ರಾಷ್ಟ್ರೀಯ ಮತದಾರರ ದಿನಾಚರಣೆ ಯುವಜನತೆ ಸ್ವಯಂ ಸ್ಪೂರ್ತಿಯಿಂದ ಮತದಾನದ ಮಹತ್ವ ಅರಿತುಕೊಳ್ಳಬೇಕು
ಗದಗ; ಜ, 26 : ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಯುವಜನತೆ ಸ್ವಯಂ ಸ್ಪೂರ್ತಿಯಿಂದ ಮತದಾನದ ಮಹತ್ವ ಅರಿತುಕೊಂಡು ಅರ್ಹ ಅಭ್ಯರ್ಥಿಗೆ ಮತದಾನ ಮಾಡುವ ಮೂಲಕ ಸಧೃಡ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕೆಂದು ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ರಾಜಶೇಖರ ಪಾಟೀಲ ನುಡಿದರು.
ಗದಗ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಇಂದಿಗೂ ಕೂಡ ಮತದಾನದ ಜಾಗೃತಿ ಮೂಡಿಸುತ್ತಿರುವದು ವಿಷಾಧದ ಸಂಗತಿಯಾಗಿದೆ ಎಂದರು. ಮತದಾನದ ಹಕ್ಕು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದ್ದು ಸಾಮಾಜಿಕ ಏಳಿಗೆಗಾಗಿ ಕಡ್ಡಾಯವಾಗಿ ಮತದಾನ ಮಾಡಿ ಯಾವುದೇ ಆಮಿಷುಗಳಿಗೆ ಒಳಗಾಗದೇ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಪ್ರಜಾಪ್ರಭುತ್ವದ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸುವಲ್ಲಿ ಮತದಾರರು ಸಾಕ್ಷರತೆ ಹಾಗೂ ಜಾಗೃತರಾಗಿರುವದು ಅತೀ ಮುಖ್ಯಾಗಿದೆ. ಚುನಾವಣಾ ಆಯೋಗವು 18 ವರ್ಷ ಪೂರ್ಣಗೊಂಡವರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಪ್ರಯತ್ನ ನಡೆಸುತ್ತಿದೆ. ಸಾಕ್ಷರ ಮತದಾರರಿಂದ ದೇಶದ ಸರ್ವೋತಮುಖ ಅಭಿವೃದ್ಧಿಗೆ ಉತ್ತಮ ಆಡಳಿತ ವ್ಯವಸ್ಥೆ ದೊರಕುವದರಿಂದ 18ವರ್ಷ ಪೂರ್ಣಗೊಂಡ ದೇಶದ ಪ್ರತಿಯೊಬ್ಬರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸುವಂತೆ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾದೀಶ ರಾಜಶೇಖರ ಪಾಟೀಲ ಅವರು ಮನವಿ ಮಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಮಾತನಾಡಿ ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಇಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮತದಾನದ ಹಕ್ಕನ್ನು ನೀಡಲಾಗಿದೆ. ಮತದಾನದ ಮೂಲಭೂತ ಹಕ್ಕಿನಿಂದ ಯಾರೂ ವಂಚಿತರಾಗಬಾರದು ಎನ್ನುವುದು ಭಾರತ ಚುನಾವಣಾ ಆಯೋಗದ ಮೂಲ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಅರ್ಹತೆ ದಿನದಂದು 18 ವರ್ಷ ಪೂರ್ಣಗೊಳಿಸಿದ ಯುವ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡು ಯಾವುದೇ ಆಮಿಷುಗಳಿಗೆ ಒಳಗಾಗದೇ ಮತದಾನ ಪ್ರಕ್ರಿಯೆಯಲ್ಲಿ ಪಾಲಗೊಳ್ಳಲು ಮುಂದಾಗುವಂತೆ ತಿಳಿಸಿದರು. ಮನೆಯಲ್ಲಿ ಹಾಗೂ ವಾಸಿಸುವ ಪ್ರದೇಶಗಳಲ್ಲಿ ಅರ್ಹತೆ ಇದ್ದು ಮತದಾರರ ಪಟ್ಟಿಯಲ್ಲಿ ಹೆಸರು ಇರದವರಿಗೆ ಮಾಹಿತಿ ನೀಡಿ ಅವರ ಹೆಸರನ್ನು ಕೂಡ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು ಸಾರ್ವಜನಿಕ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.
ರಾಷ್ಟ್ರೀಯ ಮತದಾರರ ಜಾಗೃತಿ ಅಂಗವಾಗಿ ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಅವರು ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಗುರುತಿನ ಚೀಟಿ ವಿತರಣೆ: 18 ವರ್ಷ ಪೂರ್ಣಗೊಳಿಸಿದ ಯುವ ಮತದಾರರಿಗೆ ಗುರುತಿನ ಚೀಟಿಯನ್ನು ಸಮಾರಂಭದಲ್ಲಿ ವಿತರಿಸಲಾಯಿತು.
ಸನ್ಮಾನ: ಜಿಲ್ಲೆಯಲ್ಲಿ ಅತ್ಯುತ್ತಮ ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಗ್ರಾಮ ಸಹಾಯಕರುಗಳಾದ ಮಂಜುನಾಥ ನಿಂನಾಯ್ಕರ, ಅಮರಪ್ಪ ದೊಡ್ಡಮನಿ, ಮಾಬುಸಾಬ ವಾಲಿಕಾರ, ಶರಣಪ್ಪ ತಳವಾರ, ಗ್ರಾಮ ಲೆಕ್ಕಾಧಿಕಾರಿ ಗವಿಸಿದ್ದಪ್ಪ ಪೂಜಾರ, ಬಿಲ್ಲ ಕಲೆಕ್ಟರ ಎಸ್.ಬಿ.ಡುರೆನ್ನವರ, ಅಂಗನವಾಡಿ ಕಾರ್ಯಕರ್ತೆ ರೇಖಾ ಭೋವಿ ಇವರುಗಳಿಗೆ ಸನ್ಮಾನಿಸಲಾಯಿತು.
ಬಹುಮಾನ ವಿತರಣೆ: 11ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಯುವ ಮತದಾರರ ಜಾಗೃತಿಗಾಗಿ ಪ್ರೌಢಶಾಲೆ, ಪದವಿಪೂರ್ವ, ಪದವಿ ಹಾಗೂ ಸ್ನಾತ್ತಕೋತ್ತರ ವಿಭಾಗಗಳಲ್ಲಿ ಜರುಗಿದ ವಿವಿಧ ಸ್ಫರ್ಧೆಗಳ ವಿಜೇತರಾದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಎಸ್.ಜಿ.ಸಲಗರೆ, ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎಸ್.ಜಿ.ಪಲ್ಲೇದ, ವಿವಿಧ ಶಾಲಾ ಕಾಲೇಜು ಶಿಕ್ಷಕ ವೃಂದ, ವಿಧ್ಯಾರ್ಥಿಗಳು ಸಮಾರಂಭದಲ್ಲಿ ಭಾಗಹಿಸಿದ್ದರು. ಪಂಚಾಕ್ಷರಿ ಗವಾಯಿ ಸಂಗೀತ ಪಾಠ ಶಾಲೆ ವಿಧ್ಯಾರ್ಥಿಗಳಿಂದ ನಾಡಗೀತೆ ಪ್ರಸ್ತುತವಾಯಿತು, ಗದಗ ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ ಸ್ವಾಗತಿಸಿದರು, ಚುನಾವಣಾ ತಹಶೀಲ್ದಾರ ಕೆ.ಬಿ.ಕೋರಿಶೆಟ್ಟರ ವಂದಿಸಿದರು. ಶಿವಾನಂದ ಗಿಡ್ನಕಾಳ ಕಾರ್ಯಕ್ರಮ ನಿರೂಪಿಸಿದರು.
ವರದಿ: ದಾವಲಸಾಬ ತಾಳಿಕೋಟಿ