ರೇವ್ ಪಾರ್ಟಿ ಮೇಲೆ ದಾಳಿ ಮಾಡಿದ ಉತ್ತರ ಪ್ರದೇಶ ಪೊಲೀಸರು 35 ಕಾಲೇಜು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ.
ನೋಯ್ಡಾದ ಸೂಪರ್ ಟೆಕ್ ಸೂಪರ್ ನೋವಾದಲ್ಲಿ ರೇವ್ ಪಾರ್ಟಿ ಆಯೋಜಿಸಲಾಗಿದ್ದು, ಸ್ಥಳೀಯ ನಿವಾಸಿಗಳು ಪಾರ್ಟಿಯಲ್ಲಿ ಡ್ರಗ್ಸ್ ಮುಂತಾದ ಮಾದಕ ವಸ್ತುಗಳನ್ನು ಬಳಸಲಾಗುತ್ತಿದೆ ಎಂದು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದರು.
ಕಟ್ಟಡದ ಮೇಲಿಂದ ಆಲ್ಕೊಹಾಲ್ ಬಾಟಲಿಯನ್ನು ಮೇಲಿಂದ ವ್ಯಕ್ತಿಯೊಬ್ಬ ಎಸೆದಿದ್ದ. ಇದರಿಂದ ಸ್ಥಳೀಯರು ಆತಂಕಗೊಂಡಿದ್ದು, ವಿದ್ಯಾರ್ಥಿಗಳ ಗುಂಪು ನಡೆಸುತ್ತಿರುವ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಲಾಗುತ್ತಿದೆ ಎಂದು ಅಪಾರ್ಟ್ ಮೆಂಟ್ ಸೊಸೈಟಿ ಸದಸ್ಯರು ಆರೋಪಿಸಿದ್ದರು.
ವಾಟ್ಸಪ್ ಗ್ರೂಪ್ ಮೂಲಕ ರೇವ್ ಪಾರ್ಟಿ ಗೆ ಆಹ್ವಾನ ನೀಡಲಾಗಿದ್ದು, ಒಬ್ಬರಿಗೆ 500 ರೂ. ಮತ್ತು ಜೋಡಿಯಾಗಿ ಬಂದರೆ 800 ರೂ. ಶುಲ್ಕ ನಿಗದಿಪಡಿಸಲಾಗಿದೆ.
ಪೊಲೀಸರು 5 ಆಯೋಜಕರು ಹಾಗೂ 35 ಕಾಲೇಜು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ದಾಳಿಯ ವೇಳೆ ಹುಕ್ಕಾ, ಮದ್ಯದ ಬಾಟಲಿ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.