ಕಾರವಾರ,ಫೆ.17 : ತೀವ್ರಬೆಲೆ ಏರಿಕೆ, ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳು, ಮಾಲಿಕಪರವಾದ ನಾಲ್ಕು ಕಾರ್ಮಿಕ ಸಂಹಿತೆಗಳು, ಖಾಸಗಿಕರಣ ಉತ್ತೇಜಿಸುವ ಬಾಲ್ಯಾವಸ್ಥೆಯ ಶಿಕ್ಷಣ ಕಸಿಯುವ ಹೊಸ ಶಿಕ್ಷಣ ನೀತಿ, ನಿರುದ್ಯೋಗ ಹೆಚ್ಚಳ, ದುಡಿಯುವ ಜನರ ನಿರ್ಲಕ್ಷಿಸಿದ ಕೇಂದ್ರ ಬಜೆಟ್, ಸಂವಿಧಾನಾತ್ಮಕ ಸ್ವಾತಂತ್ರ್ಯದ ಮೇಲಿನ ಕುತ್ಸಿತ ಧಾಳಿ ವಿರೋಧಿಸಿ ಕಾರವಾರದ ಡಿಸಿ ಕಛೇರಿ ಎದುರು ಸಿಐಟಿಯು ಪ್ರತಿಭಟನಾ ನಡಿಗೆಯನ್ನು ನಡೆಸಿತು.
ರಾಜ್ಯ ಸರ್ಕಾರದ ಬಜೆಟ್ ದುಡಿಯುವ ವರ್ಗದ ಪರವಾಗಿ ಬರಲು ಆಗ್ರಹಿಸಿ ಕಾರವಾರದಲ್ಲಿ ನಡೆದ ಪ್ರತಿಭಟನಾ ನಡಿಗೆಯನ್ನು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿಸುಂದರಂ ಕೆಂಪು ಬಾವುಟ ನೀಡಿ ಉದ್ಘಾಟಿಸಿ ಮಾತನಾಡಿದ ಅವರು ಗ್ಯಾಸ್ ಸಿಲಿಂಡರ್ ಬೆಲೆ ಒಂದು ತಿಂಗಳಲ್ಲಿ 175 ರೂ. ಏರಿಕೆ, ಬಡವರು ನಿರ್ಗತಿಕರಾಗುವ ಹಣಕಾಸು ನೀತಿ, ಋಣಾತ್ಮಕ ಬೆಳವಣಿಗೆ ದಾಖಲಿಸಿದ ಜಿಡಿಪಿ, 45 ವರ್ಷಗಳಲ್ಲೇ ಉದ್ಯೋಗ ದರ ತೀವ್ರ ಕುಸಿತ. ಇದಕ್ಕೆ ಇನ್ನಷ್ಟು ಬರೆ ಇಟ್ಟಂತೆ, ದೇಶದ ಸಾರ್ವಜನಿಕ ಆಸ್ತಿ ಮಾರಾಟಕ್ಕೆ ಮುಂದಾದ, ಕೇಂದ್ರ ಸರ್ಕಾರದ ಖಾಸಗಿಕರಣ ಉತ್ತೇಜಕ ಬಜೆಟ್ ಇದನ್ನೆಲ್ಲ ಪ್ರಶ್ನಿಸಿದರೆ ದೇಶದ್ರೋಹಿ ಪಟ್ಟದೊಂದಿಗೆ ವಿಚಾರಣೆಯೇ ಇಲ್ಲದೇ ಜೈಲಿಗೆ ಕಳಿಸುವ ಬಿಜೆಪಿ ಸರ್ಕಾರ ಇವನ್ನೆಲ್ಲ ಪ್ರತಿಭಟಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಶಾಸಕರಿಗೂ ಪಾದಯಾತ್ರೆ ಮೂಲಕ ಮನವಿ ಅರ್ಪಿಸಲಾಗುವುದು ಎಂದು ಅವರು ತಿಳಿಸಿದರು.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ರಾಜ್ಯದ ಎಲ್ಲಾ ಶಾಸಕರುಗಳಿಗೆ, ಎಲ್ಲಾ ಮಂತ್ರಿಗಳಿಗೆ ರಾಜ್ಯ ಮತ್ತು ಆಯಾ ಜಿಲ್ಲೆಯ ಬೇಡಿಕೆಗಳೊಂದಿಗೆ ಈ ಪ್ರತಿಭಟನಾ ನಡಿಗೆ ನಡೆಸಿ ಮನವಿ ನೀಡಲಾಗುವುದು ಎಂದು ಅವರು ತಿಳಿಸಿದರು. ಕಾರ್ಮಿಕ ಮಂತ್ರಿಗಳು ಉಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾರ್ಚ್ 4 ರ ಮೂವತ್ತೊಂದು ಬೇಡಿಕೆಗಳಿರುವ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಕಾರ್ಮಿಕ ಮಂತ್ರಿಗಳಿಗೆ ಸಲ್ಲಿಸಿದ್ದೇವೆ ಎಂದು ಹೇಳಿದರು.
ಈ ಪ್ರತಿಭಟನಾ ನಡಿಗೆಯಲ್ಲಿ ಜಿಲ್ಲಾ ಅಧ್ಯಕ್ಷರಾದ ತಿಲಕ ಗೌಡ, ಪ್ರಧಾನ ಕಾರ್ಯದರ್ಶಿ ಸಿ ಆರ್ ಶಾನಭಾಗ್, ಪದಾಧಿಕಾರಿಗಳಾದ ಯಮುನಾ ಗಾಂವ್ಕರ್, ಜಗದೀಶ್ ನಾಯ್ಕ, ಗಂಗಾ ನಾಯ್ಕ ಮತ್ತು ಜಿಲ್ಲಾ ಸಮಿತಿ ಸದಸ್ಯರು, ಕಾರವಾರ ತಾಲೂಕಿನ ಸಂಚಾಲಕರಾದ ಮಂಜುಳಾ ಕಾಣಕೋಣಕರ್ ಎಸ್.ಎಫ್ಐ ಜಿಲ್ಲಾ ಸಂಚಾಲಕ ಗಣೇಶ್ ರಾಠೋಡ ನೇತೃತ್ವದಲ್ಲಿ ನೂರಾರು ಜನರು ನಡಿಗೆಯಲ್ಲಿ ಹಾಜರಿದ್ದರು.