ರಾಜಸ್ಥಾನ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ: ಬಿಜೆಪಿ ನಿರ್ಧಾರ

  • ಶುಕ್ರವಾರದಿಂದ ಆರಂಭವಾಗಲಿರುವ ಅಧಿವೇಶನ

ಜೈಪುರ: ರಾಜಸ್ಥಾನದಲ್ಲಿ ಕಾಂಗ್ರೆಸ್‍ನ ಆಂತರಿಕ ಭಿನ್ನಮತ ಕೊನೆಗೊಂಡು ಆಡಳಿತ ಪುನರ್ ಸ್ಥಾಪನೆ ಆಯಿತು ಎನ್ನುವಷ್ಟರಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಶುಕ್ರವಾರ(ಆ.14) ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಬಿಜೆಪಿ ನಿರ್ಧರಿಸಿದೆ.

ಗುರುವಾರ ನಡೆದ ರಾಜಸ್ಥಾನ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿರೋಧ ಪಕ್ಷದ ನಾಯಕ ಗುಲಾಬ್ ಚಂದ್ ಕಠಾರಿಯಾ, ಬಿಜೆಪಿ ಶಾಸಕಾಂಗ ಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವ ಕುರಿತು ನಿರ್ಧಾರ ಕೈಗೊಳ್ಳಲಾಯಿತು. ಶುಕ್ರವಾರದಿಂದ ಆರಂಭವಾಗುವ ಅಧಿವೇಶನದಲ್ಲಿ ಇದನ್ನು ಮಂಡಿಸಲಾಗುವುದು. ಈ ಕುರಿತ ಪ್ರಸ್ತಾವವನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಸರ್ಕಾರವನ್ನು ಉರುಳಿಸಲು ಪಿತೂರಿ ನಡೆಸಿದರು ಎಂಬ ಆರೋಪದಡಿ ಸ್ಪೆಷಲ್ ಆಪರೇಷನ್ ಗ್ರೂಪ್ (ಎಸ್‍ಒಜಿ) ಹಲವರನ್ನು ಬಂಧಿಸಿತು. ಇವರು ಬಿಜೆಪಿಗೆ ಸೇರಿದವರು ಎಂಬಂತೆ ಬಿಂಬಿಸುವ ಪ್ರಯತ್ನವನ್ನೂ ಕಾಂಗ್ರೆಸ್ ಸರ್ಕಾರ ಮಾಡಿ ವಿಫಲವಾಯಿತು. ಕಾಂಗ್ರೆಸ್‍ನೊಳಗಿನ ಬಿಕ್ಕಟ್ಟು ಪರಿಹಾರವಾಯಿತು ಎಂದು ಅವರು ಹೇಳುತ್ತಿದ್ದರೂ ಪಕ್ಷದೊಳಗಿನ ಭಿನ್ನಾಭಿಪ್ರಾಯ ಶಮನವಾಗಿಲ್ಲ ಎಂದು ಕಠಾರಿಯಾ ಹೇಳಿದರು.

ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿವೆ. ಕಾನೂನು ವ್ಯವಸ್ಥೆ ಕುಸಿಯುತ್ತಿದೆ. ಇದಕ್ಕೆ ಬಿಜೆಪಿಯನ್ನ ದೂಷಿಸಲು ವಿಫಲ ಪ್ರಯತ್ನ ಮಾಡಲಾಯಿತು. ನಮ್ಮ ಅವಿಶ್ವಾಸ ನಿರ್ಣಯದ ಪ್ರಸ್ತಾವದಲ್ಲಿ ಇವೆಲ್ಲಾ ವಿಚಾರಗಳನ್ನ ಪ್ರಸ್ತಾಪಿಸುತ್ತೇವೆ” ಎಂದರು.

74 ಶಾಸಕರು ಭಾಗಿ 
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸತೀಶ್ ಪೂನಿಯಾ ಮಾತನಾಡಿ, ಬಿಜೆಪಿ ಹಾಗೂ ಮಿತ್ರ ಪಕ್ಷವಾದ ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷ (ಆರ್‍ಎಲ್ಪಿ)ಯ ಒಟ್ಟು 75 ಶಾಸಕರ ಪೈಕಿ 74 ಶಾಸಕರು ಶಾಸಕಾಂಗ ಪಕ್ಷದ ಸಭೆಯಲ್ಲಿ ಹಾಜರಿದ್ದರು. ಗೆಹ್ಲೋಟ್ ನೇತೃತ್ವದ ರಾಜ್ಯ ಸರ್ಕಾರವು ಅಸಂಬದ್ಧ ಸರ್ಕಾರವಾಗಿದೆ ಎಂದು ಟೀಕಿಸಿದರು.

ರಾಜಸ್ಥಾನದ 200 ಸದಸ್ಯ ಬಲದ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ 124 ಸದಸ್ಯರ ಬೆಂಬಲ ಇದೆ. ಕಾಂಗ್ರೆಸ್​ನ 107 ಹಾಗೂ ಇತರ ಪಕ್ಷಗಳು ಮತ್ತು 12 ಪಕ್ಷೇತರ ಸೇರಿ 17 ಶಾಸಕರ ಬೆಂಬಲ ಇದೆ. ಇನ್ನೊಂದೆಡೆ, ಬಿಜೆಪಿ 72 ಮತ್ತು ಅದರ ಮಿತ್ರಪಕ್ಷ ಆರ್​ಎಲ್​ಪಿ 3 ಸ್ಥಾನಗಳನ್ನ ಮಾತ್ರ ಹೊಂದಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮಂಡಿಸಲಿರುವ ಅವಿಶ್ವಾಸ ನಿರ್ಣಯಕ್ಕೆ ಗೆಲುವು ದಕ್ಕೀತಾ ಎಂಬ ಪ್ರಶ್ನೆ ಇದೆ.

ಇಬ್ಬರು ಬಂಡಾಯ ಶಾಸಕರ ಅಮಾನತು ರದ್ದು

ಕಳೆದೊಂದು ತಿಂಗಳಿನಿಂದ ರಾಜಸ್ಥಾನ ಕಾಂಗ್ರೆಸ್ನಲ್ಲಿನ ಬಿಕ್ಕಟ್ಟು ಸೌಹಾರ್ದಯುತ ಪರಿಹಾರ ಪಡೆದ ಕೆಲ ದಿನಗಳ ನಂತರ ವಿರೋಧ ಪಕ್ಷ ಈ ತೀರ್ಮಾನ ಕೈಗೊಂಡಿದೆ. ಕಳೆದ ತಿಂಗಳು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಹಾಗೂ ಅವರ ಬೆಂಬಲಿಗರಾದ 18 ಕಾಂಗ್ರೆಸ್ ಶಾಸಕರು ಬಂಡಾಯವೆದ್ದಿದ್ದರು. ಇದಾದ ಬೆನ್ನಲ್ಲೇ ಪೈಲಟ್ ಅವರನ್ನು ಉಪಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿತ್ತು.

ರಾಜಸ್ಥಾನದಲ್ಲಿ ಕಾಂಗ್ರೆಸ್‍ನಲ್ಲಿನ ಬಿಕ್ಕಟ್ಟು ಪೂರ್ಣಗೊಂಡ ಅಧ್ಯಾಯ ಎಂದು ಸೋಮವಾರವಷ್ಟೇ ಕಾಂಗ್ರೆಸ್ ತಿಳಿಸಿತ್ತು. ಎಲ್ಲ ಶಾಸಕರೂ ಸರ್ಕಾರಕ್ಕೆ ಬೆಂಬಲವಾಗಿದ್ದು, ರಾಜ್ಯದ ಅಭಿವೃದ್ಧಿಗೆ ಕೈಜೋಡಿಸಲಿದ್ದಾರೆ ಎಂದು ಹೇಳಿತ್ತು.

ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದ, ಪೈಲಟ್ ಬೆಂಬಲಿಗರಾಗಿದ್ದ ಶಾಸಕರಾದ ಭನ್ವರ್ ಲಾಲ್ ಶರ್ಮಾ ಹಾಗೂ ವಿಶ್ವೇಂದ್ರ ಸಿಂಗ್ ಅವರ ಅಮಾನತು ಆದೇಶವನ್ನು ಕಾಂಗ್ರೆಸ್ ಗುರುವಾರ ರದ್ದುಗೊಳಿಸಿದೆ. ಈ ಕುರಿತು ಟ್ವೀಟ್‍ನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಮಾಹಿತಿ ನೀಡಿದ್ದಾರೆ.
ಸರ್ಕಾರವನ್ನು ಕೆಡವಲು ನಡೆಸಿದ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಡಿ ಕಳೆದ ತಿಂಗಳು ಈ ಶಾಸಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿತ್ತು. ದೆಹಲಿಯ ಹಿರಿಯ ಕಾಂಗ್ರೆಸ್ ನಾಯಕರು ಮಧ್ಯಸ್ಥಿಕೆ ವಹಿಸಿ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನಡುವಿನ ಭಿನ್ನಾಭಿಪ್ರಾಯವನ್ನು ಶಮನಗೊಳಿಸಿದ್ದು, ಇದರ ಬೆನ್ನಲ್ಲೇ ಶಾಸಕರ ಅಮಾನತು ಆದೇಶವನ್ನೂ ಕಾಂಗ್ರೆಸ್ ರದ್ದುಗೊಳಿಸಿದೆ.

Donate Janashakthi Media

Leave a Reply

Your email address will not be published. Required fields are marked *