ರೈತ ವಿರೋಧಿ ಕೃಷಿ ಮಸೂದೆಗಳ ವಿರುದ್ದ ಡಿ.16 ರಿಂದ ನಿರಂತರ ಹೋರಾಟ

ಬೆಂಗಳೂರು :  ರೈತ ವಿರೋಧಿ ಕೃಷಿ ಮಸೂದೆಗಳನ್ನು ವಿರುದ್ಧ ನಾಳೆಯಿಂದ ಬೆಂಗಳೂರಿನ ಮೌರ್ಯ ವೃತ್ತದ ಬಳಿ ನಿರಂತರ ಹೋರಾಟವನ್ನು ನಡೆಸಲು ಎ.ಐ.ಕೆ.ಎಸ್. ಸಿ ಸಿ ತೀರ್ಮಾನಿಸಿದೆ.  ಕೇಂದ್ರ ಸರ್ಕಾರವು ಅಸಾಂವಿಧಾನಿಕ ವಿಧಾನದಿಂದ, ಅತ್ಯಂತ ಅಪ್ರಜಾತಾಂತ್ರಿಕ ರೀತಿಯಲ್ಲಿ ಜಾರಿಗೆ ತಂದಿರುವ ಕೃಷಿ ಸಂಬಂಧಿತವಾದ (ಮುಂಗಡ ವ್ಯಾಪಾರ ಕೃಷಿ, ಎ.ಪಿ.ಎಂ.ಸಿ., ವಿದ್ಯುತ್ ವಿತರಣೆ, ಕಾರ್ಮಿಕ ಹಾಗೂ ಅಗತ್ಯ ವಸ್ತು ಕಾಯ್ದೆಗಳಿಗೆ ಸಂಬಂಧಿಸಿದ) ತಿದ್ದುಪಡಿ ಕಾಯ್ದೆಗಳು ಇಡೀ ದೇಶದ ರೈತಾಪಿಯ ಹಾಗೂ ಕಾರ್ಮಿಕರ ಬದುಕಿಗೆ ಮಾರಕವಾಗಿವೆ ಮತ್ತು ಕಾರ್ಪೋರೇಟ್ ಲೂಟಿಗೆ ಪೂರಕವಾಗಿವೆ. ಆದ್ದರಿಂದ ಅವುಗಳನ್ನು ರದ್ದುಪಡಿಸಬೇಕು ಹಾಗೂ ಕನಿಷ್ಠ ಬೆಂಬಲ ಬೆಲೆ ಖಾತರಿ (ಎಂಎಸ್‌ಪಿ)ಯನ್ನು ಶಾಸನಬದ್ಧಗೊಳಿಸಬೇಕು ಮತ್ತು ಸಾರ್ವಜನಿಕ ಸಾಲ ಒದಗಿಸುವ ಹಾಗೂ ಋಣಮುಕ್ತಿ ನೀಡುವ ಕಾಯ್ದೆ ಜಾರಿಗೆ ತರಬೇಕು ಎಂಬ ಹಕ್ಕೊತ್ತಾಯಗಳೊಂದಿಗೆ ದೇಶದ ನಾನಾ ಭಾಗಗಳ ಒಂದು ಕೋಟಿಗೂ ಹೆಚ್ಚು ರೈತರು ಇದೇ ನವೆಂಬರ್ 26 ರಿಂದ ದೆಹಲಿಯ ಸರಹದ್ದಿನಲ್ಲಿ ಸತತವಾಗಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರನ್ನು ದೆಹಲಿಗೆ ಪ್ರವೇಶ ಮಾಡದಂತೆ ತಡೆದಿರುವ ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ, ಬಿಹಾರ ರಾಜ್ಯ ಸರ್ಕಾರಗಳು ರೈತರ ಮೇಲೆ ಅಮಾನುಷ ದೌರ್ಜನ್ಯ ನಡೆಸುತ್ತಿವೆ. ಕಳೆದ 70 ವರ್ಷಗಳಲ್ಲೆಂದೂ ಇರದಿದ್ದಂತಹ ತೀವ್ರ ಚಳಿಯಿಂದಾಗಿ ಈ ಕಷ್ಟಜೀವಿಗಳು ಅಪಾರ ಬವಣೆಗೆ ಈಡಾಗಿರುವುದಲ್ಲದೆ ಈಗಾಗಲೇ ಸುಮಾರು 40ಕ್ಕೂ ಹೆಚ್ಚು ಜನರು ದಾರುಣವಾಗಿ ಸಾವಿಗೆ ಬಲಿಯಾಗಿದ್ದಾರೆಂದು ವರದಿಗಳು ತಿಳಿಸಿವೆ. ಇದ್ಯಾವುದನ್ನೂ ಪರಿವೆ ಮಾಡದ ’ಐಲುದೊರೆ ನೀರೋ’ನಂಥ ಕ್ರೂರಿ ಕೇಂದ್ರ ಸರ್ಕಾರ ಮಾತುಕತೆಯ ನಾಟಕವಾಡುತ್ತ ಸಮಯವನ್ನೂ ರೈತರನ್ನೂ ಕೊಲ್ಲುತ್ತಿದೆ.

ಇನ್ನೊಂದೆಡೆ ಕೇಂದ್ರದ ಬಿಜೆಪಿ ಸರ್ಕಾರವು ತನ್ನ ’ಗೋದೀ ಮೀಡಿಯಾ’ ಬಳಸಿಕೊಂಡು, ಐತಿಹಾಸಿಕವಾದ ಈ ಅಹಿಂಸಾತ್ಮಕ, ಸಂವಿಧಾನಬದ್ಧ, ನ್ಯಾಯಯುತ ಹೋರಾಟದ ಬಗ್ಗೆ ತೀವ್ರ ಆಕ್ಷೇಪಾರ್ಹವಾದ ದುಷ್ಪ್ರಚಾರವನ್ನು ಹರಿಬಿಟ್ಟಿದೆ. ಈ ಎಲ್ಲ ತಿದ್ದುಪಡಿಗಳಿಂದ ರೈತರಿಗೆ ಹಿಂದೆಂದೂ ಇರದಿದ್ದಂತಹ ಲಾಭವಾಗುತ್ತದೆ, ಅವರ ಆದಾಯ ದುಪ್ಪಟ್ಟಾಗುತ್ತದೆ; ರೈತರು ಆತಂಕ ವ್ಯಕ್ತಪಡಿಸುತ್ತಿರುವಂತಹ ಎ.ಪಿ.ಎಂ.ಸಿ. ರದ್ದತಿ, ಎಂಎಸ್‌ಪಿ ರದ್ದತಿ ಮತ್ತಿತರ ಅಂಶಗಳು ಕಾಯ್ದೆಗಳಲ್ಲಿ ಇಲ್ಲ, ಅಷ್ಟಾಗಿಯೂ ರೈತರು ಸೂಚಿಸಿರುವ ಕೆಲವು ಬದಲಾವಣೆಗಳನ್ನು ಮಾಡಲು ಕೇಂದ್ರ ಸರ್ಕಾರ ಸಿದ್ಧವಿದೆ; ಆದರೂ ರೈತರು ಮತ್ತು ಕೆಲವು ರೈತ ಸಂಘಟನೆಗಳು ವಿರೋಧ ಪಕ್ಷಗಳ ಚಿತಾವಣೆಗೆ ಬಲಿಯಾಗಿ, ಮಾತುಕತೆಗಳಲ್ಲಿ ಸಹಕರಿಸದೆ ವಿತಂಡವಾದ ಮಾಡುತ್ತ ಇಲ್ಲಸಲ್ಲದ ಮೊಂಡು ಹಟ ಮಾಡುತ್ತಿವೆ; ಹೋರಾಟದ ಹೆಸರಿನಲ್ಲಿ ದೇಶದ್ರೋಹಿ, ವಿಚ್ಛಿದ್ರಕಾರಿ ಹಾಗೂ ಭಯೋತ್ಪಾದಕ ಶಕ್ತಿಗಳು ರೈತರನ್ನು ಎತ್ತಿಕಟ್ಟಿ ಕೇಂದ್ರ ಸರ್ಕಾರದ ವಿರುದ್ಧ ಪಿತೂರಿ ನಡೆಸುತ್ತಿವೆ … ಮುಂತಾಗಿ ಹಸೀ ಹಸೀ ಸುಳ್ಳಿನ ಸರಮಾಲೆಯನ್ನು ಹರಿಬಿಟ್ಟು, ರೈತರನ್ನು ತಿಳುವಳಿಕೆಯಿಲ್ಲದ ಮೂಢರಂತೆ, ಭಯೋತ್ಪಾದಕರಂತೆ  ಚಿತ್ರಿಸುತ್ತಿದೆ.

ಕೇಂದ್ರ ಸರ್ಕಾರದ ಈ ಎಲ್ಲ ರೈತದ್ರೋಹಿ ಹಾಗು ಸಂವಿಧಾನ-ವಿರೋಧಿ ಕ್ರಮಗಳನ್ನು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ (AIKSCC) ಕರ್ನಾಟಕ ರಾಜ್ಯ ಘಟಕ ತೀವ್ರವಾಗಿ ಖಂಡಿಸುತ್ತದೆ. ಬರೀ ಸುಳ್ಳುಗಳು ಮತ್ತು ಹುಸಿ ಆಶ್ವಾಸನೆಗಳಿಂದಲೇ ಜನರನ್ನು ನಂಬಿಸಿ ಕೇಂದ್ರದಲ್ಲಿ ಅಧಿಕಾರಕ್ಕೇರಿ, ಒಂದರಮೇಲೊಂದು ಜನವಿರೋಧಿ ನೀತಿಗಳನ್ನೂ ಕಾಯ್ದೆಗಳನ್ನೂ ಜಾರಿಗೆ ತರುತ್ತ, ಜನರ ಬದುಕನ್ನು ನರಕವಾಗಿಸಿರುವ ಬಿಜೆಪಿ ಸರ್ಕಾರದ ಈ ಎಲ್ಲ ಅಪಪ್ರಚಾರಗಳನ್ನು ಜನತೆ ನಂಬಿ ಮೋಸ ಹೋಗಬಾರದೆಂದು AIKSCC ಕರ್ನಾಟಕ ರಾಜ್ಯ ಘಟಕ ಮನವಿ ಮಾಡುತ್ತದೆ. ದೇಶದ ಅನ್ನದಾತರಾದ ರೈತಾಪಿ ವರ್ಗ ಅಮಾಯಕರಿರಬಹುದು, ಆದರೆ ಸರ್ಕಾರಗಳು ಬಿಂಬಿಸುತ್ತಿರುವಂತೆ ದಡ್ಡರೋ ಮೂರ್ಖರೋ ಅಲ್ಲ; ತಮಗೇನು ಬೇಕು, ಏನು ಬೇಡ ಎಂಬ ಬಗ್ಗೆ ಅವರಿಗೆ ಪೂರ್ಣ ಅರಿವಿದೆ ಎಂಬುದನ್ನು ಜನತೆ ಮನಗಾಣುತ್ತಾರೆಂಬ ನಂಬಿಕೆಯಿದೆ. ಈ ನಿಟ್ಟಿನಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ AIKSCC ಸಂಪೂರ್ಣ ಬೆಂಬಲ ನೀಡುವುದಲ್ಲದೆ ರೈತರು ಡಿ. 16 ರಿಂದ ಕರೆ ನೀಡಿರುವ ಅನಿರ್ದಿಷ್ಟಾವಧಿ ದೇಶವ್ಯಾಪಿ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ.

ಇತ್ತ ಕರ್ನಾಟಕದ ಬಿಜೆಪಿ ಸರ್ಕಾರವೂ ಸಹ ಕೇಂದ್ರದ ಈ ಎಲ್ಲ ಕಾಯ್ದೆಗಳನ್ನು ರಾಜ್ಯದಲ್ಲೂ ಅನುಷ್ಠಾನಕ್ಕೆ ತರಲು ಸುಗ್ರೀವಾಜ್ಞೆಗಳನ್ನು ಬಳಸುತ್ತ, ವಿಧಾನಮಂಡಲದಲ್ಲೂ ಕಾಯ್ದೆಯಾಗಿ ಪಾಸು ಮಾಡಿಕೊಳ್ಳಲು ಹವಣಿಸಿದೆ. ಅಲ್ಲದೆ, ಕಾರ್ಪೊರೇಟ್ ಕಂಪನಿಗಳು, ಭೂಗಳ್ಳ ಮಾಫಿಯಾಗಳು ಹಾಗೂ ಕಪ್ಪುಹಣದ ತಿಮಿಂಗಿಲಗಳು ತಮಗೆ ಬೇಕಾದಂತೆ, ಬೇಕಾದ ಕೃಷಿಯೇತರ ಲಾಭಕೋರ ಉದ್ದೇಶಕ್ಕೆ, ಬೇಕಾದಷ್ಟು ಕೃಷಿ ಭೂಮಿಯನ್ನು ಖರೀದಿಸಲು, ವ್ಯವಸಾಯದಲ್ಲಿ ತೊಡಗಲು ಅನುಕೂಲವಾಗುವಂತೆ ’ಕರ್ನಾಟಕ ಭೂ ಸುಧಾರಣೆ ಕಾಯ್ದೆ-1961’ಕ್ಕೆ ಕೃಷಿಗೆ ಮಾರಕವಾಗುವಂತಹ ತಿದ್ದುಪಡಿಗಳನ್ನು ಮಾಡಿ ರೈತರನ್ನು ದಿವಾಳಿಯಾಗಿಸಲು ಹೊರಟಿದೆ. ಅದೇ ರೀತಿಯಲ್ಲಿ ಕಾರ್ಪೋರೇಟ್ ಕಂಪನಿಗಳ ಮುಂಗಡ ಕೃಷಿ ವ್ಯಾಪಾರಕ್ಕೆ ಅನೂಕೂಲವಾಗುವಂತೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಇದರ ವಿರುದ್ಧ ಕರ್ನಾಟಕದ ಸಮಸ್ತ ರೈತಾಪಿ ಜನತೆ ತಿಂಗಳುಗಟ್ಟಲೆ ಹೋರಾಟ ಮಾಡಿದರೂ ಸರ್ಕಾರ ಅದಕ್ಕೆ ಕಿವಿಗೊಡುತ್ತಿಲ್ಲ.

ಇಷ್ಟು ಸಾಲದೆಂಬಂತೆ, ಕಾರ್ಪೋರೇಟ್ ಕಂಪನಿಗಳ ಲೂಟಿಗೆ ನೆರವಾಗಲು, ರೈತರಿಗೆ ಮಾರಕವಾಗುವಂತಹ ಜಾನುವಾರು ಹತ್ಯ ನಿಷೇಧ(ತಿದ್ದುಪಡಿ) ಕಾಯ್ದೆಯನ್ನು ಜಾರಿಗೊಳಿಸಲು ಸರ್ಕಾರ ಸಜ್ಜಾಗಿದೆ. ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ರೈತರು ತಮ್ಮ ಅಗತ್ಯಕ್ಕೆ ತಕ್ಕಂತೆ ಜಾನುವಾರುಗಳನ್ನು ಸಾಕುತ್ತ, ದನಕರುಗಳನ್ನು ಗೋಮಾತೆಯೆಂದು ಪೂಜಿಸುತ್ತ ಬಂದಿದ್ದಾರೆ. ಅನುಪಯುಕ್ತವಾದವುಗಳನ್ನು ವಿಲೇವಾರಿ (ಡಿಸ್ಪೋಸ್) ಮಾಡುತ್ತಲೂ ಬಂದಿದ್ದಾರೆ. ದೇಸೀ ತಳಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸರ್ಕಾರಗಳು ಸರಿಯಾಗಿ ಗಮನ ನೀಡದೆ ಹೋದ ಕಾರಣ ಹಲವು ಗೋ ತಳಿಗಳು ಅವಸಾನದ ಹಂತ ತಲುಪಿವೆಯೇ ಹೊರತು, ರೈತರು ಅನುಪಯುಕ್ತ ಜಾನುವಾರುಗಳನ್ನು ವಿಲೇವಾರಿ ಮಾಡಿದ್ದರಿಂದಾಗಲಿ, ಅಂಥವುಗಳ ಮಾಂಸವನ್ನು ಕೆಲವು ಜನಸಮುದಾಯಗಳು ಆಹಾರವಾಗಿ ಬಳಸುತ್ತ ಬಂದುದರಿಂದಾಗಲಿ ದೇಶದಲ್ಲಿ ಯಾವತ್ತೂ ದನಕರುಗಳ/ಜಾನುವಾರುಗಳ ಕೊರತೆ ಉಂಟಾಗಿಲ್ಲ. ಈಗ ಬಿಜೆಪಿ ಸರ್ಕಾರ ತರಲು ಹೊರಟಿರುವ ಕಾಯ್ದೆ ಕೇವಲ ದುರುದ್ದೇಶದಿಂದ ಕೂಡಿದ್ದು, ಅದರಿಂದಾಗಿ ರೈತರು ಜಾನುವಾರು ಸಾಕುವುದನ್ನೇ ಕೈಬಿಡುವಂತಾಗಿ, ಕೃಷಿ ಬದುಕಿನ ಮೇಲೆ, ಹೈನುಗಾರಿಕೆಯ ಮೇಲೆ ಹಾಗೂ ಕೃಷಿ ಆರ್ಥಿಕತೆಯ ಮೇಲೆ ತೀವ್ರವಾದ ಮಾರಕ ಪರಿಣಾಮಗಳು ಉಂಟಾಗುತ್ತವೆ. ಇರುವ ದನಕರುಗಳ ಸಂತತಿಯೂ ಕ್ರಮೇಣ ಅವಸಾನಗೊಳ್ಳುತ್ತದೆ. ಹೈನೋದ್ಯಮ, ಮಾಂಸೋದ್ಯಮ ಮತ್ತು ಚರ್ಮೋದ್ಯಮಗಳು ಕಾರ್ಪೋರೇಟ್ ಲೂಟಿಯ ಪಾಲಾಗಲಿವೆ.

ಆದಕಾರಣ, ಕರ್ನಾಟಕ ಸರ್ಕಾರ ವಿಧಾನ ಮಂಡಲದಲ್ಲಿ ಪಾಸು ಮಾಡಿಕೊಂಡಿರುವ ಭೂ ಸುಧಾರಣಾ ತಿದ್ದುಪಡಿ ಮಸೂದೆ-2020, ಎಪಿಎಂಸಿ ತಿದ್ದುಪಡಿ ಮಸೂದೆ-2020, ಜಾನುವಾರು ಹತ್ಯ ನಿಷೇಧ ತಿದ್ದುಪಡಿ ಮಸೂದೆ-2020 ಮತ್ತು ಕಾರ್ಮಿಕ ಕಾಯ್ದೆ ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳಬೇಕು, ಕೇಂದ್ರ ಸರ್ಕಾರ ತಂದಿರುವ ಕಾಯ್ದೆಗಳನ್ನು ರಾಜ್ಯದಲ್ಲಿ ಜಾರಿ ಮಾಡಬಾರದು ಎಂದು AIKSCC ರಾಜ್ಯ ಘಟಕ ಆಗ್ರಹಿಸುತ್ತದೆ. ಈ ನಿಟ್ಟಿನಲ್ಲಿ AIKSCC ಯು ಸಮಸ್ತ ರೈತ-ದಲಿತ-ಕಾರ್ಮಿಕ ಹಾಗೂ ಜನಪರ ಸಂಘಟನೆಗಳ ಸಹಯೋಗದೊಂದಿಗೆ ಡಿಸೆಂಬರ್ 16 ರಿಂದ ಬೆಂಗಳೂರಿನ ಮೌರ್ಯ ಸರ್ಕಲ್ ಗಾಂಧಿ ಪ್ರತಿಮೆ ಬಳಿ ನಿರಂತರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ. ರೈತಾಪಿಯ ಈ ಎಲ್ಲ ಹಕ್ಕೊತ್ತಾಯಗಳು ಈಡೇರುವವರೆಗೂ ಹೋರಾಟಗಳು ನಿಲ್ಲುವುದಿಲ್ಲ, ಇದರಿಂದ ಉಂಟಾಗುವ ಯಾವುದೇ ದುಷ್ಪರಿಣಾಮಗಳಿಗೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು AIKSCCಯ ರಾಜ್ಯ ಮುಖಂಡರಾ ಕವಿತಾ ಕುರುಗಂಟಿ, ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ, ಜಿ.ಸಿ.ಬಯ್ಯಾರೆಡ್ಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

 

 

 

Donate Janashakthi Media

Leave a Reply

Your email address will not be published. Required fields are marked *