ರೈತರ ಹೋರಾಟಕ್ಕೆ ನಾಗರಿಕ ಸಮಾಜದ ಚಳವಳಿಗಳ ಮುಖಂಡರ ಸೌಹಾರ್ದ ಬೆಂಬಲ

  • ಘನತೆಯ ಬದುಕಿಗಾಗಿ ನ್ಯಾಯಯುತ ಮತ್ತು ಪ್ರಜಾಸತ್ತಾತ್ಮಕ ಹೋರಾಟದಲ್ಲಿ  ರೈತರ ಬೆಂಬಲಕ್ಕೆ ನಿಲ್ಲಲು ಮುಖಂಡರ ಕರೆ

ಕೇಂದ್ರ ಸರಕಾರ ದಿಲ್ಲಿಯ ಸುತ್ತಮುತ್ತಲಿನ ಪಂಜಾಬ್, ಹರ್ಯಾಣ , ಉತ್ತರಪ್ರದೇಶ, ಉತ್ತರಾಖಂಡದಿಂದ ಮಾತ್ರವಲ್ಲ, ದೇಶದ ಇತರೆಡೆಗಳಿಂದಲೂ ಬಂದಿರುವ ಲಕ್ಷಾಂತರ ರೈತರನ್ನು ದಿಲ್ಲಿಯ ಪ್ರವೇಶ ಪ್ರದೇಶಗಳಲ್ಲಿ ಪೋಲೀಸ್, ಬಿಎಸ್‍ಎಫ್‍ , ಆಶ್ರುವಾಯು, ಲಾಠಿಪ್ರಹಾರ, ಜಲಫಿರಂಗಿಗಳಿಂದ ತಡೆದು ನಿಲ್ಲಿಸಿರುವುದನ್ನು ಖಂಡಿಸಿರುವ  ನಾಗರಿಕ ಸಮಾಜದ ವಿವಿಧ ವಿಭಾಗಗಳಿಗೆ ಸೇರಿದ ಪ್ರಮುಖರು ಅವರ ಧೀರ ಹೋರಾಟಕ್ಕೆ ಬೆಂಬಲ ಮತ್ತು ಸೌಹಾರ್ದ ವ್ಯಕ್ತಪಡಿಸಿದ್ದಾರೆ. 

ಡಿಸೆಂಬರ್‍ 2ರಂದು ನೇಶನ್‍ ಫಾರ್ ಫಾರ್ಮರ್ಸ್, ಪಿ.ಎ.ಆರ್‍.ಐ., ಫೋರಂ ಫಾರ್ ಟ್ರೇಡ್‍ ಅಂಡ್ ‍ಜಸ್ಟಿಸ್, ಇನ್ಸಾಫ್, ಅನ್ವೇಷಣ್, ಪೀಪಲ್‍ ಫಸ್ಟ್, ರೈಟ್‍ ಟು ಫುಡ್‍ ಕ್ಯಾಂಪೇನ್, ಪಿಯುಸಿಎಲ್‍, ಜನವಾದಿ ಲೇಖಕ್ ಸಂಘ್, ಅಖಿಲ ಭಾರತ ಜನವಿಜ್ಞಾನ ಜಾಲ, ಅಖಿಲ ಭಾರತ ಜನವಾದಿ ಮಹಿಳಾ ಸಂಘ, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘ, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ, ರಾಷ್ಟ್ರೀಯ ಮಹಿಳಾ ಒಕ್ಕೂಟ ಮುಂತಾದ ಸಂಘಟನೆಗಳ ಮುಖಂಡರು ಮತ್ತು ಚಿಂತಕರು ಸೇರಿದಂತೆ 200ಕ್ಕೂ ಹೆಚ್ಚು ಮಂದಿ ಈ ಆನ್‍ಲೈನ್ ಸಭೆಯಲ್ಲಿ ಭಾಗವಹಿಸಿದರು.

ಸರಕಾರ ಸಪ್ಟೆಂಬರ್‍ 2020ರಲ್ಲಿ ಸಂಸತ್ತಿನಲ್ಲಿ ಪ್ರಜಾಪ್ರಭುತ್ವ-ವಿರೋಧಿ ರೀತಿಯಲ್ಲಿ ಪಾಸು ಮಾಡಿಸಿಕೊಂಡಿರುವ ಎರಡು ಕಾಯ್ದೆಗಳು ಮತ್ತು ಒಂದು ತಿದ್ದುಪಡಿ ಕಾಯ್ದೆ ಮತ್ತು ವಿದ್ಯುಚ್ಛಕ್ತಿ ಮಸೂದೆಯನ್ನು ಹಿಂತೆಗೆದುಕೊಂಡು  ರೈತರ ಈ ಬೇಡಿಕೆಯನ್ನು ಮನ್ನಿಸುವ ಪ್ರಾಮಾಣಿಕತೆಯನ್ನು ತೋರಿಸಬೇಕು, ತಕ್ಷಣವೇ ಈ ಕಾಯ್ದೆಗಳ ಜಾರಿಯನ್ನು ತಡೆಯುವ ಸುಗ್ರೀವಾಜ್ಞೆಯನ್ನು ಹೊರಡಿಸಬೇಕು ಎಂದು ಈ ಸಭೆ ಆಗ್ರಹಿಸಿತು.

ಈ ಸಭೆಯ ಸಂಘಟಕರಲ್ಲಿ ಒಬ್ಬರಾದ ನೇಶನ್‍ ಫಾರ್ ‍ಫಾರ್ಮರ್ಸ್‍ ನ ದಿನೇಶ ಅಬ್ರೋಲ್ ಇದು ಕೇವಲ ಪಂಜಾಬೀ ರೈತರ ಚಳುವಳಿಯಲ್ಲ, ಇದು ಅಖಿಲ ಭಾರತ ಆಂದೋಲನ ಎಂದರು. ಹರ್ಯಾಣ ಸರಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಎಂ.ಜಿ.ದೇವಸಹಾಯಂ ಮಾತಾಡುತ್ತ “ರೈತರ ಮೇಲೆ ಜಲಫಿರಂಗಿಗಳನ್ನು ಬಳಸಿರುವುದು ಬರ್ಬರ ಕೃತ್ಯ, ಇದು ಚಳಿಗಾಲ, ಮತ್ತು ಅಲ್ಲಿ 60-70 ವರ್ಷದ ಜನಗಳಿದ್ದರು” ಎಂದರು.

ಭಿನ್ನಮತವನ್ನು ಒಂದು ನಿಯೋಜಿತ ಸ್ಥಳಕ್ಕೆ ಸೀಮಿತಗೊಳಿಸಬೇಕು ಎಂದು ಸುಪ್ರಿಂ ಕೋರ್ಟ್‍ ಹೇಳಿದೆ, ಆದರೆ ಭಿನ್ನಮತ ಎಂದರೆ ನಿಯೋಜಿತ ಸ್ಥಳಗಳನ್ನು ಮುರಿಯುವುದು ಎಂದೇ ಅರ್ಥ, ರೈತರು ಅದನ್ನು ಮಾಡುತ್ತಿದ್ದಾರೆ  ಎಂದು ಪ್ರಖ್ಯಾತ ಪತ್ರಕರ್ತ ಪಿ. ಸಾಯಿನಾಥ್ ಹೇಳಿದರು.

ಈ ಕಾಯ್ದೆಗಳನ್ನು ಕೊವಿಡ್‍ ಪಿಡುಗು ತಾರಕಕ್ಕೆ ಏರಿದ್ದಾಗ, ಸರಕಾರಕ್ಕೆ ಬೇರೆ ಜವಾಬ್ದಾರಿಗಳಿದ್ದಾಗ ಏಕೆ ಪಾಸು ಮಾಡಿಸಿಕೊಳ್ಳಲಾಯಿತು? ಇಂತಹ ಸಮಯದಲ್ಲಿ ಈ ಸುಧಾರಣೆಗಳನ್ನು ತುರುಕಿಸಿದರೆ ಕಾರ್ಮಿಕರು ಮತ್ತು ರೈತರು ಅವುಗಳಿಗೆ ವಿರೋಧವನ್ನು ಸಂಘಟಿಸಲು ಸಾಧ್ಯವಾಗುವುದಿಲ್ಲ ಎಂದು ಅದು ಭಾವಿಸಿತು, ಆದರೆ ಅದೀಗ ಹುಸಿಯಾಗಿದೆ ಎಂದು ಅವರು ಮುಂದುವರೆದು ಹೇಳಿದರು.

ಜವಹರಲಾಲ್‍ ವಿವಿ ಯ ಪ್ರಾಧ್ಯಾಪಕ ಹಾಗೂ ಶ್ರಮ ಮತ್ತು ಕೃಷಿ ಅರ್ಥಶಾಸ್ತ್ರದ ಪರಿಣಿತರೂ ಆದ ಪ್ರವೀಣ್ ಝಾ ಈ ಕಾಯ್ದೆಗಳು ಕೃಷಿ ವಲಯದ ಮೇಲೆ ಎಸಗಿರುವ ಸಾರ್ವಜನಿಕ ಧೋರಣೆ ಚಾಲಿತ ಅಪರಾಧ ಎಂದು ವರ್ಣಿಸಿದರು. ಕಾಂಟ್ರಾಕ್ಟ್ ಕೃಷಿ ಕಳೆದ-40-50 ವರ್ಷಗಳಲ್ಲಿ ಬೇರೆ ದೇಶಗಳಲ್ಲಿ ಕೃಷಿಯನ್ನು ಅಸಮರ್ಥಗೊಳಿಸಿದೆ; ಬಂಡವಾಳಿಗರಿಗೆ ಅಧಿಕಾರ ಕೊಡಬೇಕಾದರೆ ಎಪಿಎಂಸಿಗಳನ್ನು ಮುಗಿಸಿಬಿಡಬೇಕು, ಅದನ್ನು ಮಾಡಲು ಸರಕಾರ ಮುಂದಾಗಿದೆ ಎಂದೂ ಅವರು ಹೇಳಿದರು.

ಕೃಷಿ ರಾಜ್ಯಪಟ್ಟಿಯಲ್ಲಿರುವ ವಿಷಯವಾಗಿರುವಾಗ ಅದಕ್ಕೆ ಸಂಬಂಧಪಟ್ಟ ಎಲ್ಲ ಚಟುವಟಿಕೆಗಳೂ ರಾಜ್ಯದ ಅಧಿಕಾರ ವ್ಯಾಪ್ತಿಯೊಳಕ್ಕೆ ಬರಬೇಕು. ಆದ್ದರಿಂದ ಕೇಂದ್ರ ಸರಕಾರ ಈ ಕಾಯ್ದೆಯನ್ನು ತಂದಿರುವುದು “ಶಾಸಕೀಯ ದುಸ್ಸಾಹಸ” ಎಂದು  ಟಾಟಾ ಸಮಾಜ ವಿಜ್ಞಾನಗಳ ಸಂಸ್ಥೆಯ ಪ್ರಾಧ‍್ಯಾಪಕ ಆರ್.‍ ರಾಂಕುಮಾರ್ ಹೇಳಿದರು. ಇದಕ್ಕೆ  ಸುಪ್ರಿಂ ಕೋರ್ಟಿನಲ್ಲಿ ಸವಾಲು ಹಾಕುವುದು ಸಾಧ್ಯವಿದೆ ಎಂದರು. ಕೇಂದ್ರ ಸರಕಾರ ಈ ತ್ರಿವಳಿ ಕಾಯ್ದೆಗಳನ್ನು ರದ್ದುಗೊಳಿಸಿ ರಾಜ್ಯ ಸರಕಾರಗಳೊಂದಿಗೆ ಸಮಾಲೋಚಿಸುವ ಮೂಲಕ ಅವರವರಿಗೆ ಅನುಗುಣವಾದ ರೀತಿಯಲ್ಲಿ ಕಾಯ್ದೆಗಳ ಮೂಡಿ ಬರುವಂತೆ ಮಾಡಬೇಕು ಎಂದು ಸಲಹೆ ಮಾಡಿದರು, ಈ ಕಾಯ್ದೆಯಿಂದ ರೈತರಿಗೆ ಹೆಚ್ಚಿನ ಸ್ವಾತಂತ್ರ್ಯ ಸಿಗುತ್ತದೆ,  ಮಧ್ಯವರ್ತಿಗಳು ಇಲ್ಲವಾಗುತ್ತಾರೆ, ರೈತರಿಗೆ ಹೆಚ್ಚಿನ ಬೆಲೆಗಳು ಸಿಗುತ್ತವೆ ಎಂಬುದೆಲ್ಲ ಸರಕಾರದ ಸುಳ‍್ಳು ದಾವೆಗಳು ಎಂದರು.

ಮಹಿಳಾ ಸಂಘಟನೆಗಳ ಮುಖಂಡರಾದ ಮರಿಯಮ್ ಧವಳೆ, ಆನಿ ರಾಜ, ಕವಿತಾ ಕೃಷ್ಣನ್ ಮತ್ತಿತರರು ಮಾತಾಡಿದರು.

“ ಈ ಕಾನೂನುಗಳು ಇನ್ನಷ್ಟು ಭೂಹೀನತೆಗೆ ಮತ್ತು ದಾರಿದ್ರ್ಯಕ್ಕೆ ಅನುವು ಮಾಡಿಕೊಡುತ್ತವೆ ಎಂಬುದು ನಮ್ಮ ನಂಬಿಕೆ. ಏಕೆಂದರೆ ಇವು ಕಾರ್ಪೊರೇಟ್‍ ಲಾಬ್ಬಿಗಳ ಅನಿರ್ಬಂಧಿತ ಲೂಟಿಗೆ ಅವಕಾಶ ಕಲ್ಪಿಸುತ್ತವೆ. ಸರಕಾರ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಡಬ್ಲ್ಯುಟಿಒ ದ ಇತರ ಅಭಿವೃದ್ಧಿ ಹೊಂದಿರುವ ದೇಶಗಳ ಒತ್ತಡಕ್ಕೆ ಒಳಗಾಗಿದೆ. ಅವರುಗಳು ಪಂಜಾಬ್‍, ಹರ್ಯಾಣ, ಉತ್ತರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಮತ್ತು ಇತರ ಹಲವು ರಾಜ್ಯಗಳು ಸ್ಥಾಪಿಸಿರುವ ಸಬ್ಸಿಡಿ ವ್ಯವಸ್ಥೆ, ಸಾರ್ವಜನಿಕ ಖರೀದಿ ಮತ್ತು ಸಾರ್ವಜನಿಕ ವಿತರಣ ವ್ಯವಸ್ಥೆಗಳನ್ನು ಕಳಚಿ ಹಾಕಬೇಕು ಎಂದು ಒತ್ತಡ ಹಾಕುತ್ತಿವೆ” ಎಂದಿರುವ ಈ ಸಭೆಯ ನಂತರ ಹೊರಡಿಸಿರುವ ಜಂಟಿ ಹೇಳಿಕೆ, ಇದುವರೆಗೆ ಈ ಒತ್ತಡಗಳನ್ನು ಎದುರಿಸಿ ನಿಲ್ಲುವ ಪ್ರಗತಿಪರ ನಿಲುವನ್ನು ಭಾರತ ವಹಿಸಿತ್ತು, ಆದರೆ ಈಗ ಹೊಸ ಕೃಷಿ ಕಾಯ್ದೆಗಳನ್ನು ಪಾಸು ಮಾಡಿಸಿರುವುದು ತದ್ವಿರುದ್ಧ ಭಾವನೆಯನ್ನು ಉಂಟು ಮಾಡಿದೆ ಎಂದಿದೆ.

“ ದೇಶಾದ್ಯಂತ ಎಲ್ಲ ಪ್ರಗತಿಪರ ಮತ್ತು ಪ್ರಜಾಪ್ರಭುತ್ವವಾದಿ ಸಂಘಟನೆಗಳು ಮತ್ತು ವ್ಯಕ್ತಿಗಳು ಒಂದು ಘನತೆಯ ಬದುಕಿಗಾಗಿ ನ್ಯಾಯಯುತ ಮತ್ತು ಪ್ರಜಾಸತ್ತಾತ್ಮಕ ಹೋರಾಟದಲ್ಲಿ ರೈತರ ಬೆಂಬಲಕ್ಕೆ ನಿಲ್ಲಬೇಕು” ಎಂದು ಕರೆ ನೀಡಿತು..

ಈ ಸಭೆ ರೈತರ ಬಹುಕಾಲದ ಬೇಡಿಕೆಗಳಾದ ಸಾಲಮನ್ನಾ ಮತ್ತು ಸ್ವಾಮಿನಾಥನ್‍ ಆಯೋಗದ ಶಿಫಾರಸಿನಂತೆ ಕನಿಷ್ಟ ಬೆಂಬಲ ಬೆಲೆ ನಿರ್ಧಾರವನ್ನೂ ಆಗ್ರಹಿಸಿತು. ಅಲ್ಲದೆ ಸಂಕಟದಲ್ಲಿರುವ ಕುಟುಂಬಗಳಿಗೆ ನಗದು ಬೆಂಬಲ, ಮನರೇಗದ ಜಾರಿ ಮತ್ತು ರೈತರಿಗೆ ಶಿಕ್ಷಣ ಮತ್ತು ಆರೋಗ್ಯಪಾಲನೆಯೂ ಸೇರಿದಂತೆ ಸಾರ್ವತ್ರಿಕ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನೂ ಆಗ್ರಹಿಸಿತು.

ರೈತರ ಈ ಸಾಮೂಹಿಕ ಪ್ರತಿಭಟನೆಯ ತೀವ್ರತೆಯನ್ನು ಕಂಡ ಸರಕಾರ ಕರೆದ ಮಾತುಕತೆಯ ಸಮಯದಲ್ಲಿ ಈ ಕಾಯ್ದೆಗಳನ್ನು ಸಮರ್ಥಿಸಿಕೊಳ್ಳುತ್ತ ಪ್ರತಿಭಟನೆಗಳನ್ನು ಚದುರಿಸಲು ಮತ್ತು ಕೊಲ್ಲಲು ಮತ್ತು ವಿಭಜಿಸಿ ಆಳುವ ರಾಜಕೀಯ ನಡೆಸಲು ಪ್ರಯತ್ನಿಸಿದೆ. ಆದರೆ 500ಕ್ಕೂ ಹೆಚ್ಚು ರೈತ ಸಂಘಟನೆಗಳನ್ನು ಪ್ರತಿನಿಧಿಸುವ ಜಂಟಿ ಕ್ರಿಯಾ ಸಮಿತಿ ಬಹುಶಃ ರೈತರ ನೈಜ ಬೇಡಿಕೆಗಳನ್ನು ಪರಿಶೀಲಿಸುವ ಬದಲು ಅವರಿಗೆ ಶಿಕ್ಷಣ ನೀಡಲೆಂದೇ ಒಂದು ಸಮಿತಿಯ ರಚನೆಯ ಪ್ರಸ್ತಾಪವನ್ನು ತಿರಸ್ಕರಿಸಿದ್ದು ಸರಿಯಾಗಿಯೇ ಇದೆ ಎಂದೂ ಈ ಸಭೆಯ ಜಂಟಿ ಹೇಳಿಕೆ ಅಭಿಪ್ರಾಯ ಪಟ್ಟಿದೆ.

Donate Janashakthi Media

Leave a Reply

Your email address will not be published. Required fields are marked *