ಯಾಮಾರಿಸುವ ರಾಜಕಾರಣ ಮತ್ತು ಕಾರ್ಪೋರೇಟ್ ಕೃಷಿ ಕಾಯ್ದೆಗಳು

ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಮತ್ತು ಮುಖ್ಯಮಂತ್ರಿಗಳಾದ ಯಡಿಯೂರಪ್ಪರವರು, ದೇಶದ ಹಾಗೂ ರಾಜ್ಯದ ಜನತೆಯನ್ನು ತಮ್ಮ ದಿಕ್ಕು ತಪ್ಪಿಸುವ ಹೇಳಿಕೆಗಳ ಮೂಲಕ ಯಾಮಾರಿಸುತ್ತಿದ್ದಾರೆ ಎಂಬುದನ್ನು ರೈತ ಸಂಘಗಳು ಹೇಳುತ್ತಿವೆ. ರೈತರ ಹಿತರಕ್ಷಣೆ ಅವರ ಉದ್ಯೋಗವನ್ನು ಮತ್ತು ಉದ್ಯೋಗದ ಆಧಾರವಾದ ಜಮೀನನ್ನು ರಕ್ಷಿಸುವ ಮೂಲಕ ಸಾಧ್ಯವೋ ಅಥವಾ ಯಾರು ಬೇಕಾದರೂ ಜಮೀನು ಖರೀದಿಸಲು, ಹೇಗೆ ಬೇಕಾದರೂ ಖರೀದಿಸಲು ಅವಕಾಶ ನೀಡುವ ಮೂಲಕವೋ ಎಂಬ ಪ್ರಶ್ನೆಯನ್ನು ಎಸೆಯುವ ಮೂಲಕ ರೈತ ಸಂಘಗಳು ಯಾಮಾರಿಸುವಿಕೆಯನ್ನು ಬಯಲುಗೊಳಿಸುತ್ತಿವೆ.

– ಯು. ಬಸವರಾಜ್

ದೇಶದಾದ್ಯಂತ ಕೋಟ್ಯಾಂತರ ರೈತರು, ಇತರೆ ಕೃಷಿಕರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ವರ್ತಕರ ಸಂಘಟನೆಗಳು, ಸಾರಿಗೆ ಸಂಘಟನೆಗಳು, ನಾಗರಿಕರು, ಸುಮಾರು 25 ಕ್ಕು ಹೆಚ್ಚು ರಾಜಕೀಯ ಪಕ್ಷಗಳು, ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ಕೃಷಿ ಕಾಯ್ದೆಗಳು ಮತ್ತು ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ- 2020 ಮತ್ತು ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ – 2020 ಇವುಗಳನ್ನು ಕೇಂದ್ರ ಸರಕಾರ ವಾಪಾಸು ಪಡೆಯಲೇ ಬೇಕೆಂದು ಒತ್ತಾಯಿಸಿ, ಡಿಸೆಂಬರ್ 8, 2020 ರಂದು ಭಾರತ ಬಂದ್ ಸಂಘಟಿಸಿದವು. ಇದು ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಅತಿ ಹೆಚ್ಚು ಜನ ಸಮುದಾಯಗಳು ಭಾಗವಹಿಸಿ ಅಭೂತ ಪೂರ್ವವಾಗಿ ಯಶಸ್ವಿಗೊಳಿಸಿದ ಐತಿಹಾಸಿಕ ಬಂದ್ ಆಗಿತ್ತು. ಕರ್ನಾಟಕದಲ್ಲಿಯೂ, ಕೇಂದ್ರದ ಕಾಯ್ದೆಗಳ ಜೊತೆ, ಕರ್ನಾಟಕ ಸರಕಾರ ಲೂಟಿಕೋರ ಕಾರ್ಪೋರೇಟ್ ಕೃಷಿಗೆ ನೆರವಾಗುವ ಭೂ ಸುಧಾರಣೆ (ಎರಡನೆ ತಿದ್ದುಪಡಿ) ಸುಗ್ರೀವಾಜ್ಞೆ – 2020 ಹಾಗೂ ಏಪಿಎಂಸಿ ತಿದ್ದುಪಡಿ ಸುಗ್ರೀವಾಜ್ಞೆ – 2020 ಇವುಗಳನ್ನು ವಾಪಾಸು ಪಡೆಯಬೇಕು ಮತ್ತು ವಿಧಾನ ಮಂಡಲದ ಅಧಿವೇಶನಗಳಲ್ಲಿ ಮಸೂದೆಗಳಾಗಿ ಮಂಡಿಸಬಾರದೆಂದು ಒತ್ತಾಯಿಸಿ ಕರ್ನಾಟಕ ಬಂದ್ ನಡೆಸಲಾಯಿತು. ಇದಕ್ಕೂ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಸದರಿ ಸುಗ್ರೀವಾಜ್ಞೆಗಳನ್ನು ವಾಪಾಸು ಪಡೆಯಲು ಹಾಗೂ ಮಸೂದೆಗಳಾಗಿ ಕಳೆದ ವಿಧಾನ ಮಂಡಲದ ಅಧಿವೇಶನಗಳಲ್ಲಿ ಮಂಡಿಸಬಾರದೆಂದು ಒತ್ತಾಯಿಸಿ, ಸೆಪ್ಟೆಂಬರ್ 29 ರಂದು ಅದಾಗಲೇ ಕರ್ನಾಟಕ ಬಂದ್ ಸಂಘಟಿಸಲಾಗಿತ್ತು.

ಕರ್ನಾಟಕದ ರೈತ-ವಿರೋಧಿ ಕೃಷಿ ಕಾಯಿದೆಗಳು

ಆಗ, ರಾಜ್ಯ ಸರಕಾರ ಅದೇ ದಿನ ರೈತ ಮುಖಂಡರೊಂದಿಗೆ ಮಾತುಕತೆ ನಡೆಸಿ, ಭೂ ಸುಧಾರಣಾ ಮಸೂದೆ- 2020 ರಲ್ಲಿ ಮುಖ್ಯವಾಗಿ, ದಲಿತರಿಗೆ ನೀಡಲಾದ ಜಮೀನುಗಳನ್ನು 15 ವರ್ಷಗಳ ಅವಧಿಯವರೆಗೆ ಯಾರು ಖರೀದಿಸದಂತಹ ನಿರ್ಬಂಧವನ್ನು ಹಾಗೆಯೇ ಉಳಿಸುವುದಾಗಿ ಮತ್ತು 10 ಸದಸ್ಯರಿರುವ ಕುಟುಂಬವೊಂದು ಗರಿಷ್ಠ 40 ಯುನಿಟ್ ಅಂದರೇ 216 ಎಕರೆ ಮಳೆ ಆಧಾರಿತ ಜಮೀನು ಹೊಂದಲು ಅವಕಾಶ ನೀಡುವ ಅಂಶವನ್ನು ಕೈ ಬಿಡುವುದಾಗಿ ಮತ್ತು ಈ ಮುಂಚಿನಂತೆ 20 ಯುನಿಟ್ ಜಮೀನು ಅಂದರೇ 108 ಎಕರೆ ಮಳೆ ಆಧಾರಿತ ಜಮೀನು ಹೊಂದುವುದನ್ನೆ ಮುಂದುವರೆಸುವುದಾಗಿ ಹೇಳಿತ್ತು.

ರೈತ ಸಂಘಟನೆಗಳು ಆ ಪ್ರಸ್ಥಾಪಗಳನ್ನು ಸಮ್ಮತಿಸಿದರೂ, ಅಷ್ಠು ಮಾತ್ರದಿಂದಲೇ, ಕಾರ್ಪೋರೇಟ್ ಕಂಪನಿಗಳ ದಾಳಿಯಿಂದ. ರೈತರ ಹಾಗೂ ವ್ಯವಸಾಯದ ಹಿತ ರಕ್ಷಣೆ ಸಾಧ್ಯವಿಲ್ಲವೆಂದು, ಒಟ್ಟು ಎರಡೂ ತಿದ್ದುಪಡಿ ಮಸೂದೆಗಳನ್ನು ಇಡೀಯಾಗಿ ವಾಪಾಸು ಪಡೆಯಲು ಒತ್ತಾಯಿಸಿ ಮಾತುಕತೆಯಿಂದ ಹೊರ ನಡೆದಿದ್ದವು. ಕಳೆದ ವಿಧಾನ ಮಂಡಲದ ಅಧಿವೇಶನಗಳಲ್ಲಿ ಮುಖ್ಯವಾಗಿ, ವಿಧಾನ ಸಭೆಯಲ್ಲಿ ಈ ಎರಡೂ ಮಸೂದೆಗಳಿಗೆ ಒಪ್ಪಿಗೆಯನ್ನು ಪಡೆದಿದ್ದ ರಾಜ್ಯ ಸರಕಾರ, ವಿಧಾನ ಪರಿಷತ್ತಿನಲ್ಲಿನ ವಿರೋದದಿಂದಾಗಿ ಮಸೂದೆ ಬಿದ್ದು ಹೋಗುವ ಹೆದರಿಕೆಯಿಂದ, ಅಲ್ಲಿ ಈ ಮಸೂದೆಗಳನ್ನು ಮಂಡಿಸುವ ಯೋಚನೆಯನ್ನೆ ಕೈ ಬಿಟ್ಟಿತ್ತು. ಆ ಮಟ್ಟಿಗೆ ಕರ್ನಾಟಕದ ಜನತೆಯ ಹೋರಾಟಕ್ಕೆ ಆಗ ಜಯ ದೊರೆಕಿತ್ತು.

ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಯು ಮುಗಿಯುತಿದ್ದಂತೆಯೆ, ಜನಾಭಿಪ್ರಾಯಕ್ಕೆ ವಿರುದ್ಧವಾಗಿ ಅಕ್ಟೋಬರ್ 01 ರಂದು ನಡೆದ ಮಂತ್ರಿಮಂಡಲದ ಸಭೆಯಲ್ಲಿ ಮರಳಿ ಸುಗ್ರೀವಾಜ್ಞೆಗಳಿಗೆ ಕ್ರಮ ವಹಿಸಿ ಗೆಜೆಟ್ ನಲ್ಲಿ ಪ್ರಕಟಿಸಿತು.

ಕೇಂದ್ರ ಸರಕಾರ ದೇಶವ್ಯಾಪ್ತಿಯಾಗಿ ನಡೆಯುತ್ತಿರುವ 500 ಕ್ಕೂ ಅಧಿಕ ರೈತ ಸಂಘಟನೆಗಳು ನಡೆಸುತ್ತಿರುವ ನಿರಂತರ ರೈತ ಚಳುವಳಿಯ ಹಿನ್ನೆಲೆಯಲ್ಲಿ, ಕೇಂದ್ರದ ಕೃಷಿ ಕಾಯ್ದೆಗಳ ಸಂಬಂಧ ಹಲವು ಸುತ್ತಿನ ಮಾತುಕತೆಗಳನ್ನು ನಡೆಸುತ್ತಿದೆ.

ಪರಿಸ್ಥಿತಿ ಹೀಗಿರುವಾಗ, ಕರ್ನಾಟಕ ಸರಕಾರ ಭಾರತ ಬಂದ್ ದಿನವೇ, ರೈತಾಪಿ ಜನತೆ ಹೋರಾಟದ ಕಣದಲ್ಲಿರುವಾಗಲೇ ಈ ಮಸೂದೆಗಳನ್ನು ವಿಧಾನ ಪರಿಷತ್ತಿನಲ್ಲಿ ಮಂಡಿಸಿ ಕಾರ್ಪೋರೇಟ್ ಗುಲಾಮಗಿರಿಗೆ ತಾನು ಬದ್ಧವೆಂದು ಸಾಬೀತು ಮಾಡಿಕೊಂಡಿದೆ.

ಸಾವಿರಾರು ವರ್ಷಗಳಿಂದ ಉಳುಮೆಯಲ್ಲಿಯೇ ಬದುಕನ್ನು ಕಂಡುಕೊಂಡು, ದೇಶಕ್ಕೆ ಅನ್ನವನ್ನು ಬೆಳೆದುಕೊಡುತ್ತಿದ್ದ ಮತ್ತು ಕೃಷಿ ಆಧಾರಿತ ಕೈಗಾರಿಕೆಗಳಿಗೆ ಕೃಷಿ ಉತ್ಪನ್ನಗಳನ್ನು ಒದಗಿಸುತ್ತಿದ್ದ ಬಹುತೇಕ ಅನ್ನದಾತನೆಂದೆ ಕರೆಯಲ್ಪಡುತ್ತಿದ್ದ ರೈತನಿಗೆ, ಬೇಸಾಯದ ಉದ್ಯೋಗ ಭದ್ರತೆ ನೀಡುತ್ತಿದ್ದ ಮೂಲ ಕಾಯ್ದೆಯನ್ನೇ ಬುಡ ಮೇಲು ಮಾಡುವ ಭೂ ಸುಧಾರಣಾ ತಿದ್ದುಪಡಿ ಮಸೂದೆ- 2020 ಯು, ರೈತನನ್ನು ಮಾತ್ರವಲ್ಲಾ ಇತರೇ ಎಲ್ಲ ಕೃಷಿಕರನ್ನು ಬೇಸಾಯದಿಂದ ಹೊರ ಹಾಕುವ ಸಂಚಿನ ಭಾಗವಾಗಿ ರೂಪಿಸಲ್ಪಟ್ಟಿರುವುದರಿಂದ ಇದೊಂದು ಐತಿಹಾಸಿಕ ಪ್ರಮಾದದ ಹೆಜ್ಜೆಯಾಗಿದೆ. ಅಂತಹ ಪ್ರಮಾದಕ್ಕೆ ಯಡಿಯೂರಪ್ಪನವರ ಸರಕಾರ ಸಾಕ್ಷಿಯಾಗುತ್ತಿದೆ ಎಂದು ವಿದ್ವತ್ ವಲಯದಲ್ಲಿ ಹೇಳಲಾಗುತ್ತಿದೆ.

ಆದರೇ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಮ್ಮ ಈ ಕ್ರಮಗಳನ್ನು ರೈತರನ್ನು ರಕ್ಷಿಸಲೆಂದೇ ಮಾಡಲಾದವುಗಳೆಂದು ಸಮರ್ಥಿಸಿಕೊಂಡು ಪ್ರಚುರ ಪಡಿಸುತ್ತಿವೆ. ಮುಖ್ಯವಾಗಿ, ಸೊರಗುತ್ತಿರುವ ವ್ಯವಸಾಯವನ್ನು ಬಲಗೊಳಿಸಲು ಮತ್ತು ಯುವಜನರನ್ನು ವ್ಯವಸಾಯದ ಕಡೆ ಆಕರ್ಷಿಸಲು ಸಹಕಾರಿಯಾಗಲಿದೆಯೆಂದು, ಅವರ ಬೆಳೆಗಳಿಗೆ ಉತ್ತಮ ಬೆಲೆಗಳು ದೊರೆಯಲಿವೆಯೆಂದು ಗಿಳಿಪಾಠಗಳನ್ನು ಒಪ್ಪಿಸುತ್ತಿವೆ. ಮಾಧ್ಯಮಗಳು ಈ ಗಿಳಿಪಾಠವನ್ನೇ ಬಹುತೇಕ ಪ್ರಬಲವಾಗಿ ಪ್ರತಿಪಾದಿಸುತ್ತಿವೆ.

ಇದಕ್ಕೆ ರೈತರು ಹಾಗೂ ರೈತ ಸಂಘಟನೆಗಳು ಏನು ಹೇಳುತ್ತಿವೆ ಎಂಬುದನ್ನು ಇಲ್ಲಿ ಗಮನಿಸುವುದಗತ್ಯವಿದೆ.

ದೇಶದ ರೈತ ಸಂಘಗಳು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಮ್ಮ ಮುಂದೆ, ನಿಜವಾಗಲೂ ರೈತರನ್ನು ಮತ್ತು ಕೃಷಿಯನ್ನು ಉಳಿಸುವ ಉದ್ದೇಶಗಳಿದ್ದರೇ ಮತ್ತು ಕೃಷಿಯೆಡೆಗೆ ಯುವಜನರನ್ನು ಆಕರ್ಷಿಸುವ ಇಚ್ಛೆಗಳಿದ್ದರೇ ಮೊದಲು ನಷ್ಠದಲ್ಲಿ ನಡೆಯುತ್ತಿರುವ ಕೃಷಿಯನ್ನು, ಲಾಭದಾಯಕವಾಗಿ ನಡೆಯುವಂತೆ ಅಗತ್ಯ ಕ್ರಮ ವಹಿಸುವಂತೆ ಮಾಡಲಿ ಎಂದು ಒತ್ತಾಯಿಸುತ್ತಿವೆ.

ಕೃಷಿ ರಂಗದ ಎರಡು ಪ್ರಮುಖ ಸಮಸ್ಯೆಗಳು

ಅವರ ಪ್ರಕಾರ ಹಾಲಿ ಕೃಷಿ ರಂಗವು ಎರಡು ಪ್ರಮುಖ ಸಮಸ್ಯೆಗಳಿಂದ ಬಳಲುತ್ತಿದೆ. ಒಂದು, ಕೃಷಿ ಉತ್ಪನ್ನಗಳನ್ನು ಖರೀದಿಸುವ ಮತ್ತು ವ್ಯವಹರಿಸುವ ದೇಶದ ಮತ್ತು ಅಂತರರಾಷ್ಟ್ರೀಯ ಮಟ್ಟದ ದೊಡ್ಡ ವರ್ತಕರು, ಕೃಷಿ ಉತ್ಪನ್ನಗಳ ಬೆಲೆಗಳನ್ನು ಸುಗ್ಗಿಯ ಸಂದರ್ಭದಲ್ಲಿಯೇ ಕೃತಕವಾಗಿ ಕುಸಿಯುವಂತೆ ಮಾಡುತ್ತಾರೆ ಮತ್ತು ಕೃಷಿ ಉತ್ಪನ್ನಗಳು ಅವರ ಕೈ ಸೇರಿದ ಮೇಲೆ ಹೆಚ್ಚಿನ ಬೆಲೆಗಳಿಗೆ ಮಾರಾಟ ಮಾಡಿ ಎಲ್ಲ ಗ್ರಾಹಕರನ್ನು ಕೊಳ್ಳೆ ಹೊಡೆಯುತ್ತಾರೆ. ಈ ರೀತಿ, ಈ ದೊಡ್ಡ ವ್ಯಾಪಾರಿಗಳು, ಸಗಟು ವರ್ತಕರು, ಈ ಕೃಷಿ ಉತ್ಬನ್ನಗಳ ಬೆಲೆಗಳನ್ನು ತಮಗೆ ಲಾಭದಾಯಕವಾಗುವಂತೆ ಏರಿಳಿಸುವ ಸಾಮಾರ್ಥ್ಯವನ್ನು ಹೊಂದಿದ್ದಾರೆ. ಇದನ್ನು ತಪ್ಪಿಸಲು ಹಾಗೂ ರೈತರನ್ನು ಸಂರಕ್ಷಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮುಂದಾಗ ಬೇಕಾಗಿದೆ.

ಕೃಷಿ ಉತ್ಪನ್ನಗಳ ಬೆಲೆಗಳನ್ನು ಸಮರ್ಪಕವಾಗಿ ಮತ್ತು ಸಮಗ್ರವಾಗಿ, ಲಾಭದಾಯಕವಾಗಿ ನಿಗದಿಸಿ ಮತ್ತು ಅವುಗಳನ್ನು ಖಾತರಿಯಾಗಿ ದೊರೆಯುವಂತೆ ಮಾಡಲು ಕಾನೂನಿನ ರಕ್ಷಣೆ ಒದಗಿಸುವಂತೆ ರೈತ ಸಂಘಗಳು ಕೇಳುತ್ತಿವೆ. ಇದನ್ನೇ, ಡಾ. ಎಂಎಸ್ ಸ್ವಾಮಿನಾಥನ್ ನೇತೃತ್ವದ ರಾಷ್ಟ್ರೀಯ ಕೃಷಿ ಆಯೋಗ, ಕೃಷಿ ಉತ್ಪನ್ನಗಳಿಗೆ ಈಗ ಸರಕಾರಗಳಿಂದ ನಿಗದಿಸಲಾಗುತ್ತಿರುವ ಬೆಲೆಗಳು ಉತ್ಪಾದನಾ ವೆಚ್ಚವನ್ನು ಪೂರ್ಣವಾಗಿ ಪರಿಗಣಿಸುತ್ತಿಲ್ಲ ಮತ್ತು ವೆಚ್ಚಕ್ಕೆ ಕನಿಷ್ಟ ಪ್ರಮಾಣದ ಲಾಭಾಂಶವನ್ನು ಸೇರಿಸಿ ಬೆಲೆ ನಿಗದಿಸಲಾಗುತ್ತಿಲ್ಲ. ಆದ್ದರಿಂದ, ರೈತರು ನಷ್ಠಕ್ಕೀಡಾಗುತ್ತಿದ್ದಾರೆಂದು ಮತ್ತು ಅದರಿಂದಾಗಿಯೇ ಯುವಜನತೆ ಲಾಭದಾಯಕವಲ್ಲದ ವ್ಯವಸಾಯದ ಕಡೆ ಆಕರ್ಷಿಸಲ್ಪಡುತ್ತಿಲ್ಲವೆಂಬ ವಿಚಾರಗಳನ್ನು ಕೇಂದ್ರ ಸರಕಾರದ ಗಮನಕ್ಕೆ ತಂದು, ಸರಕಾರ ತನ್ನ ತಪ್ಪು ನಡೆಗಳನ್ನು ಸರಿಪಡಿಸಿಕೊಂಡು ಕೃಷಿ ಉತ್ಪನ್ನಗಳಿಗೆ ಅವುಗಳ ಒಟ್ಟ ಉತ್ಪಾದನಾ ವೆಚ್ಚವನ್ನು ಲೆಕ್ಕ ಹಾಕುವ ವಿಧಾನವನ್ನು ಸರಿಪಡಿಸಲು ಸೂಚಿಸಿದೆ ಮತ್ತು ಅಂತಹ ಸಮರ್ಪಕವಾಗಿ ಗುರುತಿಸಲಾದ ಉತ್ಪಾದನಾ ವೆಚ್ಚಕ್ಕೆ ಅ2 ಎಂದು ಹೆಸರಿಸಿ, ಅದಕ್ಕೆ ಶೇಕಡಾ 50 ರಷ್ಠು ಲಾಭಾಂಶ ಸೇರಿಸಿ, ಬೆಲೆಗಳನ್ನು ನಿಗದಿಸಲು ಮತ್ತು ಅವುಗಳು ಖಾತರಿಯಾಗಿ ರೈತರಿಗೆ ದೊರೆಯುವಂತಾಗಲೂ ಮತ್ತು ದೊಡ್ಡ ವರ್ತಕರು, ಬೆಲೆಗಳನ್ನು ಏರಿಳಿಸಿ, ರೈತರಿಗೆ ನಷ್ಠ ಉಂಟುಮಾಡುವ ತಂತ್ರಗಳಿಂದ ಅವರನ್ನು ಸಂರಕ್ಷಿಸಲು, ಬೆಂಬಲ ಬೆಲೆ ಖಾತರಿ ಕಾಯ್ದೆಯನ್ನು ಜಾರಿಗೊಳಿಸಲು ಹೇಳಿದೆ. ಇದನ್ನು ಮಾಡಿದರೇ ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ರೈತರು ರಕ್ಷಿಸಲ್ಪಡುತ್ತಾರೆಂದು ರೈತರು ಮತ್ತು ರೈತ ಸಂಘಗಳು ಹೇಳುತ್ತಿವೆ.

ಇನ್ನು ಎರಡನೆಯದಾಗಿ, ವ್ಯವಸಾಯದ ಫಲಿತವು ಬಹುತೇಕ ಪ್ರಕೃತಿಯನ್ನು ಆಧರಿಸಿದೆ. ಬರಗಾಲ, ಪ್ರವಾಹ, ಅತಿಯಾದ ಮಳೆ, ಮೋಡ ಮುಸುಕಿದ ವಾತಾವರಣ, ರೋಗ ಬಾಧೆಗಳು ರೈತರಿಗೆ ನಷ್ಠವನ್ನುಂಟು ಮಾಡುತ್ತವೆ. ಅದೇ ರೀತಿ, ದುಬಾರಿ ಬಡ್ಡಿಯ ಖಾಸಗೀ ಸಾಲ ರೈತರನ್ನು ಬಾಧಿಸುತ್ತದೆ. ಇವುಗಳಿಂದ ರಕ್ಷಣೆ ಪಡೆಯಲು, ರೈತರಿಗೆ ಅಗತ್ಯವಾದಷ್ಠು ಬಡ್ಡಿ ರಹಿತ ಸಾಲವನ್ನು ಸಾರ್ವಜನಿಕ ಬ್ಯಾಂಕುಗಳಿಂದ ಒದಗಿಸಲು ಮತ್ತು ಪ್ರಕೃತಿ ವಿಕೋಪಗಳಿಂದ ನಷ್ಟವಾದ ಎಲ್ಲ ಸಂದರ್ಭಗಳಲ್ಲಿ ಸಾಲ ಮನ್ನಾ ಮಾಡುವಂತಹ, ಸಾರ್ವಜನಿಕ ಸಾಲ ಒದಗಿಸುವ ಮತ್ತು ಋಣ ಮುಕ್ತಿ ನೀಡುವ ಕಾಯ್ದೆಯನ್ನು ಜಾರಿಗೆ ತರುವಂತೆ ರೈತ ಸಂಘಗಳು ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಿವೆ.

ಇವುಗಳಿಂದ ರೈತರು ಮತ್ತು ವ್ಯವಸಾಯವು ನಷ್ಟವಾಗುವುದನ್ನು ತಪ್ಪಿಸಲು ಮತ್ತು ರೈತರು ಇದರಿಂದಾಗುವ ಲಾಭದಿಂದ ಮತ್ತಷ್ಟು ಉತ್ತೇಜನ ಪಡೆದು ಉತ್ಸಾಹದಿಂದ ಇನ್ನಷ್ಟು ವ್ಯಾಪಕವಾಗಿ ವ್ಯವಸಾಯದಲ್ಲಿ ತೊಡಗಲು ಮತ್ತು ಅವರ ಕುಟುಂಬದ ಯುವಜನರು ಆಕರ್ಷಿತಗೊಂಡು ಅದರಲ್ಲಿ ತೊಡಗಲು ಸಾಧ್ಯವಾಗುತ್ತದೆಂಬುದು ರೈತರು ಮತ್ತು ರೈತ ಸಂಘಗಳ ಸ್ಪಷ್ಠ ಅಭಿಪ್ರಾಯವಾಗಿದೆ.

ತಮ್ಮನ್ನು ರಕ್ಷಿಸುವ ಈ ಕಾಯ್ದೆಗಳನ್ನೇಕೆ ಸರಕಾರಗಳು ತರಲು ಒಪ್ಪುತ್ತಿಲ್ಲವೆಂಬ ಮಾರ್ಮಿಕ ಪ್ರಶ್ನೆಯನ್ನು ಅವರು ಮುಂದಿಡುತ್ತಿದ್ದಾರೆ.

ಬಾಣಲೆಯಿಂದ ಬೆಂಕಿಗೆ ದೂಡುವ ತಂತ್ರ :

ರೈತರು, ನಾವು, ದೇಶ, ವಿದೇಶಗಳ ಕೃಷಿ ಉತ್ಪನ್ನ ಖರೀದಿಸುವ ದೊಡ್ಡ ಸಗಟು ವರ್ತಕರು, ಕೃತಕವಾಗಿ ಕೃಷಿ ಉತ್ಪನ್ನಗಳ ಬೆಲೆಗಳನ್ನು ಏರಿಳಿತ ಮಾಡುವ ಅವರ ಅಸ್ತ್ರಗಳಿಂದ ನಮ್ಮನ್ನು ರಕ್ಷಿಸುವಂತೆ ಅಗತ್ಯ ಕ್ರಮ ವಹಿಸಿರೆಂದು ಸರಕಾರಗಳನ್ನು ಕೇಳುತ್ತಿದ್ದರೇ, ಅದನ್ನು ಮರೆ ಮಾಚಲು, ದಲ್ಲಾಳಿ ವರ್ತಕರ ಕಿರಿಕಿರಿಗಳನ್ನು ಮುಂದೆ ಮಾಡಿ ಅವರಿಂದ ರಕ್ಷಿಸಲು ನಿಮ್ಮ ಬಾಗಿಲಿಗೆ ವರ್ತಕರನ್ನು ಕಳುಹಿಸುವುದಾಗಿ ಅವುಗಳು ಹೇಳುತ್ತಿವೆ! ಅಂದರೇ, ಈಗ ಸಾರ್ವಜನಿಕ ಮಾರುಕಟ್ಟೆಯಿಂದ ಈಗ ದೊರೆಯುವ ಕನಿಷ್ಟ ರಕ್ಷಣೆಯು ಕೂಡಾ, ಇನ್ನು ಮುಂದೆ ಸಿಗದಂತೆ ಮಾಡುವುದಾಗಿ ಅಪ್ರತ್ಯಕ್ಷವಾಗಿ ಸೂಚಿಸುತ್ತವೆ ಎಂದರ್ಥ.

ಅದು ಸರಿ, ಈ ದಲ್ಲಾಳಿ ವರ್ತಕರಿಂದ ಈ ರೈತರು ಕಿರಿ ಕಿರಿಗೆ ಮತ್ತು ಶೋಷಣೆಗೆ ಒಳಗಾಗುತ್ತಿದ್ದಾರೆಂದು ಒಳ ಹೊಕ್ಕು ನೋಡಲು ಸರಕಾರಗಳು ತಯಾರಿವೆಯೇ? ಅದು ಅವುಗಳಿಗೆ ಬೇಕಿಲ್ಲಾ! ಯಾಕೆಂದರೇ ಅವರ ಉದ್ದೇಶವೇ ಬೇರೆಯಾಗಿದೆ.

ರೈತರು ತಮ್ಮ ವ್ಯವಸಾಯಕ್ಕೆ ಬೇಕಾದ ಹೂಡಿಕೆಗಳಿಗಾಗಿ, ಅಂದರೇ, ಬೀಜ, ಗೊಬ್ಬರ, ಕ್ರಿಮಿನಾಶಕ ಮತ್ತು ಸಾಲಸೌಲಭ್ಯಕ್ಕಾಗಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಈ ದಲ್ಲಾಳಿ ವ್ಯಾಪಾರಸ್ಥರನ್ನೇ ಅವಲಂಬಿಸಿದ್ದಾರೆ! ಈ ಪರಾವಲಂಬಿತನದಿಂದ ಮುಕ್ತಿ ದೊರೆಯದೇ, ಅವರ ಕಿರಿ ಕಿರಿ ಮತ್ತು ಶೋಷಣೆಯಿಂದ ಅವರಿಗೆ ಬಿಡುಗಡೆ ಇಲ್ಲವಾಗಿದೆ! ಇಂತಹ ವರ್ತಕರ ಶೋಷಣೆಯಿಂದ ರೈತರು ಬಿಡುಗಡೆ ಪಡೆಯಲೆಂದೇ, ನಾವು ಸಾರ್ವಜನಿಕ ರಂಗದ ಸಾಲ ದೊರೆಯುವಂತಹ ಸಾಲ ಮತ್ತು ಋಣ ಮುಕ್ತ ಕಾಯ್ದೆಯನ್ನು ಜಾರಿಗೆ ತರಲು ಕೇಳುತ್ತಿರುವುದು ಎನ್ನುತ್ತಿದ್ದಾರೆ.

ಆದರೇ, ಅದರ ಬದಲಿಗೆ ಕೇಂದ್ರ ಸರಕಾರ, ಇಂತಹ ದಲ್ಲಾಳಿ ವರ್ತಕರ ಕಪಿ ಮುಷ್ಠಿಯಿಂದ ರೈತರನ್ನು ಹೊರತಂದು, ದೇಶ ವಿದೇಶಗಳ ಸಗಟು ವರ್ತಕರು ಅಥವಾ ಕಾರ್ಪೋರೇಟ್ ಕಂಪನಿಗಳ ದೃತರಾಷ್ಟ್ರಾಲಿಂಗನದ ತೆಕ್ಕೆಗೆ ದೂಡಲು ಕ್ರಮವಹಿಸುತ್ತಿದೆ. ಅವರು ಮುಂಗಡ ಕೃಷಿ ವ್ಯಾಪಾರ ಮಾಡಲು ಬರುತ್ತಾರೆ, ಅವರ ಜೊತೆ ಒಪ್ಪಂದ ಮಾಡಿಕೊಂಡು, ಅವರಿಂದಲೇ, ಬೀಜ, ಗೊಬ್ಬರ, ಕ್ರಿಮಿನಾಶಕ ಮತ್ತು ಸಾಲ ಪಡೆಯಿರಿ. ಮಾತ್ರವಲ್ಲಾ ಅವರಿಗೆ ಬಿತ್ತುವ ಪೂರ್ವವೇ ಮಾರಾಟ ಮಾಡಿಕೊಳ್ಳಿರೆನ್ನುತ್ತಿದೆ.

ಅಂದರೇ, ಈ ಮೊದಲು ನಮ್ಮವರೇ ಆದ ಮತ್ತು ಹತ್ತಿರದಿಂದ ತಿಳಿದಿದ್ದ ಈ ಸಣ್ಣ ವರ್ತಕರ ಮೇಲೆ ಅವಲಂಬಿತರಾಗಿ ಕಿರಿಕಿರಿ, ಶೋಷಣೆಗೊಳಗಾಗಿದ್ದ ನಮ್ಮ ರೈತರನ್ನು ನೀವು ಈಗ, ದೂರದ ಮತ್ತು ಅವರ ಬಗೆಗೆ ಏನೊಂದು ತಿಳಿಯದ ಬಲಾಢ್ಯ ಸಗಟುವರ್ತಕರ ಪರಾವಲಂಬಿತನಕ್ಕೊಳಗಾಗಿ ಬಲವಾದ ಹಿಂಸೆ ಮತ್ತು ಶೋಷಣೆಗೊಳಪಡಲು ಹೇಳುತ್ತಿದ್ದೀರಿ ಮತ್ತು ಸರಕಾರವೇ ದಲ್ಲಾಳಿಯಾಗುವುದಾಗಿ ತಿಳಿಸುತ್ತಿದ್ದೀರಿ? ಅಂದರೇ ರೈತರನ್ನು ಬಾಣಲೆಯಿಂದ ಬೆಂಕಿಗೆ ದೂಡುತ್ತೀರಿ ಎಂದರ್ಥವಲ್ಲವೇ! ರೈತರು ಈ ಮೊದಲೇ ಒಪ್ಪಂದದಂತೆ ಬೆಲೆ ಪಡೆಯುವಾಗ ಅದು ಹೇಗೆ ಬೆಂಕಿಗೆ ಬೀಳುತ್ತಾರೆಂದು ನೀವು ಕೇಳಬಹುದು? ಒಪ್ಪಂದ ಕೃಷಿಯಲ್ಲಿ ರೈತರನ್ನು ಯಾಮಾರಿಸಿ ಮೋಸ ಮಾಡುವ ರಂದ್ರಗಳನ್ನು ನೀವು ತೆರೆದಿದ್ದೀರಿ. ಒಪ್ಪಂದದಂತೆ ಬೆಲೆ ಪಡೆಯಲು ಅಗತ್ಯ ಗುಣಮಟ್ಟದ ಸರ್ಟಿಫಿಕೇಟ್ ನ್ನು ರೈತರು ನೀಡುವಂತೆ ಸೂಚಿಸಿದ್ದೀರಿ. ಅದರಲ್ಲಿ ವಿಫಲಾರಾದರೇ ಶೇ 66 ಬೆಲೆಗೆ ಮಾರಾಟ ಮಾಡ ಬೇಕಾಗುತ್ತದೆ. ಹೇಗಿದೆ ನಿಮ್ಮಯ ಮರೆ ಮೋಸ?

ಮೋಸದಲ್ಲಿ ಸಣ್ಣ ವರ್ತಕರನ್ನು ವಾಸ್ತವದಲ್ಲಿ ಎದುರಿಸಲಾಗದ ನಮ್ಮ ರೈತರು ಈ ದೈತ್ಯ ಕಂಪನಿಗಳನ್ನು ಎದುರಿಸಿ ನಿಲ್ಲಲು ಸಾಧ್ಯವೆ? ಸಾಧ್ಯವಾಗದು. ಹಾಗಾದರೆ ಅದರ ಪರಿಣಾಮ? ಸಾಲ! ಇಲ್ಲವೇ, ಕಂಪನಿಗಳಿಗೆ ಭೂಮಿಯ ಪರಭಾರೆ! ಇಲ್ಲವೇ ಕಂಪನಿಗಳ ಗುತ್ತಿಗೆ ಬೇಸಾಯಕ್ಕೆ ಜಮೀನು ಒದಗಿಸುವುದಾಗಿದೆ.

ರೈತರ ಹಿತರಕ್ಷಣೆ ಅವರ ಜಮೀನು ರಕ್ಷಿಸುವುದರಿಂದಲೋ ಅಥವಾ ಯಾರು ಬೇಕಾದರೂ ಖರೀದಿಸಲು ಅವಕಾಶ ನೀಡುವುದರಿಂದಲೋ?

ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಮತ್ತು ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪರವರು, ದೇಶದ ಹಾಗೂ ರಾಜ್ಯದ ಜನತೆಯನ್ನು ತಮ್ಮ ದಿಕ್ಕು ತಪ್ಪಿಸುವ ಹೇಳಿಕೆಗಳ ಮೂಲಕ ಯಾಮಾರಿಸುತ್ತಿದ್ದಾರೆಂದು ರೈತ ಸಂಘಗಳು ಹೇಳುತ್ತಿವೆ.

ರೈತರ ಹಿತರಕ್ಷಣೆ ಅವರ ಉದ್ಯೋಗವನ್ನು ಮತ್ತು ಉದ್ಯೋಗದ ಆಧಾರವಾದ ಜಮೀನನ್ನು ರಕ್ಷಿಸುವ ಮೂಲಕ ಸಾಧ್ಯವೋ? ಅಥವಾ ಯಾರು ಬೇಕಾದರೂ ಜಮೀನು ಖರೀದಿಸಲು, ಹೇಗೆ ಬೇಕಾದರೂ ಖರೀದಿಸಲು ಅವಕಾಶ ನೀಡುವ ಮೂಲಕವೋ? ಎಂಬ ಪ್ರಶ್ನೆಯನ್ನು

ಎಸೆಯುವ ಮೂಲಕ ರೈತ ಸಂಘಗಳು ಅವರ ಯಾಮಾರಿಸುವಿಕೆಯನ್ನು ಅವು ಬಯಲುಗೊಳಿಸುತ್ತವೆ.

ಇದೊಂದು ಸರಳವಾದ ಪ್ರಶ್ನೆಯಾಗಿದೆ. ರೈತರ ಜಮೀನುಗಳನ್ನು ಯಾರು ಬೇಕಾದರೂ, ಹೇಗೆ ಬೇಕಾದರೂ ಖರೀದಿಸಲು ಅವಕಾಶ ನೀಡುವ ಮೂಲಕ ರೈತರ ಹಿತ ರಕ್ಷಣೆ ಹೇಗೆ ಸಾಧ್ಯ? ಕೇವಲ ಹಣ ಉಳ್ಳವರೆಲ್ಲಾ ಜಮೀನುಗಳನ್ನು ಖರೀದಿಸಲು ಅವಕಾಶ ನೀಡಿದರೇ, ವ್ಯವಸಾಯ ವಿಸ್ತಾರಗೊಳ್ಳಲು ಸಾಧ್ಯವೇ?, ಅವರಿಗೆ ವ್ಯವಸಾಯ ಮಾಡುವ ತರಬೇತಿ ಇರಬೇಡವೇ? ವ್ಯವಸಾಯ ತಿಳಿಯದವರು ಜಮೀನು ಖರೀದಿ ಮಾಡಿ ಏನು ಮಾಡುತ್ತಾರೆ?

ಒಂದೋ ವ್ಯವಸಾಯ ಗೊತ್ತಿರುವ ಹಾಲಿ ರೈತರಿಗೆ ಗುತ್ತಿಗೆ ಬೇಸಾಯಕ್ಕೆ ನೀಡುತ್ತಾರೆ, ಇಲ್ಲವೇ ಕಾರ್ಪೋರೇಟ್ ಕಂಪನಿಗಳ ಗುತ್ತಿಗೆ ಬೇಸಾಯಕ್ಕೆ ಬಿಟ್ಟು ಕೊಡುತ್ತಾರೆ. ಈಗಲಂತೂ, ರೈತರು ನಷ್ಠದಲ್ಲಿ ಬೇಸಾಯ ಮಾಡುತ್ತಿರುವುದರಿಂದ ಕಂಪನಿಗಳ ಗುತ್ತಿಗೆಗೆ ನೀಡುವುದೇ ಲಾಭದಾಯಕವೆಂದು ಸರಳವಾಗಿ ಪರಿಗಣಿಸಿ, ರೈತರೊಂದಿಗೆ ಈ ಖರೀದಿದಾರರು ಕೂಡಾ ಕಾರ್ಪೋರೇಟ್ ಗಳ ಹೂಡಿದ ಖೆಡ್ಡಾಕ್ಕೆ ಬೀಳುತ್ತಾರೆ.

ಇದಕ್ಕೆ ಪೂರಕವಾಗಿ, ಅದಾಗಲೇ, ಕೇಂದ್ರ ಸರಕಾರ ಮಾದರಿ ಕೃಷಿ ಭೂಮಿ ಗುತ್ತಿಗೆ ಕಾಯ್ದೆ- 2016 ನ್ನು ಜಾರಿಗೆ ತಂದಿದೆ. ಆ ಮೂಲಕ ದೇಶದ ಒಟ್ಟು 6 ಕೋಟಿ ಎಕರೆ ಮತ್ತು ರಾಜ್ಯದ 55 ಲಕ್ಷ ಎಕರೆ ಬೀಳು ಭೂಮಿಯನ್ನು ಅಭಿವೃದ್ಧಿ ಪಡಿಸುವ ಹೆಸರಿನಲ್ಲಿ ಕಾರ್ಪೋರೇಟ್ ಕಂಪನಿಗಳ ಗುತ್ತಿಗೆ ಬೇಸಾಯಕ್ಕೆ ಅನುವು ಮಾಡಿಕೊಡಲು ಕ್ರಮವಹಿಸಿದೆ.

ಹೀಗಾಗಿ, ಕಾರ್ಪೋರೇಟ್ ಕಂಪನಿಗಳ ವಶಕ್ಕೆ ಜಮೀನು ವಹಿಸುವುದಕ್ಕಾಗಿಯೇ, ಯಾರು ಬೇಕಾದರೂ ಜಮೀನು ಕೊಳ್ಳುವ, ಅವಕಾಶ ನೀಡುವ ತಿದ್ದುಪಡಿಗೆ ಕ್ರಮವಹಿಸಿರುವುದು ಮತ್ತು ಕಂಪನಿಗಳ ಗುತ್ತಿಗೆ ಬೇಸಾಯಕ್ಕಾಗಿಯೇ ಯಾರು ಬೇಕಾದರೂ ಎಷ್ಟು ಎಕರೆ ಬೇಕಾದರೂ ಗುತ್ತಿಗೆ ಬೇಸಾಯದಲ್ಲಿ ತೊಡಗಲು ಅವಕಾಶ ನೀಡುವ ತಿದ್ದುಪಡಿಯನ್ನು ಮೂಲ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಗೆ ಕ್ರಮವಹಿಸಿರುವುದು.

ನೇರವಾಗಿ ರೈತರೊಂದಿಗೆ ಕಾರ್ಪೋರೇಟ್ ಕಂಪನಿಗಳು ಕೃಷಿ ಉತ್ಪನ್ನ ಖರೀದಿಸಲು ಮತ್ತು ಮುಂಗಡ ವ್ಯಾಪಾರದಲ್ಲಿ ತೊಡಗಲು ಅವಕಾಶವಾಗಬೇಕು ಮತ್ತು ದೊಡ್ಡ ಪ್ರಮಾಣದ ಈ ವ್ಯವಹಾರದಿಂದ ಈ ಕಂಪನಿಗಳು ಎಪಿಎಂಸಿಗಳಿಗೆ ಕೊಡಬೇಕಿದ್ದ ಶೇ 02 ಕಮಿಷನ್ ರದ್ದುಗೊಳಿಸಿ ಲಾಭ ಹೆಚ್ಚಿಸಿಕೊಳ್ಳಲು ಅವಕಾಶ ನೀಡಬೇಕು ಮತ್ತು ರೈತರನ್ನು ವಂಚಿಸಲು ಇದ್ದ ನಿರ್ಬಂಧಗಳನ್ನು ಸಡಲಿಸಬೇಕು ಹಾಗೂ ಮುಂದೆ ಏಪಿಎಂಸಿಗಳ ಲಕ್ಷಾಂತರ ಕೋಟಿ ರೂ ಮೌಲ್ಯದ ಆಸ್ತಿಗಳನ್ನು ಕಬಳಿಸಲು ಅನುವು ಮಾಡಿಕೊಡ ಬೇಕು. ಈ ದುರುದ್ದೇಶಗಳಿಂದ ಏಪಿಎಂಸಿ ಕಾಯ್ದೆಯ ತಿದ್ದು ಪಡಿಯನ್ನು ಮಾಡಲಾಗಿದೆ ಮತ್ತು ಅದನ್ನು ಮರೆ ಮಾಚಲು ರೈತರು ಹಾಗೂ ದಲ್ಲಾಳಿ ವರ್ತಕರ ನಡುವಿನ ತಿಕ್ಕಾಟವನ್ನು ಮುಂದೆ ಮಾಡಿ ರೈತರನ್ನು ನಾಗರೀಕರನ್ನು ಯಾಮಾರಿಸಲಾಗುತ್ತಿದೆ.

ಏಪಿಎಂಸಿಗಳನ್ನು ಮತ್ತು ಬೆಂಬಲ ಬೆಲೆಯನ್ನು ಉಳಿಸಲಾಗುತ್ತದೆಂಬ ಅಪ್ಪಟ ಸುಳ್ಳು

ಮುಂಗಡ ವ್ಯಾಪಾರದ ಕೃಷಿಯು ಮತ್ತು ಕಂಪನಿಗಳ ಗುತ್ತಿಗೆ ಬೇಸಾಯವು ಇನ್ನೊಂದೆಡೆ ನೇರ ಕಾರ್ಪೋರೇಟ್ ಕೃಷಿಯು ಮುನ್ನಡೆಯುವಾಗ ಏಪಿಎಂಸಿಗಳು ಇದ್ದರೇನು? ಇಲ್ಲದಿದ್ದರೇನು? ಇವುಗಳಿಂದ ರೈತರಿಗೇನು ಪ್ರಯೋಜನ?

ಅದೇ ರೀತಿ, ಖಾತರಿಯಾಗಿ ದೊರೆಯದ ಕನಿಷ್ಟ ಬೆಂಬಲ ಬೆಲೆ ಘೋಷಿಸಿದರೇನು? ಘೋಷಿಸದೇ ಬಿಟ್ಟರೇನು? ಇದರಿಂದ ರೈತರಿಗೇನು ಪ್ರಯೋಜನಾ! ಕಾರ್ಪೋರೇಟ್ ಕೃಷಿ, ಮುಂಗಡ ವ್ಯಾಪಾರ ಕೃಷಿ ಮತ್ತು ಕಂಪನಿಗಳ ಗುತ್ತಿಗೆ ಕೃಷಿ ತಡೆಯದೇ ಏಪಿಎಂಸಿ ಉಳಿಸುವ ವಿಚಾರ ಮತ್ತು ಬೆಂಬಲ ಬೆಲೆ ಪ್ರಕಟಿಸುವುದನ್ನು ಉಳಿಸಿಕೊಳ್ಳುವ ಪ್ರಧಾನ ಮಂತ್ರಿಗಳ ಪ್ರಸ್ಥಾಪ ರೈತರನ್ನು ಮತ್ತು ನಾಗರೀಕರನ್ನು ವಂಚಿಸಿ, ಯಾಮಾರಿಸುವ ಮತ್ತೊಂದು ಅಂಶವಾಗಿದೆ.

 

Donate Janashakthi Media

Leave a Reply

Your email address will not be published. Required fields are marked *