ಅತಿಥಿ ಅಂಕಣ – ಹೆಚ್.ಎನ್.ನಾಗಮೋಹನ ದಾಸ್, ನಿವೃತ್ತ ನ್ಯಾಯಾಧೀಶರು, ಕರ್ನಾಟಕ ಉಚ್ಛ ನ್ಯಾಯಾಲಯ. ಸಂಪುಟ 10 ಸಂಚಿಕೆ 01 ಜನವರಿ 03, 2016
ಸ್ವಾತಂತ್ರ್ಯ ಬಂದ ನಂತರ ನಮ್ಮ ಸರ್ಕಾರಗಳು ಇಂತಹ ಅಮಾನವೀಯ ಬರ್ಬರ ಮತ್ತು ದಮನಕಾರಿ ಕಾನೂನನ್ನು ಮುಂದುವರೆಸಿಕೊಂಡು ಬಂದಿದ್ದು ದುರದೃಷ್ಟಕರ. ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿರುವ ಸಾಹಿತಿಗಳ, ಕಲಾವಿದರ, ಜನಪರ ನಾಯಕರ ವಿರುದ್ಧ ಇದನ್ನು ಬಳಸಲಾಗುತ್ತಿದೆ. ಸ್ವಾತಂತ್ರ್ಯದ ನಂತರ ಈ ಕಲಂನ ದುರ್ಬಳಕೆಯೇ ಹೆಚ್ಚಿದೆ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಇಂತಹ ದಮನಕಾರಿ ಕಲಂನ ಅಗತ್ಯ ಇದೆಯೇ? ಇಂತಹ ಕಾನೂನನ್ನು ಕೊನೆಗಾಣಿಸಿ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕಾಗಿದೆ.
ದೀರ್ಘಕಾಲದ ಹೋರಾಟಗಳ ಮೂಲಕ ಜಗತ್ತಿನ ಜನರು ವಾಕ್ ಮತ್ತು ಅಭಿವ್ಯಕ್ತಿ ಸ್ವತಂತ್ರ್ಯವನ್ನು ಪಡೆದಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅಭಿವ್ಯಕ್ತಿ ಸ್ವ್ವಾತಂತ್ರ್ಯ ಹೋರಾಟ ಇವೆರೆಡು ಜೊತೆಜೊತೆಯಲ್ಲಿ ನಡೆದು ಬಂದಿದ್ದು ಗಮನಾರ್ಹ. ದೇಶದ ಜನರಿಗೆ ಮೂಲಭೂತ ಹಕ್ಕುಗಳನ್ನು ಒದಗಿಸುವುದು ಸ್ವ್ವಾತಂತ್ರ್ಯದ ಹೋರಾಟದ ಗುರಿಗಳಲ್ಲಿ ಒಂದಾಗಿತ್ತು. ನಮ್ಮ ಸ್ವ್ವಾತಂತ್ರ್ಯ ಚಳುವಳಿಯ ಗುರಿಗಳನ್ನು ಕಾರ್ಯರೂಪಕ್ಕೆ ತರಬೇಕಾದರೆ ನಮಗೆ ಒಂದು ಸಂವಿಧಾನ ಅನಿವಾರ್ಯವಾಯಿತು. ಸಂವಿಧಾನ ರಚನಕಾರರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರ್ರಜಾತಾಂತ್ರಿಕ ವ್ಯವಸ್ಥೆಯ ತಳಹದಿ ಎಂಬ ಸ್ಪಷ್ಟಕಲ್ಪನೆ ಇತ್ತು. ಈ ಅಂಶವನ್ನು ನಮ್ಮ ಸಂವಿಧಾನದ ಅನುಚ್ಛೇದ-19(1) (ಎ)ರ ಅಡಿಯಲ್ಲಿ ಅಳವಡಿಸಲಾಗಿದೆ. ಈ ಹಕ್ಕು ತನ್ನಷ್ಟಕ್ಕೆ ಪೂರ್ಣವಾದದ್ದಲ್ಲ. ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಕಾಪಾಡಲು ಈ ಹಕ್ಕಿನ ಮೇಲೆ ಕೆಲವು ನಿರ್ಬಂಧಗಳನ್ನು ವಿಧಿಸುವ ಅಧಿಕಾರವನ್ನು ಸರ್ಕಾರ ಹೊಂದಿದೆ.
ದೇಶದ ಭದ್ರತೆ, ವಿದೇಶಗಳ ಜೊತೆಗಿನ ಬಾಂಧವ್ಯ, ಸುವ್ಯವಸ್ಥೆ ಮತ್ತು ನೈತಿಕತೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಬಂಧಗಳನ್ನು ವಿಧಿಸಬಹುದು. ಅನುಚ್ಛೇಧ-19 ರಲ್ಲಿ ನೀಡಿರುವ ಮೂಲಭೂತ ಹಕ್ಕಾದ ವಾಕ್ ಸ್ವಾತಂತ್ರ್ಯವು ಭಿನ್ನಾಭಿಪ್ರಾಯವನ್ನು ಹೊಂದಿರುವ ಸ್ವಾತಂತ್ರವನ್ನು ಒಳಗೊಂಡಿದೆ. ಮೂಲಭೂತ ಹಕ್ಕುಗಳನ್ನು ಹತ್ತಿಕ್ಕುವ ಅಧಿಕಾರವನ್ನು ನಮ್ಮ ಸಂವಿಧಾನವು ಮಾನ್ಯ ಮಾಡುವುದಿಲ್ಲ, ಭಿನ್ನಾಭಿಪ್ರಾಯಗಳ ಬಗೆಗಿನ ಅಸಹನೆ ಪ್ರಜಾತಾಂತ್ರಿಕ ವ್ಯವಸ್ಥೆಗೆ ಅಪಾಯಕಾರಿ. ಈ ಹಕ್ಕಿಗೆ ಹಿಂದಿನ ಕಾಲದ ಕಟ್ಟಳೆಗಳಾಗಲಿ, ವರ್ತಮಾನದ ಕೋಳಗಳಾಗಲಿ ಇರಬಾರದು. ಫ್ರೆಂಚ್ ಚಿಂತಕ ವೋಲ್ಟೈರ್ ಹೇಳುವಂತೆ “ನೀನು ಹೇಳುವ ಒಂದು ಮಾತನ್ನೂ ನಾನು ಒಪ್ಪುವುದಿಲ್ಲ. ಆದರೆ ಅಭಿಪ್ರಾಯವನ್ನು ವ್ಯಕ್ತಪಡಿಸುವ ನಿನ್ನ ಹಕ್ಕನ್ನು ನನ್ನ ಸಾವಿನವರೆಗೂ ನಾನು ಬೆಂಬಲಿಸುತ್ತೇನೆ” ಎಂಬ ಮಾತು ಗಮನಾರ್ಹ.
ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ವ್ಯಕ್ತಿ ಸ್ವಾತಂತ್ರ್ಯವು ಮೊದಲನೆಯ ಹೆಜ್ಜೆ. ಹಾಗಾಗಿ ಯಾವ ಸಂಪ್ರದಾಯಗಳನ್ನು ವಿರೋಧಿಸಿದರೂ ಸರಿಯೇ, ವ್ಯಕ್ತಿಯು ಸತ್ಯಕ್ಕಾಗಿ ನಡೆಸುವ ಹುಡುಕಾಟದ ಸ್ವಾತಂತ್ರ್ಯ ಮೊಟಕುಗೊಳ್ಳಬಾರದು. ಎಲ್ಲಾ ಪ್ರಮುಖ ವಿಷಯಗಳ ಬಗ್ಗೆಯೂ ಮುಕ್ತ ಚರ್ಚೆ ನಡೆಯಬೇಕು. ಪ್ರಗತಿ ಸಾಧ್ಯವಾಗುವುದು ಪರಂಪರೆಯನ್ನು ಒಪ್ಪಿಕೊಳ್ಳುವುದರ ಮೂಲಕವಲ್ಲ: ಬದಲಾಗಿ ಜನರ ಅಭಿಪ್ರಾಯಗಳು ಬದಲಾಗುವಷ್ಟರ ಮಟ್ಟಿಗೆ ಹೊಸ ವಿಷಯಗಳನ್ನು, ವೈಜ್ಞಾನಿಕ ಚಿಂತನೆಯ ಆಧಾ ರದ ಮೇಲೆ ಮಂಡಿಸುವ ಮೂಲಕ. ವ್ಯಕ್ತಿಯ ಚಿಂತನಾಕ್ರಮ ವೃದ್ಧಿಗೊಳ್ಳಲು, ವೈಚಾರಿಕತೆ ಅರಳಲೂ, ಬೌದ್ಧಿಕ ಜಗತ್ತು ವಿಸ್ತಾರಗೊಳ್ಳಲು ಮತ್ತು ವ್ತಕ್ತಿತ್ವ ಪರಿಪಕ್ವಗೊಳ್ಳಲು ಎಲ್ಲ ರೀತಿಯ ಅಭಿಪ್ರಾಯಗಳೂ ತಿಳಿದಿರಬೇಕು.
ಜ್ಞಾನ ಅಥವಾ ವಿವೇಕ ಆಕಾಶದಿಂದ ಉದುರುವುದಿಲ್ಲ. ಅವು ಸಿದ್ದ ವಸ್ತುಗಳೂ ಅಲ್ಲ, ಇಂದಿನ ಅಗತ್ಯಕ್ಕೆ ತಕ್ಕಂತೆ ನಮ್ಮ ಅನುಭವದ ಜ್ಞಾನವನ್ನು ಹರಿತಗೊಳಿಸಿದಾಗ ಸಮಕಾಲೀನ ಸತ್ಯವು ಗೋಚರಿಸುತ್ತದೆ. ಮಾನವನ ಅನುಭವದ ಜ್ಞಾನವನ್ನು ವಿಮರ್ಶೆಗೆ ಒಳಪಡಿಸಿದಾಗ ಪ್ರಗತಿ ಪರಚಿಂತನೆ ಎಂದು ಕರೆಯಲಾಗುವ ವೈಜಾರಿಕತೆಯು ಉಗಮವಾಗುವುದು. ಮಾನವನ ನಾಗರಿಕತೆ ಬೇಟೆಯಾಡುವ ಕಾಲದಿಂದ ಇಂದಿನ ಅತ್ಯಂತ ಅಧುನಿಕ, ವೈಜ್ಞಾನಿಕ ಯುಗವನ್ನು ಮುಟ್ಟಿರುವುದು ಈ ಪ್ರಕ್ರಿಯೆಯ ಮೂಲಕವೇ. ಆದರೆ ವಿಮರ್ಶೆಯ ಬಗ್ಗೆ ನಾವು ಅತ್ಯಂತ ಜಾಗರೂಕರಾಗಿರಬೇಕಾಗಿರುತ್ತದೆ. ಅದು ಅನಾರೋಗ್ಯಕರ ಮತ್ತು ವಿನಾಶಕಾರಿಯಾಗಿರಬಾರದು. ವ್ಯಕ್ತಿಗಳನ್ನು ಅಥವಾ ಸಮುದಾಯಗಳನ್ನು ಅವಮಾನಿಸುವ, ಒಡೆಯುವ ಉದ್ದೇಶದ್ದಾಗಿರಬಾರದು. ಇಂದಿಗಿಂತಲೂ ಉತ್ತಮ ಸ್ಥಿತಿಗೆ ನಮ್ಮನ್ನು ಕೊಂಡಯ್ಯುವ, ಈಗಿನ ತಪ್ಪುಗಳನ್ನು ಸರಿಪಡಿಸುವ ವಿಮರ್ಶೆಯಾಗಿರಬೇಕು. ಇಂಥ ಆರೋಗ್ಯಕರ ವಿಮರ್ಶೆಯನ್ನು ತಾಳ್ಮೆಯಿಂದ, ಸ್ವಾಗತಿಸಬೇಕಾದದ್ದು ಸಮಾಜದ ಕರ್ತವ್ಯ.
ಭಾರತದಲ್ಲಿ ಸತ್ಯಶೋಧನೆ ಮತ್ತು ಅಂಧಶ್ರದ್ಧೆಗೆ ಸವಾಲುಗಳನ್ನು ಒಡ್ಡಿದ ಮಹಾನ್ ಇತಿಹಾಸವೇ ಇದೆ. ಚಾರ್ವಾಕ್, ಗೌತಮಬುದ್ಧ, ಬಸವೇಶ್ವರ, ಅಂಬೇಡ್ಕರ್, ಪಂಡಿತ್ ನೆಹರು, ಕುವೆಂಪು, ಇನ್ನೂ ಅನೇಕ ಮಹನೀಯರು ತಮ್ಮ ಜೀವನ ಕಾಲದ ಪರಂಪರಾನುಗತ ಚಿಂತನೆಯಿಂದ ದೂರ ಸರಿದವರೇ. ಬ್ರಿಟಿಷರು ಭಾರತದಲ್ಲಿ ತಮ್ಮ ರಾಜ್ಯವನ್ನು ವಿಸ್ತರಿಸುತ್ತ ಹೋದ ಹಾಗೆ ಅವರ ವಿರುದ್ಧವಾದ ಹೋರಾಟಗಳೂ ನಡೆಯುತ್ತಾ ಹೋದವು. 1857ರ ಮೊದಲ ಸ್ವಾತಂತ್ರ್ಯ ಯುದ್ಧದ ನಂತರ ಈಸ್ಟ್ ಇಂಡಿಯಾ ಕಂಪನಿಯ ಆಡಳಿತವು ಕೊನೆಗೊಂಡು ಭಾರತದೇಶವು ಇಂಗ್ಲೆಂಡಿನ ಮಹಾರಾಣಿಯರ ನೇರ ಆಡಳಿತಕ್ಕೆ ಒಳಪಟ್ಟಿತು. 1858ರಲ್ಲಿ ಬ್ರಿಟಿಷ್ ಮಾದರಿಯ ನ್ಯಾಯಾಲಯಗಳ ಸ್ಥಾಪನಾ ಕಾರ್ಯವು ಪ್ರಾರಂಭವಾಯಿತು. ಈ ನ್ಯಾಯಾಲಯಗಳ ಮುಖಾಂತರ ಸಿವಿಲ್ ಮತ್ತು ಕ್ರಿಮಿನಲ್ ವಿಧಾನಾತ್ಮಕ ಕಾನೂನುಗಳು ಜಾರಿಗೆ ತರಲಾಯಿತು.
ಬ್ರಿಟಿಷರ ವಿರುದ್ಧ ಜನಾಭಿಪ್ರಾಯವನ್ನು ರೂಪಿಸುತ್ತಿದ್ದ ಪತ್ರಿಕೆಗಳ ಮೇಲೆ ದಾಳಿ ಪ್ರಾರಂಭವಾಯಿತು. ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಬ್ರಿಟಿಷರು ಸುಮಾರು 15 ರೀತಿಯ ವಿವಿಧ ಕಾನೂನುಗಳನ್ನು ಜಾರಿಗೊಳಿಸಿದರು. ಸ್ವಾತಂತ್ರ್ಯ ಹೋರಾಟಗಾರರ ಬಾಯಿ ಮುಚ್ಚಿಸಲು ಕ್ರಿಮಿನಲ್ ವಿಧಾನಾತ್ಮಕ ಕಾಯ್ದೆಗೆ (ಐಪಿಸಿ-ಇಂಡಿಯನ್ ಪೆನಲ್ಕೋಡ್) ತಿದ್ದುಪಡಿತಂದು ಕಲಂ 124(ಎ) ಸೇರಿಸಿದರು. ಇದನ್ನು Seಜiಣioಟಿ(ರಾಜದ್ರೋಹ ಅಥವಾ ದೇಶದ್ರೋಹ)ದ ಕಲಂ ಎನ್ನಲಾಗಿದೆ. ಐಪಿಸಿ ಕಲಂ 124(ಎ) ಪ್ರಕಾರ ಒಬ್ಬ ವ್ಯ್ಯಕ್ತಿಯ ಭಾಷಣ ಅಥವಾ ಬರಹ ಅಥವಾ ಇತರ ವಿಧಾನಗಳ ಮೂಲಕ ಸರಕಾರದ ವಿರುದ್ಧ ದ್ವೇಷ ಅಥವಾ ತಿರಸ್ಕಾರವನ್ನು ಬೆಳೆಸುತ್ತದೋ ಅಥವಾ ಬೆಳೆಸಲು ಪ್ರಯತ್ನಿಸುತ್ತದೋ, ಅಥವಾ ಅತೃಪ್ತಿಯನ್ನು ಪ್ರಚೋದಿಸುತ್ತದೋ ಅಥವಾ ಪ್ರಚೋದಿಸಲು ಪ್ರಯತ್ನಿಸುತ್ತದೋ, ಅಂತಹ ವ್ಯಕ್ತಿಯ ವಿರುದ್ಧ ರಾಜದ್ರೋಹ ಅಥವಾ ದೇಶದ್ರೋಹದ ಆಪಾದನೆ ಹೊರಿಸಬಹುದು. ಈ ಕಲಂ ಪ್ರಕಾರ ಆಪಾದಿಸಿದರೆ ಜೀವಾವಧಿಯ ವರೆಗೆ ಶಿಕ್ಷೆ ವಿಧಿಸಬಹುದು. ಈ ಕಲಂನ್ನು ಬಳಸಿ ಬ್ರಿಟಿಷರು ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿ ಮೊಕದ್ದಮೆಗಳನ್ನು ಹೂಡಿದರು. ಅವರುಗಳ ಪೈಕಿ ಪ್ರಮುಖರೆಂದರೆ ಬಾಲಗಂಗಾಧರ ತಿಲಕ್, ಮಹಾತ್ಮಗಾಂಧಿ, ಅನಿಬೆಸೆಂಟ್, ವಿರೇಂದ್ರದತ್ ಮುಜುಂದಾರ್.
ಸ್ವಾತಂತ್ರ್ಯ ಬಂದ ನಂತರ ನಮ್ಮ ಸರ್ಕಾರಗಳು ಇಂತಹ ಅಮಾನವೀಯ ಬರ್ಬರ ಮತ್ತು ದಮನಕಾರಿ ಕಾನೂನನ್ನು ಮುಂದುವರೆಸಿಕೊಂಡು ಬಂದಿದ್ದು ದುರದೃಷ್ಟಕರ. ಈಗ ಇರುವ ಕಲಂ124(ಎ) ಪ್ರಕಾರ ಸರಕಾರದ ಕ್ರಮಗಳು ಅಥವಾ ಆಡಳಿತಾತ್ಮಕ ಕಾರ್ಯಚರಣೆಗಳನ್ನು ಸರ್ಕಾರದ ವಿರುದ್ಧ ದ್ವೇಷ ಅಥವಾ ತಿರಸ್ಕಾರ ಅಥವಾ ಅತೃಪ್ತಿ ಪ್ರಚೋದಿಸದೆ ವಿರೋಧಿಸುವುದು ಅಥವಾ ಬದಲಾಯಿಸಲು ಪ್ರಯತ್ನಿಸುವುದು ಈ ಕಲಂ ನ ಪ್ರಕಾರ ಅಪರಾಧವಲ್ಲ. ಇಲ್ಲಿ ಸರ್ಕಾರಅಂದರೆ ಪ್ರಧಾನ ಅಥವಾ ಮುಖ್ಯ ಮಂತ್ರಿ, ಮಂತ್ರಿ, ಶಾಸಕರು, ಅಧಿಕಾರಿಗಳು ಇತ್ಯಾದಿಗಳ ಹೇಳಿಕೆ ಕ್ರಮಗಳನ್ನು ಟೀಕಿಸುವುದು ಸಹ ಅಪರಾಧವಲ್ಲ. ಇವರ್ಯಾರೂ ‘ಸರ್ಕಾರ’ವಲ್ಲ. ಆದರೂ ನಮ್ಮ ಸರ್ಕಾರದ ಅತಿರೇಕಗಳನ್ನು ಪ್ರಶ್ನಿಸಲು ಪ್ರಯತ್ನಿಸಿದ ವ್ಯಕ್ತಿಗಳನ್ನು ಈ ಕಲಂನ್ನು ಬಳಸಿ ಬಂಧಿಸಿ, ಜೈಲಿಗೆ ಕಳಿಸಿ ಮೊಕದ್ದಮೆಗಳನ್ನು ದಾಖಲಿಸಲಾಯಿತು. ಇತ್ತೀಚಿನ ವರ್ಷಗಳಲ್ಲಿ ದೇಶದ ಗಮನವನ್ನು ಸೆಳೆದ ಪ್ರಕರಣಗಳೆಂದರೆ 2007ರಲ್ಲಿ ಬಿÀನಾಯಕ್ ಸೆನ್, 2010ರಲ್ಲಿ ಅರುಂಧÀತಿ ರಾಯ್, 2012ರಲ್ಲಿ ಅಸೀಮ್ ತ್ರಿವೇದಿ, ಇತ್ತೀಚೆಗೆ ಇದೇ ಕಲಂನ್ನು ಬಳಸಿ ಗುಜರಾತಿನ ಹಾರ್ದಿಕ್ ಪಟೇಲ್ರನ್ನು ಮತ್ತು ತಮಿಳುನಾಡಿನ ಜಾನಪದ ಕಲಾವಿದ ಕೋವನ್ರನ್ನು ಬಂಧಿಸಲಾಗಿದೆ. ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿರುವ ಸಾಹಿತಿಗಳ, ಕಲಾವಿದರ, ಜನಪರ ನಾಯಕರ ವಿರುದ್ಧ ಬಳಸಲಾಗುತ್ತಿದೆ. ಸ್ವಾತಂತ್ರ್ಯದ ನಂತರ ಈ ಕಲಂನ ದುರ್ಬಳಕೆಯೆ ಹೆಚ್ಚಿದೆ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಇಂತಹ ದಮನಕಾರಿ ಕಲಂನ ಅಗತ್ಯ ಇದೆಯೇ?
ವಿಶ್ವದ ಇತರೆ ಪ್ರಜಾಪ್ರಭುತ್ವ ದೇಶಗಳಾದ ಇಂಗ್ಲೆಂಡ್, ಅಮೇರಿಕಾ, ನ್ಯೂಜಿಲ್ಯಾಂಡ್ ದೇಶಗಳು ಇಂತಹ ಕಾನೂನನ್ನು ಕೊನೆಗಾಣಿಸಿವೆ. ಇಂತಹ ಕಾನೂನನ್ನು ಭಾರತವು ಸಹ ಕೊನೆಗಾಣಿಸಿ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕಾಗಿದೆ. ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಚಿನ್ನಪ್ಪರೆಡ್ಡಿಯವರು 1986ರಲ್ಲಿ ಬಿಜೋಎಮಾನ್ಯೂಯಲ್ ಎಂಬ ಪ್ರಕರಣದಲ್ಲಿ ಈ ರೀತಿ ಹೇಳಿದ್ದಾರೆ:
“ನಮ್ಮ ಪರಂಪರೆ ಸಹನೆಯನ್ನು ಕಲಿಸುತ್ತದೆ. ನಮ್ಮತತ್ವಶಾಸ್ತ್ರ ಸಹನೆಯನ್ನು ಬೋಧಿಸುತ್ತದೆ. ನಮ್ಮ ಸಂವಿಧಾನವು ಸಹನೆಯ ಆಚರಣೆಗೆ ಮಹತ್ವ ನೀಡುತ್ತದೆ. ನಾವು ಅದನ್ನು ನಿಸ್ಸತ್ವಗೊಳಿಸದಿರೋಣ”