– ಸನ್ಯಾಸಿಗಳ ತಂಡದಿಂದ ಕರೆನ್ಸಿ ತಯಾರಿಕೆ: ನಿತ್ಯಾನಂದಸ್ವಾಮಿ
ನವದೆಹಲಿ: ಕೊರೊನಾ ಅಟ್ಟಹಾಸದಿಂದಾಗಿ ಭಾರತದಲ್ಲಿ ಗಣೇಶ ಚತುರ್ಥಿಯನ್ನು ಸರಳವಾಗಿ ಆಚರಿಸುವ ನಿರ್ಧಾರ ಕೈಗೊಂಡಿದ್ದರೆ, ಅತ್ತ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಇದೇ ದಿನದಂದು ತನ್ನ ಕೈಲಾಸ ದೇಶದ ರಿಸರ್ವ್ ಬ್ಯಾಂಕ್ ಘೋಷಿಸಿದ್ದಾನೆ.
ಅತ್ಯಾಚಾರದ ಆರೋಪ ಎದುರಿಸುತ್ತಿದ್ದು ಭಾರತದಿಂದ ಪರಾರಿಯಾಗಿರುವ ನಿತ್ಯಾನಂದ ಸ್ವಾಮಿ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಇಕ್ವಿಡಾರ್ ನ ಸಮುದ್ರದ ಮಧ್ಯದಲ್ಲಿರುವ ಪುಟ್ಟ ದ್ವೀಪದಲ್ಲಿ ಅತ್ಯಾಚಾರ ಆರೋಪಿ ನಿತ್ಯಾನಂದ ತನ್ನದೇ ಕೈಲಾಸ ದೇಶದ ರಿಸರ್ವ್ ಬ್ಯಾಂಕ್‍ನ್ನು ತನ್ನ ಸಹಚರರೊಂದಿಗೆ ಲಾಂಚ್ ಮಾಡಿದ್ದಾನೆ.
ನಾನು ಹಿಂದೂ ಧರ್ಮದ ಸುಧಾರಕನಲ್ಲ, ನಾನು ಪುನರುಜ್ಜೀವನಗೊಳಿಸುವವನು ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ ಕರೆನ್ಸಿ ಬಿಡುಗಡೆ ಮಾಡಿದ ಕುರಿತ ಫೋಟೋಗಳನ್ನು ಫೇಸ್ಬುಕ್‍ನಲ್ಲಿ ಹಂಚಿಕೊಂಡಿರುವ ನಿತ್ಯಾನಂದ, ಗಣೇಶ ಚತುರ್ಥಿಯ ಅಂಗವಾಗಿ ರಿಸರ್ವ್ ಬ್ಯಾಂಕ್ ಆಫ್ ಕೈಲಾಸದ ಕರೆನ್ಸಿಯನ್ನು ಗಣೇಶನ ಹಾಗೂ ಪರಮಶಿವ ಮತ್ತು ಗುರು ಹಿಂದೂ ಧರ್ಮದ ಪ್ರಮುಖ, ಜಗದ್ಗುರು ಮಹಾಸನ್ನಿಧಾನಂ, ದೇವರ ಪ್ರತೀಕವಾಗಿರುವ ಭಗವಾನ್ ನಿತ್ಯಾನಂದ ಪರಮ ಶಿವಂ ಪಾದಗಳಿಗೆ ಅರ್ಪಿಸಲಾಗುತ್ತಿದೆ ಎಂದು ಪೋಸ್ಟ್ ಮಾಡಿದ್ದಾನೆ.

ಕೈಲಾಸ ಹಾಗೂ ಅದರ ಸನ್ಯಾಸಿಗಳ ತಂಡ 100ಕ್ಕೂ ಹೆಚ್ಚು ಪುಸ್ತಕ, 360 ಲೇಖನಗಳು ಹಾಗೂ ಸಂಶೋಧನಾ ಪ್ರಬಂಧಗಳನ್ನು ಒಳಗೊಂಡ ಹಿಂದೂ ಆರ್ಥಿಕ ನೀತಿಗಳ ಬಗ್ಗೆ ವ್ಯಾಪಕ ಸಂಶೋಧನೆ ಮತ್ತು ಅಧ್ಯಯನ ನಡೆಸಿ, ಕರೆನ್ಸಿ ತಯಾರಿಸಲಾಗಿದೆ ಎಂದು ಪೋಸ್ಟ್‍ನಲ್ಲಿ ಬರೆಯಲಾಗಿದೆ. ಅಲ್ಲದೆ ನಿತ್ಯಾನಂದ ದೈವಿಕ ಪಾವಿತ್ರ್ಯತೆ ಹಾಗೂ ನೇರ ಭಾಷಣಗಳ ಮೂಲಕ ಕರೆನ್ಸಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾನೆ.
ಈ ಕುರಿತು ಭಾಷಣ ಮಾಡಿರುವ ನಿತ್ಯಾನಂದ, ಈ ಆರ್ಥಿಕ ನೀತಿಯು ಆಂತರಿಕ ಕರೆನ್ಸಿ ವಿನಿಮಯ ಹಾಗೂ ಬಾಹ್ಯ ವಿಶ್ವ ಕರೆನ್ಸಿ ವಿನಿಮಯವನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಸುತ್ತದೆ. ಅಲ್ಲದೆ ಕೈಲಾಸ ದೇಶವು ಮತ್ತೊಂದು ರಾಷ್ಟ್ರದೊಂದಿಗೆ ಎಂಒಯುಗೆ ಸಹಿ ಹಾಕಿದ್ದು, ನಮ್ಮ ರಿಸರ್ವ್ ಬ್ಯಾಂಕ್‍ಗೆ ಆತಿಥ್ಯವಹಿಸಲಿದೆ ಎಂದು ತಿಳಿಸಿದ್ದಾನೆ. ಆದರೆ ಯಾವ ದೇಶ ಎಂಬುದನ್ನು ನಿತ್ಯಾನಂದ ಹೇಳಿಲ್ಲ.
ನಿತ್ಯಾನಂದ ತನ್ನ ದೇಶಕ್ಕೆ ಕೈಲಾಸ ಎಂದು ನಾಮಕರಣ ಮಾಡಿದ್ದು, ಇದಕ್ಕೆ ತನ್ನನ್ನೇ ಪ್ರಧಾನಿಯಾಗಿ ಘೋಷಿಸಿಕೊಂಡಿದ್ದಾನೆ. ಕಳೆದ ವರ್ಷ ನವೆಂಬರ್‍ನಲ್ಲಿ ಇಂತಹದ್ದೊಂದು ದೇಶ ಕಟ್ಟುತ್ತಿರುವ ಕುರಿತು ನಿತ್ಯಾನಂದ ಮಾಹಿತಿ ನೀಡಿದ್ದ. ನಿತ್ಯಾನಂದನ ವಿರುದ್ಧ 50 ಕ್ಕೂ ಹೆಚ್ಚು ನ್ಯಾಯಾಲಯಗಳಲ್ಲಿ ಪ್ರಕರಣಗಳಿದ್ದು, ವಿಚಾರಣೆಗೆ ಹಾಜರಾಗದೆ ಇಕ್ವಿಡಾರ್ ಗೆ ಪರಾರಿಯಾಗಿದ್ದಾನೆ.
ಕೈಲಾಸ ಎಲ್ಲಿದೆ ಎಂಬುದು ನಿಖರವಾಗಿ ತಿಳಿದಿಲ್ಲ. ಆದರೆ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡುತ್ತಿದ್ದು, ಇಕ್ವಿಡಾರ್ ನ ಸಮುದ್ರದ ಮಧ್ಯದಲ್ಲಿರುವ ಪುಟ್ಟ ದ್ವೀಪವನ್ನು ನಿತ್ಯಾನಂದ ಖರೀದಿಸಿ ಅದಕ್ಕೆ ಕೈಲಾಸ ಎಂದು ನಾಮಕರಣ ಮಾಡಿದ್ದಾನೆ ಎನ್ನಲಾಗುತ್ತಿದೆ. ಆದರೆ ಇಕ್ವಿಡಾರ್ ಇದನ್ನು ಅಲ್ಲಗಳೆದಿದ್ದು, ಅಂತಹ ಯಾವುದೇ ವ್ಯಕ್ತಿಗೆ ದ್ವೀಪವನ್ನು ನೀಡಿಲ್ಲ ಎಂದು ಹೇಳಿದೆ.