ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ; ಸೋನಿಯಾ ಗಾಂಧಿಗೆ ವರದಿ ಸಲ್ಲಿಕೆ

ನವದೆಹಲಿ: ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಹೆಚಾಗಿದ್ದು, ಪಕ್ಷದ ವೀಕ್ಷಕರಾದ ಅಜಯ್ ಮಾಕನ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಸೋನಿಯಾ ಗಾಂಧಿಗೆ ವರದಿ ಸಲ್ಲಿಸಿದ್ದಾರೆ.

ಅಕ್ಟೋಬರ್‌ 17ರಂದು ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ. ಚುನಾವಣೆಯಿಂದ ಗಾಂಧಿ ಕುಟುಂಬದವರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ವಾದ್ರಾ ದೂರ ಉಳಿಯಲು ನಿರ್ಧರಿಸಿದ್ದಾರೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರು ಈ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದರು. ಆದರೆ, ರಾಜ್ಯದ ಮುಂದಿನ ಸಿಎಂ ಆಯ್ಕೆ ವಿಚಾರವಾಗಿ ಅಲ್ಲಿನ ಕಾಂಗ್ರೆಸ್‌ ಶಾಸಕರಲ್ಲಿ ಒಡಕು ಮೂಡಿದೆ.  ಸಚಿನ್‌ ಪೈಲಟ್‌ ಅವರನ್ನು ಮುಂದಿನ ಸಿಎಂ ಎಂದು ಘೋಷಿಸಲು ಹೈಕಮಾಂಡ್‌ ಒಲವು ತೋರಿದೆ ಎಂದು ವರದಿಯಾದ ಬೆನ್ನಲ್ಲೇ, ಗೆಹಲೋತ್‌ ಬಣದ ಶಾಸಕರು ಸಾಮೂಹಿಕ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ. ಅಷ್ಟಲ್ಲದೆ, ಹೈಕಮಾಂಡ್‌ ವೀಕ್ಷಕರನ್ನಾಗಿ ಕಳುಹಿಸಿದ್ದ ಮಾಕನ್‌ ಮತ್ತು ಖರ್ಗೆ ಅವರು ಭಾನುವಾರ ಸಂಜೆ ಕರೆದಿದ್ದ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಗೂ ಹಾಜರಾಗದೆ ಪ್ರತ್ಯೇಕ ಸಭೆ ನಡೆಸಿದ್ದಾರೆ.

ಈ ಬೆಳವಣಿಗೆಗಳ ಬಳಿಕ ಸೋಮವಾರ ರಾಜಸ್ಥಾನದಿಂದ ದೆಹಲಿಗೆ ವಾಪಸ್‌ ಆದ ಮಾಕನ್‌ ಮತ್ತು ಖರ್ಗೆ, ಸೋನಿಯಾ ಅವರನ್ನು ಭೇಟಿಯಾಗಿ ಬಿಕ್ಕಟ್ಟಿನ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ಸೋನಿಯಾ ಅವರು ಲಿಖಿತ ವರದಿ ನೀಡುವಂತೆ ಸೂಚಿಸಿದ್ದರು. ಅದರಂತೆ ಇಂದು ಇಬ್ಬರೂ ನಾಯಕರು ವಿಸ್ತೃತ ಲಿಖಿತ ವರದಿ ನೀಡಿದ್ದಾರೆ. ಪಕ್ಷದ ಶಿಸ್ತು ಉಲ್ಲಂಘಿಸಿರುವ ಶಾಸಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *