯೇ ಪಡೆದರು. ನಂತರ, ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ವಿಜ್ಞಾನದಲ್ಲಿ ಪದವಿ ಪಡೆದರು. ಮುಂಬೈ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ (Law) ಪೂರ್ಣಗೊಳಿಸಿದ ಬಳಿಕ ಅವರು ರಾಜಕೀಯಕ್ಕೆ ಪ್ರವೇಶಿಸಿದರು.
ಇದನ್ನೂ ನೋಡಿ : ಧರ್ಮಸ್ಥಳ ಪ್ರಕರಣ | ಕೊಂದವರು ಯಾರು? ಎಂಬುದು ಹೊರಬರಲಿ – ಡಾ. ನಾಗಲಕ್ಷ್ಮೀ ಚೌಧರಿJanashakthi Media
