-
- ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಸಿಐಟಿಯು ರಾಜ್ಯ ಕಾರ್ಯದರ್ಶಿ ಯಮುನಾ ಗಾಂವ್ಕರ್ ಪ್ರಶ್ನೆ
ಕಾರವಾರ: ಭಾರತ್ ಸಂಚಾರ ನಿಗಮ ಲಿಮಿಟೆಡ್ (ಬಿಎಸ್‍ಎನ್‍ಎಲ್) ಅಸಮರ್ಪಕ ಸೇವೆ ಸಂಬಂಧ ಮಾತನಾಡುವಾಗ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಅವರು ಬಿಎಸ್‍ಎನ್‍ಎಲ್ ಸಂಸ್ಥೆ ತುಂಬಾ ದೇಶದ್ರೋಹಿಗಳೇ ತುಂಬಿದ್ದಾರೆ. ಅವರನ್ನೆಲ್ಲಾ ಸೇವೆಯಿಂದ ತೆಗೆದು ಖಾಸಗೀಕರಣ ಮಾಡಲಾಗುವುದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಸಂಬಂಧ ಬಿಎಸ್‍ಎನ್‍ಎಲ್ ಉದ್ಯೋಗಿಗಳ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಕಾಂಗ್ರೆಸ್ ಪಕ್ಷ, ಬಿಎಸ್‍ಎನ್‍ಎಲ್ ಮಾಜಿ ಉದ್ಯೋಗಿಗಳು ಮತ್ತು ಸಾರ್ವಜನಿಕರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ತವರಿನಲ್ಲಿಯೂ ಕೂಡ ವಿರೋಧ ವ್ಯಕ್ತವಾಗಿದೆ. ಸಿಐಟಿಯು ರಾಜ್ಯ ಕಾರ್ಯದರ್ಶಿಯಾಗಿರುವ ಉತ್ತರಕನ್ನಡದ ಯಮುನಾ ಗಾಂವ್ಕರ್ ಈ ಬಗ್ಗೆ ಅನಂತಕುಮಾರ್ ಹೆಗಡೆ ಅವರಿಗೆ ಕೆಲ ಪ್ರಶ್ನೆಗಳನ್ನು ಕೇಳಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಆ ಪ್ರಶ್ನೆಗಳು ಹೀಗಿವೆ…
- 1)ಸಂಸದ ಅನಂತಕುಮಾರ್ ಹೆಗಡೆಯವರ ಮನೆಗೆ ಮೊದಲು ಬಂದ ದೂರವಾಣಿ ಸಂಪರ್ಕ ಯಾವ ದೇಶದ್ರೋಹದ ಇಲಾಖೆಯದು? ಅಲ್ಲಿ ಪ್ರತಿ ಬಾರಿಯೂ ಲೈನ್ ರಿಪೇರಿಗೆ ಹೋದವರು ಯಾವ ದೇಶದ್ರೋಹಿಗಳು?ತಾವು ಸಂಸದರಾದಾಗ ಅನೇಕ ಬಾರಿ ಪಿ ಎಂಡ್ ಟಿ ಮತ್ತು ಬಿಎಸ್‍ಎನ್‍ಎಲ್ ಗೆ ಸಂಸದೀಯ ಸಮಿತಿಯಲ್ಲಿದ್ದಾಗ ಈ “ದೇಶದ್ರೋಹ”ದ ನಿರ್ಮೂಲನೆಗೆ ಏನೆಲ್ಲ ಶೋಧ ಮಾಡಿ ಕ್ರಮ ಕೈಗೊಂಡಿರಿ? ಭಾರತದ ದೂರ ಸಂಚಾರದ ಲೈನುಗಳು ಭಾರತದ ಮೂಲೆಮೂಲೆಗಳಲ್ಲಿ ಇದ್ದು ಅವು ಹೇಗೆ ಭಾರತದ ಹಿತಾಸಕ್ತಿಗೆ ಧಕ್ಕೆ ತಂದಿವೆ?2) ತಮ್ಮ ಕೇಂದ್ರ ಸರ್ಕಾರಕ್ಕೆ ಈ ದೇಶದ್ರೋಹದ ಇಲಾಖೆ ಮತ್ತು ಸಿಬ್ಬಂದಿಗಳ ಬಗ್ಗೆ ಎಷ್ಟು ಪುಟಗಳ ವರದಿ ನೀಡಿದ್ದೀರಿ? ಸಾರಾಸಗಟಾಗಿ ಬಿಎಸ್ ಎನ್ ಎಲ್ ನಲ್ಲಿರುವವರನ್ನು ದೇಶದ್ರೋಹಿ ಎಂದು ಘೋಷಿಸುವ ನೀವು ಯಾವಾಗ ಭಾರತದ ಪರಮೋಚ್ಚ ಸ್ಥಾನ ಅಲಂಕರಿಸಿದಿರಿ. ನಿಮ್ಮ ಸಾಲು ಸಾಲು ಜನವಿರೋಧಿಯಾದ ನೀತಿ ಮುಚ್ಚಿಟ್ಟುಕೊಳ್ಳಲು ಇನ್ನೊಬ್ಬರನ್ನು ದೇಶದ್ರೋಹದ ಬಲಿಪೀಠಕ್ಕೆ ಇಡುತ್ತಿದ್ದೀರಲ್ಲ ಮಾತಿಗೆ ಕಡಿವಾಣ ಹಾಕಿಕೊಳ್ಳಿ. ಜನರು ಮೂರ್ಖರಲ್ಲ.3) ಅನಂತಕುಮಾರ್ ಹೆಗಡೆಯವರು ಸಂಸದರಾಗಿ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಅನುಭವಿಸುವಾಗ ಅವರಿಗೆ ಯಾವ ಖಾಸಗಿ ಕಂಪನಿಗಳು ಮುಫತ್ತಾಗಿ ಖರ್ಚು ಭರಿಸಿದ್ದವು ಎಂಬುದನ್ನು ಬಹಿರಂಗ ಪಡಿಸಲಿ. ಅವರ ಟೆಲಿಫೋನ್ ಬಿಲ್ ಗಳನ್ನು ಸ್ವಂತ ಖರ್ಚಿನಿಂದ ಭರಿಸಿದ್ದರಾ ಅಥವಾ ಸರ್ಕಾರ ಭರಿಸಿದೆಯಾ ಹೇಳಲಿ.4) ಬಿಜೆಪಿ ಮತ್ತು ಸಂಘಪರಿವಾರದ ಅಸಾಂವಿಧಾನಿಕ ಕ್ರಿಯೆಗಳೆಲ್ಲ “ದೇಶಪ್ರೇಮದಿಂದ ಕೂಡಿರುತ್ತವೆ” ಎಂಬ ವ್ಯಾಖ್ಯಾನದ ಅಡಿಯಲ್ಲಿ ಬರುತ್ತದೆ. ಉಳಿದ ಭಾರತೀಯರೆಲ್ಲ ದೇಶದ್ರೋಹಿಗಳು. ಒಂದು ವೇಳೆ ಬಿಜೆಪಿಯೇತರರು ಬಿಜೆಪಿ ಆರ್ ಎಸ್ ಎಸ್ ಸೇರಿದರೆ ಅವರು ಆ ಕೂಡಲೇ ದೇಶಪ್ರೇಮಿ ಮತ್ತು ದೇಶಭಕ್ತರು ಎಂಬ ಪಟ್ಟಕ್ಕೇರಲು ಅರ್ಹರಾಗುತ್ತಾರೆ.
5) ಭಾರತದ ಸಂಪತ್ತು ಸೃಷ್ಟಿಯಲ್ಲಿ ಭಾಗವಹಿಸದ ಇವರು ಭಾರತ ದೇಶವನ್ನು ಸುಳ್ಳುಗಳ ಆಧಾರದಲ್ಲಿ ಆಳುತ್ತಿದ್ದಾರೆ ಮತ್ತು ಭಾರತವನ್ನು ಕಟ್ಟಿ ಎತ್ತಿ ನಿಲ್ಲಿಸಿದ ದೇಶಪ್ರೇಮಿ ಜನತೆಯನ್ನು ಮಾತ್ರ ಅಳುವಂತೆ ಮಾಡುತ್ತಿದ್ದಾರೆ. ಇವರ ದೇಶಪ್ರೇಮದ ವ್ಯಾಖ್ಯಾನ ನಮಗೆ ಬೇಕಿಲ್ಲ.
6) ಸಂಸದ ಅನಂತ ಕುಮಾರ್ ಹೆಗಡೆಯವರು ಮತ್ತು ಅವರ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರ ಜಿಯೋ ಕಂಪನಿಗೆ ತಮ್ಮನ್ನು ಅಡಮಾನ ಇಟ್ಟುದರಿಂದ ಭಾರತದ ಸರ್ಕಾರಿ ಅಧೀನದ ಇಲಾಖೆಗಳು, ಸಂಸ್ಥೆಗಳು ಮತ್ತು ಅದರಲ್ಲಿ ಕೆಲಸ ಮಾಡುವವರು ದೇಶದ್ರೋಹಿಯಂತೆ ಕಾಣಿಸುತ್ತಾರೆ. ಅವರ ದೃಷ್ಟಿದೋಷ ಬೇಗ ನಿವಾರಣೆಯಾಗಲಿ.
7) ತ್ಯಾಗ ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯದ ಆಶಯಗಳನ್ನು ರಕ್ಷಿಸಿಕೊಳ್ಳಲಾಗದೇ, ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ್, ಮೇಕ್ ಇನ್ ಇಂಡಿಯಾ ಇನ್ನೂ ಏನೇನೋ ಮರುಳು ಘೋಷಣೆ ಮಾತ್ರ ನೀಡುತ್ತಾ ಭಾರತದ ಅಮೂಲ್ಯ ಸಂಪತ್ತನ್ನು ವಿದೇಶಿ ಕಂಪನಿಗಳಿಗೆ ಮಾರುವ ನಿಮ್ಮ ಸರ್ಕಾರದ ಹೀನ ನೀತಿಯು ಯಾವ ವ್ಯಾಖ್ಯಾನದ ಅಡಿಯಲ್ಲಿ ದೇಶಪ್ರೇಮವಾಗುತ್ತದೆ? ಉತ್ತರಿಸಿ ಯಾರು ದೇಶದ್ರೋಹಿಗಳು ಉಕ (ಕೆನರಾ) ಸಂಸದರೇ?
8) ಬಿಎಸ್ ಎನ್ ಎಲ್ ಕಟ್ಟಿ ಬೆಳೆಸಿದ ಹಿರಿಯರ ಅಪಮಾನ ಮಾಡುವ ನಿಮ್ಮ ಮಾತಿಗೆ ಕಡಿವಾಣವಿರಲಿ.
9) ಭಾರತದ ಪ್ರಜಾಸತ್ತೆಗೆ ಅತ್ಯಂತ ಅಪಾಯಕಾರಿ ಮಾತುಗಳನ್ನಾಡಿದ ಉಕ (ಕೆನರಾ) ಸಂಸದ ಅನಂತ ಕುಮಾರ್ ಮತ್ತು ಅವರ ಸನಾತನವಾದಿ ಬಿಜೆಪಿ ಆರ್ ಎಸ್ ಎಸ್ ನವರಿಗೆ ತಾವು ಮಾತ್ರ ದೇಶಪ್ರೇಮಿಗಳಂತೆ ಕಂಡುಬರುವ ರೋಗ ಉಲ್ಬಣಾವಸ್ಥೆಗೆ ತಲುಪಿದೆ. ಅವರು ವ್ಯಾಖ್ಯಾನಿಸಿದ್ದೇ ದೇಶಪ್ರೇಮವಂತೆ.!!!
10) ಯಾರು ದೇಶದ್ರೋಹಿಗಳು ಉಕ (ಕೆನರಾ) ಸಂಸದರೇ? ಬಾಯಿಗೆ ಬಂದಂತೆ ಮಾತನಾಡುತ್ತ ನೀವು ಹೇಳಿದ ಸಹಸ್ರ ಸುಳ್ಳುಗಳೇ ಸತ್ಯವೆಂದು ಹೇಳುತ್ತಾ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದೀರಲ್ಲ ಸಂಸದರೇ? ಭಾರತದ ಸಂಪರ್ಕ ವ್ಯವಸ್ಥೆಯನ್ನು ಬಲಗೊಳಿಸಿದ ದೂರಸಂಪರ್ಕದ ಭಾರತ ಸಂಚಾರ್ ನಿಗಮವನ್ನು ಉಳಿಸಿಕೊಳ್ಳದೇ ಹಣಕಾಸು ಕೊಡದೇ ಅಲ್ಲಿ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರಿಗೆ ವೇತನ ಕೊಡದೇ ಕಾಯಂ ನೌಕರರು ವಿಆರ್ ಎಸ್ ಪಡೆಯುವಂತೆ ಒತ್ತಡ ಹೇರಿದ್ದು ನಿಮ್ಮ ಯಾವ ಸೀಮೆಯ ದೇಶಪ್ರೇಮ?
11) ತ್ಯಾಗ ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯ ರಕ್ಷಿಸಲಾಗದೇ, ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ್ ಇನ್ನೂ ಏನೇನೋ ಮರುಳು ಘೋಷಣೆ ನೀಡುತ್ತಾ ಭಾರತದ ಅಮೂಲ್ಯ ಸಂಪತ್ತನ್ನು ವಿದೇಶಿ ಕಂಪನಿಗಳಿಗೆ ಮಾರುವ ನಿಮ್ಮ ಸರ್ಕಾರದ ಹೀನ ನೀತಿಯು ಯಾವ ವ್ಯಾಖ್ಯಾನದ ಅಡಿಯಲ್ಲಿ ದೇಶಪ್ರೇಮವಾಗುತ್ತದೆ? ಉತ್ತರಿಸಿ ಯಾರು ದೇಶದ್ರೋಹಿಗಳು ಉಕ (ಕೆನರಾ) ಸಂಸದರೇ?
12) ಓರ್ವ ವ್ಯಕ್ತಿಗೆ ಗೊತ್ತಿರುವ ಶಬ್ದ ದೇಶದ್ರೋಹ ಮತ್ತು ಧರ್ಮದ್ರೋಹ ಎಂಬ ಎರಡೇ ಶಬ್ದಗಳು ಎಂದಾದರೆ ಆ ವ್ಯಕ್ತಿಯ ಕ್ರಿಯೆ, ಕೆಲಸ ಮತ್ತು ಮನೋವೃತ್ತಿಯ ಬಗ್ಗೆ ಸಂಶಯಬಾರದೇ ಇರುತ್ತದೆಯೇ? ಇದೇ ಶಬ್ದ ಇವರಿಗೆ ಖಂಡಿತ ಅನ್ವಯಿಸುತ್ತದೆ.
13) ದೇಶದ ನವರತ್ನವಾದ ಬಿಎಸ್ ಎನ್ ಎಲ್ ಕಟ್ಟಿ ಬೆಳೆಸಿದವರನ್ನು ದೇಶದ್ರೋಹಿ ಎನ್ನುತ್ತಾರಲ್ಲ ಈ ಅನಂತಕುಮಾರ ಹೆಗಡೆ ಇವರಿಗೆ ಏನೆನ್ನಬೇಕು?