ಕೇಂದ್ರ ಸರಕಾರ ಮತ್ತು ನರೇಂದ್ರ ಮೋದಿಯ ‘ಒಂದು ರಾಷ್ಟ್ರ, ಒಂದು ತೆರಿಗೆ’ ಎಂಬುದರಲ್ಲಿಯೇ ಒಕ್ಕೂಟ ತತ್ವ-ವಿರೋಧಿ ನಿಲುವು ಅಡಕವಾಗಿದೆ. ಇದು ವಿವಿಧ ವಲಯಗಳಲ್ಲಿ ರಾಜ್ಯಗಳ ಹಕ್ಕುಗಳನ್ನು ಸವೆಸುವ ಮೋದಿ ಸರಕಾರದ ಕೇಂದ್ರೀಕರಣದ ಧಾವಂತಕ್ಕೆ ಅನುಗುಣವಾಗಿಯೇ ಇದೆ.
ಜಿಎಸ್‌ಟಿ ಕೇಂದ್ರ ಸರಕಾರದ ವಿತ್ತೀಯ ಸರ್ವಾಧಿಕಾರಶಾಹಿಯನ್ನು ಬಲಪಡಿಸಿದೆ. ರಾಜ್ಯಗಳನ್ನು ಭಿಕ್ಷಕರ ಮಟ್ಟಕ್ಕೆ ಇಳಿಸಿದೆ. ಇವೆಲ್ಲವೂ ಜಿಎಸ್‌ಟಿ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಿಸಬೇಕಾದ, ಬಹುಶಃ ಅದನ್ನು ಸಂಪೂರ್ಣವಾಗಿ ತೆಗೆದು ಹಾಕಿ ಬೇರೆ ವ್ಯವಸ್ಥೆಯನ್ನು ರೂಪಿಸುವ ಅಗತ್ಯವನ್ನು ಎತ್ತಿ ತೋರುತ್ತವೆ.
ಒಂದು ರಾಷ್ಟ್ರ, ಒಂದು ತೆರಿಗೆ-ದೇಶ ಚೈತನ್ಯಶೀಲ ಅರ್ಥವ್ಯವಸ್ಥೆಯನ್ನು ಅನುಭವಿಸಲು ಸಜ್ಜಾಗುತ್ತಿದೆ. – ಇದು ‘ಜನವರಿ ೧೯, ೨೦೧೭ರ ಜಿಎಸ್‌ಟಿ ಆರಂಭದ ಸಮಯದ ‘ಕಮಲ ಸಂದೇಶ’ ಪೋಸ್ಟರ್
ರಾಜ್ಯಗಳಿಗೆ ಸಲ್ಲಬೇಕಾದ ಸರಕು ಮತ್ತು ಸೇವೆಗಳ ತೆರಿಗೆ(ಜಿಎಸ್‌ಟಿ) ಪರಿಹಾರವನ್ನು ತೆರಲು ಕೇಂದ್ರ ಸರಕಾರದ ನಿರಾಕರಣೆ ಸ್ಪಷ್ಟವಾಗಿಯೂ ಕಾನೂನುಬಾಹಿರ ಮತ್ತು ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಂಬಂಧಗಳ ಸಂವಿಧಾನಿಕ ಯೋಜನೆಯನ್ನು ಉಲ್ಲಂಘಿಸುವಂತದ್ದು. ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಆಗಸ್ಟ್ ೨೭ರಂದು ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಕೇಂದ್ರ ಸರಕಾರ ೨೦೨೦-೨೧ರಲ್ಲಿ ರಾಜ್ಯಗಳಿಗೆ ಪರಿಹಾರ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ, ಏಕೆಂದರೆ, ಪರಿಹಾರ ಅಧಿಭಾರ(ಸೆಸ್) ಸಂಗ್ರಹದಲ್ಲಿ ಮತ್ತು ಸರಕಾರಕ್ಕೆ ಬಂದಿರುವ ಆದಾಯಗಳಲ್ಲಿ ಒಂದು ದೊಡ್ಡ ಕೊರತೆ ಇದೆ ಎಂದು ಪ್ರಕಟಿಸಿದರು.
ಹಣಕಾಸು ಮಂತ್ರಿಗಳ ಪ್ರಕಾರ ಸೆಸ್ ಸಂಗ್ರಹ ಈ ವರ್ಷ ೬೫,೦೦೦ ಕೋಟಿ ರೂ. ತಲುಪಬಹುದಷ್ಟೇ, ಆದರೆ ರಾಜ್ಯಗಳಿಗೆ ೩ಲಕ್ಷ ಕೋಟಿ ರೂ. ಪರಿಹಾರ ತೆರಬೇಕಾಗಿದೆ. ಆದ್ದರಿಂದ ೨.೩೫ ಲಕ್ಷ ಕೋಟಿ ರೂ.ಗಳ ಕೊರತೆಯಾಗುತ್ತದೆ. ಹಣಕಾಸು ಮಂತ್ರಿಗಳು ತೆರಿಗೆ ಆದಾಯದಲ್ಲಿ ಈ ಬಿಕ್ಕಟ್ಟನ್ನು ‘ದೇವರ ಕೃತ್ಯ’ ಎಂದು ವರ್ಣಿಸಿದರು. ಆ ಮೂಲಕ ಕೇಂದ್ರ ಸರಕಾರ ತನ್ನ ವಚನಗಳನ್ನು ಈಡೇರಿಸುವ ಹೊಣೆಗಾರಿಕೆಯಿಂದ ಕೈತೊಳೆದುಕೊಂಡರು.
ಜಿಎಸ್‌ಟಿ ಯೋಜನೆಯನ್ನು ತರುವಾಗ, ಕೇಂದ್ರ ಸರಕಾರ ರಾಜ್ಯಗಳಿಗೆ ವಾರ್ಷಿಕವಾಗಿ ೧೪ಶೇ. ರೆವಿನ್ಯೂ ಬೆಳವಣಿಗೆಯನ್ನು ಖಾತ್ರಿಪಡಿಸುತ್ತದೆ, ಇದರಲ್ಲಿ ಕೊರತೆ ಬಿದ್ದರೆ ಅದಕ್ಕೆ ಹಣಕಾಸು ವರ್ಷ ೨೦೧೭ರಿಂದ ಪೂರ್ಣ ಐದು ವರ್ಷಗಳ ಕಾಲ ಕೇಂದ್ರ ಸರಕಾರ ಪರಿಹಾರ ನೀಡುತ್ತದೆ ಎಂದು ವಚನ ನೀಡಿತ್ತು.
ಈ ವಚನ ಜಿಎಸ್‌ಟಿ(ರಾಜ್ಯಗಳಿಗೆ ಪರಿಹಾರ) ಕಾಯ್ದೆ, ೨೦೧೭ರಲ್ಲಿ ಈ ಅಂಶವನ್ನು ಸೇರಿಸುವ ಮೂಲಕ ಬಿಂಬಿತವಾಗಿದೆ. ತೆರಿಗೆ ವಿಧಿಸುವ ತಮ್ಮ ಸಂವಿಧಾನಿಕ ಹಕ್ಕನ್ನು ಬಿಟ್ಟು ಕೊಡಲು ಮನಸ್ಸಿಲ್ಲದ ರಾಜ್ಯಗಳನ್ನು ಒಪ್ಪಿಸಲಿಕ್ಕಾಗಿ ಇದನ್ನು ಮಾಡಲಾಯಿತು.
‘ದೇವರ ಕೃತ್ಯ’ದ ಅಥವ ‘ಫೋರ್ಸ್ ಮೆಜೂರ್'( ಅನಿವಾರ್ಯ ನಿರ್ಬಂಧ) ಮಾತಾಡುವುದು ಇಲ್ಲಿ ಅಪ್ರಾಸಂಗಿಕ, ಅದು ಇಲ್ಲಿ ಅನ್ವಯವಾಗುವುದಿಲ್ಲ, ಏಕೆಂದರೆ ಇದು ತೆರಿಗೆ ಆದಾಯಗಳನ್ನು ಹಂಚಿಕೊಳ್ಳುವುದರ ಕುರಿತ ಕೇಂದ್ರ ಮತ್ತು ರಾಜ್ಯಗಳ ನಡುವಿನ ಒಂದು ಸಂವಿಧಾನಿಕ ವ್ಯವಸ್ಥೆಯ ಭಾಗವಾಗಿದೆ. ಅಲ್ಲದೆ ಕಳೆದ ವರ್ಷವೂ, ೨೦೧೯-೨೦ರಲ್ಲೂ ಸೆಸ್ ಸಂಗ್ರಹದಲ್ಲಿ ಕೊರತೆ ಉಂಟಾಗಿತ್ತು ಎಂದು ಸ್ವತಃ ಹಣಕಾಸು ಮಂತ್ರಿಗಳೂ ಹೇಳಿದ್ದಾರೆ. ಹಣಕಾಸು ಮಂತ್ರಾಲಯದ ಪ್ರಕಾರ ರಾಜ್ಯಗಳಿಗೆ ಪರಿಹಾರ ಮೊತ್ತ ೧.೬೫ ಲಕ್ಷ ಕೋಟಿ ರೂ.ಗಳಾಗುತ್ತದೆ, ಆದರೆ ಸೆಸ್ ಸಂಗ್ರಹವಾದದ್ದು ೯೫,೫೦೦ ಕೋಟಿ ರೂ. ನಿಜಸಂಗತಿಯೆಂದರೆ, ಜಿಎಸ್‌ಟಿ ಆದಾಯಗಳು ಮತ್ತು ಪರಿಹಾರ ಸೆಸ್ ಏರಿಕೆ ಕಾಣದೆ ಸ್ಥಗಿತಗೊಂಡದ್ದು ಅಥವ ಇಳಿಮುಖಗೊಂಡದ್ದು ಆರ್ಥಿಕ ನಿಧಾನಗತಿ ಅದಾಗಲೇ ಕೊವಿಡ್ ಎರಗುವ ಮೊದಲೇ ಆರಂಭವಾಗಿದ್ದುದರಿಂದ.
ತನ್ನ ವಚನ ಭ್ರಷ್ಟತೆಯ ನಂತರ ಕೇಂದ್ರ ಸರಕಾರ, ರಾಜ್ಯಗಳಿಗೆ ಸಲ್ಲಬೇಕಾದ ಪರಿಹಾರದಲ್ಲಿ ಕೊರತೆಯನ್ನು ತುಂಬಲಿಕ್ಕಾಗಿ ಸಾಲ ತರಲು ಎರಡು ಆಯ್ಕೆಗಳನ್ನು ಮುಂದಿಟ್ಟಿತು. ಇವೆರಡೂ ಪ್ರಸ್ತಾವನೆಗಳಲ್ಲಿ ನ್ಯಾಯವಿಲ್ಲ, ಅವುಗಳ ಅಂತಿಮ ಫಲಿತಾಂಶವೆಂದರೆ ರಾಜ್ಯಗಳು ಸಾಲಗ್ರಸ್ತವಾಗುತ್ತವೆ ಮತ್ತು ಬಡ್ಡಿ ಪಾವತಿಯ ಹೊರೆಯನ್ನೂ ಹೊರಬೇಕಾಗುತ್ತದೆ.
ರಾಜ್ಯಗಳು ಕಾನೂನು ಪ್ರಕಾರ ಸಲ್ಲಬೇಕಾದ್ದನ್ನು ಪಡೆಯುವ ಬದಲು ಸಾಲಬಲೆಗೆ ಸಿಲುಕಿ ಕೊಳ್ಳುತ್ತವೆ ಮತ್ತು ಅವುಗಳ ಮೇಲೆ ಭವಿಷ್ಯದಲ್ಲಿ ರೆವಿನ್ನೂ ಕೊರತೆಯನ್ನು ತುಂಬಲು ಪರಿಹಾರ ನಿಧಿ ಇಲ್ಲವಾದಾಗ ಸಾಲಕ್ಕೆ ಬಡ್ಡಿ ಕಟ್ಟುವ ಹೊರೆಯನ್ನು ಹೊರಬೇಕಾಗುತ್ತದೆ.
ರಾಜ್ಯಗಳಿಗೆ ಸಲ್ಲಬೇಕಾದ್ದನ್ನು ತೆರುವುದಿಲ್ಲ ಎಂಬ ನಿಲುವು ರಾಜ್ಯಗಳು ಮಹಾಸೋಂಕನ್ನು, ನಿರ್ವವಿಸುವಲ್ಲಿ ಮುಂಚೂಣಿಯಲ್ಲಿರುವಾಗ ಹಾಗೂ ಆರೋಗ್ಯ ಮತ್ತು ಕಲ್ಯಾಣ ಕ್ರಮಗಳಿಗೆ ಹೆಚ್ಚಿನ ಖರ್ಚು ಮಾಡಬೇಕಾಗಿರುವ ಸಂದರ್ಭದಲ್ಲಂತೂ ಮತ್ತಷ್ಟು ಆಘಾತಕಾರಿ. ರಾಜ್ಯಗಳ ಮೇಲೆ ಹೇರಿರುವ ಹಣಕಾಸು ಬಿಕ್ಕಟ್ಟನ್ನು ಕೇರಳದ ಅಂಕಿ-ಅಂಶಗಳೊಂದಿಗೆ ಉದಹರಿಸಬಹುದು.
ಈ ಹಣಕಾಸು ವರ್ಷದ ನಾಲ್ಕು ತಿಂಗಳುಗಳಿಗೆ, ಅಂದರೆ ಎಪ್ರಿಲ್ ೧ ರಿಂದ ಜುಲೈ ೩೧ ರ ವರೆಗೆ ಕೇರಳಕ್ಕೆ ನೀಡಬೇಕಾದ ಪರಿಹಾರದ ಮೊತ್ತ ೭೧೦೦ ಕೋಟಿ ರೂ.ಗಳು. ಕೇಂದ್ರ ಈ ವರ್ಷದ ಉಳಿದ ತಿಂಗಳುಗಳಲ್ಲಿಯೂ ಕೊಡದಿದ್ದರೆ ಕೇರಳಕ್ಕೆ ೧೬,೦೦೦ ಕೋಟಿ ರೂ. ವಂಚಿಸಿದಂತಾಗುತ್ತದೆ. ಇದು ಮಹಾಸೋಂಕನ್ನು ಎದುರಿಸುವ ಮತ್ತು ಈ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಜನಗಳಿಗೆ ಒದಗಿಸಬೇಕಾದ ಪರಿಹಾರ ಮತ್ತು ಕಲ್ಯಾಣ ಕ್ರಮಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ಇದರಿಂದ ಹೊರಬರುವ ಏಕೈಕ ದಾರಿಯೆಂದರೆ, ಕೇಂದ್ರ ಸರಕಾರ ಸಾಲ ಮಾಡಿ ಪರಿಹಾರದ ಮೊತ್ತವನ್ನು ಸಂಗ್ರಹಿಸಿ ರಾಜ್ಯಗಳಿಗೆ ತೆರಬೇಕು. ಕೇಂದ್ರವು ರಿಝರ್ವ್ ಬ್ಯಾಂಕಿನಿಂದ ಒಂದು ಕಡಿಮೆ ಬಡ್ಡಿದರದಲ್ಲಿ, ಅದು ಬ್ಯಾಂಕುಗಳು ಸಾಲ ಪಡೆಯಲು ವಿಧಿಸುವ ರೆಪೊ ದರ ಮುಂತಾದ ದರದಲ್ಲಿ ಸಾಲ ಪಡೆಯಬಹುದು ಎಂದು ಕೆಲವು ಅರ್ಥಶಾಸ್ತ್ರಜ್ಞರು ಸೂಚಿಸಿರುವಂತೆ ಮಾಡಬಹುದು.
ಹೆಚ್ಚಿನ ರಾಜ್ಯ ಸರಕಾರಗಳು ತಮ್ಮ ಪರಿಹಾರ ಬಾಕಿಯನ್ನು ಕೊಡಲು ಕೇಂದ್ರ ಸರಕಾರ ಸಾಲ ತರಬೇಕು ಎನ್ನುತ್ತಿವೆ. ಈಗಾಗಲೇ ಆರು ರಾಜ್ಯ ಸರಕಾರಗಳು ರಾಜ್ಯಗಳು ಸಾಲ ಎತ್ತುವ ಪ್ರಸ್ತಾವಗಳನ್ನು ತಿರಸ್ಕರಿಸುತ್ತ, ಕೇಂದ್ರ ಸರಕಾರವೇ ಹಾಗೆ ಮಾಡಲಿ ಎಂದು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಇನ್ನಷ್ಟು ರಾಜ್ಯಗಳು ಇದನ್ನು ಅನುಸರಿಸಲಿವೆ.
ಇದು ಜಿಎಸ್‌ಟಿ ವ್ಯವಸ್ಥೆಯತ್ತ ಎರಡನೇ ದೃಷ್ಟಿ ಹರಿಸಬೇಕಾದ ಸಮಯ ಕೂಡ ಆಗಿದೆ. ಈ ವ್ಯವಸ್ಥೆ ಆರಂಭವಾದ ಮೂರು ವರ್ಷಗಳಲ್ಲಿ ಜಿಎಸ್‌ಟಿಯಿಂದ ನಿರೀಕ್ಷಿತ ಮಟ್ಟದಲ್ಲಿ ಆದಾಯಗಳು ಉಂಟಾಗಿಲ್ಲ. ಕೊವಿಡ್ ಅವಧಿಯನ್ನು ಬಿಟ್ಟರೂ, ಅರ್ಥವ್ಯವಸ್ಥೆಯ ನಿಧಾನಗತಿಯ ಬೆಳವಣಿಗೆಯ ಅರ್ಥವೆಂದರೆ ಜಿಎಸ್‌ಟಿಯಿಂದ ಉಂಟಾಗುವ ಆದಾಯಗಳಲ್ಲಿ ಸ್ಥಗಿತತೆ ಅಥವ ಕೊರತೆಗಳು. ಇದು ರಾಜ್ಯಗಳನ್ನು ಮಾತ್ರವಲ್ಲ, ಕೇಂದ್ರವನ್ನೂ ತಟ್ಟುತ್ತದೆ.
ಕೊವಿಡ್ ಮಹಾಸೋಂಕು ಮತ್ತು ತೀವ್ರ ಆರ್ಥಿಕ ಸಂಕುಚನ ರಾಜ್ಯಗಳು ತಮ್ಮ ತೆರಿಗೆ ವಿಧಿಸುವ ಹಕ್ಕುಗಳನ್ನು ಬಿಟ್ಟುಕೊಟ್ಟ ಮೇಲೆ ಎಂತಹ ಅಸಹಾಯಕ ಸ್ಥಿತಿಗೆ ಇಳಿದಿವೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿಕೊಟ್ಟಿವೆ. ಕೇಂದ್ರ ಸರಕಾರದ ಮತ್ತು ನರೇಂದ್ರ ಮೋದಿಯ ‘ಒಂದು ರಾಷ್ಟ್ರ, ಒಂದು ತೆರಿಗೆ’ ಎಂಬುದರಲ್ಲಿಯೇ ಒಕ್ಕೂಟ ತತ್ವ-ವಿರೋಧಿ ನಿಲುವು ಅಡಕವಾಗಿದೆ. ಇದು ವಿವಿಧ ವಲಯಗಳಲ್ಲಿ ರಾಜ್ಯಗಳ ಹಕ್ಕುಗಳನ್ನು ಸವೆಸುವ ಮೋದಿ ಸರಕಾರದ ಕೇಂದ್ರೀಕರಣದ ಧಾವಂತಕ್ಕೆ ಅನುಗುಣವಾಗಿಯೇ ಇದೆ.
ಜಿಎಸ್‌ಟಿ ಕೇಂದ್ರ ಸರಕಾರದ ವಿತ್ತೀಯ ಸರ್ವಾಧಿಕಾರಶಾಹಿಯನ್ನು ಬಲಪಡಿಸಿದೆ. ರಾಜ್ಯಗಳನ್ನು ಭಿಕ್ಷಕರ ಮಟ್ಟಕ್ಕೆ ಇಳಿಸಿದೆ. ಇವೆಲ್ಲವೂ ಜಿಎಸ್‌ಟಿ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಿಸಬೇಕಾದ, ಬಹುಶಃ ಅದನ್ನು ಸಂಪೂರ್ಣವಾಗಿ ತೆಗೆದು ಹಾಕಿ ಬೇರೆ ವ್ಯವಸ್ಥೆಯನ್ನು ರೂಪಿಸುವ ಅಗತ್ಯವನ್ನು ಎತ್ತಿ ತೋರುತ್ತವೆ.
೨೯ ಸಾವಿರ ಕೋಟಿ ರೂ. ಸಾಲದ ‘ದಾರಿ’
ಕರ್ನಾಟಕಕ್ಕೆ ಎಪ್ರಿಲ್೧ , ೨೦೨೦ರಿಂದ ಜುಲೈ ೩೧, ೨೦೨೦ರ ವರೆಗಿನ ಒಟ್ಟು ರೂ. ೧೩,೬೭೪ ಕೋಟಿ ರೂ. ಜಿಎಸ್‌ಟಿ ಪರಿಹಾರ ಖೋತಾ ಆಗುತ್ತಿದೆ. ಇದಲ್ಲದೆ ಸೆಸ್ ರೂಪದಲ್ಲೂ ೬೯೬೫ ಕೋಟಿ ರೂ. ಕಳೆದುಕೊಂಡಿದೆ. ಆದರೂ ಕರ್ನಾಟಕದ ಬಿಜೆಪಿ ಸರಕಾರ ‘ಘನ ಮೋದಿ ಸರಕಾರ ತೋರಿಸಿರುವ ಮೊದಲ ದಾರಿ’ಯನ್ನು ‘ಅಯ್ಕೆ’ ಮಾಡಿಕೊಂಡಿದೆ.
ಅಂದರೆ, ಹೆಚ್ಚಿನ ರಾಜ್ಯಸರಕಾರಗಳು ತಮ್ಮ ಪರಿಹಾರ ಬಾಕಿಯನ್ನು ಕೊಡಲು ಕೇಂದ್ರ ಸರಕಾರ ಸಾಲ ತರಬೇಕು ಎನ್ನುತ್ತಿರುವಾಗ, ಈಗಾಗಲೇ ಆರು ರಾಜ್ಯ ಸರಕಾರಗಳು ರಾಜ್ಯಗಳು ಸಾಲ ಎತ್ತುವ ಪ್ರಸ್ತಾವಗಳನ್ನು ತಿರಸ್ಕರಿಸುತ್ತ, ಕೇಂದ್ರ ಸರಕಾರವೇ ಹಾಗೆ ಮಾಡಲಿ ಎಂದು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿರುವಾಗ, ಇನ್ನಷ್ಟು ರಾಜ್ಯಗಳು ಇದನ್ನು ಅನುಸರಿಸಲಿರುವಾಗ, ಕರ್ನಾಟಕದ ಬಿಜೆಪಿ ಸರಕಾರ ಒಟ್ಟು ೨೯,೩೬೦ ಕೋಟಿ ರೂ. ಸಾಲ ಪಡೆಯುವ, ಅದಕ್ಕೆ ತಾನೇ ಬಡ್ಡಿ ಕಟ್ಟುವ ‘ದಾರಿ’ಯನ್ನು ‘ಆಯ್ದು’ ಕೊಂಡಿದೆ!