ಮಾ. 28: ರೈತ-ವಿರೋಧಿ ಕಾಯ್ದೆಗಳ ಹೋಳಿ ದಹನ- ಎಸ್.ಕೆ.ಎಂ. ಕರೆ
ಮಾರ್ಚ್ 6 ರಂದು ದಿಲ್ಲಿ ಗಡಿಗಳಲ್ಲಿ ರೈತರ ಹೋರಾಟ 100 ದಿನಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ಪಶ್ಚಿಮ ಹೊರವಲಯ ಹೆದ್ದಾರಿ ಬಂದ್ ಮತ್ತು ಮಾರ್ಚ್ 8ರಂದು ದಿಲ್ಲಿ ಗಡಿಗಳಲ್ಲಿ ರೈತ ಮಹಿಳಾ ದಿನಾಚರಣೆಯ ನಂತರ ಮಾರ್ಚ್ 10ರಂದು, ಹೋರಾಟದ 105ನೇ ಸಭೆ ನಡೆಸಿದ ಸಂಯುಕ್ತ ಕಿಸಾನ್ ಮೋರ್ಚಾ ರೈತರ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಕಾರ್ಯಕ್ರಮವನ್ನು ಪ್ರಕಟಿಸಿದೆ.
ಮಾರ್ಚ್ 26ರಂದು ಭಾರತ ಬಂದ್ ಯೋಜಿಸಲು ಮಾರ್ಚ್ 17 ರಂದು ಕಾರ್ಮಿಕ ಸಂಘಟನೆಗಳು ಮತ್ತು ಇತರ ಸಮೂಹ ಸಂಘಟನೆಗಳೊಂದಿಗೆ ಜಂಟಿ ಸಮಾವೇಶ ನಡೆಯುತ್ತದೆ.
ಇದಕ್ಕೆ ಮೊದಲು ಮಾರ್ಚ್ 15ನ್ನು ಕಾರ್ಪೊರೇಟ್-ವಿರೋಧಿ ದಿನ ಮತ್ತು ಸರ್ಕಾರ-ವಿರೋಧಿ ದಿನವಾಗಿ ಎಲ್ಲಾ ಜಿಲ್ಲೆಗಳಲ್ಲಿ ಪೆಟ್ರೋಲ್-ಡೀಸೆಲ್- ಅಡುಗೆ ಅನಿಲ ಬೇಲೆಯೇರಿಕೆಗಳು ಮತ್ತು ಇತರ ಬೆಲೆಯೇರಿಕೆಗಳ ವಿರುದ್ಧ ಎಸ್‌ಡಿಎಂ/ಡಿಎ ಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಮತ್ತು ಎಲ್ಲ ರೈಲು ನಿಲ್ದಾಣಗಳಲ್ಲಿ ಖಾಸಗೀಕರಣದ ವಿರುದ್ಧ ಕಾರ್ಮಿಕ ಸಂಘಟನೆಗಳೊಂದಿಗೆ ಮತಪ್ರದರ್ಶನಗಳನ್ನು ನಡೆಸಲಾಗುವುದು.
ಮಾರ್ಚ್ 19ರಂದು ದೇಶಾದ್ಯಂತ ಮಂಡಿಗಳಲ್ಲಿ ‘ಎಫ್‌ಸಿಐ ಮತ್ತು ಕೃಷಿ ಬಚಾವೋ’ ಪ್ರತಿಭಟನೆಗಳನ್ನು ನಡೆಸಲಾಗುವುದು.
ಭಗತ್ ಸಿಂಗ್ ಹುತಾತ್ಮರಾದ ಮಾರ್ಚ್ 23ರಂದು ದೇಶಾದ್ಯಂತದಿಂದ ಯುವಜನರು ದಿಲ್ಲಿ ಗಡಿಗಳಿಗೆ ಬಂದು ರೈತರ ಪ್ರತಿಭಟನೆಗಳಲ್ಲಿ ಪಾಲುಗೊಳ್ಳುತ್ತಾರೆ.
ಮಾರ್ಚ್ 26ರಂದು ಈ ಹೋರಾಟಕ್ಕೆ ನಾಲ್ಕು ತಿಂಗಳಾಗುವ ಸಂದರ್ಭದಲ್ಲಿ ಒಂದು ಸಂಪೂರ್ಣ ಭಾರತ ಬಂದ್ ಆಚರಿಸಲಾಗುವುದು.
ಮಾರ್ಚ್ 28 ರಂದು ಹೋಳಿ ದಹನವನ್ನು ರೈತ-ವಿರೋಧಿ ಕಾಯ್ದೆಗಳ ದಹನದ ಮೂಲಕ ಆಚರಿಸಲಾಗುವದು ಎಂದು ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧರಿಸಿದೆ.
ರೈತ ಆಂದೋಲನ ಇದುವರೆಗೂ ಶಾಂತಿಯುತವಾಗಿ ನಡೆಯುತ್ತಿದ್ದರೂ ಕೆಲವು ವೆಬ್‌ಸೈಟ್‌ಗಳು ಕಿಸಾನ್ ಚಳುವಳಿ ‘ಸರ್‌ಬ್ಲೋಹ್ ರ‍್ಯಾನ್ಸಮ್‌ವೇರ್’ ಎಂಬ ಕುತಂತ್ರಾಂಶದ ಮೂಲಕ ಬೆದರಿಕೆ ಹಾಕುತ್ತದೆ ಎಂದು ಅಪಪ್ರಚಾರ ಮಾಡುತ್ತಿವೆ. ಆದರೆ ಇದಕ್ಕೂ ತಮಗೂ ಏನೂ ಸಂಬಂಧವಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಸ್ಪಷ್ಟಪಡಿಸಿದೆ.
ಮಾರ್ಚ್ 10ರಂದು ಹರ‍್ಯಾಣದ ಅಲೆವಾದಲ್ಲಿ ಮತ್ತು ದುಲ್ಕೇರಿಯಲ್ಲಿ ಕಿಸಾನ್ ಏಕತಾ ಮಹಾಪಂಚಾಯತ್ ನಡೆದಿವೆ. ಕೊಲ್ಕತಾದಲ್ಲಿ “ಬಿಜೆಪಿಗೆ ಮತ ಇಲ್ಲ” ಎಂದು ರ‍್ಯಾಲಿ ನಡೆದಿದೆ. ಇದರಲ್ಲಿ 10,000 ವಿದ್ಯಾರ್ಥಿಗಳು, ಯುವಜನರು, ರೈತರು, ಕಾರ್ಮಿಕರು ಮತ್ತು ಇತರ ನಾಗರಿಕರು ಭಾಗವಹಿಸಿದರು ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಈ ಹೇಳಿಕೆ ತಿಳಿಸಿದೆ.