- ಸಾಲ ಮರುಪಾವತಿಯ ಮೇಲಿನ ಬಡ್ಡಿ ಮನ್ನಾ: ಕೇಂದ್ರ ಸರ್ಕಾರ ಸ್ಪಷ್ಟ ನಿಲುವನ್ನು ತೆಗೆದುಕೊಳ್ಳಲು ಕೋರ್ಟ್ ಸೂಚನೆ
ನವದೆಹಲಿ: ಇಡೀ ದೇಶವನ್ನು ಲಾಕ್ಡೌನ್ ಮಾಡಿದಿರಿ, ಪರಿಹಾರವನ್ನು ಈಗ ನೀವೇ ಕೊಡಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಮಾರ್ಚ್ನಿಂದ ಆಗಸ್ಟ್ 31ರ ವರೆಗಿನ ಸಾಲ ಮರುಪಾವತಿಯ ಮೇಲಿನ ಬಡ್ಡಿ ಮನ್ನಾ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸ್ಪಷ್ಟ ನಿಲುವನ್ನು ತೆಗೆದುಕೊಳ್ಳಬೇಕು ಎಂದು ಕೋರ್ಟ್ ಹೇಳಿದೆ. ಸೆಪ್ಟೆಂಬರ್ 1ರ ಒಳಗೆ ನ್ಯಾಯಾಲಯಕ್ಕೆ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಲಾಕ್ಡೌನ್ ಸಮಯದಲ್ಲಿ ಹಲವು ಆರ್ಥಿಕ ಪರಿಹಾರ ಕ್ರಮಗಳನ್ನು ಘೋಷಣೆ ಮಾಡಿದೆ. ಆದರೆ ಬ್ಯಾಂಕ್ಗಳು ಸಾಲ ಮರುಪಾವತಿಯ ಮೇಲಿನ ಬಡ್ಡಿಯನ್ನು ವಿಧಿಸುವ ಬಗ್ಗೆ ಸರ್ಕಾರ ನಿಲುವು ತೆಗೆದುಕೊಳ್ಳಬೇಕು ಎಂದು ಅಶೋಕ್ ಭೂಷಣ್ ಅವರಿದ್ದ ನ್ಯಾಯಪೀಠ ಸೂಚಿಸಿದೆ.
ಬಡ್ಡಿ ಮನ್ನಾ ಮಾಡುವುದರಿಂದ ಬ್ಯಾಂಕ್ ಉದ್ಯಮಕ್ಕೆ ಹೊಡೆತ ಬೀಳಲಿದೆ ಎಂದು ರಿಸರ್ವ್ ಬ್ಯಾಂಕ್ ಈ ಹಿಂದೆ ಸುಪ್ರೀಂ ಕೋರ್ಟ್ ಎದುರು ಹೇಳಿತ್ತು. ನೀವು ಆರ್ಬಿಐ ಮೇಲೆ ಯಾಕೆ ಅವಲಂಭಿತರಾಗಿರುವಿರಿ ನಿಮ್ಮ ನಿಲುವನ್ನು ತಿಳಿಸಿ. ಅಥವಾ ಇದು ನೈಸರ್ಗಿಕ ವಿಕೋಪ ಎಂದು ತಿಳಿದು ಪರಿಹಾರ ನೀಡಿ ಎಂದು ನ್ಯಾಯಪೀಠ ಸರ್ಕಾರಕ್ಕೆ ಸೂಚಿಸಿತು.
ಇಡೀ ದೇಶವನ್ನು ಲಾಕ್ಡೌನ್ ಮಾಡಿದಿರಿ, ಪರಿಹಾರವನ್ನು ಈಗ ನೀವೇ ಕೊಡಬೇಕು ಎಂದು ಅಶೋಕ್ ಭೂಷಣ್ ಅವರಿದ್ದ ನ್ಯಾಯಪೀಠ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.